ವೈರಲ್ ಫೋಟೊ; ಹೆಗಲ ಮೇಲೆ ಗಂಡನ ಹೊತ್ತು ಊರೆಲ್ಲಾ ಮೆರವಣಿಗೆ ಮಾಡಿದ ಮಹಿಳೆ
ಪುಣೆ, ಜನವರಿ 20: ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆದ್ದ ಅಭ್ಯರ್ಥಿಯನ್ನು ಹೊತ್ತು ಹೂವಿನ ಹಾರ ಹಾಕಿ, ಜೈಕಾರದೊಂದಿಗೆ ಜನಜಂಗುಳಿಯಲ್ಲಿ ಬೆಂಬಲಿಗರು ಮೆರವಣಿಗೆ ಮಾಡುವುದನ್ನು ಕಂಡಿರುತ್ತೇವೆ. ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿ ವಿಜಯೋತ್ಸವಕ್ಕೂ ನಿಯಮ ಹಾಕಲಾಗಿದೆ. ಹಾಗೆಂದು ಗೆಲುವನ್ನು ಸಂಭ್ರಮಿಸದೇ ಇರುವುದಕ್ಕೆ ಸಾಧ್ಯವೇ? ಅದಕ್ಕೆ ಮಹಿಳೆಯೊಬ್ಬರು ಚುನಾವಣೆಯಲ್ಲಿ ತನ್ನ ಗಂಡನ ಗೆಲುವನ್ನು ಹೀಗೆ ಸಂಭ್ರಮಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಗಂಡ ಗೆದ್ದ ಖುಷಿಗೆ ಗಂಡನನ್ನು ಹೆಗಲ ಮೇಲೆ ಹೊತ್ತ ಹೆಂಡತಿ ಇಡೀ ಗ್ರಾಮದಲ್ಲಿ ಹೀಗೆ ಮೆರವಣಿಗೆ ಮಾಡಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ!
ಈ ಫೋಟೊದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ರೇಣುಕಾ ಸಂತೋಷ್ ಗುರಾವ್. ಆಕೆ ಪತಿ ಸಂತೋಷ್ ಗುರಾವ್ ಪುಣೆಯ ಪಾಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು, 221 ಮತಗಳನ್ನು ಪಡೆದು ಗೆದ್ದಿದ್ದಾರೆ. ತನ್ನ ವಿರೋಧಿಗಿಂತ 44 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಂತೋಷ್ ಗೆಲುವು ಪ್ರಕಟವಾಗುತ್ತಿದ್ದಂತೆ ಖುಷಿಯಿಂದ ಬೀಗಿದ ರೇಣುಕಾ, ಸಂತೋಷ್ ನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮದಿಂದ ಊರೆಲ್ಲಾ ಮೆರವಣಿಗೆ ಹೊರಟಿದ್ದಾರೆ.
ಕೊರೊನಾ ಕಾರಣದಿಂದಾಗಿ ಜಿಲ್ಲಾಡಳಿತ ವಿಜಯೋತ್ಸವ ಆಚರಣೆಗೆ ಅವಕಾಶ ನೀಡಿಲ್ಲ. ಐದು ಮಂದಿಗಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಹೀಗಾಗಿ ರೇಣುಕಾ ತಾನೇ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯಲ್ಲಿ ನಾಲ್ಕು ಮಂದಿ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮೆರವಣಿಗೆ ಮಾಡಿದ್ದಾರೆ. ಗಂಡನ ಗೆಲುವನ್ನು ಹೀಗೆ ಸಂಭ್ರಮಿಸಿದ ಮಹಿಳೆಯ ಈ ಫೋಟೊ ಈಗ ವೈರಲ್ ಆಗಿದೆ.
ಜಖ್ ಮಟ್ಟ ದೇವಿ ಗ್ರಾಮವಿಕಾಸ ಸಮಿತಿ ವತಿಯಿಂದ ಸಂತೋಷ್ ಸ್ಪರ್ಧಿಸಿದ್ದು, ಏಳರಲ್ಲಿ ಆರು ಸೀಟುಗಳನ್ನು ಗಳಿಸಿಕೊಂಡಿದೆ.