Love Kesari : ರಾಯಚೂರು ಶ್ರೀರಾಮ ಸೇನೆ ಕಾರ್ಯಕರ್ತ ರಾಜಾಚಂದ್ರ ವಿರುದ್ಧ ಎಫ್ಐಆರ್
ರಾಯಚೂರು, ಏಪ್ರಿಲ್ 12: ಲವ್ ಜಿಹಾದ್ ಮತ್ತು ಲವ್ ಕೇಸರಿ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ ಶ್ರೀರಾಮ ಸೇನೆ ಮುಖಂಡ ರಾಜಾಚಂದ್ರ ರಾಮನಗೌಡ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಯಚೂರಿನ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.
ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರಾಜಾಚಂದ್ರ ರಾಮನಗೌಡ ಮತ್ತು ಮಂಜುನಾಥ್ ವಿರುದ್ಧ ಐಪಿಸಿ ಸೆಕ್ಷನ್ 153ರ ಗಲಭೆ ಸೃಷ್ಟಿಗೆ ಪ್ರಚೋದನೆ ನೀಡುವುದು, 153ಎ ಅಡಿ ಎರಡು ಕೋಮುಗಳ ನಡುವೆ ವೈರತ್ವ ಸೃಷ್ಟಿಸುವುದು, 295 ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕದಲ್ಲಿ "ಲವ್ ಜಿಹಾದ್" ವಿರುದ್ಧ ಕಠಿಣ ಕಾನೂನು
ಕಳೆದ ಏಪ್ರಿಲ್ 10ರಂದು ರಾಯಚೂರಿನಲ್ಲಿ ಆಯೋಜಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಅನ್ಯಧರ್ಮದ ಕುರಿತು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಜಾಚಂದ್ರ ರಾಮನಗೌಡ ವಿರುದ್ಧ ಆರೋಪಿಸಲಾಗಿದೆ.
ಮುಸ್ಲಿಂ ಯುವತಿಯರನ್ನು ಮದುವೆಯಾಗಲು ಕರೆ:
ಮುಸ್ಲಿಂ ಯುವಕರು ನಮ್ಮ ಹಿಂದೂ ಯುವತಿಯನ್ನು ಮದುವೆಯಾಗುತ್ತಾರೆ. ಅದೇ ರೀತಿ ನಮ್ಮ ಹಿಂದೂ ಹುಡುಗರು ಮುಸ್ಲಿಂ ಯುವತಿಯರನ್ನು ಮದುವೆಯಾಗಿ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಲವ್ ಕೇಸರಿ ಬಗ್ಗೆ ಖಾಕಿ ಹದ್ದಿನ ಕಣ್ಣು:
ಲವ್ ಜಿಹಾದ್ ಪ್ರತೀಕಾರವಾಗಿ ಲವ್ ಕೇಸರಿ ಬಗ್ಗೆ ಶ್ರೀರಾಮ ಸೇನೆ ಕಾರ್ಯಕರ್ತ ರಾಜಾಚಂದ್ರ ರಾಮನಗೌಡ ನೀಡಿರುವ ಹೇಳಿಕೆ ಬೆನ್ನಲ್ಲೇ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸಮುದಾಯದ ಮುಖಂಡರ ಹೇಳಿಕೆ ಬಗ್ಗೆ ಖಾಕಿ ಪಡೆ ನಿಗಾ ವಹಿಸಿದೆ. ಲವ್ ಕೇಸರಿ ಹೇಳಿಕೆ ಬಗ್ಗೆ ಕೇಸರಿ ಪಡೆಯು ಮೌನಕ್ಕೆ ಶರಣಾಗಿದೆ. ಇನ್ನು, ಲವ್ ಕೇಸರಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವುದಕ್ಕೆ ಮುಸ್ಲಿಂ ಮುಖಂಡರು ನಿರಾಕರಿಸಿದ್ದಾರೆ.
ಒಂದು ಕಡೆ ಸತ್ಕಾರ, ಇನ್ನೊಂದೆಡೆ ಧಿಕ್ಕಾರ:
ಕಳೆದ ಏಪ್ರಿಲ್ 10ರಂದು ರಾಯಚೂರಿನಲ್ಲಿ ಎರಡು ರೀತಿಯ ಬೆಳವಣಿಗೆಗಳು ನಡೆದವು. ಒಂದು ಕಡೆಯಲ್ಲಿ ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಕ್ಯಾಂಪೇನ್ ನಡೆಸುವಂತೆ ಕರೆ ನೀಡಲಾಗಿತ್ತು. ಅದೇ ರೀತಿ ಇನ್ನೊಂದು ಕಡೆಯಲ್ಲಿ ಹಿಂದೂ-ಮುಸ್ಲಿಂ ಯುವಕರು ಭಾವೈಕ್ಯತೆ ಮೆರೆದಿದ್ದರು. ಶ್ರೀರಾಮ ನವಮಿ ಯಾತ್ರಿಕರಿಗೆ ಮುಸ್ಲಿಂ ಯುವಕರು ಸತ್ಕಾರ ಮಾಡಿದರು. ಅದರಂತೆ ರಂಜಾನ್ ಉಪವಾಸವನ್ನು ಬಿಡುವ ವೇಳೆಯಲ್ಲಿ ಹಿಂದೂ ಯುವಕರು ಮುಸ್ಲಿಂ ಬಾಂಧವರಿಗೆ ಸತ್ಕಾರ ಮಾಡಿದರು.