ನೀವು ಸಿಎಂ, ಯಾರು ವಾರೆಂಟ್ ಹೊರಡಿಸುತ್ತಾರೆ?: ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ಪ್ರಶ್ನೆ
ನವದೆಹಲಿ, ಜನವರಿ 27: ತಮ್ಮ ವಿರುದ್ಧದ ಡಿನೋಟಿಫಿಕೇಷನ್ ಕ್ರಿಮಿನಲ್ ಪ್ರಕರಣದ ತನಿಖೆಯನ್ನು ಮತ್ತೆ ವಿಚಾರಣೆ ನಡೆಸುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರ ಅರ್ಜಿಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
ಆದರೆ 2011ರಲ್ಲಿ ಖಾಸಗಿ ಹೂಡಿಕೆದಾರರೊಬ್ಬರಿಗೆ 26 ಎಕರೆ ಭೂಮಿಯನ್ನು ಮಂಜೂರು ಮಾಡಿ ಬಳಿಕ ನಕಲಿ ದಾಖಲೆಗಳ ಮೂಲಕ ಅದನ್ನು ಹಿಂದಕ್ಕೆ ಪಡೆದುಕೊಂಡಿಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ದೂರನ್ನು ಊರ್ಜಿತಗೊಳಿಸಿ ವಿಚಾರಣೆಗೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಡಿನೋಟಿಫಿಕೇಷನ್ ಪ್ರಕರಣ: ಸುಪ್ರೀಂಕೋರ್ಟ್ಗೆ ಬಿಎಸ್ವೈ ಮೇಲ್ಮನವಿ, ಇಂದು ವಿಚಾರಣೆ
ಬಿಎಸ್ ಯಡಿಯೂರಪ್ಪ ಅವರ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ಹೈಕೋರ್ಟ್ ಆದೇಶವನ್ನು ಪರಿಗಣನೆಗೆ ಒಮ್ಮೆ ತೆಗೆದುಕೊಂಡರೆ ಅವರು ಮುಖ್ಯಮಂತ್ರ ವಿರುದ್ಧ ವಾರಂಟ್ ಜಾರಿ ಮಾಡುತ್ತಾರೆ. ಹೀಗಾಗಿ ಅವರಿಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿದರು. ಮುಂದೆ ಓದಿ.

ಯಾರು ವಾರಂಟ್ ಹೊರಡಿಸುತ್ತಾರೆ?
'ನೀವು ಹಾಲಿ ಮುಖ್ಯಮಂತ್ರಿ. ನಿಮ್ಮ ವಿರುದ್ಧ ಯಾರಿಗೆ ವಾರಂಟ್ ಹೊರಡಿಸಲು ಸಾಧ್ಯ? ಮುಖ್ಯವಾಗಿ ಮುಖ್ಯಮಂತ್ರಿ ವಿರುದ್ಧ ಅವರು ಮನವಿ ಪತ್ರ ಹೊರಡಿಸಬಹುದೇ ವಿನಾ ವಾರಂಟ್ ಅಲ್ಲ' ಎಂದು ನ್ಯಾಯಪೀಠದ ಮುಖ್ಯಸ್ಥರಾಗಿದ್ದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಹೇಳಿದರು.

ನಕಲಿ ಸಹಿ ಬಳಕೆ
ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗಾಗಿ 2010-11ರಲ್ಲಿ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಆಗ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು ತಮಗೆ 26 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ನಕಲಿ ಸಹಿ ಬಳಸಿ ತಮ್ಮಿಂದ ಭೂಮಿಯನ್ನು ವಾಪಸ್ ಪಡೆದಿದ್ದರು ಎಂದು ಉದ್ಯಮಿ ಎ.ಅಲಂ ಪಾಷಾ ದೂರು ದಾಖಲಿಸಿದ್ದರು.
ಯಡಿಯೂರಪ್ಪ, ನಿರಾಣಿ ಕೊರಳಿಗೆ ಉರುಳಾದ ಡಿನೋಟಿಫಿಕೇಷನ್ ಕೇಸ್

ರದ್ದುಗೊಳಿಸಿದ್ದ ಹೈಕೋರ್ಟ್
ಅಲಂ ಪಾಷಾ ಅವರು 2012ರಲ್ಲಿ ಲೋಕಾಯುಕ್ತದಲ್ಲಿ ಸಲ್ಲಿಸಿದ್ದ ದೂರಿನಂತೆ 2013ರಲ್ಲಿ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ವಿಚಾರಣೆ ರದ್ದುಪಡಿಸುವಂತೆ ಕೋರಿ ಬಿಎಸ್ ಯಡಿಯೂರಪ್ಪ ಅವರು ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ತಮ್ಮ ವಿರುದ್ಧದ ತನಿಖೆ ನಡೆಸಲು ಅನುಮೋದನೆ ಪಡೆಯಲು ವಿಫಲವಾದ ಕಾರಣ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿತ್ತು.

ಮತ್ತೆ ಪ್ರಕರಣ ದಾಖಲು
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದ ಬಳಿಕ ಹೊಸದಾಗಿ ಪಿಸಿಆರ್ ಸಲ್ಲಿಕೆಯಾಗಿತ್ತು. ಯಡಿಯೂರಪ್ಪ ಈಗ ಯಾವುದೇ ಸಾರ್ವಜನಿಕ ಅಧಿಕಾರ ಹೊಂದಿಲ್ಲದಿರುವುದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲು ಯಾವ ನಿರ್ಬಂಧವೂ ಇಲ್ಲ ಎಂದು ಹೇಳಲಾಗಿತ್ತು. ಈ ಹಿಂದೆ ಪ್ರಕರಣದ ವಜಾಗೊಂಡಿದ್ದರಿಂದ ಅದರ ಆಧಾರದಲ್ಲಿ ವಿಶೇಷ ನ್ಯಾಯಾಲಯ ಕೂಡ 2016ರಲ್ಲಿ ಪ್ರಕರಣವನ್ನು ರದ್ದುಗೊಳಿಸಿತ್ತು.

ಹೈಕೋರ್ಟ್ ಆದೇಶ
ಇದರಿಂದ ಅಸಮಾಧಾನಗೊಂಡಿದ್ದ ಅಲಂ ಪಾಷಾ ಹೈಕೋರ್ಟ್ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿ, ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸುವಂತೆ ಕೋರಿದ್ದರು. ಅದರ ವಿರುದ್ಧ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜ. 5ರಂದು ವಜಾಗೊಳಿಸಿದ್ದ ಹೈಕೋರ್ಟ್, ವಿಚಾರಣೆಗೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ.