RTPS: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5 ಘಟಕಗಳು ಸ್ಥಗಿತ
ರಾಯಚೂರು ಏಪ್ರಿಲ್ 18: ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ತಳಕಚ್ಚಿದೆ. ಕಲ್ಲಿದ್ದಲು ಗಣಿಗಳಿಂದ ರೇಕ್‌ಗಳಲ್ಲಿ ಸಾಗಣೆಯಾಗುವ ಕಲ್ಲಿದ್ದಲಿಗೆ ಕಾದು ಕುಳಿತು ನಂತರ ಬಳಕೆ ಮಾಡುವಂತಾಗಿದೆ. ಕೇಂದ್ರ ಸರಕಾರವು ಕಲ್ಲಿದ್ದಲು ಉತ್ಪಾದನೆ ಕಳೆದ ತಿಂಗಳು ಮತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿನ ಉತ್ಪಾದನೆ ಮಾಡಿದ್ದಾಗಿ ಹೇಳಿಕೊಂಡಿದ್ದರೂ, ಕಲ್ಲಿದ್ದಲು ಕೊರೆತೆಯಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ಕೇಂದ್ರ (ಆರ್‌ಟಿಪಿಎಸ್) ಕೇಂದ್ರದ ಐದು ಘಟಕಗಳು ಸ್ಥಗಿತಗೊಂಡಿವೆ. ಘಟಕ ಸಂಖ್ಯೆ 1,2,3,6&7 ಕಲ್ಲಿದ್ದಲು ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. ಈ ಐದು ಘಟಕಗಳಿಂದ 210 ಮೆ.ವ್ಯಾಟ್ ವಿದ್ಯುತ್ ಉತ್ಪನ್ನ ಮಾಡಲಾಗುತಿತ್ತು. ಆದರೆ ಇವುಗಳನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.
ರಾಯಚೂರು ಭಾಗದ ಜನರ ಬದುಕು ಆಗಿರುವ ಆರ್‌ಟಿಪಿಎಸ್ 1750 ಮೆ.ವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೀಗ ಕೇವಲ ಮೂರು ಘಟಕಗಳಿಂದ 460 ಮೆ. ವ್ಯಾ. ಉತ್ಪಾದಿಸಲಾಗುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ ಮೂರು ಘಟಕಗಳು ಮಾತ್ರ ಉತ್ಪಾದನೆಯಲ್ಲಿ ತೊಡಗಿವೆ. ನಾಲ್ಕು, ಐದು ಹಾಗೂ ಎಂಟನೇ ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಘಟಕ ನಾಲ್ಕು, ಐದು ಹಾಗೂ ಎಂಟರಲ್ಲಿ 460 ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ನಿತ್ಯವೂ ಕಲ್ಲಿದ್ದಲು ನಿರೀಕ್ಷೆಯಷ್ಟು ಪೂರೈಕೆಯಾಗದೇ ಇರುವುದರಿಂದ ಪೂರ್ಣ ಪ್ರಮಾಣದ ಉತ್ಪಾದನೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಕಲ್ಲಿದ್ದಲು ಖರೀದಿಗೆ ಬೇಕಾದ ಹಣದ ಪಾವತಿ ವಿಳಂಬದಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಲಾಗುತ್ತದೆ. ದಿನವೊಂದಕ್ಕೆ ಶಕ್ತಿನಗರಕ್ಕೆ 16.3 ಮೆ. ಟನ್ ಕಲ್ಲಿದ್ದಲು ಬೇಕಿದೆ. ಸದ್ಯ 18.9 ಕಲ್ಲಿದ್ದಲು ಲಭ್ಯವಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿ ನಾಲ್ಕು ಘಟಕಗಳಲ್ಲಿ ಉತ್ಪಾದಿಸಲಾಗುತ್ತಿತ್ತು. ಆದರೆ ಒಂದು ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ್ದು, ಈಗ ಮೂರು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗ್ತಿದೆ.

ಬಿಟಿಪಿಎಸ್‌ನಲ್ಲಿ ದಿನವೊಂದಕ್ಕೆ 1.5 ಮೆ. ಟನ್ ಕಲ್ಲಿದ್ದಲು ಅವಶ್ಯಕತೆಯಿದೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ 2 ಘಟಕಗಳಿಂದ 1,600 ಮೆ. ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದರೂ, ಒಂದು ಘಟಕದಿಂದ 700 ಮೆ. ವ್ಯಾ. ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ದಿನವೊಂದಕ್ಕೆ ಇಲ್ಲಿ 13.7 ಮೆ. ಟನ್ ಕಲ್ಲಿದ್ದಲು ಬೇಕಿದೆ.