ನಿತೀಶ್ ಸರ್ಕಾರ್ 7.0: ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ?
ಪಾಟ್ನಾ, ನ. 16: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 7ನೇ ಬಾರಿಗೆ ಇಂದು ಸಂಜೆ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಾರೆ. ಇದು ಸಿಎಂ ಆಗಿ ಅವರ ನಾಲ್ಕನೇ ಅವಧಿಯಾಗಿದೆ. ಈ ನಡುವೆ ಉತ್ತರ ಪ್ರದೇಶ ಮಾದರಿಯಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಬಿಹಾರ ಸರ್ಕಾರ ಹೊಂದಲಿದೆ ಎಂಬ ಸುದ್ದಿ ಬಂದಿದೆ.
ಉಪ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಸಚಿವ ಸಂಪುಟಕ್ಕೆ ಯಾರೆಲ್ಲ ಸೇರಬಹುದು? ಎಂಬ ಕುತೂಹಲ ಇನ್ನೂ ಉಳಿದಿದೆ. ಸದ್ಯಕ್ಕೆ ತರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುವಂತೆ ಕರೆ ಬಂದಿದೆ. ಸುಶೀಲ್ ಮೋದಿ, ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಅವರು ಸಚಿವ ಸಂಪುಟದ ಭಾಗವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಜೆಡಿಯು ಕಡಿಮೆ ಸ್ಥಾನ(43)ಗಳನ್ನು ಗಳಿಸಿದ್ದರೂ ಚುನಾವಣಾ ಪೂರ್ವ ಒಪ್ಪಂದದಂತೆ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಬಿಜೆಪಿ 74 ಸ್ಥಾನ ಗೆದ್ದಿದ್ದು, ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದೆ.
14, 20, 1+1 ಮಾದರಿ
ಸದ್ಯದ ಮಾಹಿತಿಯಂತೆ ಬಿಜೆಪಿ ಹಾಗೂ ಜೆಡಿಯುನಿಂತ ತಲಾ 14 ಮಂದಿ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಚ್ಎಎಂ(ಎಸ್), ವಿಐಪಿಯಿಂದ ತಲಾ ಒಬ್ಬರು ಸಚಿವರಾಗಲಿದ್ದಾರೆ. ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಯಲಿದ್ದು, ಮಿಕ್ಕ 6 ಸ್ಥಾನಗಳನ್ನು ಬಿಜೆಪಿ ನಂತರ ತುಂಬಲಿದೆ ಎಂಬ ಸುದ್ದಿಯಿದೆ.
ಯುವ ಸಮುದಾಯ, ಅನುಭವಿಗಳ ಮಿಶ್ರಣ
ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶ್ರೇಯಶಿ ಸಿಂಗ್ ಅವರು ಜಮುಯಿ ಕ್ಷೇತ್ರದಿಂದ ಗೆದ್ದಿದ್ದು, ಮೊದಲ ಯತ್ನದಲ್ಲೇ ಸಚಿವೆಯಾಗುವ ಅವಕಾಶ ಸಿಗುವ ಸಾಧ್ಯತೆಯಿದೆ. ಮಾಜಿ ಡಿಜಿಪಿ ಸುನಿಲ್ ಕುಮಾರ್ ಅವರನ್ನು ಜೆಡಿಯು ಕೋಟಾದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬಹುದು.
ಬಿಜೆಪಿಗೆ ಸ್ಪೀಕರ್ ಸ್ಥಾನ;
ಮಾಜಿ ಸಚಿವ ನಂದ ಕಿಶೋರ್ ಯಾದವ್ ಹಾಗೂ ಮಾಜಿ ಉಪ ಸಭಾಪತಿ ಅಮರೇಂದ್ರ ಪ್ರತಾಪ್ ಸಿಂಗ್ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದಿದೆ. ಬಿಜೆಪಿಗೆ ಸ್ಪೀಕರ್ ಸ್ಥಾನ ಲಭಿಸಲಿದೆ.