ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥ್ ಹುಣಸೂರಿನ ಜೆಡಿಎಸ್ ಅಭ್ಯರ್ಥಿ: ಶಾಕ್ ನೀಡಿದ ಎಚ್ಡಿಕೆ!

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿರುವಾಗಲೇ ಹುಣಸೂರು ಕ್ಷೇತ್ರಕ್ಕೆ ಮಾಜಿ ಸಂಸದ ಎಚ್.ವಿಶ್ವನಾಥ್ ಅವರನ್ನು ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರು ಘೋಷಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಇರಿಸುಮುರಿಸನ್ನುಂಟು ಮಾಡಿದೆ

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಮೇ 23: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿರುವಾಗಲೇ ಹುಣಸೂರು ಕ್ಷೇತ್ರಕ್ಕೆ ಮಾಜಿ ಸಂಸದ ಎಚ್.ವಿಶ್ವನಾಥ್ ಅವರನ್ನು, ಚಾಮರಾಜಕ್ಷೇತ್ರಕ್ಕೆ ಪ್ರೊ. ಎಸ್.ರಂಗಪ್ಪ ಅವರನ್ನು ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಇರಿಸುಮುರಿಸನ್ನುಂಟು ಮಾಡಿದೆ.

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೇರೆ ಪಕ್ಷದಿಂದ ಬರುವ ಅದರಲ್ಲೂ ಮೊದಲಿನಿಂದಲೂ ದೇವೇಗೌಡರ ಕುಟುಂಬವನ್ನು ಟೀಕಿಸುತ್ತಲೇ ಬಂದಿರುವ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡುತ್ತಿರುವ ವಿಚಾರ ಹಲವರ ಅಸಮಾಧಾನಕ್ಕೂ ಕಾರಣವಾಗಿದೆ.[ಚಾಮರಾಜನಗರಿಂದ ಪ್ರವಾಸ ಆರಂಭಿಸಿದ ದೇವೇಗೌಡರು!]

ಒಂದೆಡೆ ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರೆ, ಮತ್ತೊಂದೆಡೆ ಶಾಸಕ ಜಿ.ಟಿ.ದೇವೇಗೌಡರು ತನ್ನ ಪುತ್ರ ಜಿ.ಡಿ.ಹರೀಶ್ ಗೌಡರನ್ನು ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆ ಹೊಂದಿದ್ದರು. ಇದಕ್ಕಾಗಿ ಹರೀಶ್ ಗೌಡರು ಕಳೆದೈದು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.[ಅತಂತ್ರ ಫಲಿತಾಂಶ ಬಂದರೆ, ಪಕ್ಷದ ನಿಲುವೇನು? ಎಚ್ಡಿಕೆ ಸ್ಪಷ್ಟನೆ]

ವಿಶ್ವನಾಥ್ ಅವರು ಜೆಡಿಎಸ್ ಗೆ ಸೇರ್ಪಡೆಯಾಗುತ್ತಿರುವುದು ಬಹುಶಃ ನಾಯಕರ ಮಟ್ಟದಲ್ಲಿ ಖುಷಿ ತಂದಿದ್ದರೂ ಕಾರ್ಯಕರ್ತರಿಗೆ ಮಾತ್ರ ಗೊಂದಲವಿದೆ. ಅದರಲ್ಲೂ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಲು ನಿರ್ಧರಿಸಿರುವುದು ಸ್ವತಃ ದೇವೇಗೌಡರ ಕುಟುಂಬದಲ್ಲಿಯೇ ಅಸಮಾಧಾನವಿದೆ ಎಂದರೂ ತಪ್ಪಾಗಲಾರದು.[ಪ್ರಜ್ವಲ್ ರೇವಣ್ಣ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪಯಿಟ್ಟ ದೇವೇಗೌಡ್ರು]

ತನ್ನ ಚಿಕ್ಕಪ್ಪ, ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸೆಡ್ಡು ಹೊಡೆದು ಹುಣಸೂರು ಕ್ಷೇತ್ರದಲ್ಲಿ ಓಡಾಡಿ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿ ಪ್ರಜ್ವಲ್ ರೇವಣ್ಣ ಹೋಗಿರುವುದು. ಅದಾದ ನಂತರ ಕುಮಾರಸ್ವಾಮಿ ಅವರು ಇನ್ನೂ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳದ ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವ ಘೋಷಣೆ ಮಾಡಿರುವುದು ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತದೆ.

ದೇವೇಗೌಡರ ಮನಸ್ಸಿನಲ್ಲೇನಿದೆ?

ದೇವೇಗೌಡರ ಮನಸ್ಸಿನಲ್ಲೇನಿದೆ?

ಮತ್ತೊಂದೆಡೆ ಪಕ್ಷ ಸಂಘಟನೆಗಾಗಿ ಪ್ರವಾಸ ಹೊರಟಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿಯೂ ಆಗಿರುವ ಹೆಚ್.ಡಿ.ದೇವೇಗೌಡರು ಪ್ರವಾಸವನ್ನು ಚಾಮರಾಜನಗರದಿಂದಲೇ ಆರಂಭಿಸಿದ್ದು, ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು ರಾಜಕಾರಣಕ್ಕೆ ಯುವಕರು ಬರಬೇಕಾಗಿದೆ ಎಂಬ ಮಾತನ್ನು ಹೇಳುವ ಮೂಲಕ ಪರೋಕ್ಷವಾಗಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯಕ್ಕೆ ತರುವ ಇರಾದೆಯಿದೆ ಎಂಬ ಸೂಕ್ಷ್ಮತೆಯನ್ನು ಹೊರಗೆಡವಿದ್ದಾರೆ.

ಎಚ್.ಡಿ.ರೇವಣ್ಣ ಏನಂತಾರೆ?

ಎಚ್.ಡಿ.ರೇವಣ್ಣ ಏನಂತಾರೆ?

ಪಕ್ಷ ಸಂಘಟನೆಗಾಗಿ ಇಳಿ ವಯಸ್ಸಿನಲ್ಲಿ ಪ್ರವಾಸ ಹೊರಟಿರುವ ದೇವೇಗೌಡರೊಂದಿಗೆ ತಮ್ಮ ಕುಟುಂಬದ ಸದಸ್ಯರಾಗಲೀ, ಘಟಾನುಘಟಿ ನಾಯಕರಾಗಲೀ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಹುಣಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲೇ 2018ರ ಚುನಾವಣೆಯನ್ನು ಎದುರಿಸುತ್ತೇವೆ ಎಂದಿದ್ದಾರೆ.

ಹುಣಸೂರಿಗೆ ಅಭ್ಯರ್ಥಿ ಯಾರು?

ಹುಣಸೂರಿಗೆ ಅಭ್ಯರ್ಥಿ ಯಾರು?

ಇನ್ನು ಪ್ರಜ್ವಲ್ ರೇವಣ್ಣ ಅವರ ಕುರಿತು ಹುಣಸೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಆ ವಿಚಾರ ವರಿಷ್ಠರಿಗೆ ಬಿಟ್ಟಿದ್ದು ಎನ್ನುವುದರ ಜತೆಯಲ್ಲೇ ಹುಣಸೂರು ಅಥವಾ ಹಳೇಬೀಡು ಕ್ಷೇತ್ರದ ಯಾವುದಾದರೊಂದು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಬಗ್ಗೆ ಸೂಚಕವಾಗಿ ತಿಳಿಸಿದ್ದಾರೆ. ಅಲ್ಲದೆ ಇದು ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೇರಿದ ವಿಚಾರವಾಗಿದ್ದು ಇದರಲ್ಲಿ ನಾನು ಮೂಗು ತೋರಿಸಲ್ಲ ಎಂಬುದಾಗಿ ರೇವಣ್ಣ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಾ?

ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಾ?

ತನ್ನ ರಾಜಕೀಯದ ದಿನಗಳನ್ನು ಸ್ಮರಿಸುತ್ತಾ ನಾನು 1994ರಲ್ಲಿ ಪ್ರಥಮವಾಗಿ ಹೊಳೆನರಸೀಪುರದಿಂದ ಸ್ಪರ್ಧೆ ಮಾಡುವಾಗ ದೇವೇಗೌಡರು ಎಲ್ಲ ಮತದಾರರನ್ನು ಕೇಳಿ ಕೊನೆಗೆ ನನ್ನನ್ನು ನಿಲ್ಲಿಸಲು ಸೂಚಿಸಿದರು ಎಂದು ಹೇಳುವ ಮೂಲಕ ಹುಣಸೂರು ಅಥವಾ ಬೇಲೂರು ಇದೆರಡಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸೋದು ಖಚಿತ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಮೈಸೂರಿನಲ್ಲಿ ಅಸಮಾಧಾನದ ಹೊಗೆ

ಮೈಸೂರಿನಲ್ಲಿ ಅಸಮಾಧಾನದ ಹೊಗೆ

ಒಟ್ಟಾರೆಯಾಗಿ ಹೇಳುವುದಾದರೆ ಮುಂದಿನ ಚುನಾವಣೆಗೆ ಈಗಾಗಲೇ ತಯಾರಿ ನಡೆಸುತ್ತಾ ಗೆದ್ದು ಅಧಿಕಾರ ಪಡೆದು ಮುಖ್ಯಮಂತ್ರಿಯಾಗುವ ಕನಸಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರು ವ್ಯಾಪ್ತಿಯ ಜೆಡಿಎಸ್ ನಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವುದು ಗೊತ್ತೇ ಇದೆ. ಆದರೆ ಎಲ್ಲವನ್ನು ಸರಿಪಡಿಸಿಕೊಂಡು ಮುಂದೆ ಹೇಗೆ ಸಾಗುತ್ತಾರೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.

English summary
What is the JDS strategy to win 2018 Karnataka Assembly election? Will H Vishwanath contest from Hunsur constituency as JDS candidate? here is the answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X