'ಆನ್ಲೈನ್ ಗೆಳತಿ'ಗಾಗಿ ಪಾಕಿಸ್ತಾನದಿಂದ ಗೋವಾಕ್ಕೆ ವೀಸಾ ಪಡೆಯದೇ ಬಂದಳಾ ಯುವತಿ?
ಪಣಜಿ, ಜನವರಿ 20: ಪಾಕಿಸ್ತಾನ ಮೂಲದವಳು ಮತ್ತು ಪ್ರಸ್ತುತ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾಳೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇರೆಗೆ ಕಲಾಂಗುಟ್ ಪೊಲೀಸರು 27 ವರ್ಷದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗುಪ್ತಚರ ಮಾಹಿತಿಯ ಪ್ರಕಾರ ಈಕೆ ಮೂಲತಃ ಪಾಕಿಸ್ತಾನದವಳಾಗಿದ್ದು, ಗೋವಾದಲ್ಲಿ ಅಕ್ರಮವಾಗಿ ತಂಗಿದ್ದಾಳೆ ಎಂದು ಹೇಳಲಾಗಿತ್ತು. ಇದೇ ಮಾಹಿತಿಯನ್ನು ಆಧರಿಸಿ ಕಲಾಂಗುಟ್ ಪೊಲೀಸರು 27 ವರ್ಷದ ಯುವತಿಯನ್ನು ವಿಚಾರಣೆಗೊಳಪಡಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ ಬೇಡ ಎಂದ ಸಿಎಂ
ಪೊಲೀಸರ ವಿಚಾರಣೆಯ ವೇಳೆ ಯುವತಿ ಭಾರತದಲ್ಲಿ ಇರಲು ಯಾವುದೇ ವೀಸಾ ಅಥವಾ ಪರವಾನಗಿಯನ್ನು ಹೊಂದಿರಲಿಲ್ಲ. ನೇಪಾಳ ಮೂಲಕ ಭಾರತವನ್ನು ಈಕೆ ಪ್ರವೇಶಿಸಿದ್ದಳು ಎಂದು ತಿಳಿದು ಬಂದಿದೆ.
ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಈಕೆ ಭಾರತೀಯ ಯುವತಿಯೊಬ್ಬಳನ್ನು ಆನ್ಲೈನ್ ನಲ್ಲಿ ಪರಿಚಯ ಮಾಡಿಕೊಂಡಿದ್ದು, ಆಕೆಯ ಮೇಲೆ ಪ್ರೀತಿ ಹುಟ್ಟಿದೆ. ಈ ಕಾರಣದಿಂದಾಗಿ ಆಕೆಯನ್ನು ಭೇಟಿಯಾಗಲು ನೇಪಾಳದ ಮೂಲಕ ಭಾರತ ಪ್ರವೇಶಿಸಿ, ಗೋವಾದಲ್ಲಿ ಕೆಲ ದಿನಗಳಿಂದ ವಾಸವಿದ್ದಳು ಎನ್ನಲಾಗಿದೆ.
ನೇಪಾಳದ ಮೂಲಕ ಭಾರತ ಪ್ರವೇಶಿಸುವವರಿಗೆ ವೀಸಾ ಅಗತ್ಯವಿಲ್ಲ. ಹೀಗಾಗಿ ಇದರ ಲಾಭ ಪಡೆದ ಈಕೆ, ಪಾಕಿಸ್ತಾನದಿಂದ ನೇಪಾಳಕ್ಕೆ ತೆರಳಿ, ಅಲ್ಲಿಂದ ಭಾರತಕ್ಕೆ ಬಂದಿದ್ದಾಳೆನ್ನಲಾಗಿದೆ. ಈ ಬಗ್ಗೆ ಸದ್ಯ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ವಿವಿಧ ತನಿಖಾ ಸಂಸ್ಥೆಗಳು ಕೂಡ ಈಕೆಯ ವಿಚಾರಣೆಯಲ್ಲಿ ತೊಡಗಿದೆ.