• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಶ್ನೆಗೆ ಉತ್ತರವೂ ಇಲ್ಲ, ಸಲಹೆಗೆ ಮನ್ನಣೆಯೂ ಇಲ್ಲ; ಮತ್ತೆ ಕಿಡಿಕಾರಿದ ಸಿದ್ದು

By ಮೈಸೂರು ಪ್ರತಿನಿಧಿ
|

ಮೈಸೂರು, ಜುಲೈ 30: ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ ಹಣಬಲದ ಮೂಲಕ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಿಂದ ಜನ ಹಿತ ನಿರೀಕ್ಷಿಸಲು ಸಾಧ್ಯವಿಲ್ಲ, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವಲ್ಲಿ, ಕೊರೊನಾ ಸಮಸ್ಯೆ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಬಿಜೆಪಿ ಅವರು ಜನರ ಆಶೀರ್ವಾದದಿಂದ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಜೆಡಿಎಸ್ ಶಾಸಕರನ್ನು ಹಣ ಕೊಟ್ಟು ಖರೀದಿಸಿ, ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ. ಅಕ್ರಮ ಹಣದಿಂದ ಅಧಿಕಾರಕ್ಕೆ ಬಂದಿದ್ದಾರೆ" ಎಂದು ಕಿಡಿಕಾರಿದರು.

500 ಕೋಟಿ ಅಕ್ರಮದ ಆರೋಪಕ್ಕೆ ಸಚಿವರ ಉತ್ತರ ಏನು?

"ಸರ್ಕಾರ ಹೊಸ ಕಾರ್ಯಕ್ರಮ ಯಾವುದು ಮಾಡಿದೆ?"

ರಾಜ್ಯ ಸರ್ಕಾರ ಹೊಸದಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ನಮ್ಮ ಕಾರ್ಯಕ್ರಮಗಳನ್ನೇ ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರ ಅನುದಾನ ಕಡಿತಗೊಳಿಸಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಒಂದು ಯೋಜನೆಗಳನ್ನು ಪೂರೈಸಿಲ್ಲ. ರಾಜ್ಯ ಸರ್ಕಾರದ ಸಾಧನೆ ಏನು? ಅಧಿಕಾರಕ್ಕೆ ಬಂದ ಮೂರು ತಿಂಗಳು ಯಡಿಯೂರಪ್ಪ ಅವರೇ ಒಬ್ಬರೇ ಇದ್ದರೂ, ಸಚಿವರೇ ಇರಲಿಲ್ಲ. ಸಚಿವರೇ ಇಲ್ಲದಿದ್ದರೆ ಸರ್ಕಾರ ಎಲ್ಲಿ ನಡೆಯುತ್ತದೆ. ಬಳಿಕ ಮಂತ್ರಿ ಮಂಡಲ ರಚನೆ ಕಸರತ್ತು ನಡೆಯಿತು. ನಂತರ ಕೊರೊನಾ ಎದುರಾಯಿತು. ಹೀಗಿರುವಾಗ ಸರ್ಕಾರ ಎಲ್ಲಿದೆ? ಇದು ಬಿಜೆಪಿ ಅವರ ಸಾಧನೆಯನ್ನು ಟೀಕಿಸಿದರು.

ಬಿಜೆಪಿ ಸರ್ಕಾರದ ಸಾಧನೆಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

"ರಾಜ್ಯಕ್ಕೆ ಮೂರು ಗಂಡಾಂತರ ಎದುರಾಗಿದೆ"

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಮೂರು ಗಂಡಾಂತರಗಳು ಎದುರಾಗಿದೆ. ಪ್ರವಾಹ, ಬರಗಾಲ ಹಾಗೂ ಕೊರೊನಾ ಬಂದಿವೆ. ಹೀಗಾಗಿ ಒಂದು ವರ್ಷದಿಂದ ಸರ್ಕಾರವೇ ಇಲ್ಲದಂತಾಗಿದೆ. 2019ರಲ್ಲಿ ಎದುರಾದ ಪ್ರವಾಹದಿಂದ ಸಾವಿರಾರು ಕೋಟ್ಯಾಂತರ ರೂ. ನಷ್ಟವಾಯಿತು. ಕೇಂದ್ರ ಸರ್ಕಾರ ಈ ನಷ್ಟಕ್ಕೆ ಸರಿಯಾದ ಪರಿಹಾರವನ್ನು ನೀಡಲಿಲ್ಲ. ಪ್ರವಾಹದಿಂದ ಸಂತ್ರಸ್ತರಿಗೆ ಸರಿಯಾಗಿ ಮನೆ ಕಟ್ಟಿಕೊಡಲಿಲ್ಲ, ಸರಿಯಾದ ಪರಿಹಾರವನ್ನು ನೀಡಲಿಲ್ಲ. ಹೀಗಾಗಿ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಸಿದ್ದರಾಮಯ್ಯ ಆರೋಪ: ಸಿಎಂ ಯಡಿಯೂರಪ್ಪ ಗಲಿಬಿಲಿ ಯಾಕೆ?

"ಉತ್ತರ ಇಲ್ಲ, ನಮ್ಮ ಸಲಹೆಗೆ ಮನ್ನಣೆಯೂ ಇಲ್ಲ"

ನಂತರ ಎದುರಾಗಿರುವ ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರ ಲಾಕ್‍ ಡೌನ್ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂ. ಹಣ ಖರ್ಚು ಮಾಡಿದ್ದರೂ, ಕೊರೊನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಖರ್ಚು ಮಾಡಿರುವ ಬಗ್ಗೆ ಲೆಕ್ಕ ಕೇಳಿದರೆ ಅದಕ್ಕೂ ಉತ್ತರ ನೀಡುತ್ತಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಎಲ್ಲಾ ಸಹಕಾರ ನೀಡಿದರೂ, ನಮ್ಮ ಸಲಹೆಗಳಿಗೆ ಯಾವುದೇ ಮನ್ನಣೆ ನೀಡಲಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಆರೋಪ: ಸಿಎಂ ಯಡಿಯೂರಪ್ಪ ಗಲಿಬಿಲಿ ಯಾಕೆ?

"ದಾಖಲೆಸಹಿತ ಆರೋಪ ಮಾಡಿದ್ದೇವೆ"

ಈ ನಡುವೆ ಕೊರೊನಾ ಚಿಕಿತ್ಸೆಗಾಗಿ ಖರ್ಚು ಮಾಡಿರುವ ಹಣದಲ್ಲಿ ಅವ್ಯವಹಾರ ನಡೆದಿರುವ ವಿಷಯ ತಿಳಿದ ಬಳಿಕ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೇವೆ. ಕೋಟ್ಯಂತರ ರೂ. ಖರ್ಚು ಮಾಡಿದ್ದರೂ, ಕೊರೊನಾ ಸೋಂಕಿತರಿಗೆ ಬೆಡ್‍, ವೆಂಟಿಲೇಟರ್‍ ಸೇರಿದಂತೆ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಇದೇ ವಿಷಯವಾಗಿ ನಾನು ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಹಿತವಾಗಿ ಆರೋಪ ಮಾಡಿದ್ದೇವೆ. ಈಗಲೂ ಖಾಸಗೀ ಆಸ್ಪತ್ರೆಗಳಲ್ಲಿ ಜನರ ಸುಲಿಗೆ ನಡೆಯುತ್ತಿದೆ. ಆದರೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

"ಈ ಸರ್ಕಾರ ಬಡವರ ಪರ ಇಲ್ಲ"

ಕೊರೊನಾ ಸಂಕಷ್ಟದ ನಡುವೆಯೇ ರೈತ ವಿರೋಧ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಆ ಮೂಲಕ ರಿಯಲ್‍ ಎಸ್ಟೇಟ್ ಏಜೆಂಟರು, ಹೌಸಿಂಗ್ ಸೊಸೈಟಿಗಳ ಲಾಬಿಗೆ ಮಣಿದಿದೆ. ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ. ಇದರಿಂದ ಉಳ್ಳವರೇ ಭೂಮಿಯ ಒಡೆಯ ಎಂಬಂತಾಗಿದೆ. ಇದನ್ನೆಲ್ಲಾ ಗಮನಿಸಿದರೆ ಈ ಸರ್ಕಾರ ಬಡವರು, ಕಾರ್ಮಿಕರು, ಕೃಷಿಕರ ಪರವಾಗಿಲ್ಲ. ಬದಲಿಗೆ ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳ ಪರವಾಗಿರುವ ಸರ್ಕಾರ ಎಂಬುದು ತಿಳಿಯುತ್ತಿದೆ. ಕೆಟ್ಟ ಉದ್ದೇಶದಿಂದ ಈ ಕಾಯ್ದೆ ಮಾಡಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆಯೂ ನ್ಯಾಯಾಲಯಕ್ಕೆ ಹೋಗುವ ಚಿಂತನೆ ಇದೆ ಎಂದರು.

English summary
We cant expect people welfare by bjp government which has come to power buying legislators with money alleges Former cm Siddaramaiah in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X