ದೆಹಲಿ; ವಿಷಾನೀಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ, ಇಬ್ಬರು ಮಕ್ಕಳು
ನವದೆಹಲಿ ಮೇ 22: ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ವಿಷಾನೀಲ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ವಸಂತ ವಿಹಾರ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಮಂಜು (54) ಹಾಗೂ ಆಕೆಯ ಪುತ್ರಿಯರಾದ ಅನ್ಶಿಕಾ (27) ಹಾಗೂ ಅಂಕು (25) ಎಂದು ಗುರುತಿಸಲಾಗಿದೆ. ಮೃತದೇಹಗಳ ಬಳಿಯಲ್ಲಿ ಡೆತ್ ನೋಟ್ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
"ದೆಹಲಿಯ ವಸಂತ ವಿಹಾರ ಪ್ರದೇಶದ ವಸಂತ ಅಪಾರ್ಟ್ ಮೆಂಟ್ ನಿಂದ ಶನಿವಾರ ರಾತ್ರಿ 8.30ಕ್ಕೆ ವಸಂತ ವಿಹಾರ ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂತು. ಠಾಣಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಮನೆಯಲ್ಲಿ ಮೂವರಿದ್ದು, ಒಳಗಿನಿಂದ ಬಾಗಿಲು ಮತ್ತು ಕಿಟಕಿಗಳನ್ನು ಲಾಕ್ ಮಾಡಿದ್ದರು. ಪೊಲೀಸರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಮೂರು ಮೃತದೇಹಗಳು ಪತ್ತೆಯಾಗಿವೆ. ಜತಗೆ ಡೆತ್ ನೋಟ್ ಸಹ ಪತ್ತೆಯಾಗಿದೆ" ಎಂದು ನೈಋತ್ಯ ದೆಹಲಿಯ ಡಿಸಿಪಿ ಮನೋಜ್ ಸಿ. ಮಾಹಿತಿ ನೀಡಿದರು.
ಗಾಳಿಯು ಆಚೆ ಹೋಗದಂತೆ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಪಾಲಿಥಿನ್ ಬಳಸಿ ಟೇಪ್ನಿಂದ ಸೀಲ್ ಮಾಡಲಾಗಿತ್ತು. ಗ್ಯಾಸ್ ಸಿಲಿಂಡರ್ ಮತ್ತು ಸ್ಟಟ್ ಆನ್ ಮಾಡಲಾಗಿತ್ತು. ಹೋಮ ಕುಂಡದಂತೆ ಕಲ್ಲಿದ್ದಲು ಬಳಸಿ ಹಾಲ್ನ ಮಧ್ಯ ಭಾಗದಲ್ಲಿ ಬೆಂಕಿ ಹಚ್ಚಲಾಗಿತ್ತು. ಕಲ್ಲಿದ್ದಲು ಮತ್ತು ಕುಂಡವನ್ನು ಆನ್ಲೈನ್ ಮೂಲಕ ತರಿಸಿಕೊಂಡಿರುವುದು ತಿಳಿದುಬಂದಿದೆ.
ಮೂವರ ಮೃತದೇಹಗಳು ಕೊಠಡಿಯ ಬೆಡ್ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಅಲ್ಲದೇ ಬೆಡ್ ಸುತ್ತಲೂ ಮೂರು ಕ್ಯಾಂಡಲ್ಗಳನ್ನು ಹಚ್ಚಿರುವುದು ಕಂಡುಬಂದಿದೆ. ವಿಷಾನೀಲ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಕೊರೊನಾ ಕಾರಣದಿಂದ 2021ರ ಏಪ್ರಿಲ್ನಲ್ಲಿ ಮೃತ ಮಹಿಳೆಯ ಪತಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ತಾಯಿ ಹಾಗೂ ಇಬ್ಬರು ಮಕ್ಕಳು ಮಾನಸಿಕ ಒತ್ತಡಕ್ಕೆ ಸಿಲುಕಿ, ಕುಗ್ಗಿ ಹೋಗಿದ್ದರು. ಸ್ವಲ್ಪ ದಿನಗಳ ನಂತರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಮೂವರು, ವಿಷಾನೀಲ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಭೇಟಿ ನೀಡಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಘಟನೆ ಹಿನ್ನೆಲೆಯಲ್ಲಿ ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಆತ್ಮಹತ್ಯೆ ತಡೆಗಾಗಿ ಸಹಾಯವಾಣಿ
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM