"ನಿಮ್ಮನ್ನು ಸಿಎಂ ಮಾಡಿದ ಬಿಜೆಪಿ ಹಾಗೂ ಸಿಎಂ ಆದ ನಿಮಗೂ ಧನ್ಯವಾದ"
ಪಾಟ್ನಾ, ನವೆಂಬರ್.16: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಬಳಿಕವೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಹಾರದಲ್ಲಿ ಕೊನೆಗೂ ಭಾರತೀಯ ಜನತಾ ಪಕ್ಷವು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಬಿಟ್ಟಿತು. ಅದಕ್ಕಾಗಿ ಅಭಿನಂದನೆಗಳು ಎನ್ನುವ ಮೂಲಕ ಪರೋಕ್ಷ ಟೀಕೆಯನ್ನು ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದಕ್ಕೆ ನಿತೀಶ್ ಕುಮಾರ್ ಅವರಿಗೆ ಧನ್ಯವಾದಗಳು. ಇದು ಪೂರ್ಣಾವಧಿ ಸರ್ಕಾರವಾಗಲಿದ್ದು, ಮುಂದಿನ ಐದು ವರ್ಷಗಳವರೆಗೂ ನೀವೇ ಎನ್ ಡಿಎ ಸರ್ಕಾರದ ಮುಖ್ಯಮಂತ್ರಿ ಆಗಿರಲಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಚಿರಾಗ್ ಪಾಸ್ವಾನ್ ತಮ್ಮ ಮೊದಲ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಹಾರದ 37ನೇ ಸಿಎಂ ನಿತೀಶ್ ಕುಮಾರ್ರಿಗೆ ಶುಭಾಶಯದ ಮಹಾಪೂರ
ನಾಲ್ಕು ಲಕ್ಷ ಬಿಹಾರಿಗಳಿಂದ ಸಿದ್ಧಪಡಿಸಿದ ದೂರದೃಷ್ಟಿಯ ಬಿಹಾರ ಮೊದಲು, ಬಿಹಾರಿ ಮೊದಲು ಧ್ಯೇಯವನ್ನು ಸಾಧ್ಯವಾದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿರಿ. ಅದೇನೇ ಇರಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಕ್ಕೆ ಮತ್ತು ನಿಮ್ಮನ್ನು ಬಿಜೆಪಿಯು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ಅಭಿನಂದನೆಗಳು ಎಂದು ಎರಡನೇ ಟ್ವೀಟ್ ನಲ್ಲಿ ತಿವಿದಿದ್ದಾರೆ.
ಪಾಟ್ನಾದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ 69 ವರ್ಷದ ನಿತೀಶ್ ಕುಮಾರ್ ಏಳನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದರು. ರಾಜ್ಯಪಾಲ ಫಾಗು ಚೌವ್ಹಾಣ್ ನೂತನ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಿದರು. ಭಾನುವಾರ ಎನ್ ಡಿಎ ಮೈತ್ರಿಕೂಟದಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಿತೀಶ್ ಕುಮಾರ್ ಸಿಎಂ ಕುರ್ಚಿಗೆ ಏರಿದರು. ಬಿಜೆಪಿ ಮುಖಂಡ ತರ್ಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ ಉಪ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದರು. ರಾಜ್ಯಪಾಲ ಫಾಗು ಚೌವ್ಹಾಣ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಡಿಸಿಎಂ ಹಾಗೂ ಸಂಪುಟ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದಿದ್ದು, ಬಿಹಾರದ 37ನೇ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಪದಗ್ರಹಣ ಮಾಡಲಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು, ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.