ಜ್ಞಾನವಾಪಿ ಮಸೀದಿ ಸರ್ವೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ
ನವದೆಹಲಿ, ಮೇ 13: ವಾರಣಾಸಿಯ ಜ್ಞಾನವಾಪಿ ಮಸೀದಿಯ ನಡೆಸಲಾಗುವ ಸರ್ವೆಗೆ ತಡೆ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಸೀದಿ ಸರ್ವೆಗೆ ತಡೆ ಕೊಡಲು ನಿರಾಕರಿಸಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರದ ಬಗ್ಗೆ ವಿಚಾರಣೆ ಇನ್ನೂ ನಡೆಯುತ್ತಿದೆ.
"ನಾವು ದಾಖಲೆಗಳನ್ನು ನೋಡಿಲ್ಲ. ಈ ವಿಚಾರ ಏನೆಂದೇ ನಮಗೆ ಗೊತ್ತಿಲ್ಲ. ನನಗಂಗೂ ಏನೂ ಗೊತ್ತಿಲ್ಲ. ಹಾಗಿದ್ದಲ್ಲಿ ಹೇಗೆ ನಾನು ಆದೇಶ ಕೊಡಲಿ. ಮೊದಲು ನಾನು ಓದಿ ಆ ನಂತರ ಆದೇಶ ಕೊಡುತ್ತೇನೆ" ಎಂದು ಭಾರತೀಯ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದರು.
ಜ್ಞಾನವಾಪಿ ಮಸೀದಿ: ನ್ಯಾ| ರವಿಕುಮಾರ್‌ಗೆ ಈಗ ಜೀವಭಯ
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ನಡೆಸಬೇಕೆಂದಿರುವ ಸರ್ವೇಕ್ಷಣೆಗೆ ತಡೆ ನೀಡಬೇಕೆಂದು ಕೋರಿ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಕಮಿಟಿ ಸಂಘಟನೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸಿಜೆಐ ಇದ್ದ ನ್ಯಾಯಪೀಠದಿಂದ ಇದರ ವಿಚಾರಣೆ ನಡೆಯುತ್ತಿದೆ. ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದು ಅಲ್ಲಿಯವರೆಗೆ ಯಥಾಸ್ಥಿತಿ ಪಾಲಿಸಿಕೊಂಡು ಹೋಗುವಂತೆ ಆದೇಶ ನೀಡಬೇಕು ಎಂದು ಹಿರಿಯ ವಕೀಲ ಹುಜೇಫಾ ಅಹ್ಮದಿ ಮನವಿ ಮಾಡಿದರು.
"ವಾರಣಾಸಿ ಆಸ್ತಿಗೆ ಸಂಬಂಧಿಸಿದಂತೆ ಸರ್ವೆಗೆ ನಿರ್ದೇಶನ ನೀಡಲಾಗಿದೆ. ಆದರೆ, ಇದು ಪೂಜಾ ಸ್ಥಳಗಳ ಕಾಯ್ದೆ ಅಡಿ ಬರುವ ವಿಚಾರ. ಆದರೆ, ಸರ್ವೆ ನಡೆಸುವಂತೆ ಕೋರ್ಟ್ ಕಮಿಷನರ್‌ಗೆ ನ್ಯಾಯಾಲಯ ಆದೇಶ ನೀಡಿದೆ. ಇದು ಕಾಯ್ದೆ ಉಲ್ಲಂಘನೆ ಆಗುತ್ತದೆ" ಎಂದು ವಕೀಲ ಹುಜೇಫಾ ಅಹ್ಮದಿ ವಾದಿಸಿದರು.
ಜ್ಞಾನವಾಪಿ ಮಸೀದಿ: ಮೇ 17ರೊಳಗೆ ಸರ್ವೇಗೆ ವಾರಣಾಸಿ ಕೋರ್ಟ್ ಆದೇಶ
ನಿನ್ನೆ ಮೇ 12ರಂದು ವಾರಣಾಸಿ ಸಿವಿಲ್ ಕೋರ್ಟ್ ನೀಡಿದ ಆದೇಶದಲ್ಲಿ, ಜ್ಞಾನವಾಪಿ ಮಸೀದಿಯಲ್ಲಿ ಪರಿಶೀಲನೆ ನಡೆಸಿ ವಿಡಿಯೋ ಶೂಟ್ ಮಾಡಬೇಕು. ಹಿಂದೂ ದೇವರ ವಿಗ್ರಹಗಳ ಅವಶೇಷವೇನಾದರೂ ಇದ್ದರೆ ಸಾಕ್ಷ್ಯಾಧಾರ ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿತ್ತು.
ಈ ಸರ್ವೆ ಕಾರ್ಯಕ್ಕೆ ಮೂವರು ಕೋರ್ಟ್ ಕಮಿಷನರ್‌ಗಳನ್ನು ನೇಮಿಸಲಾಗಿದೆ. ಮೇ 17ರೊಳಗೆ ಇದರ ಸರ್ವೆ ಆಗಬೇಕು ಎಂದು ತಿಳಿಸಿದೆ.

ಐವರು ಮಹಿಳೆರಿಂದ ಅರ್ಜಿ:
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶೃಂಗಾರ್ ಗೌರಿ ಮಂದಿರವೂ ಇದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಐವರು ಮಹಿಳೆಯರು ಹಿಂದೆ ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಸೀದಿಯ ಒಳಗೆ ಇನ್ನೂ ಹಲವು ಹಿಂದೂ ದೇವರುಗಳ ಮೂರ್ತಿಗಳಿರಬಹುದು ಎಂದು ಸಂಶಯ ವ್ಯಕ್ಪಡಿಸಿದ್ದರು. ಈ ಸಂಬಂಧ, ಮಸೀದಿಯಲ್ಲಿ ಸರ್ವೆ ನಡೆಸಿ ಮೇ 10ರೊಳಗೆ ವರದಿ ನೀಡುವಂತೆ ಕೋರ್ಟ್ ಕಮಿಷನರ್‌ಗೆ ನ್ಯಾಯಾಲಯ ಸೂಚಿಸಿತ್ತು. ಆದರೆ, ಮಸೀದಿಯೊಳಗೆ ವಿಡಿಯೋ ರೆಕಾರ್ಡ್ ಮಾಡಲು ಮಸೀದಿ ಸಮಿತಿಯವರು ಬಿಟ್ಟಿರಲಿಲ್ಲ. ಈಗ ಸಿವಿಲ್ ಕೋರ್ಟ್ ಮತ್ತೆ ಮಸೀದಿಯಲ್ಲಿ ಸರ್ವೆಗೆ ಆದೇಶ ನೀಡಿದೆ.
ಈ ಐವರು ಮಹಿಳೆಯರು ಪೂಜೆ ವಿಚಾರವಾಗಿ ಅರ್ಜಿ ಹಾಕಿದ್ದರೆ, ವಿಜಯ್ ಶಂಕರ್ ರಸ್ತೋಗಿ ಎಂಬ ಇನ್ನೊಬ್ಬ ವ್ಯಕ್ತಿ, ಗ್ಯಾನವಾಪಿ ಮಸೀದಿ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನದ ಭಾಗವಾಗಿತ್ತು ಎಂದು ವಾದಿಸಿ 1991ರಲ್ಲೇ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಉಳಿದುಕೊಂಡು ಬಂದಿದೆ.
(ಒನ್ಇಂಡಿಯಾ ಸುದ್ದಿ)