• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ

|

ನವದೆಹಲಿ, ಜನವರಿ 21: ನೂತನ ಸಂಸತ್ ಕಟ್ಟಡ ನಿರ್ಮಾಣದ ಕಾರಣಕ್ಕಾಗಿ ಸಂಸತ್ ಆವರಣದಲ್ಲಿನ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ತರಾತುರಿಯಲ್ಲಿ ಸ್ಥಳಾಂತರ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸಂಸತ್ ಆವರಣದ ಮೂರನೇ ಸಂಖ್ಯೆಯ ದ್ವಾರದೆಡೆಗೆ ಮುಖ ಮಾಡಿದಂತೆ ಇದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅದರ ಸ್ಥಳಾಂತರದ ಉದ್ದೇಶಿತ ದಿನಾಂಕಕ್ಕೂ ಮೊದಲೇ ಬೇರೆಡೆಗೆ ಸಾಗಿಸಿರುವುದು ಹುಬ್ಬೇರಿಸುವಂತೆ ಮಾಡಿದೆ.

ಜನವರಿ 29ರಂದು ಆರಂಭವಾಗಲಿರುವ ಬಜೆಟ್ ಅವಧಿಯ ಮೊದಲ ಮತ್ತು ಎರಡನೆಯ ಹಂತದ ಅಧಿವೇಶನದ ನಡುವೆ ಪ್ರತಿಮೆಯನ್ನು ಸ್ಥಳಾಂತರ ಮಾಡಲು ಮೊದಲ ಉದ್ದೇಶಿಸಲಾಗಿತ್ತು. ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ಜಾಗ ಒದಗಿಸಲು ಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

ಈ ಆತುರದ ಸ್ಥಳಾಂತರದ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿ ಅಚ್ಚರಿ ವ್ಯಕ್ತಪಡಿಸಿದೆ. ಸರ್ಕಾರದ ನೀತಿಗಳು, ಕಾಯ್ದೆಗಳ ವಿರುದ್ಧ ಈ ಪ್ರತಿಮೆಯ ಮುಂಭಾಗದಲ್ಲಿ ವಿರೋಧಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಮುಂಗಾರು ಅಧಿವೇಶನದಲ್ಲಿ ವಿರೋಧಪಕ್ಷದ ಕೆಲವು ನಾಯಕರು ಕೃಷಿ ಕಾಯ್ದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಿದ್ದ ಕ್ರಮವನ್ನು ವಿರೋಧಿಸಿ ಪ್ರತಿಮೆ ಮುಂಭಾಗ ಅಹೋರಾತ್ರಿ ಧರಣಿ ನಡೆಸಿದ್ದರು.

ಈ ಬಾರಿ ಅಧಿವೇಶನದ ಸಂದರ್ಭದಲ್ಲಿಯೂ ವಿರೋಧಪಕ್ಷಗಳು ಗದ್ದಲ ಎಬ್ಬಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಉದ್ದೇಶಿತ ಸಮಯಕ್ಕೆ ಮುನ್ನವೇ ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದೆ. ಇದು ಪ್ರತಿಭಟನೆಯ ಸ್ಥಳವನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ಆರೋಪಿಸಲಾಗಿದೆ.

ಪ್ರತಿಮೆಯನ್ನು ಜಾಗರೂಕತೆಯಿಂದ ತೆರವುಗೊಳಿಸಿ ಸ್ಪೀಕರ್ ಅವರು ತಮ್ಮ ಕಚೇರಿಗೆ ತೆರಳಲುಸ ಬಳಸುವ ಪ್ರತ್ಯೇಕ ದ್ವಾರದ ಸಮೀಪದ ಹುಲ್ಲುಹಾಸಿನ ಮೇಲೆ ಇರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದ ಗಾಂಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು 1993ರ ಅಕ್ಟೋಬರ್ 2ರಂದು ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಉದ್ಘಾಟಿಸಿದ್ದರು.

English summary
Mahatma Gandhi's statue in the parliament complex was shifted before the initial plan for construction of new parliament building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X