ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಸ್ತಿನ ಪಾಠದ ಜೊತೆ ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಖಡಕ್ ಸಂದೇಶ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶಿಸ್ತು ಮತ್ತು ಒಗ್ಗಟ್ಟಿನ ಮಂತ್ರ ಜಪಿಸಬೇಕಿದೆ. ಪಕ್ಷದ ಬಲವರ್ಧನೆಯು ವೈಯಕ್ತಿಕ ಮಹತ್ವಾಕಾಂಕ್ಷೆಗಿಂತಲೂ ಮುಖ್ಯವಾಗಿದೆ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂದೇಶ ರವಾನಿಸಿದ್ದಾರೆ.

ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸೋನಿಯಾ ಗಾಂಧಿಯವರು ಪಕ್ಷದ ಹಿರಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ಕೆಟ್ಟ ಆಡಳಿತದಿಂದ ಸಂತ್ರಸ್ತರಾಗಿರುವ ಜನರಿಗೋಸ್ಕರ ನಮ್ಮ ಹೋರಾಟವನ್ನು ಇಮ್ಮಡಿಗೊಳಿಸಬೇಕಿದೆ ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದಿಂದ ರವಾನೆಯಾಗುವ ಪ್ರಮುಖ ವಿಷಯಗಳು ತಳಮಟ್ಟದ ಕಾರ್ಯಕರ್ತರಿಗೆ ತಲುಪದಿರುವ ಬಗ್ಗೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದರು. ರಾಜ್ಯ ಮಟ್ಟದ ನಾಯಕರಲ್ಲಿ ಒಗ್ಗಟ್ಟು ಮತ್ತು ಸ್ಪಷ್ಟತೆಯ ಕೊರತೆಯಿದೆಯೇ ಎಂದು ಪ್ರಶ್ನಿಸಿದರು. ನವದೆಹಲಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಘಟಕಗಳ ಉಸ್ತುವಾರಿಗಳ ಸಭೆಯಲ್ಲಿ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಸಂಸದ ರಾಹುಲ್ ಗಾಂಧಿ ಸಹ ಉಪಸ್ಥಿತರಿದ್ದರು.

Strengthening Congress is Important than Personal Ambition: Sonia Gandhis message to G-23 Leaders

ಕಾಂಗ್ರೆಸ್ ನಾಯಕರಿಗೆ ಒಗ್ಗಟ್ಟಿನ ಪಾಠ:

"ನಾನು ಶಿಸ್ತು ಮತ್ತು ಏಕತೆಯ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳುವುದಕ್ಕೆ ಬಯಸುತ್ತೇನೆ. ನಮ್ಮಲ್ಲಿ ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬರೂ ಮುಖ್ಯವಾಗಿ ಬೇಕಾಗುತ್ತಾರೆ. ಇಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಹಿತಾಸಕ್ತಿಯ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್ ಸಂಘಟನೆ ಮತ್ತು ಬಲವರ್ಧನೆಯಲ್ಲೇ ಸಾಮೂಹಿಕ ಮತ್ತು ವೈಯಕ್ತಿಕ ಯಶಸ್ಸು ಅಡಗಿದೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಕಾರ್ಯತಂತ್ರ:

ಭಾರತದಾದ್ಯಂತ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಕಾರ್ಯತಂತ್ರವನ್ನು ರೂಪಿಸಲು ಎಲ್ಲ ನಾಯಕರು ಒಗ್ಗಟ್ಟಾಗಬೇಕಿದೆ. ನವೆಂಬರ್ 1 ರಿಂದ ಆರಂಭವಾಗಲಿರುವ ಕಾಂಗ್ರೆಸ್ ಹೊಸ ಸದಸ್ಯತ್ವ ಅಭಿಯಾನವು ಮುಂದಿನ ಮಾರ್ಚ್ ತಿಂಗಳಾಂತ್ಯದವರೆಗೂ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

"ಸುಳ್ಳು ಪ್ರಚಾರಗಳ ನಡುವೆ ನಮ್ಮ ಪ್ರಜಾಪ್ರಭುತ್ವ, ಸಂವಿಧಾನವನ್ನು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ರಕ್ಷಿಸುವ ನಿಟ್ಟಿನಲ್ಲಿ ಹೋರಾಡುವುದಕ್ಕೆ ನಾವು ಸಂಪೂರ್ಣ ಸಿದ್ಧರಾಗಬೇಕಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪೈಶಾಚಿಕ ಅಭಿಯಾನದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡಬೇಕು. ನಾವು ಈ ಯುದ್ಧವನ್ನು ಗೆಲ್ಲಬೇಕಾದರೆ ಅವರ ಸುಳ್ಳುಗಳನ್ನು ಜನರ ಎದುರಿಗೆ ಬಿಚ್ಚಿಡುವ ನಿಟ್ಟಿನಲ್ಲಿ ಸಮರ್ಥವಾಗಿ ಅಭಿಯಾನ ನಡೆಸಬೇಕಿದೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ದೇಶದ ಸಮಸ್ಯೆಗಳ ಬಗ್ಗೆ ಪ್ರತಿನಿತ್ಯ ಹೇಳಿಕೆ ಬಿಡುಗಡೆ:

ಭಾರತವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಎಐಸಿಸಿ ಪ್ರತಿದಿನ ವಿವರವಾದ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತದೆ. "ಆದರೆ ಅದು ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ನಮ್ಮ ಕೆಳಮಟ್ಟದ ಕಾರ್ಯಕರ್ತರಿಗೆ ತಲುಪುವುದಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ನಮ್ಮ ರಾಜ್ಯ ಮಟ್ಟದ ನಾಯಕರಲ್ಲಿಯೂ ಸಹ ಸ್ಪಷ್ಟತೆ ಮತ್ತು ಒಗ್ಗಟ್ಟು ಕೊರತೆಯನ್ನು ನಾನು ಕಂಡುಕೊಂಡಿದ್ದೇನೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

"ಈ ಸರ್ಕಾರದ ಕೆಟ್ಟ ಆಡಳಿತ ಮತ್ತು ದುಷ್ಕೃತ್ಯಗಳಿಂದ ಬಳಲುತ್ತಿರುವ ಹಾಗೂ ಬಲಿಯಾದವರ ಪರವಾಗಿ ನಮ್ಮ ಹೋರಾಟವನ್ನು ಇಮ್ಮಡಿಗೊಳಿಸಬೇಕಿದೆ. ರೈತರು ಮತ್ತು ಕೃಷಿ ಕಾರ್ಮಿಕರು, ನಿರುದ್ಯೋಗಿಗಳು ಮತ್ತು ಅವಕಾಶಗಳಿಗಾಗಿ ಹೋರಾಡುತ್ತಿರುವ ನಮ್ಮ ಯುವಕರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು, ನಮ್ಮ ಸಹೋದರರು, ಸಹೋದರಿಯರು ಸೇರಿದಂತೆ ಎಲ್ಲ ವರ್ಗದ ವಂಚಿತರ ಮೇಲೆ ನಿರ್ದಿಷ್ಟವಾಗಿ ಗಮನಹರಿಸಬೇಕಿದೆ," ಎಂದು ಅವರು ಒತ್ತಿ ಹೇಳಿದರು.

ವಿಧಾನಸಭೆ ಚುನಾವಣೆಗಳ ಬಗ್ಗೆಯೂ ಚರ್ಚೆ:

ದೇಶದಲ್ಲಿ ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಯಿತು. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶನ ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಂದೇಶ ನೀಡಲಾಯಿತು. ಈ ಹಿನ್ನೆಲೆ ಮಂಗಳವಾರದ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಘಟಕಗಳ ಉಸ್ತುವಾರಿಗಳ ಸಭೆ ನಡೆಯಲಿದ್ದು, ಸದಸ್ಯತ್ವ, ತರಬೇತಿ, ಆಂದೋಲನ ಕಾರ್ಯಕ್ರಮ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.

English summary
Strengthening Congress Party is More Important than Personal Ambition: Sonia Gandhi's Disciplined message to G-23 Leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X