• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಾ Junk ದೂರವಿರಿಸಿ ಸ್ವಸ್ಥ ಬದುಕನ್ನು ಬಾಳೋಣ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮೊದಲಿಗೆ ಜಂಕ್ ಅಂದ್ರೆ ಕನ್ನಡದಲ್ಲಿ ಏನು? ಕಸಕಡ್ಡಿ, ಬೇಡದ್ದು, ಬೇಕಿಲ್ಲದ್ದು ಅನ್ನೋದೆಲ್ಲದರ ಜೊತೆ ಕಚಡಾ ಅಂತ ಅರ್ಥವೂ ಇದೆ. ಜಂಕ್ ಅಂದ ಕೂಡಲೇ ತಲೆಗೆ ಬರೋದೇ ಜಂಕ್ ಫುಡ್... ಛೇ ಛೇ... ಜಂಕ್ ಆದರೂ ಊಟ ತಿಂಡಿಯನ್ನು ಹೇಗಪ್ಪಾ ಕಚಡಾ ಅನ್ನೋದು? ಅನ್ನಬ್ರಹ್ಮ ಅಂತ ಪೂಜಿಸೋ ಊಟ ತಿಂಡಿಯನ್ನು ಕಚಡಾ ಅಂತ ಕರೆಯೋಕ್ಕೆ ಮನಸ್ಸು ಬರೋದಿಲ್ಲ. ಹಾಗಾಗಿ ಊಟದ ವಿಷಯಕ್ಕೆ ಬಂದಾಗ ಬೇಡದ/ಬೇಕಿಲ್ಲದ ಅಂತ ಬಳಸೋಣ ಸಾಕು.

ಜಂಕ್ ಅಂದ್ರೆ ಬೇಡದ್ದು. ಹಾಗಾಗಿ ಯಾವುದು ಬೇಕಾದ್ರೂ ಆಗಬಹುದು. ಊಟ, ತಿಂಡಿಯೇ ಅಲ್ಲದೆ ಸಾಮಾನುಗಳು, ಇಮೇಲ್, ಪೋಸ್ಟಲ್ ಮೇಲ್ ಹೀಗೆ ಯಾವುದೂ ಆಗಬಹುದು. ಅದರಂತೆಯೇ ನಾವೂ ಜಂಕ್ ಆಗಬಹುದು... ನಾವು ಹೇಗೆ ಜಂಕ್ ಆಗಬಹುದು ಅಂತ ಆಮೇಲೆ ನೋಡೋಣ. ಈಗ ಮೊದಲ ಜಂಕ್ ಆದ ಊಟದ ಬಗ್ಗೆ ಮಾತಾಡೋಣ ಬನ್ನಿ...

ಹುಲ್ಲಿನ ಎತ್ತರಕ್ಕೂ ನಿಲ್ಲದ ನಾವ್ ಹುಲು ಮಾನವರು

ಜಂಕ್ ಫುಡ್ ಅನ್ನೋದನ್ನ ಅನಾರೋಗ್ಯಕರವಾದ ಊಟ ತಿಂಡಿ ಎಂದು ಹೇಳಲಾಗಿ, ಅವು ಸಕ್ಕರೆ, ಸೋಡಿಯಂ, ಕೊಬ್ಬು, ಉಪ್ಪು ಹೀಗೆ ಯಾವುದೇ ಅಂಶವನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ದೇಹಕ್ಕೆ ಅಷ್ಟರ ಅವಶ್ಯಕತೆ ಇಲ್ಲದೆ ಹೋಗಿ ಅವು ಜೀರ್ಣಗೊಳ್ಳಲು ತ್ರಾಸವಾಗಿ ಕೊನೆಗೆ ದೇಹದಲ್ಲಿ ಆ ಅಂಶಗಳು ಯಾವುದೋ ಒಂದು ರೂಪದಲ್ಲಿ ಹಾಗೆಯೇ ಉಳಿದುಕೊಳ್ಳುವ ಸಂಭವ ಹೆಚ್ಚು.

ಹಾಗೆಯೇ ಉಳಿದು ಹೋದ ಅಥವಾ ಜೀರ್ಣಗೊಳ್ಳಲು ಒದ್ದಾಡುವ ಈ ಪದಾರ್ಥಗಳು ದೇಹಕ್ಕೆ ಮಾರಕ. ಹೃದಯ ಮತ್ತು ಮೂತ್ರಪಿಂಡಗಳನ್ನು ಹಿಂಸೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳು ನಾ ಮುಂದು ತಾ ಮುಂದು ಎಂದು ಮುಂದೆ ಬರುತ್ತವೆ. ಜಂಕ್ ಊಟ ತಿಂಡಿಗಳನ್ನು ದಿನನಿತ್ಯದಲ್ಲಿ ಆನಂದಿಸುತ್ತಾ ಸಾಗಲು, ಬೇಡವೆಂದರೂ ಬೊಜ್ಜು ದೇಹ ನಮ್ಮದಾಗುತ್ತದೆ. ಕರೀನಾಳಂತೆ ಜೀರೋ ಸೈಜು ಇರುವ ದೇಹ ಅಥವಾ ಜಾನ್ ಅಬ್ರಹಾಂನಂತಹ ಕಟ್ಟು ಮಸ್ತಾದ ದೇಹ ಗುಂಡು ಗುಂಡಾಗಿ ಕನ್ನಡಿಯನ್ನು ತುಂಬಿಕೊಳ್ಳುವುದಕ್ಕೆ ಹೆಚ್ಚು ಕಾಲ ಬೇಕಿಲ್ಲ.

ಜಂಕ್ ಫುಡ್ ಗಳು ಯಾವುವು? ಪಟ್ಟಿ ಮಾಡುತ್ತಾ ಸಾಗಿದರೆ ನಾಲ್ಕು ಪುಟಗಳೇ ತುಂಬೀತು... ಒಟ್ಟಾರೆ ಹೇಳೋದಾದ್ರೆ ಪಿಜ್ಜಾ, ಬರ್ಗರ್, ಸಾಫ್ಟ್ ಡ್ರಿಂಕ್ಸ್, ಚಿಪ್ಸ್, ಸಿಹಿಯ ಪಾಕದಲ್ಲೇ ಅದ್ದಿ ತೆಗೆದ ಯಾವುದೇ ತಿನಿಸುಗಳು... ಇಂಥವನ್ನು ಪ್ರೋಸೆಸ್ ಮಾಡುವ ಚೈತನ್ಯವನ್ನು ದೇಹವು ತಕ್ಕ ಮಟ್ಟಿಗೆ ಆ ಶಕ್ತಿ ಹೊಂದಿದ್ದರೂ ಅದೇ overdose ಆದರೆ ಪಾಪದ ದೇಹ ಏನು ಮಾಡೀತು ಅಲ್ಲವೇ?

ಹೊಸತು ಅಂದ ಮಾತ್ರಕ್ಕೆ ಎಲ್ಲವೂ ಒಳಿತಲ್ಲ, ಹಾಗೆಯೇ ಕೆಟ್ಟದ್ದಲ್ಲ

ಆದರೆ ಶೇಖರಣೆಗೊಂಡ ಜಂಕ್ ಅನ್ನು ಕರಗಿಸುವ ಸಾಕಷ್ಟು ವಿಧಾನಗಳಿವೆ, ಅದರಲ್ಲಿ ವ್ಯಾಯಾಮ ಒಂದು. ಆದರೆ ಒಂದು ತೊಂದರೆ ಇದೆ. ಏನಪ್ಪಾ ಅಂದ್ರೆ, ಶಿಸ್ತು ಮತ್ತು ಸಂಯಮ. ಇಂತಿಷ್ಟೇ ಉಣ್ಣುತ್ತೇನೆ ಎಂಬ ಸಂಯಮ ಅದನ್ನು ಕರಗಿಸಲು ಅಷ್ಟು ವ್ಯಾಯಾಮ ಮಾಡ್ತೀನಿ ಅನ್ನೋ ಶಿಸ್ತುಗಳು ಏರುಪೇರಾದರೆ ಅಲ್ಲಿಗೆ ಸಮತೋಲನ ತಪ್ಪಿತು ಅಂತರ್ಥ.

ಜಂಕ್ ಊಟ ತಿಂಡಿಗಳ ಒಂದು ವಿಶೇಷ ಅಂದ್ರೆ ಅವು ಒಂದೇ ಬೈಟ್/ತುತ್ತಿಗೆ ನಾಲಿಗೆಯನ್ನು ತನ್ನ ಹತೋಟಿಗೆ ತೆಗೆದುಕೊಂಡು ಬಿಡುತ್ತದೆ. ಆ ಸೆಳೆತ ಹೇಗೆ ಅಂದ್ರೆ ತಿನ್ನೋದನ್ನ ಅಥವಾ ಕುಡಿಯುವುದನ್ನು ನಿಲ್ಲಿಸಲು ಮನಸ್ಸೇ ಒಪ್ಪೋದಿಲ್ಲ. ಚಿಪ್ಸ್ ಅನ್ನೇ ಒಂದು ಉದಾಹರಣೆ ತೆಗೆದುಕೊಳ್ಳಿ. ಸಣ್ಣ ಪ್ಯಾಕೆಟ್ ಒಮ್ಮೆ ತೆರೆದರೆ ಸಾಕು ಅದನ್ನು ಮುಗಿಸೋವರೆಗೂ ಬೇರೇನೂ ಕೆಲಸವಾಗೋದಿಲ್ಲ. ಹೀಗಾಗಿಯೇ ಇಂದಿನ ಮಕ್ಕಳು ಅಥವಾ ಯುವ ಜನಾಂಗ ಜಂಕ್ ಫುಡ್ ಗೆ ದಾಸರಾಗಿರುವುದು. ಒಮ್ಮೆ ದಾಸ್ಯಕ್ಕೆ ಬಿದ್ದರೆ ಆ ಕಬಂಧ ಬಾಹುವಿನಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ.

ಈ ಸಾಲಿಗೆ ಬರೀ ಊಟ ತಿಂಡಿಯೇ ಬರುತ್ತೆ ಅಂತಲ್ಲ. ಸಕ್ಕರೆಯನ್ನು ತುಂಬಿ ತುಂಬಿ ತಯಾರಿಸುವ ವಿವಿಧ ರೀತಿಯ ಕಾಫಿ, ಟೀ ಗಳೂ ಸೇರುತ್ತವೆ. ಎಲ್ಲ ರೀತಿಯ ಕೆಮಿಕಲ್ ಯುಕ್ತ ತಂಪು ಪಾನೀಯಗಳೂ ಮುಂಚೂಣಿಯಲ್ಲಿವೆ.

ಈಗ ಈ ಊಟ ತಿಂಡಿ ಪಾನೀಯಗಳನ್ನು ಬಿಟ್ಟು ಮುಂದೆ ಸಾಗೋಣ... ಸಾಮಾನು ಸರಂಜಾಮುಗಳ ಸಂತೆ ಯಾರ ಮನೆಯಲ್ಲಿ ಇಲ್ಲ ಹೇಳಿ... ಯಾವ ಮನೆಯಲ್ಲಿ ಅಟ್ಟ ಇದೆಯೋ ಅಲ್ಲಿ ಜಂಕ್ ಸಾಮಾನುಗಳು ಹಲ್ಲಿ, ಜಿರಳೆ ಮತ್ತು ಕೆಲವೊಮ್ಮೆ ಇಲಿಗಳಿಗೆ ಆಶ್ರಯ ತಾಣವೇ ಆಗಿರುತ್ತದೆ.

ಚಿಂತೆ ಬೇಡ ಚಿಂತನೆ ಇರಲಿ ಅನ್ನೋ ಮಾತು ಬುರುಡೆ ಅಲ್ಲ

ಇಂದು ಹೇಗೋ ಗೊತ್ತಿಲ್ಲ. ಆದರೆ ಅಂದಿನ ದಿನಗಳಲ್ಲಿನ ಮೊದಲ ಜಂಕ್ ಎಂದರೆ ಹಳೆಯ ದಿನಪತ್ರಿಕೆಗಳು. ಕೆಲವರು ಹಳೆಯ ದಿನಪತ್ರಿಕೆಗಳನ್ನು ನೀಟಾಗಿ ಅಟ್ಟದ ಮೇಲೆ ಜೋಡಿಸಿದರೆ ಹೆಚ್ಚಿನವರು ಆಯಾ ಹಿಂದಿನ ದಿನಗಳ ಪತ್ರಿಕೆಗಳನ್ನು ರೊಯ್ ಅಂತ ಅಟ್ಟದ ಮೇಲೆ ಎಸೆಯುವವರೇ ಹೆಚ್ಚು. ಅದು ಜಂಕ್. ಇದನ್ನು ಬಿಟ್ಟರೆ ಹಳೆಯ ಪಾತ್ರೆಗಳು. ಅದರಲ್ಲೂ ಕಿಲುಬು ಹಿಡಿದ ಕಂಚು ಅಥವಾ ಹಿತ್ತಾಳೆ ಪಾತ್ರೆಗಳು. ದಿನನಿತ್ಯದಲ್ಲಿ ಬಳಸಲಾಗದ, ಎಸೆಯಲು ಮನಸ್ಸು ಬಾರದ, ಮಾರಲು ಮನ ಒಪ್ಪದ, ಹಿರಿಯರು ಬಳಸಿದ್ದು ಎಂಬ ವ್ಯಾಮೋಹದಿಂದ ಅಟ್ಟವನ್ನು ಅಲಂಕರಿಸುವ ಈ ಪಾತ್ರೆಗಳೂ ಜಂಕ್.

ಇದರಂತೆಯೇ ಮುರುಕಲು ಕುರ್ಚಿಗಳು, ಕಬ್ಬಿಣದ ಅಥವಾ ತಗಡಿನ ಪೆಟ್ಟಿಗೆಗಳು, ಅತೀ ಸಣ್ಣ ಅಥವಾ ದೊಡ್ಡ ಪಾತ್ರೆಗಳು ಅಟ್ಟವನ್ನು ಅಲಂಕರಿಸಿರುತ್ತದೆ. ಆದರೆ ಅಟ್ಟ ಏರಲಾರದ ಮುರುಕಲು ಅಲ್ಮೇರಾ, ಸೋಫಾ/ಮಂಚಗಳೂ, ಅತೀ ಹಳೆಯ ಕಾಲದ ಟಿವಿ ಎಲ್ಲವೂ ಜಂಕ್ ಗಳೇ... ಯಾರಿಗೂ ಕೊಡಲಾಗುವುದಿಲ್ಲ ಯಾಕೆಂದ್ರೆ ಕೊಟ್ಟರೆ ಯಾರೂ ತೆಗೆದುಕೊಳ್ಳೋದಿಲ್ಲ. ಎಸೆಯುವುದಾದರೂ ಎಲ್ಲಿ?

ಇಂಥವಕ್ಕೆ ಅಂತ ನಮ್ಮಲ್ಲಿ ಜಂಕ್ ಯಾರ್ಡ್ ಅಂತ ಇರುತ್ತದೆ. ಬೇಡದ ಇಂಥಾ ವಸ್ತುಗಳನ್ನು ಸುರಿಯಲು landfill ಸ್ಥಳಗಳು ಅಂತ ಇರುತ್ತೆ. ಉಪಯೋಗವಿಲ್ಲದ ವಸ್ತುಗಳನ್ನು ಒಂದು ಗಾಡಿಯಲ್ಲಿ ತುಂಬಿಕೊಂಡು ಹೋಗಿ, ಶುಲ್ಕ ತೆತ್ತು ಒಳಗೆ ಹೋಗಿ, ಅಲ್ಲೊಂದು ಜಾಗದಲ್ಲಿ ಅವನ್ನು ಸುರಿದು ಬರೋದು. ಅಲ್ಲಿಗೆ ಜನಸಾಮಾನ್ಯರಾದ ನಮ್ಮ ಕೆಲಸ ಮುಗೀತು. ಅಲ್ಲಿರೋ ಜಂಕ್ ಅನ್ನು ದಿನನಿತ್ಯದಲ್ಲಿ ಕ್ರಶ್ ಮಾಡಿ ಸೂಕ್ತವಾಗಿ ಒಂದು ಗತಿ ಕಾಣಿಸೋದು ಒಂದು ವಿಭಿನ್ನ, ಆದರೆ ಆಸಕ್ತಿದಾಯಕ ವಿಚಾರಧಾರೆ.

ಚಿಕ್ಕಪುಟ್ಟ ಅಥವಾ ಸಲೀಸಾಗಿ ಭಾರ ಎತ್ತುವಂತಹ ಜಂಕ್ ಆದರೆ ನಾವೇ ಹೊತ್ತುಕೊಂಡು landfill ನಲ್ಲಿ ಹಾಕಿಬರಬಹುದು. ಆದರೆ ದೊಡ್ಡ ಮುರುಕಲು ಸೋಫಾ ಸೆಟ್, ಕೆಟ್ಟು ನಿಂತಿರುವ ಫ್ರಿಡ್ಜ್ ಇತ್ಯಾದಿಗಳನ್ನು ಹೊತ್ತುಕೊಂಡು ಹೋಗೋದು ದುಸ್ತರವಾಗಬಹುದು. ನಮಗೆ ಬೇಡದ ವಸ್ತುಗಳನ್ನು ಹೊತ್ತುಕೊಂಡು ಹೋಗಲೆಂದೇ ಸೇವೆ ನೀಡುವವರೂ ಇದ್ದಾರೆ. ಈ ಸೇವೆಗೂ ಶುಲ್ಕ ಇದೆ ಬಿಡಿ.

ದಿನನಿತ್ಯದಲ್ಲಿ ಮನೆಗೆ ಬರುವ ಟಪಾಲ್ ನಲ್ಲಿ ಜಾಹೀರಾತುಗಳ ಕಾಗದಗಳು ಹೆಚ್ಚುವರಿ ಜಂಕ್ ಆಗಿರುತ್ತದೆ. ಆದರೆ ಅವು customer ಮೇಲೆ ಅವಲಂಬಿತ. ಮಾಂಸಾಹಾರಿ ಖಾದ್ಯಗಳನ್ನು ಮಾರುವ ಅಂಗಡಿ ಅಥವಾ ಖಾನಾವಳಿಗಳ, ಕುಡಿತದ ಅಂಗಡಿಗಳ ಅಥವಾ ಕಂಪನಿಗಳ ಜಾಹೀರಾತುಗಳ ಕಾಗದ ನನಗೆ ಜಂಕ್ ಆದರೆ ಬೇರೆಯವರಿಗೆ ಇಲ್ಲದಿರಬಹುದು. ಇವನ್ನು ಜಂಕ್ ಮೇಲ್ಸ್ ಅಂತಲೇ ಕರೆಯುತ್ತಾರೆ. ಇವು ಮುದ್ರಿತ ಅಂತಾದರೆ ಮುದ್ರಣ ಅಲ್ಲದ ಇಮೇಲ್ ನಲ್ಲಿ ದಿನನಿತ್ಯದಲ್ಲಿ ಎಷ್ಟು ಜಂಕ್ ಇರುತ್ತೆ ಅಂತ ನಿಮಗೂ ಗೊತ್ತು. ಇಂಥವನ್ನು ಜಂಕ್ ಎಂದು ಗುರುತಿಸಿ ಅವನ್ನು junk folder ಗೆ ವರ್ಗಾಯಿಸುವ ಹೊಣೆಯನ್ನು ಆಯಾ ಇಮೇಲ್ serverಗಳು ಮಾಡುತ್ತವೆ.

ಜಂಕ್ ಮನುಷ್ಯರು ಎಂದರೆ ಯಾರು? ಅಂಥವರನ್ನು ಗುರುತಿಸುವುದು ಹೇಗೆ? ಅಂಥವರನ್ನು ತಿಪ್ಪೆಗೆ ಹಾಕೋದು ಹೇಗೆ? ಎಂಬ ಪ್ರಶ್ನೆಗಳು ಉದ್ಭವವಾಗೋದು ಸಹಜ. ಈಗಾಗಲೇ ಹೇಳಿದಂತೆ ಜಂಕ್ ಎಂದರೆ ಬೇಡದ್ದು, ಬೇಕಿಲ್ಲದ್ದು, ಕಚಡಾ ಇತ್ಯಾದಿ. "ನಮಗೆ" ಯಾವುದು ಬೇಕಿಲ್ಲವೋ ಅವು ಜಂಕ್ ಎಂದು ಅರ್ಥೈಸಿಕೊಂಡು ಜಂಕ್ ಜನರನ್ನು, ಜಂಕ್ ವಿಷಯಗಳನ್ನು ದೂರವಿರಿಸಿ ನೆಮ್ಮದಿಯಾಗಿ ಬಾಳೋಣ.

ತೆರೆಯ ಮೇಲೆ ರಾರಾಜಿಸುವ ತಾರಾಲೋಕವನ್ನು ಚಿತ್ರ ನೋಡಿ ಆನಂದಿಸಿ ಸುಮ್ಮನಾಗಬೇಕು ಅಷ್ಟೇ. ಅವರ ಖಾಸಗಿ ವಿಷಯ, ಅವರೇನು ತೊಡುತ್ತಾರೆ ಏನು ತೊಡೋದಿಲ್ಲ ಎಂಬುದೆಲ್ಲಾ ಜಂಕ್ ವಿಚಾರಗಳು. ಡೋಂಗಿ ಜನರು ಜಂಕ್. ಅವರನ್ನು ಅನುಸರಿಸುವುದು ಅಥವಾ ಪ್ರಚಾರ ಕೊಡುವುದನ್ನು ನಿಲ್ಲಿಸಬೇಕು. ಯಾವಾಗ ಪ್ರಚಾರ ಸಿಗುತ್ತದೋ ಆಗ ಅವರುಗಳ ಆಟಾಟೋಪ ಹೆಚ್ಚುತ್ತದೆ. ಅಹಂಕಾರಕ್ಕೆ ಉದಾಸೀನವೇ ಮದ್ದು.

ಜಂಕ್ ತಿನ್ನೋದ್ರಿಂದ ದೂರವಿದ್ದರೆ ದೈಹಿಕ ಸ್ವಾಸ್ತ್ಯ. ಜಂಕ್ ಶೇಖರಣೆಯಿಂದ ದೂರವಿದ್ದರೆ ಪರಿಸರ ಸ್ವಾಸ್ತ್ಯ. ಜಂಕ್ ಜನರಿಂದ ದೂರವಿದ್ದರೆ ಮಾನಸಿಕ ಸ್ವಾಸ್ಥ್ಯ.

ಉತ್ತರಾಯಣದ ಪುಣ್ಯಕಾಲದಲ್ಲಿ ಈ ಅಂಶಗಳನ್ನು ನಮ್ಮಲ್ಲಿ ಒಡಗೂಡಿಸಿಕೊಂಡು ಸ್ವಸ್ಥ ಬದುಕನ್ನು ಬಾಳೋಣ. ಅಸ್ವಸ್ತರಾಗೋದು ಬೇಡ.

English summary
Anything we dont need or bad to us is thrash or junk. It may apply to food, person or materials in the world,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X