ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ SSLC ವಿದ್ಯಾರ್ಥಿನಿ!
ನವದೆಹಲಿ, ಜುಲೈ 23 : 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆಯೊಂದು ಉತ್ತರ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಶಾಲೆಯಲ್ಲೇ ಮಗಳಿಗೆ ಜನ್ಮವಿತ್ತ 5ನೇ ತರಗತಿ ಬಾಲಕಿ!
ಮಗುವಿಗೆ ಜನ್ಮ ನೀಡಿದ ಬಾಲಕಿ ದೆಹಲಿಯ ಮುಖರ್ಜಿ ನಗರದಲ್ಲಿರೋ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಗುರುವಾರ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಶೌಚಾಲಯಕ್ಕೆ ತೆರಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ಬಾತ್ ರೂಮ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ಶಾಲಾ ಅಧಿಕಾರಿಗಳು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಸಂಬಂಧ ಪೊಲೀಸರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ, ನೆರೆಮನೆಯ ಆಟೋ ಚಾಲಕನೊಬ್ಬ ಒಂದು ವರ್ಷದಿಂದ 5 ಬಾರಿ ಅತ್ಯಾಚಾರವೆಸಗಿದ್ದಾನೆ ಎಂಬ ಸತ್ಯ ಹೊರಬಿದ್ದಿದೆ.
ನೆರೆಮನೆಯ 51 ವರ್ಷದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಅಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಬೆದರಿಸಿ ಆಕೆಗೆ ಹಣ ಕೊಡುತ್ತಿದ್ದ ಎಂಬುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಬಾಲಕಿಯ ಮಾಹಿತಿಯಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಮೂಲತಃ ಬಿಹಾರದವನಾಗಿದ್ದು, ದೆಹಲಿಯಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ವೇಳೆ ವಿದ್ಯಾರ್ಥಿನಿ ಗರ್ಭಿಣಿಯಾಗಿರೋ ವಿಚಾರ ತಿಳಿದು ಆಕೆಗೆ ಗರ್ಭಪಾತವಾಗಲು ಮಾತ್ರೆಯನ್ನು ನೀಡಿದ್ದೆ ಎಂದು ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಬಾಲಕಿ ಆರೂವರೆ ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.