Breaking: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರಾಜೀನಾಮೆ
ನವದೆಹಲಿ, ಮೇ 18: ದೆಹಲಿಯ ಕುತೂಹಲಕಾರಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವೈಯಕ್ತಿಕ ಕಾರಣಗಳನ್ನು ನೀಡಿರುವ ಅನಿಲ್ ಬೈಜಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ತಲುಪಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಡಿಸೆಂಬರ್ 31, 2016 ರಂದು ನಜೀಬ್ ಜಂಗ್ ಹಠಾತ್ ರಾಜೀನಾಮೆ ನಂತರ ಅಧಿಕಾರ ವಹಿಸಿಕೊಂಡ ಅನಿಲ್ ಬೈಜಲ್ ಐದು ವರ್ಷ ನಾಲ್ಕು ತಿಂಗಳಿಗೂ ಹೆಚ್ಚು ಸುದೀರ್ಘ ಅಧಿಕಾರಾವಧಿಯನ್ನು ಪೂರೈಸಿದ್ದಾರೆ.
ದೆಹಲಿಯಲ್ಲಿ ಅಧಿಕಾರ ಹಂಚಿಕೆಯ ಕಿತ್ತಾಟ:
ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾದ ಲೆಫ್ಟಿನೆಂಟ್ ಗವರ್ನರ್ ನಡುವಿನ ಜಗಳವು ಇತ್ತೀಚಿನದ್ದಲ್ಲ. ಇದು ಚುನಾಯಿತ ಸರ್ಕಾರ ಮತ್ತು ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಂಚಿಕೆಯ ಮೇಲೆ ಕೇಂದ್ರೀಕೃತವಾಗಿದ್ದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
1969 ರ ಬ್ಯಾಚ್ ಅಧಿಕಾರಿ ಅನಿಲ್ ಬೈಜಲ್:
ಅನಿಲ್ ಬೈಜಲ್ 1969 ರ ಬ್ಯಾಚ್ AGMUT ಕೇಡರ್ ಆಗಿದ್ದು, ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ IAS ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಮಾಜಿ ಉಪಾಧ್ಯಕ್ಷರಾಗಿ ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬೈಜಲ್ ಅವರನ್ನು ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ನಗರಾಭಿವೃದ್ಧಿ ಸಚಿವಾಲಯಕ್ಕೆ ವರ್ಗಾಯಿಸಿತು, ಅಲ್ಲಿ ಅವರು 60,000 ಕೋಟಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ನ ಯೋಜನೆ ಮತ್ತು ಅನುಷ್ಠಾನವನ್ನು ನಿರ್ವಹಣೆ ಮಾಡಿದ್ದರು.