• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೆಗಾಸಸ್ ಗಲಾಟೆ: ರಾಜ್ಯಸಭೆಯಿಂದ 6 ಟಿಎಂಸಿ ಸಂಸದರ ಅಮಾನತು

|
Google Oneindia Kannada News

ನವದೆಹಲಿ, ಆಗಸ್ಟ್ 4: ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ ತೃಣಮೂಲ ಕಾಂಗ್ರೆಸ್ ಪಕ್ಷದ ಆರು ಸಂಸದರನ್ನು ಅಮಾನತುಗೊಳಿಸಲಾಗಿದೆ. ಆಗಸ್ಟ್ 13ರವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ದೂರ ಇರುವಂತೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕುರ್ಚಿಗಳನ್ನು ಎಳೆದಾಡಿ, ನಾಮಫಲಕಗಳನ್ನು ಪ್ರದರ್ಶಿಸುತ್ತಾ ಗದ್ದಲ ಸೃಷ್ಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಡೋಲಾ ಸೇನ್, ಮೊಹಮ್ಮದ್ ನಬೀಮುಲ್, ಅಬಿರ್ ರಂಜನ್ ಬಿಸ್ವಾಸ್, ಶಾಂತ ಛೆತ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಎಂಬ ಆರು ಸಂಸದರನ್ನು ಅಮಾನತುಗೊಳಿಸಲಾಗಿದೆ.

ರಾಜ್ಯಸಭೆ ಕಲಾಪದ ಸಂದರ್ಭದಲ್ಲಿ ಆರು ಮಂದಿ ಟಿಎಂಸಿ ಸಂಸದರ ನಡವಳಿಕೆ ಸರಿಯಾಗಿರಲಿಲ್ಲ. ಆದ್ದರಿಂದ ಅವರನ್ನು ಗೌರವಾನ್ವಿತ ಅಧ್ಯಕ್ಷರು ನಿಯಮ 255ರ ಅಡಿಯಲ್ಲಿ ಕೌನ್ಸಿಲ್‌ನಿಂದ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ" ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಜುಲೈ 23ರಂದು ಟಿಎಂಸಿ ಸಂಸದ ಅಮಾನತು:

ಕಳೆದ ಜುಲೈ 23ರಂದು ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಸಂತಾನು ಸೇನ್ ಅಮಾನತುಗೊಂಡಿದ್ದರು. ರಾಜ್ಯಸಭೆಯಲ್ಲಿ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಕುರಿತು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡುತ್ತಿದ್ದರು. ಈ ವೇಳೆ ಸಚಿವರ ಕೈಯಲ್ಲಿದ್ದ ಪತ್ರಗಳನ್ನು ಕಸಿದುಕೊಂಡ ಸಂಸದ ಸಂತಾನು ಸೇನ್ ಅದನ್ನು ಹರಿದು ಹಾಕಿದ್ದರು. "ಸದನದಲ್ಲಿ ನಡೆದ ಘಟನೆಗಳ ಬಗ್ಗೆ ನನಗೆ ತುಂಬಾ ನೋವಾಗುತ್ತದೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರ ಕೈಯಲ್ಲಿರುವ ಪತ್ರಗಳನ್ನು ಕಸಿದು ಹರಿದು ಹಾಕುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಇಂಥ ನಡುವಳಿಕೆಯು ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಆಗಿರುತ್ತದೆ," ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಬೇಸರ ವ್ಯಕ್ತಪಡಿಸಿದದ್ದರು.

ಸಂಸತ್ ಕಲಾಪದಲ್ಲಿ ಚರ್ಚೆ ನಡೆದಿದ್ದೇ 18 ಗಂಟೆ:

ಕಳೆದ ಜುಲೈ 19ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡು ವಾರಗಳಲ್ಲಿ ಒಂದೇ ಒಂದು ದಿನ ಸುಗಮ ಕಲಾಪ ನಡೆದಿಲ್ಲ. ಒಟ್ಟು 107 ಗಂಟೆಗಳಲ್ಲಿ ಕೇವಲ 18 ಗಂಟೆ ಮಾತ್ರ ಸಂಸತ್ ಕಲಾಪ ನಡೆದಿದೆ. ಇದರ ಹೊರತಾಗಿ ಸಂಸತ್ತಿನಲ್ಲಿ ನಡೆದ ಗದ್ದಲ ಗಲಾಟೆಯಿಂದ ದೇಶದ 133 ಕೋಟಿ ತೆರಿಗೆದಾರರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

Pegasus ruckus : TMC Six MPs Suspended From Rajya Sabha For This Entire Session

ಕೇಂದ್ರದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನ:

ನವದೆಹಲಿಯಲ್ಲಿ 14 ವಿರೋಧ ಪಕ್ಷಗಳ ನಾಯಕರು ಇದೇ ಪೆಗಾಸಸ್ ಬಗ್ಗೆ ಚರ್ಚಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಅಣಿಯಾಗಿವೆ. ಈ ಸಂಬಂಧ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಶಿವಸೇನೆ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ(ಸಿಪಿಐ), ಸಿಪಿಐ(ಎಂ), ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆರ್ಎಸ್ ಪಿ, ಕೇರಳ ಕಾಂಗ್ರೆಸ್(ಎಂ) ಮತ್ತು ವಿಸಿಕೆ ಪಕ್ಷದ ನಾಯಕರು ಸಭೆ ನಡೆಸಿದ್ದು ಪರವಾನಗಿ ಪಡೆಯದ ಇಸ್ರೇಲ್ ಬೇಹುಗಾರಿಕೆ ತಂತ್ರಾಂಶಕ್ಕೆ ನಿರ್ಬಂಧ ವಿಧಿಸುವಂತೆ ಆಗ್ರಹಿಸುತ್ತಿದ್ದಾರೆ.

ಏನಿದು ಪೆಗಾಸಸ್ ಬೇಹುಗಾರಿಕೆ ಪ್ರಕರಣ?

ಜಾಗತಿಕ ತನಿಖಾ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪವಿದೆ. ಇದರ ಜೊತೆಗೆ ದೇಶದ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.

English summary
Pegasus ruckus : TMC Six MPs Suspended From Rajya Sabha For This Entire Session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X