• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಷ್ಟಕ್ಕೂ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ಯಾರು?

|

ಮೈಸೂರು, ನವೆಂಬರ್ 22: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೊಂದು ಪಕ್ಷಕ್ಕೆ ಮತದಾರರು ಬಹುಮತ ನೀಡಿದ್ದರೆ ಬಹುಶಃ ರಾಜ್ಯದಲ್ಲಿ ರಾಜಕಾರಣಿಗಳ ದೊಂಬರಾಟ ನೋಡುವುದು ತಪ್ಪುತ್ತಿತ್ತು. ಜತೆಗೆ ಉಪ ಚುನಾವಣೆಯೂ ನಡೆಯುತ್ತಿರಲಿಲ್ಲ. ಆದರೆ ಈಗ ಕಾಲ ಸರಿದು ಹೋಗಿದೆ. ಜನ ಏನನ್ನು ನೋಡಬಾರದೆಂದು ಬಯಸಿದ್ದರೋ ಅದೆಲ್ಲವನ್ನು ನೋಡಿ ಆಗಿದೆ.

ಈಗ ಮತ್ತೊಂದು ದೊಂಬರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮೂರು ಪಕ್ಷಗಳ ನಾಯಕರು ಉಪಚುನಾವಣೆಯ ಅಖಾಡಕ್ಕೆ ಧುಮುಕಿದ್ದಾರೆ. ಕೆಲ ತಿಂಗಳ ಹಿಂದೆ, ಅಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಮಯದಲ್ಲಿ ಹಾಲು ಜೇನಿನಂತೆ (ಹೊರನೋಟಕ್ಕೆ) ಇದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇದೀಗ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಇದರಿಂದ ಲಾಭ ಯಾರಿಗೆ ಆಗುತ್ತೆ ಎನ್ನುವುದು ಕೂಡ ಇಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

 ಕದನ ಕಣಕ್ಕೆ ಪಂಥಾಹ್ವಾನ ನೀಡಿದ ಮೈತ್ರಿ ಸರ್ಕಾರ

ಕದನ ಕಣಕ್ಕೆ ಪಂಥಾಹ್ವಾನ ನೀಡಿದ ಮೈತ್ರಿ ಸರ್ಕಾರ

14 ತಿಂಗಳ ಸಮ್ಮಿಶ್ರ ಸರ್ಕಾರ ಪತನವಾಗಿದ್ದೇ ಇವತ್ತಿನ ಉಪಚುನಾವಣೆಗೆ ಕಾರಣವಾಗಿರುವುದಂತು ಸತ್ಯ. ಹಾಗಾದರೆ ಸರ್ಕಾರ ಬೀಳುವಂತೆ ಮಾಡಿದ್ದು ಯಾರು ಎಂಬುದು ಈಗ ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತಿದೆ. ಅವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ ಮುಂಬಯಿ ಸೇರಿದಾಗಲೂ ಹೇಗಾದರು ಮಾಡಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ಎರಡು ಪಕ್ಷದ ನಾಯಕರು ಪಣತೊಟ್ಟಿದ್ದರು. ಆದರೆ ಕೊನೆಗಳಿಗೆಯಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ರಾಜೀನಾಮೆ ನೀಡಿ ಬಂದ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಹಿಂದಿನ ಸ್ವಾರ್ಥ ಬಯಲಾಯಿತು.

ಒಬ್ಬರು ಮತ್ತೊಬ್ಬರ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾಧ್ಯಮದವರ ಮುಂದೆ ಆರೋಪಗಳನ್ನು ಮಾಡುವ ಮೂಲಕ ಒಬ್ಬರ ಮೇಲೆ ಒಬ್ಬರು ಆರೋಪಗಳ ಸುರಿಮಳೆಗೈದರಲ್ಲದೆ, ಮುಂದೆ ಇವರ ನಡುವೆ ಮೈತ್ರಿ ಅಸಾಧ್ಯ ಎಂಬುದನ್ನು ಸಾಬೀತು ಮಾಡಿದರು. ಅಷ್ಟೇ ಅಲ್ಲದೆ ಕದನ ಕಣಕ್ಕೆ ಪಂಥಾಹ್ವಾನ ನೀಡಿದರು.

'ಕೇಡು ಬಯಸಿದ್ದು ಯಾರು?' ಸಿದ್ದರಾಮಯ್ಯ-ಕುಮಾರಸ್ವಾಮಿ ವಾರು ಜೋರು!

 ನಿಗೂಢವಾಗಿಯೇ ಉಳಿದ ಉತ್ತರ

ನಿಗೂಢವಾಗಿಯೇ ಉಳಿದ ಉತ್ತರ

ಇದೆಲ್ಲದರ ನಡುವೆಯೂ ಸರ್ಕಾರವನ್ನು ಪತನಗೊಳಿಸಿದ್ದು ಯಾರು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದು ಹೋಗಿದೆ. ಅಷ್ಟೇ ಅಲ್ಲದೆ ಮೂರು ಪಕ್ಷಗಳ ನಾಯಕರು ನಡೆಸಿದ ರಾಜಕೀಯ ದೊಂಬರಾಟವನ್ನು ನೋಡಿದ ಮೇಲೆಯೂ ಇದೀಗ ಸರ್ಕಾರ ಪತನಗೊಳಿಸಿದ್ದು ಯಾರು ಎಂಬುದಕ್ಕೆ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ಮಾತ್ರ ವಿಭಿನ್ನವಾಗಿದೆ. ಜತೆಗೆ ಮತದಾರರನ್ನೇ ದಡ್ಡರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು.

ಇಷ್ಟಕ್ಕೂ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ರಾಜಕೀಯ ನಾಯಕರೇ ಹೇಳುವಂತೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಾರ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಂತೆ. ಏಕೆಂದರೆ ಅವರ ಬೆಂಬಲಿಗ ಶಾಸಕರೇ ಮೊದಲಿಗೆ ರಾಜೀನಾಮೆ ನೀಡಿ ಸರ್ಕಾರವನ್ನು ಅಸ್ಥಿರಗೊಳಿಸಿದ್ದು ಎಂಬುದು ಅವರ ಆರೋಪವಾಗಿದೆ.

 ಎಚ್.ವಿಶ್ವನಾಥ್ ಪರೋಕ್ಷ ಕಾರಣ?

ಎಚ್.ವಿಶ್ವನಾಥ್ ಪರೋಕ್ಷ ಕಾರಣ?

ಸಿದ್ದರಾಮಯ್ಯ ಅವರು ದೇವೇಗೌಡರು ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ 17 ಶಾಸಕರು ರಾಜೀನಾಮೆ ನೀಡಿದ ಬಳಿಕ ಏನೆಲ್ಲ ನಡೆಯಿತು ಎಂಬುದನ್ನು ಜನ ನೋಡಿದ್ದಾರೆ. ಆದರೂ ಅಧಿಕಾರ ಹಿಡಿದ ಬಿಜೆಪಿ ನಾಯಕರು ಮಾತ್ರ ತಮಗೇನು ಗೊತ್ತಿಲ್ಲ. ಇದರಲ್ಲಿ ತಮ್ಮದೇನು ಪಾತ್ರವೇ ಇಲ್ಲ ಎಂಬಂತೆ ಮಾತನಾಡುತ್ತಿರುವುದು ಜನರಲ್ಲಿ ರಾಜಕೀಯದ ಬಗ್ಗೆ ವಾಕರಿಕೆ ಹುಟ್ಟುವಂತೆ ಮಾಡುತ್ತಿದೆ.

ಸರ್ಕಾರ ಪತನಕ್ಕೆ ಕಾರಣ ಯಾರು ಎಂಬುದನ್ನು ಬಿಜೆಪಿ ನಾಯಕರ ಬಾಯಲ್ಲಿ ಕೇಳಿದರೆ ನಗು ಬರದಿರದು. ಆರೋಗ್ಯ ಸಚಿವ ಶ್ರೀರಾಮುಲು ಪ್ರಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಕಾರಣವಂತೆ. ಅಂದರೆ ಸಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ವಿಶ್ವನಾಥ್ ಪಾತ್ರವಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದಂತೆಯೇ.

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ ಎಂದ ರೇವಣ್ಣ

 ಶ್ರೀನಿವಾಸ್ ಪ್ರಸಾದ್ ಪ್ರಕಾರ ಹೊಣೆ ಯಾರದ್ದು?

ಶ್ರೀನಿವಾಸ್ ಪ್ರಸಾದ್ ಪ್ರಕಾರ ಹೊಣೆ ಯಾರದ್ದು?

ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳುವ ಪ್ರಕಾರ ಸಿದ್ದರಾಮಯ್ಯನೇ ಅತೃಪ್ತ ಶಾಸಕನಾಗಿದ್ದು ಕಳೆದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಇಷ್ಟವಿರಲಿಲ್ಲ ಹಾಗಾಗೇ ಸರ್ಕಾರವನ್ನು ಕೆಡವಿದರಂತೆ. ಇನ್ನು ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಹೇಳುವಂತೆ ದೇವೇಗೌಡರ ಕುಟುಂಬ ರಾಜಕಾರಣದಿಂದ ಸಮ್ಮಿಶ್ರ ಸರ್ಕಾರ ಬಲಿಯಾಯಿತು. ಇದಕ್ಕೆ ಬಿಜೆಪಿಯಾಗಲೀ ಅಥವಾ ಅನರ್ಹ ಶಾಸಕರಲ್ಲ.

ಸದ್ಯಕ್ಕೆ ರಾಜಕಾರಣಿಗಳ ಮಾತುಗಳನ್ನು ಮತದಾರರು ಇತ್ತೀಚೆಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಚುನಾವಣೆ ಸಂದರ್ಭ ಅವರು ಏನೇ ಹೇಳಿದರೂ ತಾವೇನು ಮಾಡಬೇಕೋ ಅದನ್ನೇ ಮಾಡುತ್ತಾರೆ. ಮತದಾರರು ಪ್ರಬುದ್ಧರಾಗಿದ್ದಾರೆ. ಎಲ್ಲವನ್ನೂ ಅರಿಯುವ ಜ್ಞಾನ ಹೊಂದಿದ್ದಾರೆ ಎಂಬುದನ್ನು ಮರೆತವರಂತೆ ಮಾತನಾಡುವ ನಮ್ಮ ರಾಜಕಾರಣಿಗಳಿಗೆ ದೇಶ, ಜನ ಹಿತಕ್ಕಿಂತ ಅಧಿಕಾರದ ದಾಹವೇ ಮುಖ್ಯವಾಗಿದೆ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಎಲ್ಲದಕ್ಕೂ ಉಪಚುನಾವಣೆ ಉತ್ತರವಾಗಬಹುದೇನೋ ಕಾದು ನೋಡೋಣ...

English summary
If any party had a majority votes in the last assembly election, there would have been no by-election. Now the leaders of three parties getting ready for by-election. At this time, it is also important to notice who is responsible for the fall of coalition government, and who will be benefited by this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more