ತ್ಸೆರಿಂಗ್ ಬಿರುಗಾಳಿಯ ಮಾತಿಗೆ ಸಂಸತ್ ಸ್ತಬ್ದ! ಮೋದಿ, ಶಾ ಮೆಚ್ಚುಗೆ
ನವದೆಹಲಿ, ಆಗಸ್ಟ್ 06: ಲೋಕಸಭೆಯಲ್ಲಿ ರೋಮಾಂಚನ ಹುಟ್ಟಿಸುವಂಥ ಸನ್ನಿವೇಶಗಳು ಸೃಷ್ಟಿಯಾಗುವುದ ಅಪರೂಪ. ಪರಸ್ಪರ ಆರೋಪ-ಪ್ರತ್ಯಾರೋಪ, ವಾದ-ವಿವಾದಗಗಳ ಭೋರ್ಗರೆತದಲ್ಲಿ ಎಲ್ಲೋ ಒಮ್ಮೊಮ್ಮೆ ಪಾಂಡಿತ್ಯಪೂರ್ಣ, ಪ್ರಬುದ್ಧ ಮಾತುಗಳು ಕೇಳಿಸುತ್ತವೆ. ಅಂಥ ಮಾತಿನ ಮೂಲಕ ಕೆಲ ಸಂಸದರು ಸಂಸತ್ತಿನ ಮೇಲೆ ಗೌರವ ಹೆಚ್ಚುವಂತೆ ಮಾಡುತ್ತಾರೆ.. ಅಂಥವರಲ್ಲಿ ಲಡಾಖ್ ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್ ಸಹ ಒಬ್ಬರು. ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆಯಾಗುತ್ತಿದ್ದಂತೆಯೇ ಎಲ್ಲರಿಗಿಂತ ಹೆಚ್ಚು ಸಂತಸ ಪಟ್ಟಿದ್ದು ಇದೇ ತ್ಸೆರಿಂಗ್ ಎಂಬುದು ಅವರ ಮಾತುಗಳಲ್ಲೇ ಅರ್ಥವಾಗುತ್ತದೆ.
ಲೋಕಸಭೆಯಲ್ಲಿ ಮಂಗಳವಾರ ಲಡಾಖ್ ನ ಇತಿಹಾಸ, ಸ್ವಾತಂತ್ರ್ಯಾನಂತರ ಅನುಭವಿಸಿದ ಸಂಕಟಗಳು, ಕಾಶ್ಮೀರದ ಮಲತಾಯಿ ಧೋರಣೆ, ಕೇಂದ್ರಾಡಳಿತ ಪ್ರದೇಶವಾಗಬೇಕೆಂದು ತುಡಿಯುತ್ತಿದ್ದ ಲಡಾಖಿನ ಪ್ರತಿಯೊಬ್ಬನ ಕನಸಿನ ಬಗ್ಗೆ ತ್ಸೆರಿಂಗ್ ಅಸ್ಖಲಿತವಾಗಿ ಮಾತನಾಡುತ್ತಿದ್ದರೆ ಸಂಸತ್ತಿನ ಹಿರಿಯ ಸಂಸದೀಯ ಪಟುಗಳೆಲ್ಲರೂ ಮಂತ್ರಮುಗ್ಧರಾಗಿ ಕುಳಿತಿದ್ದರು! ಅಮಿತ್ ಶಾ ಕಣ್ಣಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದರೆ, ಸ್ಪೀಕರ್ ಓಂ ಬಿರ್ಲಾ ತಮ್ಮ ಮೆಚ್ಚುಗೆಯನ್ನು ಪದಗಳಲ್ಲಿ ವ್ಯಕ್ತಪಡಿಸಿಯೇ ಬಿಟ್ಟರು. ಪ್ರಧಾನಿ ನರೇಂದ್ರ ಮೋದಿ, ತ್ಸೆರಿಂಗ್ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿ, 'ತಮ್ಮ ಯುವ ಗೆಳೆಯ'ನಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಕೇಳಲೇ ಬೇಕಾದ ಭಾಷಣ ಎಂದು ಸಹ ಮೋದಿ ಮೆಚ್ಚುಗೆ ಸೂಚಿಸಿದರು.
ಲೋಕಸಭೆಯಲ್ಲಿ ಕಾಶ್ಮೀರ ವಿಭಜನೆ ಮಸೂದೆ ಅಂಗೀಕಾರ: ಬಿದ್ದ ಮತಗಳೆಷ್ಟು?
ಪಕ್ಷ ಯಾವುದೇ ಇರಲಿ, ಸಿದ್ಧಾಂತ ಏನೇ ಇರಲಿ. ತನ್ನ ನಾಡಿನ ಬಗ್ಗೆ ತ್ಸೆರಿಂಗ್ ಅವರಿಗಿರುವ ಅಭಿಮಾನ, ತನ್ನ ಮಣ್ಣಿನ ಬಗ್ಗೆ ಅವರಿಗಿರುವ ಜ್ಞಾನ, ಲಡಾಖಿನ ಜನರ ಬಗ್ಗೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದ ನೈಜ ಕಾಳಜಿಯನ್ನು ಅರಿಯಬೇಕೆಂದರೆ, ನಡುನಡುವೆ ಹಾಸ್ಯ, ವ್ಯಂಗ್ಯ ಭರಪೂರ ಕಾಳಜಿ ತುಂಬಿದ ಅವರ ಮಾತುಗಳನ್ನು ಒಮ್ಮೆಯಾದರೂ ಕೇಳಲೇ ಬೇಕು!

ಏಳು ದಶಕದ ಹೋರಾಟಕ್ಕೆ ಫಲ ಸಿಕ್ಕಿದೆ!
"ನನಗೆ ನೀವಿಲ್ಲಿ ಮಾತನಾಡಲು ಅವಕಾಶ ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು, ಇಲ್ಲಿ ಹಲವರು ತಮ್ಮ ಮಾತುಗಳಲ್ಲಿ ಲಡಾಖ್, ಲೇಹ್, ಕಾರ್ಗಿಲ್ ಎನ್ನುವುದನ್ನು ಕೇಳಿದ್ದೇನೆ. ಆದರೆ ಅವರಿಗೆಲ್ಲ ನಿಜವಾಗಿಯೂ ಲಡಾಖ್ ಬಗ್ಗೆ ಗೊತ್ತೇ? ಈ 7 ದಶಕಗಳಲ್ಲಿ ಲಡಾಖಿನ ಜನರು ಪಟ್ಟ ಸಂಕಷ್ಟಗಳ ಅರಿವಿದೆಯೇ? ನಾವು ಲಡಾಖ್ ಅನ್ನು ಭಾರತದ ಭಾಗವಾಗಿ, ಕೇಂದ್ರಾಡಳಿತ ಪ್ರದೇಶವಾಗಿ ನೋಡಲು ಎಪ್ಪತ್ತು ವರ್ಷ ಕಾಯಬೇಕಾಯ್ತು. ಕಾಶ್ಮೀರ ಎಂದಿಗೂ ನಮ್ಮನ್ನು ಮಲತಾಯಿ ಧೋರಣೆಯಲ್ಲಿಯೇ ನೋಡುತ್ತಿತ್ತು. ನಾವು ಅಭಿವೃದ್ಧಿಗಾಗಿ, ನಮ್ಮ ಅಸ್ತಿತ್ವಕ್ಕಾಗಿ, ಉದ್ಯೋಗಕ್ಕಾಗಿ, ವಿದ್ಯೆಗಾಗಿ, ಕೊನೆಗೆ ನಮ್ಮ ಭಾಷೆಗಾಗಿ ಎಷ್ಟೆಲ್ಲ ಹೋರಾಡಿದೆವು! ಇದೆಲ್ಲಕ್ಕೂ ಕಾರಣ ಸಂವಿಧಾನದ 370 ನೇ ವಿಧಿ, ಇದಕ್ಕೆ ಕಾರಣ ಕಾಂಗ್ರೆಸ್!" -ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್

ಇದೇನಾ ನಿಮ್ಮ ಸಮಾನತೆ?
"ನೀವು(ಕಾಂಗ್ರೆಸ್) ಸಮಾನತೆಯ ಬಗ್ಗೆ ಮಾತನಾಡುತ್ತೀರಿ. ಲಡಾಖ್ ಜನರನ್ನೂ, ಕಾಶ್ಮೀರಿ ಜನರನ್ನೂ ಒಂದೇ ಎಂಬಂತೆ ಎಂದಿಗೂ ನೀವು ನೋಡಲಿಲ್ಲ. ಆಗ ಎಲ್ಲಿ ಹೋಗಿತ್ತು ನಿಮ್ಮ ಸಮಾನತೆ? ನಮಗೆ ವಿಶ್ವವಿದ್ಯಾಲಯ ನೀಡಲಿಲ್ಲ, ಪ್ರತ್ಯೇಕ ಜಿಲ್ಲೆಗಳನ್ನು ಮಾಡಲು ಒಪ್ಪಲಿಲ್ಲ, ನಮ್ಮ ಭಾಷೆಗೆ ಬೆಲೆ ಕೊಡಲಿಲ್ಲ, ಉದ್ಯೋಗ ನೀಡಲಿಲ್ಲ, ಲಡಾಖ್ ನಲ್ಲಿ ಬೌದ್ಧರನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನ ಮಾಡಿದಿರಿ, ಇದನ್ನು ಸಮಾನತೆ ಎಂದು ಕರೆಯಬೇಕಾ? ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಿ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದು ಲಡಾಖ್ ನಲ್ಲಿರುವ ಇತರೆ ಪಕ್ಷದ ನಾಯಕರು ಮುಚ್ಚಳಿಕೆಗೆ ಸಹಿ ಮಾಡಿಕೊಟ್ಟಿದ್ದರೂ ಅವರು ಅದನ್ನು ಒಪ್ಪದ ಹಾಗೆ ಪತ್ರಿಕಾ ಪ್ರಕಟಣೆ ಹೊರಡಿಸಿದರಿ. ಇದಾ ನಿಮ್ಮ ಪ್ರಜಾಪ್ರಭುತ್ವ?" -ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್

ಲಡಾಖ್ ಬಗ್ಗೆ ಎಷ್ಟು ಗೊತ್ತು ನಿಮಗೆ?
"ಲಡಾಖ್ ಬಗ್ಗೆ ಮಾತನಾಡುವ ಎಷ್ಟೋ ಜನರಿಗೆ ಲಡಾಖ್ ಬಗ್ಗೆ ಗೊತ್ತಿಲ್ಲ. ಲಡಾಖ್ ನ ಭಾಷೆ, ಅಲ್ಲಿನ ಜನಸಂಖ್ಯೆ, ವಾತಾವರಣ, ಸಂಸ್ಕೃತಿ ಯಾವುದೂ ಗೊತ್ತಿಲ್ಲ. ಪುಸ್ತಕದಲ್ಲಿ ಓದಿ ಲಡಾಖ್ ಬಗ್ಗೆ ಮಾತನಾಡುವುದು ಬೇರೆ. ನಾನು ಗ್ರೌಂಡ್ ರಿಯಾಲಿಟಿಯನ್ನು ಅಭ್ಯಸಿಸಿ ಮಾತನಾಡುತ್ತಿದ್ದೇನೆ. ಲಡಾಖಿನಲ್ಲಿರುವ ಶೇ.70 ಕ್ಕೂ ಹೆಚ್ಚು ಜನರು ಕೇಂದ್ರ ಸರ್ಕಾರದ ಈ ಮಸೂದೆಯನ್ನು ಬೆಂಬಲಿಸುತ್ತಾರೆ"-ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್

ಮಾತು ಉಳಿಸಿಕೊಂಡ ಮೋದಿ ಸರ್ಕಾರ
"ಕಾಂಗ್ರೆಸ್ ಪ್ರತಿ ಬಾರಿ ಲೋಕಸಭೆ ಚುನಾವಣೆಯ ಸಮಯದಲ್ಲೂ ತನ್ನ ಪ್ರಣಾಳಿಕೆಯಲ್ಲಿ 'ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುತ್ತೇವೆ' ಎಂಬ ಆಶ್ವಾಸನೆಯೊಂದಿಗೆ ಬರುತ್ತಿತ್ತು. ಆದರೆ ಎಂದಿಗೂ ಆ ಕೆಲಸವನ್ನು ಮಾಡಲಿಲ್ಲ. ಆದ್ದರಿಂದಲೇ ಜನರು ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟು ಅವರನ್ನು ಗೆಲ್ಲಿಸಿದರು. ಅವರು ಕೊಟ್ಟ ಮಾತನ್ನು ಉಳಿಸಿಕೊಂಡರು. ಅದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ"- ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್