ಮನೆ ಮುಂದೆ ನೋಟಿಸ್ ಅಂಟಿಸುವುದು ಸೋಂಕಿತರನ್ನು 'ಅಸ್ಪೃಶ್ಯರ'ನ್ನಾಗಿ ಮಾಡುತ್ತದೆ: ಸುಪ್ರೀಂಕೋರ್ಟ್
ನವದೆಹಲಿ, ಡಿಸೆಂಬರ್ 1: ಕೊರೊನಾ ವೈರಸ್ ಸೋಂಕಿತ ರೋಗಿಗಳ ಮನೆ ಮುಂದೆ ಅಂಟಿಸುವ ನೋಟಿಸ್ಗಳು ಅವರನ್ನು ಬೇರೆಯವರು 'ಅಸ್ಪೃಶ್ಯ'ರಂತೆ ಪರಿಗಣಿಸುವಂತೆ ಮಾಡುತ್ತಿವೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಇವುಗಳ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಧರಿಸಬೇಕು ಎಂದು ಕೇಂದ್ರ ಸರ್ಕಾರ ಜಾರಿಕೊಂಡಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ, ನ್ಯಾಯಮೂರ್ತಿಗಳಾದ ಆರ್ ಎಸ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ, ಒಮ್ಮೆ ಕೋವಿಡ್ ರೋಗಿಯ ಮನೆಯ ಮುಂದೆ ನೋಟಿಸ್ ಅಂಟಿಸಿದರೆ ಅವರನ್ನು ಇತರರು ಅಸ್ಪೃಶ್ಯರಂತೆ ನೋಡಲು ಆರಂಭಿಸುತ್ತಾರೆ. ಇದು ಮೂಲ ವಾಸ್ತವ ಎಂದು ಹೇಳಿತು.
ಗೃಹ ಸಚಿವಾಲಯದ ಹೊಸ ಮಾರ್ಗಸೂಚಿ: ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೋಂಕಿತರ ಮನೆಗಳ ಮುಂದೆ ಎಚ್ಚರಿಕೆಯ ನೋಟಿಸ್ಗಳನ್ನು ಅಂಟಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಯಾವುದೇ ನಿರ್ದೇಶನವನ್ನು ನೀಡಿರಲಿಲ್ಲ. ಹೀಗಾಗಿ ಅವುಗಳ ಬಗ್ಗೆ ರಾಜ್ಯಗಳೇ ನಿರ್ಧರಿಸಬೇಕಾಗಬಹುದು ಎಂದರು.
ಒಂದು ಪ್ರದೇಶಕ್ಕೆ ಬರುವ ಅಪರಿಚಿತರಿಗೆ ಎಚ್ಚರಿಕೆ ನೀಡುವ ಸಲುವಾಗಿ ಮತ್ತು ಸೂಕ್ತ ರಕ್ಷಣೆಗಳಿಲ್ಲದೆ ಸೋಂಕಿತರೊಂದಿಗೆ ಮುಖಾಮುಖಿಯಾಗದಂತೆ ತಪ್ಪಿಸಲು ಈ ರೀತಿ ನೋಟಿಸ್ಗಳನ್ನು ಅಂಟಿಸಿರಬಹುದು ಎಂದು ಅವರು ಹೇಳಿದರು.
ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವ ಕೋವಿಡ್ ರೋಗಿಗಳ ಮನೆಗಳ ಮುಂದೆ ಮನೆಯಲ್ಲಿ ಸೋಂಕಿತರು ಇರುವ ಎಚ್ಚರಿಕೆಯ ನೋಟಿಸ್ ಮತ್ತು ಪೋಸ್ಟರ್ಗಳನ್ನು ಅಂಟಿಸುತ್ತಿರುವುದರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರಗಳ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಒಳಪಡಿಸಿತು.
ಲಸಿಕೆ ಸ್ವಯಂಸೇವಕನ ವಿರುದ್ಧ 100 ಕೋಟಿ ಮಾನಹಾನಿ: ಸೆರಮ್ ನಡೆ ಬಗ್ಗೆ ತಜ್ಞರ ಅಸಮಾಧಾನ
18ನೇ ಶತಮಾನದಲ್ಲಿ ಪ್ಲೇಗ್ ಪಿಡುಗು ಹರಡಿದಾಗ ಈ ರೀತಿ ನೋಟಿಸ್ಗಳನ್ನು ಅಂಟಿಸುವ ಪ್ರಾಥಮಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈ ರೀತಿ ನೋಟಿಸ್ ಅಂಟಿಸುವುದು ಸಂವಿಧಾನದ 21ನೇ ವಿಧಿಯಡಿ ಇರುವ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ದೆಹಲಿ ಮೂಲದ ಅರ್ಜಿದಾರರು ಆರೋಪಿಸಿದ್ದಾರೆ.