ರಾಹುಲ್ ಹನಿಮೂನ್ ಹೇಳಿಕೆ, ಬಾಬಾಗೆ ಕೋಟಿ ರು ಹೊರೆ
ನವದೆಹಲಿ, ಮೇ.10: 'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗ್ರಾಮ ವಾಸ್ತವ್ಯದ ನೆಪದಲ್ಲಿ ದಲಿತರ ಮನೆಗೆ ಹನಿಮೂನ್ ಮಾಡಲು ಹೋಗುತ್ತಾರೆ' ಎಂದು ಹೇಳಿಕೆ ನೀಡಿದ್ದ ಬಾಬಾ ರಾಮದೇವ್ ತಲೆ ಮೇಲೆ ಸಾವಿರಾರು ಕೋಟಿ ದಂಡ ಬೀಳುವ ಆಪತ್ತು ಎದುರಾಗಿದೆ. ಅಹಮದಾಬಾದಿನ ಸರ್ಕಾರೇತರ ಸಂಸ್ಥೆಯೊಂದು ಬಾಬಾ ರಾಮದೇವ್ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದೆ.
ಬಾಬಾ ರಾಮದೇವ್ ವಿರುದ್ಧ ಎನ್ ಜಿಒ ಮಾನನಷ್ಟ ಮೊಕದ್ದಮೆ ಹೂಡಿದ್ದು, 1000 ಕೋಟಿ ರು ಪರಿಹಾರ ಕೋರಿದೆ.ಯೋಗ ಗುರು ಬಾಬಾ ರಾಮದೇವ್ ಅವರು ಕಳೆದ ತಿಂಗಳು ಯೋಗ ಶಿಬಿರವೊಂದರಲ್ಲಿ ಭಾಷಣ ಮಾಡುತ್ತಾ. ರಾಹುಲ್ ಗಾಂಧಿ ಅವರು ದಲಿತರ ಮನೆಗೆ ಪಿಕ್ನಿಕ್ ಹಾಗೂ ಹನಿಮೂನ್ ಮಾಡಲು ಹೋಗುತ್ತಾರೆ ಎಂದು ಹೇಳಿದ್ದರು. ಬಾಬಾ ರಾಮದೇವ್ ಅವರು ದಲಿತರು ಅದರಲ್ಲೂ ದಲಿತ ಮಹಿಳೆಯ ಮೇಲೆ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ. ಇದರಿಂದ ಇಡೀ ಸಮುದಾಯದ ಮಾನನಷ್ಟವಾಗಿದೆ. ನ್ಯಾಯ ದೊರಕಿಸಿಕೊಡಿ ಎಂದು ಅಂಬೇಡ್ಕರ್ ಕರವಾನ್ ಎನ್ ಜಿಒ ಅಧ್ಯಕ್ಷ ರತ್ನ ವೋರಾ ಅವರು ಸಿವಿಲ್ ಕೋರ್ಟಿನಲ್ಲಿ ಅರ್ಜಿ ಹಾಕಿದ್ದಾರೆ.
ಮಾನನಷ್ಟ ಮೊಕದ್ದಮೆ ಹೂಡುವುದು ಸರಿ ಆದರೆ, 1000 ಕೋಟಿ ರು ಪರಿಹಾರ ಧನ ಏಕೆ? ಎಂದು ಪ್ರಶ್ನಿಸಿದರೆ, ರಾಮದೇವ್ ಅವರ ಹೇಳಿಕೆ ಇಡೀ ಸಮುದಾಯಕ್ಕೆ ಮಾಡಿರುವ ಅಪಮಾನ. ದೇಶದಲ್ಲಿ ಸುಮಾರು 28 ಕೋಟಿಗೂ ಅಧಿಕ ದಲಿತರನ್ನು ಜನಗಣತಿ ಮೂಲಕ ಗುರುತಿಸಲಾಗಿದೆ. ರಾಮದೇವ್ ಅವರು ತಪ್ಪಿಗೆ ಶಿಕ್ಷೆ ಅನುಭವಿಸಬೇಕು. ಇಡೀ ಸಮುದಾಯಕ್ಕೆ ದಂಡ ತೆರಬೇಕಾಗಿದೆ ಎಂದು ರತ್ನ ವೋರಾ ಪ್ರತಿಕ್ರಿಯಿಸಿದ್ದಾರೆ.
ರಾಮದೇವ್ ಅವರ ವಿರುದ್ಧದ ಕೇಸ್ ನಿಂದ ಬರುವ ಹಣವನ್ನು ದಲಿತ ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು ಎಂದಿದ್ದಾರೆ. ಏ.25ರಂದು ಲಕ್ನೋದಲ್ಲಿ ನಡೆದ ಸಮಾವೇಶವೊಂದರಲ್ಲಿ ಬಾಬಾ ರಾಮದೇವ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿಗೆ ಮದುವೆಯಾಗಲು ಇನ್ನೂ ಹೆಣ್ಣು ಸಿಕ್ಕಿಲ್ಲ. ದಲಿತ ಹುಡುಗಿಯನ್ನು ಮದುವೆಯಾಗಿದ್ದರೆ ಆತನ ಅದೃಷ್ಟ ಖುಲಾಯಿಸುತ್ತಿತ್ತು. ಪ್ರಧಾನಮಂತ್ರಿಯಾಗುವ ಯೋಗವೂ ಲಭಿಸುತ್ತಿತ್ತು ಎಂದಿದ್ದರು. ಆದರೆ, ನಂತರ ರಾಮದೇವ್ ಅವರ ಹೇಳಿಕೆ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯಿತು. ಇದರಿಂದ ವಿಚಲಿತರಾದ ಬಾಬಾ ರಾಮದೇವ್ ಕ್ಷಮೆಯಾಚಿಸಿ, ನನ್ನ ಹೇಳಿಕೆ ತಿರುಚಲಾಗಿದೆ ಎಂದಿದ್ದರು. ರಾಮದೇವ್ ವಿರುದ್ಧ ದೇಶದ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ.