• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಸೋಲು-ಗೆಲುವಿನ ಲೆಕ್ಕಾಚಾರ: ಇಲ್ಲಿದೆ ರವಿಶಂಕರ್ ಪ್ರಸಾದ್ ಉತ್ತರ!

|

ಪಾಟ್ನಾ, ಅಕ್ಟೋಬರ್.30: ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 71 ಕ್ಷೇತ್ರಗಳಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರಂದು ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಅಂತಿಮವಾಗಿ ನವೆಂಬರ್.07ರಂದು ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.

"ಬಿಹಾರದಲ್ಲಿ ಬಿಜೆಪಿ-ಎಲ್ ಜೆಪಿ ಮೈತ್ರಿಕೂಟದಲ್ಲಿ ಹೊಸ ಸರ್ಕಾರ"

ಮೂರು ಹಂತಗಳ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಎನ್ ಡಿಎ ಮೈತ್ರಿಕೂಟ, ಕಾಂಗ್ರೆಸ್-ಆರ್ ಜೆಡಿಯ ಮಹಾಘಟಬಂಧನ್ ಮೈತ್ರಿಕೂಟ ಹಾಗೂ ಲೋಕಜನಶಕ್ತಿ ಪಕ್ಷ ಕೂಡಾ ಸಖತ್ ಸದ್ದು ಮಾಡುತ್ತಿದೆ. ಎನ್ ಡಿಎ ಮೈತ್ರಿಕೂಟವೇ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಬಹುತೇಕ ಸಮೀಕ್ಷೆಗಳು ಅದೇ ಅಂಶವನ್ನು ಹೇಳುತ್ತಿವೆ. ಈ ನಡುವೆ "ದಿ ಇಂಡಿಯನ್ ಎಕ್ಸ್ ಪ್ರೆಸ್"ಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಸಚಿವ ಹಾಗೂ ಪಾಟ್ನಾ ಸಾಹೇಬ್ ಲೋಕಸಭಾ ಕ್ಷೇತ್ರದ ಸಂಸದ ರವಿಶಂಕರ್ ಪ್ರಸಾದ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯಾವ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಹೇಗೆ ಉತ್ತರಿಸಿದ್ದಾರೆ ಎನ್ನುವುದರ ಕುರಿತು ವಿಸ್ತೃತ ವರದಿ ಇಲ್ಲಿದೆ.

ಬಿಹಾರದಲ್ಲಿ ನಿತೀಶ್ ಅಧಿಕಾರಕ್ಕೇರುವ ವಿಶ್ವಾಸವಿದೆಯೇ?

ಬಿಹಾರದಲ್ಲಿ ನಿತೀಶ್ ಅಧಿಕಾರಕ್ಕೇರುವ ವಿಶ್ವಾಸವಿದೆಯೇ?

"ನಿತೀಶ್ ಕುಮಾರ್ ಯಾಕೆ ಮತ್ತೊಮ್ಮೆ ಅಧಿಕಾರಕ್ಕೆ ಏರುತ್ತಾರೆ ಎನ್ನುವುದಕ್ಕೆ ಕಾರಣಗಳು ತುಂಬಾ ಸ್ಪಷ್ಟವಾಗಿವೆ. ಎನ್ ಡಿಎ ಮೈತ್ರಿಕೂಟದ ಸರ್ಕಾರವು ನಡೆಸಿದ ಆಡಳಿತ ಕಾರ್ಯಕ್ಷಮತೆ ಹಾಗಿದೆ. ಬಿಹಾರ ಅಭಿವೃದ್ಧಿಯಾಗದೇ ದೇಶ ಅಭಿವೃದ್ಧಿಯಾಗದು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬದ್ಧತೆಯಾಗಿತ್ತು. ಅರಾರಿಯಾದಿಂದ ಸುಪೌಲ್ ವರೆಗೂ ಭಯಮುಕ್ತವಾಗಿದೆ. ನಿತೀಶ್ ಕುಮಾರ್ ಆಡಳಿತ ಮತ್ತು ಅದಕ್ಕೂ ಮೊದಲಿನ ಲಾಲೂ ಆಡಳಿತದ ಬಗ್ಗೆ ಜನರಿಗೇ ಗೊತ್ತಿದೆ" ಎಂದರು.

"ನಾನು ಪ್ರಚಾರದ ಸಂದರ್ಭದಲ್ಲಿ ನೆರೆದ ಜನರನ್ನು ಒಂದು ಪ್ರಶ್ನೆ ಕೇಳಿದೆ. 15 ವರ್ಷಗಳ ಹಿಂದೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ನಿರಾತಂಕವಾಗಿ ರಸ್ತೆಯಲ್ಲಿ ಸಂಚರಿಸಬಹುದಿತ್ತೇ ಎಂದು ಕೇಳಿದೆ. ನಾವು ಸ್ಮಾರ್ಟ್ ಫೋನ್ ಹಿಡಿದು ಹೊರಟರೆ ದಾರಿಹೋಕರೇ ನಮ್ಮ ಸ್ಮಾರ್ಟ್ ಫೋನ್ ಗಳನ್ನು ಕದಿಯುವಂತಾ ಸ್ಥಿತಿಯಿತ್ತು ಎಂದು ಹೇಳಿದರು. ಅಂದಿಗಿಂತ ಇಂದಿಗೆ ಪರಿಸ್ಥಿತಿ ಬದಲಾಗಿದೆ. ಜನರ ಬೇಡಿಕೆಗಳು ಹೆಚ್ಚಾಗಿದ್ದು, ಅದನ್ನು ಯಾರು ಈಡೇರಿಸಬಲ್ಲರು ಎಂಬುದು ಅವರಿಗೇ ಅರ್ಥವಾಗಿದೆ" ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಎನ್ ಡಿಎ ವಿರುದ್ಧ ಆಡಳಿತ ವಿರೋಧಿ ಅಲೆ ಇದೆಯೇ?

ಎನ್ ಡಿಎ ವಿರುದ್ಧ ಆಡಳಿತ ವಿರೋಧಿ ಅಲೆ ಇದೆಯೇ?

"ಎನ್ ಡಿಎ ಸರ್ಕಾರದ ವಿರುದ್ಧ ಕನಿಷ್ಠ ಪ್ರಮಾಣದ ಆಡಳಿತ ವಿರೋಧಿ ಅಲೆಯೂ ಕೂಡಾ ಇಲ್ಲ. ಆಯಾಸದಿಂದಾಗಿ ಜನರ ಪ್ರತಿಕ್ರಿಯೆಯಲ್ಲಿ ವ್ಯತ್ಯಾಸ ಆಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಪ್ರಚಾರದ ವೇಳೆಯಲ್ಲಿ ಜನರ ನಮ್ಮೊಂದಿಗೆ ಉತ್ತಮ ಸಂಪರ್ಕವನ್ನೇ ಹೊಂದಿದ್ದಾರೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಭಾವಶಾಲಿ ಭಾಷಣಗಳನ್ನು ಮಾಡಿದ್ದಾರೆ. ಬಿಹಾರವನ್ನು ಮತ್ತೆ ಬಡತನಕ್ಕೆ ತಳ್ಳಲು ಬಯಸುತ್ತೀರಾ ಎಂದು ಸ್ವತಃ ಪ್ರಧಾನಿಯವರೇ ಪ್ರಶ್ನಿಸಿದ್ದಾರೆ" ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಬಿಹಾರದ ಬಂಕಾ ಕ್ಷೇತ್ರದಲ್ಲಿ ಶೇ.59.58ರಷ್ಟು ದಾಖಲೆಯ ಮತದಾನ

ಅಭಿವೃದ್ಧಿ ರಾಜಕಾರಣಕ್ಕೆ ತೇಜಸ್ವಿ ಯಾದವ್ ಆದ್ಯತೆ

ಅಭಿವೃದ್ಧಿ ರಾಜಕಾರಣಕ್ಕೆ ತೇಜಸ್ವಿ ಯಾದವ್ ಆದ್ಯತೆ

ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡುತ್ತಾರೋ ಇಲ್ಲವೋ ಅದು ಒಂದು ಕಡೆಗಿರಲಿ. ಆದರೆ ಅವರ ತಂದೆ ಲಾಲೂ ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿಯವರ ಫೋಟೋವನ್ನು ಆರ್ ಜೆಡಿ ಪ್ರಚಾರದ ಬ್ಯಾನರ್ ಮತ್ತು ಹೋಲ್ಡಿಂಗ್ಸ್ ಗಳಲ್ಲಿ ಏಕೆ ಬಳಸುತ್ತಿಲ್ಲ. 15 ವರ್ಷ ರಾಜ್ಯದಲ್ಲಿ ಆಳ್ವಿಕೆ ನಡೆಸಿದ್ದು ಇವರೇ ತಾನೆ. ಹೀಗಿದ್ದರೂ ಅವರ ಫೋಟೋ ಬಳಸದಿರಲು ಕಾರಣವೇನು ಎಂದು ತೇಜಸ್ವಿ ಯಾದವ್ ರಿಗೆ ಗೊತ್ತಿದೆ. ಅವರ ಭಾವಚಿತ್ರಗಳನ್ನು ನೋಡಿದರೆ ಇಂದಿಗೂ ಬಿಹಾರದ ಜನರು ಭಯಗೊಳ್ಳುತ್ತಾರೆ, ಪೊಲೀಸರು ಮೌನವಾಗುತ್ತಾರೆ. ಇವರ ಕೈಗೆ ಮತ್ತೊಮ್ಮೆ ಆಡಳಿತ ನೀಡಬೇಕೇ ಎಂದು ಒಂದು ಕ್ಷಣ ಯೋಚನೆ ಮಾಡುತ್ತಾರೆ" ಎಂದು ಉತ್ತರಿಸಿದ್ದಾರೆ.

10 ಲಕ್ಷ ಬಿಹಾರಿಗಳಿಗೆ ಉದ್ಯೋಗ ಸೃಷ್ಟಿ ಬಗ್ಗೆ ಏನು ಹೇಳುತ್ತೀರಿ?

10 ಲಕ್ಷ ಬಿಹಾರಿಗಳಿಗೆ ಉದ್ಯೋಗ ಸೃಷ್ಟಿ ಬಗ್ಗೆ ಏನು ಹೇಳುತ್ತೀರಿ?

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನಡೆಸಿದ 15 ವರ್ಷಗಳ ಆಡಳಿತದಲ್ಲಿ ಕೇವಲ 95000 ಉದ್ಯೋಗವನ್ನು ಸೃಷ್ಟಿಸುವುದಕ್ಕಷ್ಟೇ ಸಾಧ್ಯವಾಯಿತು. ಆದರೆ ನಿತೀಶ್ ಕುಮಾರ್ ಆಡಳಿತ ಅವಧಿಯಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. 3 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ. ಈಗಾಗಲೇ 1.5 ಕೋಟಿ ಜೀವಿಕಾ ಉದ್ಯೋಗಿಗಳನ್ನು ಹೊಂದಿದ್ದು, ಇನ್ನೂ 1 ಕೋಟಿ ಜೀವಿಕಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಗುರಿ ಹೊಂದಲಾಗಿದೆ. ನಾವು ರಾಜ್ಯಾದ್ಯಂತ ಆಪ್ಟಿಕಲ್ ಫೈಬರ್ಗಳನ್ನು ಹಾಕುತ್ತಿರುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶಗಳಿವೆ. ಬಿಹಾರದಲ್ಲಿ ಐಐಟಿ, ಚಾಣಕ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಚಂದ್ರಗುಪ್ತ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇಲ್ಲವೇ?" ಎಂದು ರವಿಶಂಕರ್ ಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

ಆರ್ ಜೆಡಿ ಪ್ರಚಾರದಲ್ಲಿ ಅತಿಹೆಚ್ಚು ಜನ ಇರುತ್ತಾರಲ್ಲವೇ?

ಆರ್ ಜೆಡಿ ಪ್ರಚಾರದಲ್ಲಿ ಅತಿಹೆಚ್ಚು ಜನ ಇರುತ್ತಾರಲ್ಲವೇ?

"ಅವರ ಪ್ರಚಾರ ಸಂದರ್ಭಗಳಲ್ಲಿ ಎಷ್ಟಾದರೂ ಜನ ಸೇರಲಿ ಅದರಿಂದ ನಮಗೇನೂ ಸಮಸ್ಯೆಯಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಜನರು ಆರ್ ಜೆಡಿ ಸಭೆ ಮತ್ತು ಸಮಾರಂಭಗಳಲ್ಲಿ ಕಾಣಿಸಿಕೊಂಡರು. ಆದರೆ ಫಲಿತಾಂಶ ಏನಾಯಿತು. ಲೋಕಸಭೆಯಲ್ಲಿ ಆರ್ ಜೆಡಿಗೆ ಸಿಕ್ಕಿದ್ದು ಕೇವಲ ಒಂದು ಸ್ಥಾನ ಮಾತ್ರ. ಈ ಬಾರಿಯೂ ಅದೇ ರೀತಿ ಆಗುತ್ತದೆ. ಜನರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.

ಇನ್ನು, ಸಾರ್ವಜನಿಕ ಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಜನರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ರವಿಶಂಕರ್ ಪ್ರಸಾದ್ ಉತ್ತರಿಸಿದರು. "25,000 ಜನರ ನಡುವೆ ಅದ್ಯಾರೋ 10 ರಿಂದ 15 ಜನರು ಬೇಕಾಗಿ ಗಲಾಟೆ ಎಬ್ಬಿಸುತ್ತಾರೆ. 100ರಲ್ಲಿ 90 ಜನರು ನಿತೀಶ್ ಕುಮಾರ್ ಬೆಂಬಲಿಸಲು ಬಂದಿದ್ದರೆ 10 ಜನರು ಗಲಾಟೆ ಮಾಡುವುದಕ್ಕಾಗಿ ಬಂದಿರುತ್ತಾರೆ. ಅಂಥವರ ಮೇಲೆ ಮಾಧ್ಯಮಗಳು ಹೆಚ್ಚು ಗಮನ ಹರಿಸುತ್ತವೆ. ಇದೆಲ್ಲ ರಾಜಕೀಯದ ಆಟವಷ್ಟೇ" ಎಂದು ಹೇಳಿದರು.

ಬಿಜೆಪಿಗೆ ಚಿರಾಗ್ ಪಾಸ್ವಾನ್ ಬಗ್ಗೆ ಏಕೆ ಸ್ಪಷ್ಟ ನಿಲುವಿಲ್ಲ?

ಬಿಜೆಪಿಗೆ ಚಿರಾಗ್ ಪಾಸ್ವಾನ್ ಬಗ್ಗೆ ಏಕೆ ಸ್ಪಷ್ಟ ನಿಲುವಿಲ್ಲ?

ಲೋಕಜನಶಕ್ತಿ ಪಕ್ಷವು ಬಿಹಾರದ ಒಂದು ಸ್ಥಳೀಯ ಪಕ್ಷ. ಒಂದು ಕಾಲದಲ್ಲಿ ಎನ್ ಡಿಎ ಮೈತ್ರಿಕೂಟದ ಪಕ್ಷವಾಗಿ ಗುರುತಿಸಿಕೊಂಡಿತ್ತು. ಈಗ ನಮ್ಮ ಎನ್ ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಅವರೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿಯಾಗಿ ಗೃಹ ಸಚಿವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಸೇರಿದಂತೆ ಹೈಕಮಾಂಡ್ ನ ಬಹುತೇಕ ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ. ಎನ್ ಜೆಪಿ ಈಗ ಎನ್ ಡಿಎ ಮೈತ್ರಿಕೂಟದಲ್ಲೇ ಇಲ್ಲ. ನಮ್ಮ ಮೈತ್ರಿಕೂಟದಲ್ಲಿ ಹಿಂದೂಸ್ತಾನ್ ಅವಂ ಮೋರ್ಚಾ, ವಿಐಪಿ, ಜೆಡಿಯು ಮತ್ತು ಬಿಜೆಪಿ ಪಕ್ಷಗಳಷ್ಟೇ ಇವೆ. ಹೀಗಿರುವಾಗ ಚಿರಾಗ್ ಪಾಸ್ವಾನ್ ಬಗ್ಗೆ ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ಸಿಎಂ ಮೇಲಿನ ಕೋಪದಿಂದ ಪ್ರಧಾನಿ ಮೋದಿ ಪ್ರಚಾರ?

ಸಿಎಂ ಮೇಲಿನ ಕೋಪದಿಂದ ಪ್ರಧಾನಿ ಮೋದಿ ಪ್ರಚಾರ?

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರಲ್ಲಿ ಕೋಪದಿಂದಾಗಿ ಪ್ರಧಾನಿ ಮೋದಿ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆಯೇ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ರವಿಶಂಕರ್ ಪ್ರಸಾದ್, "ಪ್ರಧಾನಿ ಮೋದಿಯವರು ನಿತೀಶ್ ಕುಮಾರ್ ರಿಗೆ ಆತ್ಮವಿಶ್ವಾಸ ತುಂಬಿಲ್ಲ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ ಎಂದರು. ಈಶಾನ್ಯ ಮತ್ತು ಪೂರ್ವದ ರಾಜ್ಯಗಳು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಆದರೆ 10 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಿಹಾರದಲ್ಲಿ ಅಭಿವೃದ್ಧಿ ವೇಗವನ್ನು ಹೆಚ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ" ಎಂದರು.

ಬಿಹಾರದಲ್ಲಿ ಕೊರೊನಾವೈರಸ್ ನಿರ್ವಹಣೆಯಲ್ಲಿ ವೈಫಲ್ಯವೇಕೆ?

ಬಿಹಾರದಲ್ಲಿ ಕೊರೊನಾವೈರಸ್ ನಿರ್ವಹಣೆಯಲ್ಲಿ ವೈಫಲ್ಯವೇಕೆ?

"ಭಾರತ ಲಾಕ್ ಡೌನ್ ಸಂದರ್ಭದಲ್ಲಿ 80 ಕೋಟಿ ಆಹಾರ ಧಾನ್ಯಗಳನ್ನು ಕೇಂದ್ರ ಸರ್ಕಾರವು ಉಚಿತವಾಗಿ ನೀಡಿದೆ. 100 ವರ್ಷಗಳಿಗೆ ಒಮ್ಮೆ ಎದುರಾಗುವಂತಾ ಗಂಭೀರ ಸಮಸ್ಯೆ ಅದು. ಸಾಂಕ್ರಾಮಿಕ ಪಿಡುಗು ಹೋಗಲಾಡಿಸುವ ಬಗ್ಗೆ ಇಂದಿಗೂ ಶ್ರಮಿಸಲಾಗುತ್ತಿದೆ. ಕೊವಿಡ್-19 ಗುಣಮುಖರ ಸಂಖ್ಯೆಯು ತುಂಬಾ ಉತ್ತಮವಾಗಿದೆ. ಬಿಹಾರದಲ್ಲೂ ಕೊವಿಡ್-19 ಅಪಾಯ ಅಷ್ಟರ ಮಟ್ಟಿಗಿಲ್ಲ. ಅಲ್ಲದೇ 1.6 ಕೋಟಿ ಜನರಿಗೆ 1 ಸಾವಿರ ರೂಪಾಯಿ ಸಹಾಯ ಧನವನ್ನು ನೀಡಲಾಗಿದೆ" ಎಂದರು.

40 ಲಕ್ಷ ವಲಸೆ ಕಾರ್ಮಿಕರ ಮುಂದಿನ ಗತಿಯೇನು?

40 ಲಕ್ಷ ವಲಸೆ ಕಾರ್ಮಿಕರ ಮುಂದಿನ ಗತಿಯೇನು?

"ಈ ಸಮಸ್ಯೆಯನ್ನು ಎರಡು ರೀತಿಯಲ್ಲಿ ನೋಡಬಹುದು. ಬಿಹಾರದ ಜನರು ಹೊರ ರಾಜ್ಯಗಳಿಗೆ ತೆರಳಿ ಅಲ್ಲಿ ತಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಅದು ನಮಗೆ ಹೆಮ್ಮೆಯ ವಿಚಾರ. ಉದಾಹರಣೆಗೆ ಹೈದ್ರಾಬಾದ್ ನಲ್ಲಿ ಬಿರಿಯಾನಿ ತಯಾರಿಸುವವರಲ್ಲಿ ಬಿಹಾರ ಬಂಕಾ ಮೂಲದ ಕಾರ್ಮಿಕರೇ ಹೆಸರುವಾಸಿ ಆಗಿದ್ದಾರೆ. ಇದನ್ನು ತಡೆಯುವುದು ಸರಿಯೇ. ಇದು ನಮಗೆ ಹೆಮ್ಮೆ ತರುವ ವಿಚಾರವಲ್ಲವೇ. ಇದರ ಜೊತೆಗೆ ರಾಜ್ಯದಲ್ಲೇ ದುಡಿಯುವ ಕಾರ್ಮಿಕರಿಗಾಗಿ ಹಲವು ರೀತಿಯಲ್ಲಿ ಉದ್ಯೋಗವನ್ನು ಸೃಷ್ಟಿಸಿ ಕೊಡಲಾಗುತ್ತದೆ" ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.

ಕೇಂದ್ರ ಸಚಿವರಿಗೆ ಕೇಳಿದ ಇತರೆ ಪ್ರಶ್ನೆಗಳು ಹೇಗಿದ್ದವು

ಕೇಂದ್ರ ಸಚಿವರಿಗೆ ಕೇಳಿದ ಇತರೆ ಪ್ರಶ್ನೆಗಳು ಹೇಗಿದ್ದವು

1. ಪ್ರಧಾನಿ ಮೋದಿ 12 ಚುನಾವಣಾ ರ್ಯಾಲಿಗಳನ್ನಷ್ಟೇ ನಡೆಸುತ್ತಾರೆಯೇ: ಈ ವಿಚಾರವನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ. 12 ಚುನಾವಣಾ ಪ್ರಚಾರಗಳೇ ಸಾಕಷ್ಟಾಯಿತು. ಇದಕ್ಕಿಂತ ಹೆಚ್ಚು ರ್ಯಾಲಿಗಳನ್ನು ನಡೆಸುವ ಅಗತ್ಯವಿಲ್ಲ.

2. ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಸೇರಿ ಸರ್ಕಾರ ರಚಿಸುತ್ತವೆಯೇ: ಈ ಹಿಂದೆ ಲಾಲೂ ಜೊತೆಗೆ 18 ತಿಂಗಳು ಮೈತ್ರಿ ಸರ್ಕಾರ ರಚಿಸಿದಾಗಲೇ ಆರ್ ಜೆಡಿ-ಜೆಡಿಯು ಸಿದ್ಧಾಂತಗಳು ಹೊಂದಾಣಿಕೆ ಆಗುವುದಿಲ್ಲ ಎಂಬ ಅರಿವಿದೆ. ಇನ್ನು, ಕಾಂಗ್ರೆಸ್ ಮತ್ತು ಆರ್ ಜೆಡಿ ಎರಡೇ ಪಕ್ಷಗಳಿಗೆ ಬಹುಮತ ಸಿಗುವುದಕ್ಕೆ ಸಾಧ್ಯವಿಲ್ಲ.

3. ಬಿಜೆಪಿ - ಆರ್ ಜೆಡಿ ಮೈತ್ರಿ ಸರ್ಕಾರ ರಚಿಸಲು ಸಾಧ್ಯವೇ: (ನಗುನಗುತ್ತಾ ಉತ್ತರಿಸಿದರು) ಯಾವುದೇ ಕಾರಣಕ್ಕೂ ಅಂಥ ಸನ್ನಿವೇಶ ಸೃಷ್ಟಿ ಆಗುವುದಿಲ್ಲ. ಭ್ರಷ್ಟಾಚಾರ ವಿರೋಧಿ ಸಿದ್ಧಾಂತವನ್ನು ಹೊಂದಿರುವ ಬಿಜೆಪಿಯು ಆರ್ ಜೆಡಿ ಜೊತೆಗೆ ಕೈ ಜೋಡಿಸುವುದಕ್ಕೆ ಸಾಧ್ಯವಿಲ್ಲ.

4. ಎಲ್ ಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು: ಚಿರಾಗ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದು, ನಾನು ಅದರ ಬಗ್ಗೆ ಹೆಚ್ಚಿನದ್ದನ್ನು ಹೇಳಲು ಬಯಸುವುದಿಲ್ಲ. ಏಕೆಂದರೆ ಅವರು ತಮ್ಮದೇ ಹೊಸ ಮಾರ್ಗವನ್ನು ಹುಡುಕಿ ಹೊರಟಿದ್ದಾರೆ.

English summary
Any Have Chance To BJP-RJD Coming Together To Form A Govt: Here Read Central Minister Ravi Shankar Prasad Interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X