ತುಂಗಭದ್ರಾ ಪುಷ್ಕರ ಸ್ನಾನಕ್ಕೆ ತೀರ್ಥಕ್ಷೇತ್ರಗಳು ಸಜ್ಜು
ತುಂಗಭದ್ರಾ ನದಿ ತೀರದ ತೀರ್ಥಕ್ಷೇತ್ರಗಳು ಪುಷ್ಕರ ನದಿ ಸ್ನಾನಕ್ಕೆ ಸಜ್ಜಾಗಿವೆ. ನವೆಂಬರ್ 20ರಂದು ಶುಭಮುಹೂರ್ತದಲ್ಲಿ ಆಂಧ್ರಪ್ರದೇಶ ವಿವಿಧೆಡೆ ಸಾವಿರಾರು ಭಕ್ತರು ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶಾಖಪಟ್ಟಣಂನಲ್ಲಿ ಇತ್ತೀಚೆಗೆ ಸಭೆ ಸೇರಿದ್ದ ಪಂಚಾಂಗಕರ್ತರು ಶುಕ್ರವಾರದಂದು 1.21PM ವೇಳೆಗೆ ಪುಷ್ಕರಾಲು 2020ಕ್ಕೆ ಶುಭ ಮುಹೂರ್ತ ಎಂದು ನಿಗದಿ ಪಡಿಸಿದ್ದಾರೆ ಎಂದು ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನ.20ರಿಂದ ತುಂಗಭದ್ರಾ ಪುಷ್ಕರ; ಮಂತ್ರಾಲಯದಲ್ಲಿ ಭರದ ಸಿದ್ಧತೆ
ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೊದಲ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 12 ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ.

12ವರ್ಷಗಳ ಬಳಿಕ 12 ದಿನಗಳ ಹಬ್ಬ
12 ವರ್ಷಗಳಿಗೊಮ್ಮೆ ದೇಶದ ಪವಿತ್ರ ನದಿಗಳಲ್ಲಿ ನಡೆಸಲಾಗುವ ಪವಿತ್ರ ಸ್ನಾನವೇ ಪುಷ್ಕರ ಸ್ನಾನ. ಪುಷ್ಕರನೆಂಬ ಮಹರ್ಷಿ ‘ಇದಂ ಶರೀರಂ ಲೋಕೋಪಕಾರಾರ್ಥಂ' ಎಂಬಂತೆ ತನ್ನ ಶರೀರದ ಬಗ್ಗೆ ಪರಿವೆಯೇ ಇಲ್ಲದೆ ತಪೋನಿರತನಾಗಿ ಬ್ರಹ್ಮ, ವಿಷ್ಣು, ಮಹೇಶ್ವರರಾದ ತ್ರಿಮೂರ್ತಿಗಳನ್ನು ಕುರಿತು ತಪಸ್ಸು ಮಾಡುತ್ತಾನೆ. ವರ್ಷವೊಂದಾವರ್ತಿಯಂತೆ ಗುರು ಗ್ರಹವು ತನ್ನ ಕಕ್ಷೆಯನ್ನು ಒಂದೊಂದು ರಾಶಿಗೆ ಪರಿಭ್ರಮಣಗೊಳಿಸುವ ಪರ್ವ ಕಾಲದಲ್ಲಿ ಪುಣ್ಯ ನದಿಗಳ ಪವಿತ್ರ ಸ್ನಾನದ ಮಹತ್ವ ಸಾರ ತೊಡಗುತ್ತಾನೆ. ಮುಂದೆ ಪುಷ್ಕರ ಎಂದು ಹೆಸರು ಗಳಿಸುತ್ತಾನೆ. ಈ ಬಾರಿ ಮಕರ ರಾಶಿಯಲ್ಲಿ ಪ್ರವೇಶ ಮಾಡಿರುವುದರಿಂದ ತುಂಗಭದ್ರಾ ನದಿಗೆ ಪುಷ್ಕರ ಸ್ನಾನದ ಅವಕಾಶ ಸಿಕ್ಕಿದೆ.‘ಪುಷ್ಕರ' ಪದಕ್ಕೆ ಪವಿತ್ರ ಜಲ ಎಂಬ ಅರ್ಥವೂ ಇದೆ.

12 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು
ನವೆಂಬರ್ 20ರಿಂದ ಡಿಸೆಂಬರ್ 1ರ ತನಕ ಪುಷ್ಕರ ಸ್ನಾನಕ್ಕೆ ನದಿಯನ್ನು ಸಜ್ಜುಗೊಳಿಸಲಾಗಿದೆ. 2008ರಲ್ಲಿ ಕಳೆದ ಬಾರಿ ಪುಷ್ಕರಾಲು ನಡೆಸಲಾಗಿತ್ತು. ಈಗ ಕೊವಿಡ್ 19 ಮುನ್ನೆಚ್ಚರಿಕೆ ನಡುವೆ ಆಯೋಜನೆ ಮಾಡಲಾಗಿದೆ. ಕರ್ನೂಲ್ ಜಿಲ್ಲೆಯಲ್ಲೇ 23 ಪುಷ್ಕರ ಘಟ್ಟಗಳನ್ನು ಸ್ಥಾಪಿಸಲಾಗಿದೆ. ಮಂತ್ರಾಲಯ, ನಾಗುಲದಿನ್ನೆ, ಗುಂಡ್ರೆವುಲ, ಸುಂಕೆಶುಲಾ, ಪಂಚಲಿಂಗಲ, ನಂದಿಕೊಟ್ಕುರ್, ಸಂಗಮೇಶ್ವರ ಮುಂತಾದೆಡೆ ಪುಷ್ಕರ ಸ್ನಾನಕ್ಕೆ ಸಿದ್ಧತೆಯಾಗಿದೆ.

ಇ ಟಿಕೆಟ್ ವ್ಯವಸ್ಥೆ
ಕೊವಿಡ್ 19 ಹಿನ್ನೆಲೆಯಲ್ಲಿ ಭಕ್ತಾದಿಗಳು, ಕೊರೊನಾವೈರಸ್ ನೆಗಟಿವ್ ಪ್ರಮಾಣ ಪತ್ರದ ಜೊತೆಗೆ ಇ ಟಿಕೆಟ್ ಪಡೆದಿದ್ದರೆ ಮಾತ್ರ ಸ್ನಾನಘಟ್ಟಕ್ಕೆ ಇಳಿಯಲು ಅನುಮತಿ ನೀಡಲಾಗುತ್ತದೆ. ನದಿ ನೀರಿಗೆ ಇಳಿಯಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಸ್ನಾನಘಟ್ಟಗಳ ಬಳಿ ನದಿ ನೀರಿನ ಷವರ್ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 12 ದಿನಗಳ ಕಾಲ ನಿರಂತರ ಯಾಗ ನಡೆಸಲಾಗುತ್ತದೆ. 443ಕ್ಕೂ ಅಧಿಕ ಋತ್ವಿಕರು ವಿಶೇಷ ಪೂಜೆಗಳನ್ನು ನೆರವೇರಿಸಲಿದ್ದು, ಪೂಜೆಗಳ ದರವನ್ನು ಕಂದಾಯ ಇಲಾಖೆ ನಿಗದಿ ಮಾಡಿದೆ.

ಮಂತ್ರಾಲಯದ ಆಡಳಿತ ಮಂಡಳಿ ಸಜ್ಜು
ಕರ್ನೂಲ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ನೂಲ್ ಎಸ್ ಪಿ ಫಕ್ಕೀರಪ್ಪ ಮಠಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮಂತ್ರಾಲಯದ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸಿದ್ಧತೆ ಕುರಿತು ವೀಕ್ಷಿಸಿದ್ದಾರೆ. ಸಾಮಾಜಿಕ ಅಂತರ ಹಾಗೂ ಇತರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರೀ ಮಂತ್ರಾಲಯ ಮಠದ ಅಧಿಕಾರಿಗಳಿಗೆ ಎಸ್ಪಿ ಸಲಹೆ ನೀಡಿದ್ದಾರೆ.

ಧಾರ್ಮಿಕ ವಿಧಿ ವಿಧಾನಕ್ಕೆ ಅನುಮತಿ
ನ.20ರಂದು ಬೆಳಿಗ್ಗೆ 7 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಮಠದಿಂದ ನದಿ ತೀರದವರೆಗೆ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ನಂತರ ಪೂಜೆ ಪುನಸ್ಕಾರಗಳನ್ನು ನೆರವೇರಿಸುವುದಾಗಿ ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಭಕ್ತರಿಗೆ ನದಿಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ನದಿಯ ಸ್ನಾನದ ಬದಲಾಗಿ ಪ್ರೋಕ್ಷಣೆ ಹಾಗೂ ನದಿ ದಡದಲ್ಲಿ ಪಿಂಡ ಪ್ರದಾನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.