ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಮನೆಗಳಿಗೆ ನುಗ್ಗಿದ ಮಳೆ ನೀರು, ಜನಜೀವನ ಅಸ್ತವ್ಯಸ್ತ!

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್‌, 02: ರಾಯಚೂರು ಜಿಲ್ಲೆಯಾದ್ಯಂತ ಮಂಗಳವಾರ ಒಂದು ತಾಸು ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದ್ದಾರೆ. ಮಸ್ಕಿ ಹಾಗೂ ಲಿಂಗಸುಗೂರು ತಾಲೂಕುಗಳಲ್ಲೂ ರಾತ್ರಿ ಅಪಾರ ಹಾನಿಯಾಗಿದೆ.

ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ಜಮೀನುಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ದೇವದುರ್ಗ ಬಸ್ ನಿಲ್ದಾಣ ಪಕ್ಕದ ರಾಜಕಾಲುವೆ ಭರ್ತಿಯಾಗಿ ಪ್ರಯಾಣಿಕರು ಹೊರಬರಲು ಮತ್ತು ನಿಲ್ದಾಣದ ಒಳಗೆ ಹೋಗಲು ಪರದಾಡುವಂತಾಗಿದೆ.

ಮಾನ್ವಿ, ಸಿಂಧನೂರು, ಸಿರವಾರಗಳಲ್ಲಿ ತರಕಾರಿ ವ್ಯಾಪಾರಿಗಳು, ಹಾಲು, ಪೇಪರ್ ಹಾಕುವವರು ಭಾರಿ ಮಳೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ರಾಯಚೂರು ನಗರದಲ್ಲಿ 10 ನಿಮಿಷ ಬಿರುಸಿನ ಮಳೆ ಸುರಿದ್ದಿದ್ದು, ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 44 ಮಿಲಿ ಮೀಟರ್ ಮಳೆ ದಾಖಲಾಗಿದೆ. ಮಸ್ಕಿ ತಾಲ್ಲೂಕಿನ ಗುಡದೂರ ಹೋಬಳಿಯಲ್ಲಿ104 ಮಿಲಿ ಮೀಟರ್, ಸಿಂಧನೂರು ತಾಲ್ಲೂಕಿನ ಹುಡಾ ಹೋಬಳಿಯಲ್ಲಿ 98.8 ಮಿಲಿ ಮೀಟರ್, ಹಟ್ಟಿ ಹೋಬಳಿಯಲ್ಲಿ 62 ಮಿಲಿ ಮೀಟರ್ ಮಳೆ ಆಗಿದೆ. ಮಸ್ಕಿ ಪಟ್ಟಣದಲ್ಲಿ ಸೋಮವಾರ ತಡರಾತ್ರಿಯಿಂದ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮಂಗಳವಾರ ಬೆಳಗ್ಗೆ ಹಾಲು, ತರಕಾರಿ ಖರೀದಿಸಲು ಸಾರ್ವಜನಿಕರು ಪರದಾಡಿದರು. ರಾತ್ರಿ 2 ಗಂಟೆಗೆ ಆರಂಭವಾದ ಮಳೆ ಮಂಗಳವಾರ ಕೂಡ ದಾಂಗುಡಿ ಇಟ್ಟಿದೆ.

 ಮನೆಗಳಿಗೆ ನುಗ್ಗಿದ ಚರಂಡಿ ನೀರು

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಕಟ್ಟೆ ದುರ್ಗಾದೇವಿ ದೇವಸ್ಥಾನದ ಸಮೀಪ ಸರಿಯಾಗಿ ಚರಂಡಿ ನಿರ್ಮಾಣ ಮಾಡದ ಕಾರಣ ರಸ್ತೆ ಮೇಲೆ 3 ಅಡಿಗಳಷ್ಟು ನೀರು ಹರಿದು ಅಲ್ಲಿನ ಜನರು ಪರದಾಡಿದ್ದಾರೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಕಷ್ಟಕ್ಕೆ ಸಿಲುಕಿದ್ದು, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಬಸವೇಶ್ವರ ನಗರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿರುವ ಹಿನ್ನೆಲೆ ಬೆಟ್ಟದಿಂದ ಹರಿದು ಬಂದ ನೀರು ಮುಂದೆ ಹೋಗದೆ ಒಂದೇ ಕಡೆ ಸಂಗ್ರವಾಗುತ್ತಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿರುವ ಬಿಜೆಪಿ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಪುಟ್ಟರಾಜ ಉದ್ಯಾನವನ ಕೂಡ ಜಲಾವೃತಗೊಂಡಿವೆ. ಕಾಂಗ್ರೆಸ್ ಕಚೇರಿ ಸುತ್ತಮುತ್ತ ಹಾಗೂ ಭಾರತ ಪೆಟ್ರೋಲ್‌ ಪಂಪ್‌ಗೆ ನೀರು ನುಗ್ಗಿ ಅಲ್ಲಿನ ಸಿಬ್ಬಂದಿಗಳು ನೀರನ್ನು ಹೊರಹಾಕಲು ಹರಸಾಹಸವನ್ನೇ ಪಟ್ಟಿದ್ದಾರೆ.

 ವುರುಣಾರ್ಭಟಕ್ಕೆ ನಗರದ ಜನರು ತತ್ತರ

ವುರುಣಾರ್ಭಟಕ್ಕೆ ನಗರದ ಜನರು ತತ್ತರ

ಬೆಟ್ಟದಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬಡಾವಣೆ ಮಾಲೀಕರು ಮಳೆ ನೀರು ಹೋಗುವ ಚರಂಡಿ ಬಂದ್ ಮಾಡಿದ್ದಾರೆ. ಇದರಿಂದ ಬಸವೇಶ್ವರ ನಗರದ ಅನೇಕ ಮನೆಗಳಲ್ಲಿ ಮಳೆ ನೀರು ಆವರಿಸಿಕೊಂಡಿದೆ. ಸೋಮನಾಥ ನಗರದ ತಗ್ಗು ಪ್ರದೇಶದ ಮನೆಗಳು, ಗಾಂಧಿ ನಗರ, ರಾಮಕೃಷ್ಣ ಕಾಲೊನಿ ಸೇರಿ ಮುಂತಾದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಪರದಾಡಿದರು. ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಮಳೆಯಲ್ಲಿಯೇ ಚರಂಡಿ ಸ್ವಚ್ಚಗೊಳಿಸಿ ನೀರು ಮುಂದಕ್ಕೆ ಹರಿದು ಹೋಗುವಂತೆ ಮಾಡಿದರು.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಸತಿ ನಿಲಯದ ಕಟ್ಟಡಗಳಿಗೆ ಮಳೆ ನೀರು ನುಗ್ಗಿದೆ. ವಸತಿ ನಿಲಯದ ಪಕ್ಕದಲ್ಲಿರುವ ಗುರು ಸಿದ್ದಮ್ಮ ಕಾಲೊನಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ ವರ್ಷದ 12 ತಿಂಗಳುಗಳಲ್ಲಿಯೂ ನೀರು ನಿಂತಿರುತ್ತದೆ.

 ಹೆಸರಿಗಷ್ಟೇ ರಾಜಕಾಲುವೆ ಎಂದು ಆಕ್ರೋಶ

ಹೆಸರಿಗಷ್ಟೇ ರಾಜಕಾಲುವೆ ಎಂದು ಆಕ್ರೋಶ

‘2011-12ನೇ ಸಾಲಿನಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ ಕಾಲುವೆ ನಿರ್ಮಿಸಲಾಗಿದ್ದು, ಅದನ್ನು ಇದುವರೆಗೂ ಸ್ವಚ್ಛ ಮಾಡಿಲ್ಲ. ಆದ್ದರಿಂದ ಕಾಲುವೆಯಲ್ಲಿ ಗಿಡ, ಗಂಟಿ ಬೆಳೆದು ನೀರು ಹರಿದು ಹೋಗದೆ ಕಾಲೊನಿಯಲ್ಲಿ ಸಂಗ್ರಹವಾಗುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಅಲ್ಲಿನ ನಿವಾಸಿ ಮಲ್ಲಪ್ಪ ಇನಾಂದಾರ್ ಆರೋಪಿಸಿದರು.

ಪಟ್ಟಣದ ಗಂಗಾನಗರದಲ್ಲಿ ತಿಮ್ಮನಗುಡ್ಡದಿಂದ ಹರಿದು ಬರುವ ಮಳೆ ನೀರು ಹಾಗೂ ಗಾಜಲದಿನ್ನಿ ಹಳ್ಳದ ನೀರು ಮನೆಗಳಿಗೆ ನುಗ್ಗಿದೆ. ಹಳ್ಳದ ನೀರು ಹರಿಯಲು ವ್ಯವಸ್ಥೆ ಮಾಡಲಾಗಿತ್ತು. ಅದರೆ ಈಚೆಗೆ ಹಳ್ಳದ ಎರಡು ದಂಡೆಗೆ ಗೋಡೆ ನಿರ್ಮಿಸಿ ಅದನ್ನು ಚರಂಡಿಯಾಗಿ ಮಾರ್ಪಡಿಸಲಾಗಿದೆ. ಅದರಲ್ಲಿ ಊಳು ತುಂಬಿ ನೀರು ನಿಂತಲ್ಲಿಯೇ ಸಂಗ್ರಹವಾಗುತ್ತಿದೆ. ಮತ್ತು ಪ್ರವಾಸಿ ಮಂದಿರದ ಅವರಣದಲ್ಲೂ ನೀರು ಸಂಗ್ರಹವಾಗಿದೆ.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಹೊಸ ಬಡಾಣೆಗಳಿಗೆ ಮಾಲೀಕರು ಮೂಲ ಸೌಕರ್ಯ ಒದಗಿಸಿಲ್ಲ. ಆದರೂ ನಾಗರಿಕರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನೀರು ಮಳೆ ನುಗ್ಗಿದಾಗ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಶಾಪ ಹಾಕಲಾಗುತ್ತದೆ ಎಂದು ಜನ ದೂರಿದರು. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಪಟ್ಟಣದ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಕ್ತೂಮ್ ಪಾರಶಿ ಒತ್ತಾಯಿಸಿದ್ದಾರೆ.

 ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಕಿಡಿ

ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಕಿಡಿ

ಕವಿತಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಹಲವು ರಸ್ತೆಗಳು ಕೆರೆಯಂತಾಗಿ ವಾಹನ ಸಂಚಾರಕ್ಕೆ ಅಡೆತಡೆಯಾಯಿತ. ಇಲ್ಲಿನ ಶಿವಪ್ಪತಾತನ ಮಠದ ಪಕ್ಕದ ಚರಂಡಿ ತುಂಬಿ ಹರಿದ ಪರಿಣಾಮ ರಸ್ತೆಯಲ್ಲಿ ನೀರು ಹರಿದು ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು. ‘ಮಸ್ಕಿ ತಾಲ್ಲೂಕಿನ ಹಾಲಾಪುರದಲ್ಲಿ ಹಳ್ಳದ ಹೊಸ ಸೇತುವೆ ಕಿತ್ತುಹೋದ ಪರಿಣಾಮ ಮಳೆ ನೀರು ಊರಿನ ಒಳಗೆ ನುಗ್ಗಿದೆ. ಕರಿಯಪ್ಪ ತಾತನ ದೇವಸ್ಥಾನ ಹಾಗೂ ಜಾತ್ರೆಯ ಅಂಗವಾಗಿ ಹಾಕಿದ್ದ ಅಂಗಡಿಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ನಷ್ಟ ಅನುಭವಿಸುಂತಾಯಿತು'ಎಂದು ಗ್ರಾಮದ ನಿವಾಸಿ ಸಿದ್ದಾರ್ಥ್‌ ಪಾಟೀಲ್‌ ಹೇಳಿದರು.

‘ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ 7ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳ ಗುಡಿಸಲುಗಳಿಗೆ ನೀರು ನುಗ್ಗಿ ದವಸ-ಧಾನ್ಯ, ಬಟ್ಟೆಗಳು ಹಾಳಾಗಿವೆ'ಎಂದು ನಿವಾಸಿಗಳು ಅಳಲು ತೋಡಿಕೊಂಡರು. ಲಿಂಗಸೂಗೂರು ತಾಲ್ಲೂಕಿನ ಹಟ್ಟಿಚಿನ್ನದಗಣಿ ಸೇರಿ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ರಾತ್ರಿ 62 ಮಿಲಿ ಮೀಟರ್‌ ಮಳೆ ಸುರಿದಿದೆ. ಪಟ್ಟಣದ ವಿವಿಧ ಕಾಲೊನಿಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು. ‘ಪ್ರತಿ ಬಾರಿ ಮಳೆ ಸುರಿದಾಗ ಇದೇ ಸ್ಥಿತಿ ನಿರ್ಮಾಣವಾಗುತ್ತದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ'ಎಂದು ಅಂಬೇಡ್ಕರ್ ನಗರ ನಿವಾಸಿ ಬಸವಲಿಂಗಪ್ಪ ಹಾಗೂ ಇತರರು ದೂರಿದರು.

Recommended Video

ಸಿದ್ದರಾಮೋತ್ಸವ: ಇದು ಸಿದ್ದು ಪಕ್ಷಾನಾ? Or ಕಾಂಗ್ರೆಸ್ ಪಕ್ಷಾನಾ? | Oneindia Kannada

English summary
Heavy rain lashed Raichur district for hour on Tuesday disrupted life. Roads lakes and motorists stranded. Maski and Lingasugur taluks also suffered huge damage during night. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X