ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಗಳ ನಿರ್ಲಕ್ಷ್ಯ: ಸೊಳ್ಳೆ ಕಾಟದಿಂದ ರಾಯಚೂರು ಜನ ಹೈರಾಣ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಆಗಸ್ಟ್ 12; ಸಾಮಾನ್ಯವಾಗಿ ಮಳೆಗಾಲದಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ. ಇದಕ್ಕೆ ಪರಿಹಾರ ಕಲ್ಪಿಸಬೇಕಿರುವ ರಾಯಚೂರು ನಗರ ಸ್ಥಳೀಯ ಸಂಸ್ಥೆಗಳು ಇನ್ನೂ ಕಾರ್ಯಪ್ರವೃತ್ತವಾಗಿಲ್ಲ. ಇದರಿಂದ ಅಲ್ಲಿನ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆತಂಕಕ್ಕೆ ಒಳಗಾಗಿದ್ದಾರೆ.

ಮಳೆಗಾಲ ಇರುವುದರಿಂದ ನಗರದಲ್ಲಿ ಸೊಳ್ಳೆಗಳು ವಿಪರೀತವಾಗಿದ್ದು, ಬಹುತೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸೊಳ್ಳೆಗಳ ಕಾಟದಿಂದ ಕೊಳಗೇರಿಗಳಲ್ಲಿ ಸಂಜೆ ನಂತರ ನಡೆದುಕೊಂಡು ಹೋಗುವುದು ತುಂಬಾ ಕಷ್ಟವಾಗುತ್ತಿದೆ.

ಕೊಡಗಿನಲ್ಲಿ ಮಳೆಗಾಲ ಬಿರುಸು, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕೊಡಗಿನಲ್ಲಿ ಮಳೆಗಾಲ ಬಿರುಸು, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ

ಮುಖ್ಯವಾಗಿ ಮಾವಿನಕೆರೆ ಸುತ್ತಮುತ್ತಲಿನ ಬಡಾವಣೆಗಳಾದ ರಾಮನಗರ, ಇಂದಿರಾನಗರ, ಸತ್ಯನಾಥ ಕಾಲೋನಿ, ಜಹಿರಾಬಾದ್ ಮಾರ್ಗಗಳಲ್ಲಿ ನಡೆದುಕೊಂಡು ಹೋಗುವಾಗ ಸೊಳ್ಳೆಗಳು ಮುತ್ತಿಕೊಳ್ಳುತ್ತವೆ ಎಂದು ಅಲ್ಲಿನ ಜನರು ಗೋಳು ತೋಡಿಕೊಳ್ಳುತ್ತಿದ್ದಾರೆ.

Drainage Not Cleaned Mosquitoes Problem At Raichur

ನಿತ್ಯ ನರಕಯಾತನೆ: ಸ್ಥಳೀಯ ಸಂಸ್ಥೆಯವರು ಪ್ರತಿವರ್ಷವೂ ಸಂಜೆ ಸಮಯಕ್ಕೆ ಫಾಗಿಂಗ್ ಮಾಡಿ ಹೋಗುತ್ತಿದ್ದರು. ಇದೀಗ ಅನೇಕ ತಿಂಗಳುಗಳು ಕಳೆದರೂ ಕೂಡ ಫಾಗಿಂಗ್ ಮಾಡುತ್ತಿಲ್ಲ. ಎಲ್ಲಿ ನೋಡಿದರೂ ಸೊಳ್ಳೆಗಳು ಆಗಿದ್ದು, ರಾತ್ರಿಯಿಡೀ ಜನರು ಜಾಗರಣೆ ಮಾಡುವಂತಾಗಿದೆ. ಇಲ್ಲಿನ ಮಕ್ಕಳು ಮತ್ತು ವಯೋವೃದ್ಧರು ಯಾವುದೇ ದಾರಿ ಇಲ್ಲದೆ ಹಗಲು ನಿದ್ದೆ ಮಾಡಿ, ರಾತ್ರಿ ಸೊಳ್ಳೆ ಹೊಡೆಯುತ್ತಾ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರ್ಡ್ ಮೆಂಬರ್ ಈ ಸಮಸ್ಯೆಯನ್ನು ಕಂಡು ಕಾಣದಂತೆ ಓಡಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ಪ್ರತಿನಿತ್ಯ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಜೀವನ ನಡೆಸುವಂತಾಗಿದೆ ಎಂದು ರಾಮನಗರ ನಿವಾಸಿ ಅಬ್ದುಲ್ ರೆಹಮಾನ್ ಅಸಮಾಧಾನ ಹೊರಹಾಕಿದರು.

ರಾಯಚೂರು ನಗರದಲ್ಲಿ ದೊಡ್ಡ, ದೊಡ್ಡ ತೆರೆದ ಚರಂಡಿಗಳಿವೆ. ಈ ಚರಂಡಿಗಳನ್ನು ನಗರ ಸ್ಥಳೀಯ ಸಂಸ್ಥೆ ಅವರು ಇದುವರೆಗೂ ಸ್ವಚ್ಛಗೊಳಿಸಿಲ್ಲ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರಾಂಪೂರ, ಹೊಸೂರ, ಅಸ್ಕಿಹಾಳದಲ್ಲಿಯೂ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನೇತಾಜಿ ನಗರ, ಅರಬ್ ಮೊಹಲ್ಲಾ ಬಡಾವಣೆಗಳಲ್ಲಿ ತೆರೆದ ಶೌಚಾಲಯಗಳಿದ್ದು, ಇಲ್ಲಿ ಸೂಕ್ತ ರೀತಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಅಲ್ಲಿನ ಸುತ್ತಮುತ್ತ ದುರ್ನಾತ ಉಂಟಾಗಿದ್ದು, ಅಲ್ಲಿನ ಜನರು ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಇನ್ನು ಜೆಸ್ಕಾಂ ಕಚೇರಿ ಪಕ್ಕದ ಕೋಟೆ ಕಂದಕವು ಸೊಳ್ಳೆಗಳ ತಾಣವಾಗಿಬಿಟ್ಟಿದೆ ಎಂದು ಆರೋಪಗಳು ಕೇಳಿಬರುತ್ತಿವೆ.

Drainage Not Cleaned Mosquitoes Problem At Raichur

ಅತಿ ಹೆಚ್ಚು ಮಲೇರಿಯಾ ಪೀಡಿತರ ತಾಣವಾಗಿದ್ದ ಲಿಂಗಸುಗೂರು ತಾಲ್ಲೂಕು ಇತ್ತೀಚಿನ ವರ್ಷಗಳಲ್ಲಿ ಮಲೇರಿಯಾ ಮುಕ್ತ ತಾಲೂಕಾಗಿ ಪರಿವರ್ತನೆಗೊಳ್ಳುತ್ತಿದೆ. ಜಲದುರ್ಗ, ಹಂಚಿನಾಳ, ಶೀಲಹಳ್ಳಿ, ಯಳಗುಂದಿ, ಕಡದರಗಡ್ಡಿ, ಯರಗೋಡಿ ಸೇರಿದಂತೆ ಕೃಷ್ಣಾ ನದಿ ಪಾತ್ರದ ಈಚನಾಳ, ಗುಂತಗೋಳ, ಗುರುಗುಂಟಾದಲ್ಲಿ ಕಡಿಮೆ ಮಲೇರಿಯಾ ಪ್ರಕರಣಗಳು ವರದಿ ಆಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಕೀಟ ಶಾಸ್ತ್ರ ತಜ್ಞೆ ಡಾ.ಗಂಗೋತ್ರಿ ನೇತೃತ್ವದ ಜಿಲ್ಲಾ ಮಲೇರಿಯಾ ವಿಭಾಗದ ಅಧಿಕಾರಿಗಳ ತಂಡ ಮೂರು ತಿಂಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿ ಈ ಕಾಯಿಲೆಯ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು. ಕೃಷ್ಣಾ ನದಿ ಪಾತ್ರದ ಕೆಲವೆಡೆ ಮಲೇರಿಯಾ ಹರಡಲು 'ಅನಾಫಿಲಿಸ್' ಎಂಬ ಹೆಸರಿನ ಸೊಳ್ಳೆ ಕಾರಣವಾಗಿದೆ ಎಂದು ತಿಳಿಸಿದ್ದರು. ಹೀಗಾಗಿ ಆ ಪ್ರದೇಶದಲ್ಲಿ ಸೊಳ್ಳೆ ನಿಯಂತ್ರಣ ಪರದೆ, ಲ್ಯಾಮ್ಡ್‍ ಸೈಲೊ ಥ್ರಿಮ್‍ ಸಿಂಪಡಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮುಂಜಾಗ್ರತೆಯಾಗಿ ಔಷಧ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಇನ್ನು ಮಾನ್ವಿ ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ತಾಲೂಕು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಿಂದ ರೋಗ ನಿಯಂತ್ರಣ ಕ್ರಮಗಳ ಕುರಿತು ಜನಜಾಗೃತಿ ಸಭೆಗಳನ್ನು ನಡೆಸಲಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಮಲೇರಿಯಾ, ಡೆಂಗಿ, ಆನೆಕಾಲು ರೋಗ ಮತ್ತಿತರ ರೋಗಗಳ ನಿಯಂತ್ರಣ ಕುರಿತು ಜನರಿಗೆ ಮಾಹಿತಿ ನೀಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ಮನೆ ಮನೆಗಳಿಗೆ ತೆರಳಿ ಓಣಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು. ಮನೆಗಳಲ್ಲಿ ಇರುವ ನೀರು ಸಂಗ್ರಹ ತೊಟ್ಟಿಗಳನ್ನು ನಿರಂತರ ಸ್ವಚ್ಛತೆಯಿಂದ ಇಡಬೇಕು. ಹಾಗೂ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಿದ್ದಾರೆ. ಶುದ್ಧ ಹಾಗೂ ಕಾಯಿಸಿದ ನೀರು ಕುಡಿಯುವಂತೆ ತಿಳಿಸಿದರು.

ದೇವದುರ್ಗದಲ್ಲಿ ಜನರಿಗೆ ಜಾಗೃತಿ: ದೇವದುರ್ಗ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಲೇ ಇದ್ದಾರೆ. ಇದಕ್ಕೆ ಸೊಳ್ಳೆಗಳ ಸಂತಾನೋತ್ಪತ್ತಿಯೂ ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ಸಮಸ್ಯೆ ಪರಿಹರಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿ ಹಾಗೂ ಕಸ ವಿಲೇವಾರಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ತಿಳಿಸಿದರು.

ಅನುದಾನದ ಕೊರತೆ ಎಂದು ಆರೋಪ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯೊಂದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸುವ ಕೆಲಸವನ್ನು ಮಾಡುತ್ತಿದೆ. ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಔಷಧಿಗಳ ಖರೀದಿ, ಫಾಗಿಂಗ್‌ ಯಂತ್ರಗಳ ಖರೀದಿಗೆ ಅಗತ್ಯ ಅನುದಾನ ಮೀಸಲು ಇಡುತ್ತಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯವರು ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.

English summary
People expressed outrage due to negligence of authorities in cleaning drainage at Raichur. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X