ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ, ಮಾರ್ಚ್.08: ಕೇಂದ್ರ ಸಂಸತ್ ಬಜೆಟ್ ಅಧಿವೇಶನದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ಸಂಸದ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ.
ರಾಜ್ಯಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಮುಖಿಯಾಗಿ ಏರಿಕೆ ಆಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಒಂದು ಲೀಟರ್ ಪೆಟ್ರೋಲ್ 100 ರೂಪಾಯಿ ಆಗಿದ್ದರೆ, ಒಂದು ಲೀಟರ್ ಡೀಸೆಲ್ ದರವು 80 ರೂಪಾಯಿ ಆಗಿದೆ. ರೈತರು ಸೇರಿದಂತೆ ಇಡೀ ದೇಶವು ತೊಂದರೆ ಅನುಭವಿಸುತ್ತಿದೆ. ಈ ಹಿನ್ನೆಲೆ ಅಬಕಾರಿ ಸುಂಕ / ಸೆಸ್ ಹಾಕುವ ಮೂಲಕ 21 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯು ಸಾರ್ವಜನಿಕರು ಹಾಗೂ ದೇಶದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇಂಧನ ಬೆಲೆ ಏರಿಕೆಯಲ್ಲೂ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಫೆಬ್ರವರಿ.27ರಂದೇ ಬೆಲೆ ಬದಲಾವಣೆ:
ಭಾರತದಲ್ಲಿ ಕಳೆದ ಫೆಬ್ರವರಿ.27ರಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೊನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಯಾವುದೇ ರೀತಿ ದರ ಬದಲಾವಣೆ ಆಗಿಲ್ಲ. ದೇಶದ ನಾಲ್ಕು ಪ್ರಮುಖ ನಗರದಲ್ಲಿ ಇಂದಿಗೂ ಒಂದು ಲೀಟರ್ ಪೆಟ್ರೋಲ್ ದರ 91.17 ರೂಪಾಯಿ ಇದೆ.