ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಕೇಶ್ ಆಸ್ಥಾನಾ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಸಿಬಿಐ ಮಾಜಿ ಮುಖ್ಯಸ್ಥ ರಾಕೇಶ್ ಆಸ್ಥಾನಾ ಅವರನ್ನು ದೆಹಲಿ ಪೊಲೀಸ್‌ ಆಯುಕ್ತರಾಗಿ ನೇಮಿಸಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಈ ಕುರಿತಂತೆ ಪ್ರತಿಕ್ರಿಯೆ ಕೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಕೂಡಾ ನೀಡಿತ್ತು. ಆದರೆ, ಮಂಗಳವಾರದಂದು ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಗುಜರಾತ್ ಕೇಡರ್ ಅಧಿಕಾರಿ ರಾಕೇಶ್ ಅವರು ದೆಹಲಿ ಆಯುಕ್ತರಾಗಿ ಮುಂದುವರೆಯಲು ಇದ್ದ ಅಡ್ಡಿ ಆತಂಕ ದೂರಾಗಿದೆ.

ದೆಹಲಿ ಪೊಲೀಸ್‌ ಆಯುಕ್ತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಆಸ್ಥಾನಾ ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠವು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್‌ 27ರಂದು ತೀರ್ಪು ಕಾಯ್ದಿರಿಸಿತ್ತು.

ಅರ್ಜಿದಾರ ಸಾದ್ರೆ ಆಲಂ ಅವರ ಪರ ವಕೀಲ ಬಿ ಎಸ್‌ ಬಗ್ಗಾ ವಾದಿಸಿದ್ದರು. ಸರ್ಕಾರೇತರ ಸಂಸ್ಥೆ ಪಿಐಎಲ್‌ ಕೇಂದ್ರದ (ಸಿಪಿಐಎಲ್‌) ಪರವಾಗಿ ಸಲ್ಲಿಸಲಾಗಿದ್ದ ಮಧ್ಯಪ್ರವೇಶಿಕೆ ಅರ್ಜಿಯ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದ್ದರು.

HC dismisse Plea challenging Rakesh Asthanas appointment as Delhi Police Commissioner

''ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಆಸ್ಥಾನಾ ಅವರನ್ನು ಕೇಂದ್ರ ಸರ್ಕಾರವು ನೇಮಕ ಮಾಡಿದೆ. ತೀರ್ಪಿನ ಪ್ರಕಾರ ಆಯುಕ್ತರನ್ನು ಎರಡು ವರ್ಷಕ್ಕೆ ನೇಮಕ ಮಾಡಬೇಕು. ಆದರೆ, ಒಂದು ವರ್ಷಕ್ಕೆ ಮಾತ್ರ ನೇಮಕಾತಿ ಮಾಡಲಾಗಿದೆ. ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡುವಾಗ ಅವರಿಗೆ ಇನ್ನೂ ಆರು ತಿಂಗಳ ಸೇವಾವಧಿ ಇದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆದರೆ, ಇದಾವುದನ್ನೂ ಪಾಲಿಸಲಾಗಿಲ್ಲ,'' ಎಂದು ವಾದಿಸಲಾಗಿತ್ತು.

ಪ್ರಕಾಶ್‌ ಸಿಂಗ್‌ ಪ್ರಕರಣದ ತೀರ್ಪು ಉಲ್ಲೇಖಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, '' ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಸದರಿ ತೀರ್ಪು ಅನ್ವಯಿಸುತ್ತದೆಯೇ ವಿನಾ ದೆಹಲಿ ಪೊಲೀಸ್‌ ಆಯುಕ್ತರಿಗೆ ಅನ್ವಯಿಸುವುದಿಲ್ಲ,'' ಎಂದು ವಾದಿಸಿದ್ದರು. ಆಸ್ಥಾನಾ ಅವರಿಗೆ ಅನುಭವ ಇದ್ದುದರಿಂದ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

''ಸಿಪಿಐಎಲ್‌ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ಅರ್ಜಿದಾರರು ನಕಲು ಮಾಡಿದ್ದಾರೆ ಎಂಬ ವಿವಾದವು ಈ ಮಧ್ಯೆ ವಿಚಾರಣೆ ವೇಳೆ ಪರಿಗಣಿಸಲಾಗಿತ್ತು. ಹೀಗಾಗಿ, ಅರ್ಜಿಯ ಕೃತಿಚೌರ್ಯವು ಕಾನೂನಿನ ದುರ್ಬಳಕೆಯಾಗಿದ್ದು, ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಅಡಗಿದೆ,'' ಎಂದು ನ್ಯಾಯಾಲಯಕ್ಕೆ ತುಷಾರ್‌ ಮೆಹ್ತಾ ವಿವರಿಸಿದ್ದರು.

ಆಸ್ಥಾನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು, ''ಆಲಂ ಸಲ್ಲಿಸಿರುವ ಮನವಿಯು ನಕಲಾಗಿದ್ದು ಅಸಲಿತನದಿಂದ ಕೂಡಿಲ್ಲ ಎಂದು ವಿರೋಧಿಸಿದ್ದರು. ಆಸ್ಥಾನಾ ವಿರುದ್ಧ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ನಡೆಸಿದ್ದು, ಇದು ದುರುದ್ದೇಶಪೂರಿತವಾಗಿದೆ,'' ಎಂದು ವಾದಿಸಿದ್ದರು.

ವಿವಾದಿತ ಅಧಿಕಾರಿ ರಾಕೇಶ್: ಸಿಬಿಐನಲ್ಲಿ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರೊಂದಿಗೆ ಜಗಳವಾಡುವ ಮೂಲಕ ವಿವಾದಕ್ಕೀಡಾಗಿ ಸುದ್ದಿಯಾಗಿದ್ದ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅವರ ಮೇಲೆ ಎರಡು ಬಾರಿ ಲಂಚ ಪ್ರಕರಣದ ಆರೋಪ ಕೇಳಿ ಬಂದಿತ್ತು. ಆದರೆ, ಸಿಬಿಐನಿಂದ ಕ್ಲೀನ್ ಚಿಟ್ ಪಡೆದರು.

ಬಳಿಕ ನಾಗರಿಕ ವಿಮಾನಯಾನ ಭದ್ರತಾ ಇಲಾಖೆಗೆ ವರ್ಗಾವಣೆಯಾಗಿದ್ದ ರಾಕೇಶ್ ಆಸ್ತಾನಾ ಅವರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋದ ಹೆಚ್ಚುವರಿ ಅಧಿಕಾರ ನೀಡಲಾಗಿತ್ತು. ನಂತರ ಗಡಿ ಭದ್ರತಾ ಪಡೆ(BSF) ಪ್ರಧಾನ ನಿರ್ದೇಶಕ (DG) ರನ್ನಾಗಿ ನೇಮಿಸಲಾಗಿದೆ. ಆದರೆ, ಅಧಿಕಾರ ಅವಧಿಯನ್ನು ಜುಲೈ 2021ಕ್ಕೆ ಮೊಟಕುಗೊಳಿಸಿ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಆದೇಶ ನೀಡಿತ್ತು. ಇದಾದ ಬಳಿಕ ಇತ್ತೀಚೆಗೆ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು. ಆದರೆ, ಮತ್ತೆ ನೇಮಕಾತಿ ವಿವಾದ ಆರಂಭವಾಗಿ ಪ್ರಕರಣ ದೆಹಲಿ ಕೋರ್ಟ್ ಮೆಟ್ಟಿಲೇರಿತ್ತು.

ವಿಜಯ್ ಮಲ್ಯ ಮನಿಲಾಂಡ್ರಿಂಗ್ ಕೇಸ್, ಅಗಸ್ಟಾ ವೆಸ್ಟ್ ಲ್ಯಾಂಡ್ ಕೇಸ್, ಐಎಎಫ್ ಮುಖ್ಯಸ್ಥರಾಗಿದ್ದ ಎಸ್ ಪಿ ತ್ಯಾಗಿ ಬಂಧನ ಎಲ್ಲವೂ ರಾಕೇಶ್ ಆಸ್ತಾನ ಅವರ ಅವಧಿಯಲ್ಲಿನ ಬೆಳವಣಿಗೆಗಳು, ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ಅವರು ಏಪ್ರಿಲ್ 2016ರಲ್ಲಿ ಸಿಬಿಐ ಸೇರಿದರು, ಡಿಸೆಂಬರ್ 2016ರಿಂದ ಜನವರಿ 2017ರ ತನಕ ಸಿಬಿಐನ ಮಧ್ಯಂತರ ನಿರ್ದೇಶಕರಾಗಿದ್ದರು.

English summary
The Delhi High Court on Tuesday dismissed a PIL challenging the appointment of Gujarat-cadre IPS officer Rakesh Asthana as city police commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X