ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣದಲ್ಲಿ ಅವ್ಯವಹಾರ, ತನಿಖೆಗೆ ಸಿದ್ದರಾಮಯ್ಯ ಆಗ್ರಹ

|
Google Oneindia Kannada News

ರಾಯಚೂರು, ಮೇ 19: ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗಾ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗೆ ಟೆಂಡರ್ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ನಾರಾಯಣಪುರ ಬಲದಂಡೆ ನಾಲೆಯ ಆಧುನೀಕರಣ ಮಾಡಲು ಕಳೆದ ವರ್ಷ ಜುಲೈ 23ರಂದು 828 ಕೋಟಿ ರೂಪಾಯಿ ಮೊತ್ತದ ಹಾಗೂ 16 ರಿಂದ 18 ಉಪಕಾಲುವೆಗಳ ಅಂದಾಜು ವೆಚ್ಚ 791 ಕೋಟಿ ರೂಪಾಯಿಯ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್‌ ಕರೆಯಲಾಗಿತ್ತು. ಈ ಎರಡು ಟೆಂಡರ್‌ ಎನ್.ಡಿ ವಡ್ಡರ್ ಅವರ ಹೆಸರಿಗಾಗಿದೆ. ಇದರಲ್ಲಿ ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ ಅವರಿಗೆ ಕೆಲಸವೇ ಆಗದೆ 425 ಕೋಟಿ ರೂಪಾಯಿ ಬಿಲ್‌ ಪಾವತಿಯಾಗಿದೆ' ಎಂದು ಆರೋಪ ಮಾಡಿದ್ದಾರೆ.

ವರದಿ ನೀಡಿರುವ ತಾಂತ್ರಿಕ ಸಮಿತಿ

ಈ ಬಗ್ಗೆ ಲಿಂಗಸೂರಿನ ಹಾಲಿ ಶಾಸಕರಾದ ಡಿಎಸ್ ಹುಲಿಗೇರಿ ಅವರು ಮುಖ್ಯಮಂತ್ರಿಗಳಿಗೆ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ, ಜಲ ಸಂಪನ್ಮೂಲ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳು ಪತ್ರ ಬರೆದ ಮೇಲೆ ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ರಾಮ್‌ ಪುರೆ, ಶಿವಕುಮಾರ್‌, ಅಶೋಕ್‌ ಹೊಸನಾಡ್‌, ರಾಜೇಂದ್ರ, ಪ್ರದೀಪ್‌ ಮಿತ್ರ ಮಂಜುನಾಥ್‌ ಸೇರಿದಂತೆ 6 ಜನ ಸದಸ್ಯರಿದ್ದು ಈ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಒಂದು ವರದಿ ನೀಡಿದೆ.

Raichur: Siddaramaiah demands probe on Narayanapur canal tender irregularities

ಸಮಿತಿ ನೀಡಿದ ವರದಿಯಲ್ಲಿ ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯವೇನಿದೆ?, ಇವರು ಮಣ್ಣು ತುಂಬಲಾಗಿದೆ ಎಂದು ತೋರಿಸುತ್ತಿರುವ ಲೆಕ್ಕ ಸುಳ್ಳು ಎಂದು ಹೇಳಿದೆ. ನಿಯಮದ ಪ್ರಕಾರ ಕೆಂಪು ಮಣ್ಣು ಇರುವ ಕಡೆ ಗ್ರಾವೆಲ್‌ ಹಾಕಬೇಕಾದ ಅಗತ್ಯವಿಲ್ಲ, ಆದರೆ ಇಲ್ಲಿ ಗ್ರಾವೆಲ್‌ ಹಾಕಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ ಎಂದು ಸಮಿತಿ ವರದಿ ಹೇಳಿದೆ.

''ಈ ಯೋಜನೆಯಲ್ಲಿ ಇಂಜಿನಿಯರ್‌ಗಳು, ಕಂಟ್ರಾಕ್ಟರ್‌ಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಗೋಲ್ಮಾಲ್‌ ಮಾಡಿದ್ದಾರೆ. ಹಿಂದೊಮ್ಮೆ ಆಧುನೀಕರಣಗೊಂಡ ಕಾಲುವೆಗಳಿಗೆ ಮತ್ತೆ ಮರು ನಿರ್ಮಾಣ ಮಾಡುವುದಾಗಿ ಹೇಳಿ ದುಡ್ಡು ಹೊಡೆಯಲಾಗಿದೆ. ಮಣ್ಣು ತುಂಬಿಸಿದ್ದೇವೆ, ಕಲ್ಲು ಬಂಡೆ ಬ್ಲಾಸ್ಟ್‌ ಮಾಡಿದ್ದೇವೆ, ಮುರಮ್‌ ಹಾಕಿದ್ದೇವೆ ಎಂದೆಲ್ಲ ಸುಳ್ಳು ಲೆಕ್ಕ ನೀಡಿ ಬಿಲ್‌ ಪಡೆಯಲಾಗಿದೆ ಎಂದು ಸಮಿತಿ ವರದಿ ಹೇಳಿದೆ,'' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Raichur: Siddaramaiah demands probe on Narayanapur canal tender irregularities

ಪರಿಶೀಲನೆ ನಡೆಸಲು ಸ್ಥಳಕ್ಕೆ ಹೋದರೆ ಕಂಟ್ರಾಕ್ಟರ್‌ ಪರವಾದ ಗೂಂಡಾಗಳು ಇವರನ್ನು ಒಳಗೆ ಬಿಡಲೇ ಇಲ್ಲ ಎನ್ನುವ ವಿಚಾರ ಪತ್ರಿಕೆಯಲ್ಲಿ ಈಗಾಗಲೇ ವರದಿಯಾಗಿತ್ತು. ಕಂಟ್ರಾಕ್ಟರ್‌ಗೆ ಸರ್ಕಾರದ ಕುಮ್ಮಕ್ಕು ಇಲ್ಲದೆ ಹೀಗೆ ತಡೆದು ಗಳಿಸೋಕೆ ಆಗುತ್ತಾ? ಈ ವರೆಗೆ ಕಂಟ್ರಾಕ್ಟರ್‌ ಅಥವಾ ಅವನ ಹಿಂಬಾಲಕ ಗೂಂಡಾಗಳ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ದೂರು ನೀಡಲು ಹೋದರೆ ಮೇಲಿನಿಂದ ಒತ್ತಡ ಹಾಕಿ ದೂರು ನೀಡದಂತೆ ತಡೆಯಲಾಗಿದೆ ಎಂದು ಅವರು ದೂರಿದ್ದಾರೆ.

Raichur: Siddaramaiah demands probe on Narayanapur canal tender irregularities

ಸುಮಾರು 800 ಕೋಟಿ ರೂಪಾಯಿಯಷ್ಟು ಹಣವನ್ನು ಮಣ್ಣು ತುಂಬಿಸುವುದಾಗಲೀ, ಮುರಮ್‌ ಹಾಕುವುದಾಗಲೀ ಮಾಡದೆ ದುಡ್ಡು ನುಂಗಲಾಗಿದೆ. ನನ್ನ ಪ್ರಕಾರ ಈ ಹಗರಣವನ್ನು ಸದನ ಸಮಿತಿಗೆ ವಹಿಸುವುದು ಉತ್ತಮ, ಸರ್ಕಾರ ಸದನ ಸಮಿತಿಗೆ ಪೊಲೀಸ್‌ ಭದ್ರತೆ ನೀಡಿ, ಸ್ಥಳ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ಕಂಡುಬರುತ್ತಿರುವ ಎಲ್ಲಾ ಅವ್ಯವಹಾರಗಳು ನಡೆದಿದ್ದೇ ಆದರೆ ಅಷ್ಟೂ ಹಣವನ್ನು ವಸೂಲಿ ಮಾಡಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತೇನೆ. ಇದಕ್ಕೆ ಜಲ ಸಂಪನ್ಮೂಲ ಇಲಾಖೆಯ ಸಚಿವರೇ ನೇರ ಹೊಣೆಯಾಗಿದ್ದು, ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

English summary
Opposite party leader Siddaramaiah held a press meet in Bengaluru and alleged that there was an irregularity in the modernization of 1 to 15 distribution canals of the Narayanapur right bank at Raichur district Lingasagar and Devadurga taluks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X