• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ಡೀಲ್: ಕೋರ್ಟ್ ಮುಂದೆ ಯಾರು, ಏನು ಹೇಳಿದರು?

|

ನವದೆಹಲಿ, ಮೇ 10: ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ನಡೆದ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ. ಈ ಬಗ್ಗೆ ತನಿಖೆ ನಡೆಯಬೇಕು ಎನ್ನುವುದು ವಿರೋಧಪಕ್ಷಗಳ ಆಗ್ರಹ.

ಈ ಬೇಡಿಕೆಯನ್ನು ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನ ವೇಳೆ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿದ್ದ ಅರ್ಜಿದಾರರಾದ ಅರುಣ್ ಶೌರಿ, ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ವಿಕಾಸ್ ಸಿಂಗ್, ತಮ್ಮ ಹಳೆಯ ಅರ್ಜಿಗೆ ಹೆಚ್ಚುವರಿ ದಾಖಲೆಗಳನ್ನು ಸೇರಿಸಿ ನ್ಯಾಯಾಲಯದ ಮುಂದಿರಿಸಿದ್ದಾರೆ.

ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಯಿತು. ಮರುಪರಿಶೀಲನೆ ನಡೆಸಬೇಕೆಂಬ ಅರ್ಜಿಯ ಕುರಿತಾದ ತೀರ್ಪನ್ನು ಸುಪ್ರೀಂಕೋರ್ಟ್ ಸದ್ಯಕ್ಕೆ ಕಾಯ್ದಿರಿಸಿದೆ. ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ಹಿಂದಿನ ತೀರ್ಪಿನಲ್ಲಿ ಮಾಡಿದ ಲೋಪಗಳನ್ನು ಅರ್ಜಿದಾರರು ಎತ್ತಿ ತೋರಿಸಿದರು. ಈ ಪ್ರಕರಣದ ಕುರಿತು ಕ್ರಿಮಿನಲ್ ತನಿಕೆ ಏಕೆ ಅಗತ್ಯ ಎಂದು ಅಂಶಗಳನ್ನು ಪಟ್ಟಿ ಮಾಡಿದರು.

ರಫೇಲ್ ಒಪ್ಪಂದ ತೀರ್ಪು ಮರುಪರಿಶೀಲನೆ: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್

ಅರ್ಜಿದಾರರ ವಾದಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಒಪ್ಪಂದ ಕಾನೂನುಬದ್ಧವಾಗಿ ನಡೆದಿದೆ ಎಂದು ವಾದ ಮಂಡಿಸಿದರು. ಶುಕ್ರವಾರ ನಡೆದ ಆರೋಪ, ಪ್ರತ್ಯಾರೋಪ ಮತ್ತು ಸಮರ್ಥನೆಗಳು ಏನೇನು? ಇಲ್ಲಿದೆ ಮಾಹಿತಿ...

ಪ್ರಶಾಂತ್ ಭೂಷಣ್ ವಾದ

ಪ್ರಶಾಂತ್ ಭೂಷಣ್ ವಾದ

ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಪ್ರಶಾಂತ್ ಭೂಷಣ್, ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಾದ ಲೋಪಗಳ ಬಗ್ಗೆ ಪ್ರಸ್ತಾಪಿಸಿದರು. ಸೆಪ್ಟೆಂಬರ್‌ನಲ್ಲಿ ನಡೆದ ಸಿಸಿಎಸ್ ಸಭೆಯಲ್ಲಿ ರಫೇಲ್ ಒಪ್ಪಂದಕ್ಕಾಗಿ ರಕ್ಷಣಾ ಖರೀದಿ ಪ್ರಕ್ರಿಯೆಯ ಎಂಟು ಅತ್ಯಂತ ಮಹತ್ವದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ನಿಯಮಾವಳಿಯನ್ನು ತೆಗೆದುಹಾಕಲಾಗಿತ್ತು. ಈ ಮಾಹಿತಿಯ ತುಣುಕನ್ನು ಸರ್ಕಾರವು ನ್ಯಾಯಾಲಯದಿಂದ ಮುಚ್ಚಿಟ್ಟಿತ್ತು ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಈ ನಡೆಯೇ ರಫೇಲ್ ಒಪ್ಪಂದದ ಕುರಿತು ಕ್ರಿಮಿನಲ್ ತನಿಖೆಗೆ ಆದೇಶ ನೀಡಲು ಸಾಕಷ್ಟು ಬಲವಾದ ಕಾರಣವಾಗಿದೆ ಎಂದರು.

ರಫೇಲ್ ಡೀಲ್ ಬಗ್ಗೆ ಸುಳ್ಳು ಸಂಗತಿ ಬಿಂಬಿಸಲು ಯತ್ನ: ಸರ್ಕಾರ ಆರೋಪ

ಮೂವರಿಂದ ಆಕ್ಷೇಪವಿತ್ತು

ಮೂವರಿಂದ ಆಕ್ಷೇಪವಿತ್ತು

ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅಧಿಕ ಹಣ ನೀಡುವುದರ ವಿರುದ್ಧ ಅಂತಾರಾಷ್ಟ್ರೀಯ ವ್ಯವಹಾರ ತಂಡದ (ಐಎನ್‌ಟಿ) ಏಳು ಸದಸ್ಯರಲ್ಲಿ ಮೂವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ರಫೇಲ್ ಯುದ್ಧ ವಿಮಾನಗಳ ಪೂರೈಕೆಯಲ್ಲಿನ ವಿಳಂಬ, ಸರ್ಕಾರಗಳ ನಡುವಿನ ಒಪ್ಪಂದದ (ಐಜಿಎ) ಸುತ್ತಲಿನ ಪ್ರಶ್ನೆಗಳ ಕುರಿತಾಗಿ ಭೂಷಣ್ ಪ್ರಸ್ತಾಪಿಸಿದರು.

ಡೀಲ್‌ನ ಕೆಲವು ಅಂಶಗಳು ಸಿಎಜಿ ವರದಿಯಲ್ಲಿಯೂ ಪ್ರಸ್ತಾಪವಾಗಲಿದೆ ಎಂದು ಸರ್ಕಾರಕ್ಕೆ ಹೇಗೆ ಗೊತ್ತಾಯಿತು? 2019ರಲ್ಲಿ ಸಿಎಜಿ ವರದಿಯಲ್ಲಿ ರಫೇಲ್ ವಿಮಾನಗಳ ದರದ ಬಗ್ಗೆ ಪ್ರಸ್ತಾಪ ಆಗಲಿದೆ ಎಂಬುದನ್ನು 2018ರ ನವೆಂಬರ್‌ನಲ್ಲಿಯೇ ಸರ್ಕಾರ ಹೇಗೆ ತಿಳಿದಿತ್ತು? ಎಂದು ಪ್ರಶ್ನಿಸಿದರು.

ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

ಎಲ್ಲ ದಾಖಲೆ ಹಾಜರುಪಡಿಸಲಿ

ಎಲ್ಲ ದಾಖಲೆ ಹಾಜರುಪಡಿಸಲಿ

ಭಾರತದಲ್ಲಿ 108 ಯುದ್ಧ ವಿಮಾನಗಳನ್ನು ತಯಾರಿಸುವ ಯುಪಿಎ ಸರ್ಕಾರದ ಒಪ್ಪಂದದಲ್ಲಿ ತಂತ್ರಜ್ಞಾನದ ವರ್ಗಾವಣೆಯೂ ಸೇರಿತ್ತು. ಎಲ್ಲ ದಾಖಲೆಗಳನ್ನೂ ಹಾಜರುಪಡಿಸಬೇಕು ಎಂದು ನಾವು ಕೋರಿದ್ದೇವೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಅವರು ಗೋಪ್ಯವಾಗಿಡಬಹುದು. ಯಾವುದೇ ಸಂದರ್ಭದಲ್ಲಿ ಆದರೂ ಅದನ್ನು ನ್ಯಾಯಾಲಯದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಈ ಒಪ್ಪಂದದಲ್ಲಿ ಎನ್‌ಎಸ್‌ಎ ಅಜಿತ್ ಧೋವಲ್ ಕೂಡ ಅಗತ್ಯ ಇಲ್ಲದೆ ಇದ್ದರೂ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ಸಂಗತಿಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ. ಅವುಗಳ ತನಿಖೆ ಅಗತ್ಯವಿದೆ.

ರಫೇಲ್ ತೀರ್ಪು: ಕೇಂದ್ರಕ್ಕೆ ಹಿನ್ನಡೆ, ಸತ್ಯಮೇವ ಜಯತೆ ಎಂದ ಕಾಂಗ್ರೆಸ್!

ಅನಿಲ್ ಅಂಬಾನಿಗೆ ವಿನಾಯಿತಿ

ಅನಿಲ್ ಅಂಬಾನಿಗೆ ವಿನಾಯಿತಿ

ಈ ಒಪ್ಪಂದದಲ್ಲಿ ಆರಂಭದಿಂದಲೂ ಅನಿಲ್ ಅಂಬಾನಿ ಭಾಗವಹಿಸಿದ್ದರು. ಇಲ್ಲಿ ಅವರ ಪರವಾಗಿ ಒಪ್ಪಂದ ಮಾಡಲಾಗಿದೆ. ಫ್ರಾನ್ಸ್ ಪ್ರಧಾನಿಯ ಪತ್ನಿಯ ಸಿನಿಮಾಕ್ಕೆ ಅನಿಲ್ ಅಂಬಾನಿ ನೆರವು ನೀಡಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಭಾರಿ ಮೊತ್ತದ ತೆರಿಗೆ ವಿನಾಯಿತಿ ದೊರಕಿತ್ತು. ಇದೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಅರುಣ್ ಶೌರಿ, ವಿಕಾಸ್ ಸಿಂಗ್ ವಾದ

ಅರುಣ್ ಶೌರಿ, ವಿಕಾಸ್ ಸಿಂಗ್ ವಾದ

ಸುಪ್ರೀಂಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ ಸರ್ಕಾರದ ಅಧಿಕಾರಿಗಳನ್ನು ಬಂಧಿಸಬೇಕು. ಸರ್ಕಾರವು ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆದಿದೆ. ನ್ಯಾಯಾಲಯದಿಂದ ಅನೇಕ ದಾಖಲೆಗಳನ್ನು ಮುಚ್ಚಿಟ್ಟಿದೆ ಎಂದು ಮತ್ತೊಬ್ಬ ಅರ್ಜಿದಾರ ಅರುಣ್ ಶೌರಿ ಆರೋಪಿಸಿದರು.

ಎಲ್ಲ ದಾಖಲೆಗಳನ್ನು ಸಿಎಜಿ ಎದುರು ಹಂಚಿಕೊಂಡಿರುವುದಾಗಿ ಸರ್ಕಾರ ಹೇಳುತ್ತಿದೆ. ಹಾಗಾದರೆ ಅವುಗಳನ್ನು ನ್ಯಾಯಾಲಯಕ್ಕೆ ಏಕೆ ಅವರು ಸಲ್ಲಿಸುತ್ತಿಲ್ಲ? ಸರ್ಕಾರ ನೀಡಿದ ಸುಳ್ಳು ಮಾಹಿತಿಗಳ ಆಧಾರದಲ್ಲಿ ಮೊದಲು ನೀಡಿದ ತೀರ್ಪು ತಪ್ಪಾಗಿತ್ತು. ಸರ್ಕಾರದ ಮೇಲೆ ನೀವು ನಂಬಿಕೆ ಇರಿಸಿದ್ದಿರಿ. ಅದಕ್ಕೆ ಸರ್ಕಾರ ದ್ರೋಹ ಎಸಗಿದೆ. ಸರ್ಕಾರದ ದಾಖಲೆಗಳಲ್ಲಿನ ತಪ್ಪು ಮಾಹಿತಿ ಆಕಸ್ಮಿಕವಲ್ಲ ಎಂದು ಶೌರಿ ಹೇಳಿದರು.

ಸರ್ಕಾರವು ಸುಪ್ರೀಂಕೋರ್ಟ್ ಮತ್ತು ದೇಶಕ್ಕೆ ಕ್ಷಮೆ ಯಾಚಿಸಬೇಕು ಎಂದು ಮತ್ತೊಬ್ಬ ಅರ್ಜಿದಾರ, ಹಿರಿಯ ವಕೀಲ ವಿಕಾಸ್ ಸಿಂಗ್ ಹೇಳಿದರು.

ಕೆಕೆ ವೇಣುಗೋಪಾಲ್ ಸಮರ್ಥನೆ

ಕೆಕೆ ವೇಣುಗೋಪಾಲ್ ಸಮರ್ಥನೆ

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಅತಿ ಅಗ್ಗದ ದರದಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ದೊರಕುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿಮಾನದ ಬೆಲೆ ಅಂದಾಜಿಸಲು ಕೋರ್ಟ್ ವಿಚಾರಣೆ ನಡೆಸುತ್ತದೆಯೇ? ಯುದ್ಧ ವಿಮಾನಗಳ ಬೆಲೆಯನ್ನು ನ್ಯಾಯಾಲಯ ಬಳಿಕ ನಿಗದಿಪಡಿಸುತ್ತದೆಯೇ? ಎಂದು ಪ್ರಶ್ನಿಸಿದರು.

ಸರ್ಕಾರವು ಸುಪ್ರೀಂಕೋರ್ಟ್‌ಗೆ ಯಾವ ಹೊಸ ಮಾಹಿತಿಯನ್ನೂ ಸಲ್ಲಿಸುವ ಅಗತ್ಯವಿಲ್ಲ. ಎಲ್ಲ ಕಾಗದಗಳೂ ನ್ಯಾಯಾಲಯದಲ್ಲಿಯೇ ಇವೆ. ಡಿಸೆಂಬರ್‌ನಲ್ಲಿನ ತನ್ನ ತೀರ್ಪಿನಲ್ಲಿ ನ್ಯಾಯಾಲಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಆಗಲೇ ಅನುಮೋದನೆ ನೀಡಿತ್ತು. ಇನ್ನು ಇದರಲ್ಲಿ ಮರುಪರಿಶೀಲನೆಯ ಪ್ರಶ್ನೆ ಏನಿದೆ? ಎಂದು ಕೇಳಿದರು.

ನಮ್ಮ ದೇಶದಲ್ಲಿ ಮಾತ್ರ ಹೀಗೆ

ನಮ್ಮ ದೇಶದಲ್ಲಿ ಮಾತ್ರ ಹೀಗೆ

ವಿಮಾನದ ದರದ ಕುರಿತಾದ ಪ್ರಶ್ನೆಯು ಅಂತರ್ ಸರ್ಕಾರಿ ಒಪ್ಪಂದದ (ಐಜಿಎ) 10ನೇ ವಿಧಿಯಲ್ಲಿದೆ. ಐಜಿಎ ಪ್ರಕಾರ ದರವನ್ನು ಬಹಿರಂಗಪಡಿಸುವಂತಿಲ್ಲ. ನೀವು ಈ ಹಿಂದೆ ದರದ ಬಗ್ಗೆ ಕೇಳಿರಲಿಲ್ಲ. ಅದರ ಪ್ರಕ್ರಿಯೆ ಕುರಿತು ಮಾತ್ರ ಪ್ರಶ್ನಿಸಿದ್ದೀರಿ. ಅದನ್ನು ನಾವು ಸಲ್ಲಿಸಿದ್ದೆವು. ಅದರಲ್ಲಿ ಲೋಪಗಳು ಇದ್ದರೂ ಅದು ಮರುಪರಿಶೀಲನೆಗೆ ಒಳಪಡಿಸುವಂಥದ್ದೇನಲ್ಲ ಎಂದರು.

ಹೊಸ ಒಪ್ಪಂದವು ವಿಮಾನಗಳನ್ನು ಅಗ್ಗದ ದರದಲ್ಲಿ ನೀಡಲಿದೆ ಎಂಬ ಸಿಎಜಿ ವರದಿಯನ್ನು ವೇಣುಗೋಪಾಲ್ ಪ್ರಸ್ತಾಪಿಸಿದರು. ದೇಶದ ಜನರ ಭದ್ರತೆಗೆ ಧಕ್ಕೆ ತರುವಂತೆ ಒಪ್ಪಂದವನ್ನು ಅವರು ಪ್ರಶ್ನಿಸಲು ಬಯಸಿದ್ದಾರೆ ಎಂದು ಆರೋಪಿಸಿದರು.

ಈ ಯುದ್ಧ ವಿಮಾನಗಳು ಅಲಂಕಾರಕ್ಕೆ ಅಲ್ಲ. ದೇಶದ ಪ್ರತಿಯೊಬ್ಬರ ರಕ್ಷಣೆಗೂ ಇದು ಅತಿ ಮಹತ್ವದ ಒಪ್ಪಂದ. ಇಂತಹ ಸಂಗತಿಗಳನ್ನು ಜಗತ್ತಿನ ಎಲ್ಲಿಯೂ ನ್ಯಾಯಾಲಯಕ್ಕೆ ಎಳೆದು ತರುವುದಿಲ್ಲ.

ರಕ್ಷಣಾ ಖರೀದಿ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಮೂವರು ಪರಿಣತರು ಬಳಿಕ ಒಪ್ಪಂದಕ್ಕೆ ಅನುಮೋದನೆ ನೀಡಿದ್ದರು ಎಂದು ತಿಳಿಸಿದರು.

ಸರ್ಕಾರದ ಅಫಿಡವಿಟ್

ಸರ್ಕಾರದ ಅಫಿಡವಿಟ್

ಗುರುವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಕೆಲವು ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಯಬೇಕೆಂಬ ಅರ್ಜಿದಾರರ ಬೇಡಿಕೆಯು ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿತ್ತು. ತೀರ್ಪು ಪರಾಮರ್ಶೆಗೆಂದು ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಕೆಲವು ಅಪರಿಚಿತ ಸರ್ಕಾರಿ ಅಧಿಕಾರಿಗಳು ಕಳೆದ ವರ್ಷದ ವಿಚಾರಣೆ ವೇಳೆ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅರ್ಜಿದಾರರು ನ್ಯಾಯಾಲಯದ ಮುಂದೆ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತ ಹೇಳಿಕೆಗಳನ್ನು ನೀಡಿ ವಾಸ್ತವವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಆರೋಪಿಸಲಾಗಿದೆ. ಅರ್ಜಿದಾರರು ರಕ್ಷಣಾ ಸಚಿವಾಲಯದ ಕೆಲವು 'ಆಯ್ದ ಸೋರಿಕೆ'ಗಳ ಕುರಿತಾದ ಮಾಧ್ಯಮ ವರದಿಯನ್ನು ಆಧರಿಸಿ ಹೇಳಿಕೆ ನೀಡಿದ್ದಾರೆ. ಅವರು ನೀಡುತ್ತಿರುವುದು ಅಪೂರ್ಣ ಚಿತ್ರಣ ಎಂದು ದೂರಲಾಗಿದೆ.

English summary
The Supreme Court on Friday heared the arguments by petitioners Prashant Bhushan, Arun Shourie and Vikas Singh and attorney general KK Venugopal on Rafale deal review petition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X