ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ನಂಬಿಕೆ ಇದೆ: ಅಮೆರಿಕ

|
Google Oneindia Kannada News

ನವದೆಹಲಿ, ಮಾರ್ಚ್ 21: ಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ಆಶಾಭಾವನೆಯ ಹೇಳಿಕೆಯನ್ನು ಅಮೆರಿಕ ನೀಡಿದೆ. ಚೀನಾ ಹಾಗೂ ಭಾರತದ ನಡುವೆ ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿರುವ ಗಡಿ ಪರಿಸ್ಥಿತಿಯ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಅಮೆರಿಕ ಈ ಮಹತ್ವದ ಹೇಳಿಕೆ ನೀಡಿದೆ.

3 ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಜೇಮ್ಸ್ ಆಸ್ಟಿನ್ ಭರವಸೆಯ ಮಾತುಳಗನ್ನಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಸುದೀರ್ಘ ಚರ್ಚೆ ಬಳಿಕ ಆಸ್ಟಿನ್ ದೆಹಲಿಯಲ್ಲಿ ಮಾತನಾಡಿದರು.

ಭಾರತ ಮತ್ತು ಚೀನಾ ಗಡಿ ವಿವಾದದ ವಿಷಯದಲ್ಲಿ ಯಾವುದೇ ಹಂತದಲ್ಲೂ ಯುದ್ಧದ ಅಂಚು ತಲುಪಿವೆ ಎಂದು ಅಮೆರಿಕ ಪರಿಗಣಿಸಿಲ್ಲ ಎಂದು ಆಸ್ಟಿನ್ ಹೇಳಿದ್ದಾರೆ. ಈಗಾಗಲೇ ಚೀನಾ ಭಾರತದ ಗಡಿಯಿಂದ ಸೇನೆಯನ್ನ ಹಿಂದೆ ತೆಗೆದುಕೊಂಡಿದೆ. ಮತ್ತೊಂದು ಕಡೆ ಭಾರತದ ಗಡಿ ಸಮೀಪವೇ ಹಳ್ಳಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿವೆ. ಈ ಹೊತ್ತಲ್ಲೇ ಭಾರತ ಮತ್ತು ಚೀನಾ ಮಧ್ಯೆ ಶಾಂತಿ ಮಂತ್ರ ಜಪಿಸುವ ಪ್ರಯತ್ನವನ್ನ ಅಮೆರಿಕ ಮಾಡುತ್ತಿದೆ. 'ಕ್ವಾಡ್' ಸಭೆ ಬಳಿಕ ನಡೆಯುತ್ತಿರುವ ಈ ಬೆಳವಣಿಗೆ ಜಗತ್ತಿನ ಗಮನ ಸೆಳೆಯುತ್ತಿದೆ.

ಚೀನಾ ಸಮುದ್ರದ ಮೇಲೆ ಕಣ್ಣು..?

ಚೀನಾ ಸಮುದ್ರದ ಮೇಲೆ ಕಣ್ಣು..?

ಕ್ವಾಡ್ ನೇತೃತ್ವ ವಹಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಹೇಳಿಕೆ ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ. ಭಾರತ-ಚೀನಾ ನಡುವಿನ ವಿವಾದವನ್ನ 'ಕ್ವಾಡ್' ರಾಷ್ಟ್ರಗಳು ನೋಡುತ್ತಿರುವುದು ದಕ್ಷಿಣ ಚೀನಾ ಸಮುದ್ರದ ದೃಷ್ಟಿಯಲ್ಲಿ ಎನ್ನಲಾಗುತ್ತಿದೆ. ಏಕೆಂದರೆ ಈಗಾಗಲೇ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾಬಲ್ಯ ಸಾಧಿಸಲು ಚೀನಿ ಪಡೆ ಯತ್ನಿಸುತ್ತಿದೆ ಎಂಬ ಆರೋಪ ಇದೆ. ಈ ಕಾರಣಕ್ಕೆ ಆಸ್ಟ್ರೇಲಿಯಾ ಮತ್ತು ಅಮೆರಿಕ ನೇತೃತ್ವದಲ್ಲಿ ಕ್ವಾಡ್ ಒಕ್ಕೂಟ ರಚನೆಯಾಗಿದೆ. ಇತ್ತೀಚೆ ಭಾರತ ಕೂಡ ಈ ಒಕ್ಕೂಟಕ್ಕೆ ಸೇರ್ಪಡೆ ಆಗಿರುವುದು 'ಕ್ವಾಡ್'ಗೆ ಚೀನಾ ವಿರುದ್ಧ ಒಕ್ಕೂಟ ರಚನೆಗೆ ಆನೆಬಲ ಬಂದಂತಾಗಿದೆ.

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್..?

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್..?

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸುವ ಚೀನಾ ಪ್ರಯತ್ನ ಇಂದು, ನಿನ್ನೆಯದಲ್ಲ. ಸುಮಾರು 3-4 ದಶಕಗಳಿಂದಲೂ ಈ ಜಾಗಕ್ಕಾಗಿ ರಕ್ತ ರಹಿತ ಬಡಿದಾಟ ನಡೆಯುತ್ತಲೇ ಇದೆ. ಅಮೆರಿಕ ಚೀನಾ ವಿರುದ್ಧ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕತ್ತಿ ಮಸೆಯುತ್ತಲೇ ಇದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಅವಿತಿರುವ ಸಂಪತ್ತು. ಸುಮಾರು 3.5 ಮಿಲಿಯನ್ ಸ್ಕ್ವೇರ್ ಕಿಲೋ ಮೀಟರ್ ಅಂದರೆ ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ ದಕ್ಷಿಣ ಚೀನಾ ಜಲಗಡಿಗೆ ಇದೆ. ಭಾರಿ ಪ್ರಮಾಣದ ನೈಸರ್ಗಿತ ಸಂಪನ್ಮೂಲ ಹಾಗೂ ವ್ಯವಹಾರ ನಡೆಸುವ ಜಾಗ ಇದಾಗಿದೆ.

400 ಯುದ್ಧ ನೌಕೆಗಳ ಟಾರ್ಗೆಟ್..!

400 ಯುದ್ಧ ನೌಕೆಗಳ ಟಾರ್ಗೆಟ್..!

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿಯರ ಪ್ರಾಬಲ್ಯವನ್ನು ತಗ್ಗಿಸಲು ಅಮೆರಿಕ ನೇತೃತ್ವದಲ್ಲಿ 'ಕ್ವಾಡ್' ಒಕ್ಕೂಟ ಪ್ರಯತ್ನಿಸುತ್ತಿದೆ.

 ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ..?

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್‌ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

 5.3 ಟ್ರಿಲಿಯನ್ ಡಾಲರ್ ವಹಿವಾಟು..!

5.3 ಟ್ರಿಲಿಯನ್ ಡಾಲರ್ ವಹಿವಾಟು..!

ಆಶ್ಚರ್ಯವಾದರೂ ಇದು ನಂಬಲೇಬೇಕಾದ ವಿಚಾರ. ದಕ್ಷಿಣ ಚೀನಾ ಸಮುದ್ರ ತೈಲ ಹಾಗೂ ಅದಿರುಗಳನ್ನು ಮಾತ್ರ ಹೊಂದಿಲ್ಲ. ಸಂಪದ್ಭರಿತ ವ್ಯಾಪಾರವನ್ನೂ ನಡೆಸುತ್ತಾ ಬಂದಿದೆ. ಸೌತ್ ಚೀನಾ ಸಮುದ್ರ ಮಾರ್ಗವಾಗಿ ಪ್ರತಿವರ್ಷವೂ ಸುಮಾರು 5.3 ಟ್ರಿಲಿಯನ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಇದು ಜಗತ್ತಿನಲ್ಲಿ ಜಲ ಮಾರ್ಗದ ಮೂಲಕ ನಡೆಯುವ ವ್ಯಾಪಾರದ 3ನೇ ಒಂದು ಭಾಗವಾಗಿದೆ. ಭಾರತವು ಕೂಡ ಪ್ರತಿವರ್ಷ 200 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನ ದಕ್ಷಿಣಚೀನಾ ಸಮುದ್ರ ಮಾರ್ಗದ ಮೂಲಕ ನಡೆಸುತ್ತದೆ. ಅಮೆರಿಕ, ಜಪಾನ್, ಚೀನಾ, ಕೊರಿಯಾ, ಆಸ್ಟ್ರೇಲಿಯಾ ಹೀಗೆ ಹತ್ತಾರು ದೇಶಗಳು ಇದೇ ಮಾರ್ಗ ಬಳಸಿ ವ್ಯಾಪಾರ ನಡೆಸುತ್ತಿವೆ. ಇದೇ ಕಾರಣಕ್ಕೆ ದಕ್ಷಿಣ ಚೀನಾ ಸಮುದ್ರ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ.

English summary
US Never Considered India-China Were on Verge of War, said by US defence secretary Austin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X