ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

73ನೇ ಗಣರಾಜ್ಯೋತ್ಸವ: ದೆಹಲಿಯಲ್ಲಿ ಡ್ರೋನ್ ದಾಳಿ ಬೆದರಿಕೆ ಹಿನ್ನೆಲೆ ಬಿಗಿ ಭದ್ರತೆ

|
Google Oneindia Kannada News

ನವದೆಹಲಿ, ಜನವರಿ 26: ಭಾರತವು 73ನೇ ಗಣರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿದೆ. ಇದರ ನಡುವೆ ಅಪಾಯಕಾರಿ ಡ್ರೋನ್ ದಾಳಿ ನಡೆಸುವ ಉಗ್ರರ ಬೆದರಿಕೆ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನವದೆಹಲಿಯಲ್ಲಿ ಡ್ರೋನ್-ಹಾರಾಟವನ್ನು ಪತ್ತೆ ಮಾಡುವ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಆಂಟಿ-ಡ್ರೋನ್ ವ್ಯವಸ್ಥೆಯನ್ನು ಮಾಡಲಾಗಿದೆ. ಗುಪ್ತಚರ ಇಲಾಖೆ ಮತ್ತು ಭದ್ರತಾ ಸಿಬ್ಬಂದಿಯು ನವದೆಹಲಿಯಲ್ಲಿ ಡ್ರೋನ್ ದಾಳಿ ಬಗ್ಗೆ ಎಚ್ಚರಿಕೆ ನೀಡಿದ್ದವು.

ದೆಹಲಿಯಲ್ಲಿ ಡ್ರೋನ್ ಮಾರಾಟಗಾರರ ಮೇಲೂ ಒಂದು ಕಣ್ಣಿಡುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಭದ್ರತಾ ವ್ಯವಸ್ಥೆ ಬಗ್ಗೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತನಾ ಮಾಹಿತಿ ನೀಡಿದ್ದಾರೆ.

Security tightened in New Delhi ahead of Republic Day amid looming drone attack threat

ಮೂರು ವಲಯಗಳಾಗಿ ವಿಂಗಡನೆ:

ಡ್ರೋನ್ ಮಾರಾಟ ಮತ್ತು ಬಳಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಾದರಿ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ದೆಹಲಿಯಲ್ಲಿ ಈ ಹಿಂದೆ ಡ್ರೋನ್ ಬಳಕೆಗೆ ಮೂರು ಪ್ರಮುಖ ವಲಯಗಳಾಗಿ ವಿಂಗಡಿಸಲಾಗಿದ್ದು, ದೆಹಲಿಯ ಹೊರವಲಯವನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದೆ. ಎಲ್ಲೋ ಜೋನ್ ನಲ್ಲಿ ಕೆಲವು ನಿರ್ಬಂಧಗಳಡಿ ಡ್ರೋನ್ ಹಾರಾಟವನ್ನು ನಡೆಸಲಾಗುತ್ತದೆ. ಆದರೆ ರೆಡ್ ಜೋನ್ ಪ್ರದೇಶದಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಸೇರಿದಂತೆ ಪ್ರಮುಖ ಕಾರ್ಯಕ್ರಮ ಮತ್ತು ಆಚರಣೆ ಸಂದರ್ಭಗಳಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಮುಖ ಆಚರಣೆಗಳು ಮತ್ತು ಕಾರ್ಯಕ್ರಮಗಳ ಸಂದರ್ಭದಲ್ಲಿ ಡ್ರೋನ್ ದಾಳಿ ಅಪಾಯ ಹೆಚ್ಚಾಗಿರುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಜಮ್ಮುವಿನಿಂದ ದೆಹಲಿಗೆ ಶಂಕಿತರು:

ದೆಹಲಿಯ ಗಾಜಿಪುರ್ ಪೂಲ್ ಮಂಡಿ ಬಳಿ ಇತ್ತೀಚೆಗಷ್ಟೇ ಬಾಂಬ್ ಪತ್ತೆಯಾಗಿದ್ದು, ಇದರ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಇದರ ಮಧ್ಯೆ ಜಮ್ಮುವಿನಿಂದ ರಸ್ತೆ ಮಾರ್ಗವಾಗಿ ಕೆಲವು ಶಂಕಿತರು ದೆಹಲಿಗೆ ಆಗಮಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶಂಕಿತರಿಗಾಗಿ ದೆಹಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನವದೆಹಲಿ ನಾಲ್ಕೂ ದಿಕ್ಕುಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪ್ರತಿಯೊಂದು ವಾಹನ ಮತ್ತು ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.

ದೆಹಲಿಯಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ:

ಭಾರತ ಬುಧವಾರ ತನ್ನ 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಆಚರಣೆಯ ಪ್ರಮುಖ ಲಕ್ಷಣವೆಂದರೆ ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್, ಅಲ್ಲಿ ಭಾರತದ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅನೇಕ ವಿಶಿಷ್ಟತೆಗಳನ್ನು ಪ್ರದರ್ಶಿಸಲಾಗುತ್ತದೆ.

ಗಣರಾಜ್ಯೋತ್ಸವದ ಪರೇಡ್ ಸಮಾರಂಭವು ಕಳೆದ ವರ್ಷದಂತೆ 90 ನಿಮಿಷಗಳ ಅವಧಿವರೆಗೂ ನಡೆಯುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯಾ ಗೇಟ್ ಬಳಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ತದನಂತರ ಸೇನಾ ತುಕಡಿಗಳ ಮಾರ್ಚ್ ಪಾಸ್ ಶುರುವಾಗುತ್ತವೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಐತಿಹಾಸಿಕ ಗಣರಾಜ್ಯೋತ್ಸವ ಪರೇಡ್ ರಾಷ್ಟ್ರಪತಿ ಭವನದಿಂದ ಆರಂಭವಾಗಿ ಇಂಡಿಯಾ ಗೇಟ್‌ನಲ್ಲಿ ಕೊನೆಗೊಳ್ಳಲಿದೆ. ಈ ನಡುವೆ ವಿಜಯ್ ಚೌಕ್‌ನಿಂದ ರಾಜ್‌ಪಥ್, ಅಮರ್ ಜವಾನ್ ಜ್ಯೋತಿ, ಇಂಡಿಯಾ ಗೇಟ್ ಪ್ರಿನ್ಸೆಸ್ ಪ್ಯಾಲೇಸ್, ತಿಲಕ್ ಮಾರ್ಗ್ ಮೂಲಕ ಸಾಗಲಿರುವ ಪರೇಡ್ ಅಂತಿಮವಾಗಿ ಇಂಡಿಯಾ ಗೇಟ್‌ಗೆ ತಲುಪಲಿದೆ.

English summary
India's Republic Day 2022: Security tightened in New Delhi amid looming drone attack threat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X