ಗೋವಾ; ಮಾ. 28ರಂದು ಪ್ರಮೋದ್ ಸಾವಂತ್ ಪ್ರಮಾಣ ವಚನ
ಪಣಜಿ, ಮಾರ್ಚ್ 22; ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಮಾರ್ಚ್ 28ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಫೆಬ್ರವರಿ 14ರಂದು ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆ ಮಾಡಲಿದೆ.
ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮೋದ್ ಸಾವಂತ್ರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಎಡರನೇ ಅವಧಿಗೆ ಪ್ರಮೋದ್ ಸಾವಂತ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ.
Breaking; ಗೋವಾ ಮುಖ್ಯಮಂತ್ರಿ ಘೋಷಣೆ ಮಾಡಿದ ಬಿಜೆಪಿ
ರಾಜ್ಯದ ಹಂಗಾಮಿ ಮುಖ್ಯಮಂತ್ರಿಯಾಗಿರುವ ಪ್ರಮೋದ್ ಸಾವಂತ್ ಸೋಮವಾರ ರಾತ್ರಿ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೈ ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದ್ದಾರೆ. ಮಾರ್ಚ್ 28ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಮೋದಿ ಭೇಟಿಯಾದ ಗೋವಾ ಸಿಎಂ ಪ್ರಮೋದ್ ಸಾವಂತ್
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. 2019ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ನಿಧನದ ಬಳಿಕ ಪ್ರಮೋದ್ ಸಾವಂತ್ ನೂತನ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗಲು ಪಕ್ಷ ಅವಕಾಶ ನೀಡಿದೆ.
ಗೋವಾ; ಬಿಜೆಪಿ ಇನ್ನೂ ಸಿಎಂ ಅಭ್ಯರ್ಥಿ ಅಂತಿಮಗೊಳಿಸಿಲ್ಲ!

ಬಿಜೆಪಿಗೆ ಬಹುಮತವಿಲ್ಲ
ಗೋವಾ ವಿಧಾನಸಭೆ ಸದಸ್ಯ ಬಲ 40. ಫೆಬ್ರವರಿ 14ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 11, ಎಎಪಿ 2, ಎಂಜಿಪಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಆರ್ಜಿಪಿ 1 ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ.
ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21 ಯಾವ ಪಕ್ಷಕ್ಕೂ ಲಭ್ಯವಾಗಿಲ್ಲ. ಆದರೆ ಮೂವರು ಪಕ್ಷೇತರ ಶಾಸಕರು ಮತ್ತು ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಸದಸ್ಯ ಬಲ 25ಕ್ಕೆ ಏರಿಕೆಯಾಗಿದ್ದು, ಪಕ್ಷ ಸರ್ಕಾರ ರಚನೆ ಮಾಡಲಿದೆ.

ರಾಜೀನಾಮೆ ನೀಡಿದ್ದ ಪ್ರಮೋದ ಸಾವಂತ್
2019ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪ್ರಮೋದ್ ಸಾವಂತ್ 2022ರ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನೂತನ ಮುಖ್ಯಮಂತ್ರಿ ನೇಮಕವಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ರಾಜ್ಯಪಾಲರು ಸೂಚಿಸಿದ್ದರು. ಈಗ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದು ಹೊಸ ಮುಖ್ಯಮಂತ್ರಿ ಆಯ್ಕೆಯಾಗಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ.

ಸರ್ಕಾರ ರಚನೆ ಹಕ್ಕು ಮಂಡನೆ
ಸೋಮವಾರ ಸಂಜೆ ಪ್ರಮೋದ್ ಸಾವಂತ್ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೈ ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಿದ್ದಾರೆ. ಎರಡನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗೆದ್ದಿತ್ತು. ಆದರೆ 13 ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಇತರ ಪಕ್ಷ, ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿತ್ತು.

ಹಲವು ನಾಯಕರಿಗೆ ಆಹ್ವಾನ
ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪ್ರಮೋದ್ ಸಾವಂತ್ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾಗೆ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಮಾರ್ಚ್ 28ರಂದು ಪ್ರಮೋದ್ ಸಾವಂತ್ ಒಬ್ಬರೇ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆಯೇ? ಅಥವ ಸಂಪುಟ ರಚನೆಯೂ ಆಗಲಿದೆಯೇ? ಎಂದು ಕಾದು ನೋಡಬೇಕಿದೆ.