ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೆಗಳ ಹಾವಳಿಗೆ ತಡೆಯಿಲ್ಲ : ನಾಗರಹೊಳೆ ಕಾಡಂಚಿನಲ್ಲಿ ಬೆಳೆ ರಕ್ಷಣೆಗಾಗಿ ರೈತರ ಸರ್ಕಸ್!

|
Google Oneindia Kannada News

ಮೈಸೂರು, ಜೂನ್ 24 : ನಾಗರಹೊಳೆ ಅರಣ್ಯ ಪ್ರದೇಶದ ಕಾಡಂಚಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುವ ರೈತರ ಪಾಡು ಹೇಳತೀರದಂತಾಗಿದೆ. ಇವರಿಗೆ ಕೃಷಿಯೇ ಜೀವಾಳವಾಗಿದ್ದು, ತಮ್ಮ ಜಮೀನಿನಲ್ಲಿ ಹಲವು ಬೆಳೆಗಳನ್ನು ಬೆಳೆದರೂ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳಿಂದ ಅವುಗಳನ್ನು ರಕ್ಷಿಸಿ ಫಸಲು ಪಡೆಯುವುದು ಸವಾಲ್ ಆಗಿ ಪರಿಣಮಿಸಿದೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ

ಪಿರಿಯಾಪಟ್ಟಣ ತಾಲೂಕಿನ ಅಳಲೂರು ಗ್ರಾಮದ ಸಮೀಪವಿರುವ ಭೀಮನಕಟ್ಟೆ ಕಾಡಂಚಿನ ಗ್ರಾಮವಾಗಿದ್ದು, ಇಲ್ಲಿಗೆ ನಾಗರಹೊಳೆ ಅರಣ್ಯ ಪ್ರದೇಶದಿಂದ ಕಾಡಾನೆಗಳು ಬರುತ್ತಿದ್ದು, ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನೆಲ್ಲ ತಿಂದು ತುಳಿದು ಹಾಳು ಮಾಡಿ ಹೋಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಸ್ಥಿತಿ ಇಲ್ಲಿ ಕೃಷಿ ಮಾಡುವ ರೈತರದ್ದಾಗಿದೆ.

ಆದರೆ ಕೃಷಿ ಹೊರತುಪಡಿಸಿ ಜೀವನ ನಡೆಸಲು ಯಾವುದೇ ರೀತಿಯ ಅವಕಾಶಗಳು ಇಲ್ಲದ ಕಾರಣ ಮತ್ತು ತಲೆತಲಾಂತರದಿಂದ ಕೃಷಿಯನ್ನೇ ಮಾಡುತ್ತಾ ಬಂದಿರುವ ಹಿನ್ನಲೆಯಲ್ಲಿ ಕಷ್ಟವೋ ಸುಖವೋ ರೈತರು ಮಾತ್ರ ಕೃಷಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.

Villagers near Nagarahole struggling to save crops from elephants

ಮರದಲ್ಲಿ ಅಟ್ಟಣಿಗೆ ನಿರ್ಮಿಸಿ ಕಾವಲು

ತಾವು ಮಾಡಿದ ಕೃಷಿಯನ್ನು ಕಾಯುವ ಸಲುವಾಗಿ ರೈತರು ಜಮೀನಿನ ಮರದ ಮೇಲೆ ಅಟ್ಟಣಿಗೆ ಹಾಕಿ ಕಾವಲು ಕಾಯುತ್ತಿದ್ದಾರೆ. ಆದರೂ ಹಿಂಡಾಗಿ ಬರುವ ಕಾಡಾನೆಗಳು ಮಾತ್ರ ಬೆಳೆ ನಾಶಗೊಳಿಸುವುದನ್ನು ನಿಲ್ಲಿಸಿಲ್ಲ.

ಹಾಗೆನೋಡಿದರೆ ಈ ಗ್ರಾಮದ ರೈತರ ಸಮಸ್ಯೆ ಇವತ್ತು ನಿನ್ನೆಯದಲ್ಲ. ಹತ್ತಾರು ವರ್ಷಗಳಿಂದ ಇದು ಪುನರಾವರ್ತನೆ ಆಗುತ್ತಲೇ ಬರುತ್ತಿದೆ. ಹಲವು ಬಾರಿ ರೈತರು ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆ ಕೊಯ್ಲು ಮಾಡಲು ಸಿಗದೆ ಬರೀ ಕೈನಲ್ಲಿ ರೈತರು ಕಣ್ಣೀರು ಹಾಕಿದ ಘಟನೆಗಳು ನಡೆದಿದೆ. ಅರಣ್ಯ ಇಲಾಖೆಯನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ರೈತರು ತಮ್ಮದೇ ತಂತ್ರಗಳನ್ನು ಅಳವಡಿಸಿಕೊಂಡು ಕಾಡಾನೆ ಮತ್ತು ವನ್ಯಪ್ರಾಣಿಗಳು ಜಮೀನಿಗೆ ಬರದಂತೆ ತಡೆಯುವ ಕೆಲಸವನ್ನು ಕೂಡ ಮಾಡಿದ್ದಾರೆ. ಆದರೆ ಯಾವುದೂ ಕೂಡ ಫಲಕೊಡದ ಕಾರಣ ಫಸಲು ನಾಶವಾಗುವಂತಾಗಿದೆ.

ಅಳಲೂರು ಗ್ರಾಮದ ಜನರಿಗೆ ಕೃಷಿಯೇ ಬದುಕು

ಭೀಮನಕಟ್ಟೆ ಬಳಿಯ ಅಳಲೂರು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿವೆ. ಇಲ್ಲಿನ ಹೆಚ್ಚಿನ ಕುಟುಂಬ ಕೃಷಿಯನ್ನೇ ನಂಬಿವೆ. ಜತೆಗೆ ಜೀವನ ನಿರ್ವಹಣೆಗಾಗಿ ಜಮೀನಿನಲ್ಲಿ ರಾಗಿ, ಭತ್ತ, ಬಾಳೆ, ಅಡಿಕೆ, ತೆಂಗು, ಮುಸುಕಿನ ಜೋಳ, ಹತ್ತಿ, ತಂಬಾಕು ಬೆಳೆಯನ್ನು ಬೆಳೆಯುತ್ತಾರೆ. ಗ್ರಾಮದ ಅಂಚಿನಲ್ಲಿ ಅರಣ್ಯ ಕಂದಕವಿದ್ದರೂ ಅದು ಸುಸ್ಥಿತಿಯಲ್ಲಿ ಇಲ್ಲದ ಕಾರಣದಿಂದಾಗಿ ವನ್ಯಪ್ರಾಣಿಗಳು ಅಡೆತಡೆಯಿಲ್ಲದೆ ನೇರವಾಗಿ ಜಮೀನಿಗೆ ಬರುತ್ತಿವೆ.

ಇನ್ನು ಸೋಲಾರ್ ಬೇಲಿ ಇತ್ತಾದರೂ ಅದನ್ನು ಕಾಡಾನೆಗಳು ತುಳಿದು ನಾಶಮಾಡಿವೆ. ಹೀಗಾಗಿ ರೈತರು ಪ್ರಾಣಿಗಳು ಬರುವ ದಾರಿಯಲ್ಲಿ ಕೆಲವು ಕಡೆ ಮರದ ಮೇಲೆ ಗುಡಿಸಲು ನಿರ್ಮಿಸಿಕೊಂಡು ಶಬ್ದ ಬರುವಂತೆ ತಗಡು ಬಡಿಯುತ್ತಾ ಹೆದರಿಸಿ ಓಡಿಸುತ್ತಾರೆ. ಆದರೂ ಕೆಲವೊಮ್ಮೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಪ್ರಾಣಿಗಳು ಜಮೀನಿಗೆ ನುಗ್ಗಿ ನಾಶ ಮಾಡುತ್ತಿವೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಪಂದಿಸಲ್ಲ

ಇನ್ನು ಕಾಡಾನೆಗಳು ಜಮೀನಿಗೆ ನುಗ್ಗಿ ದಾಳಿ ಮಾಡುವ ವೇಳೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಸ್ಪಂದಿಸಲ್ಲ ಎಂಬ ದೂರುಗಳಿವೆ.

ಸದ್ಯಕ್ಕೆ ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬರುವುದನ್ನು ತಡೆಯಲು ಸಾಧ್ಯವಿಲ್ಲದಾಗಿದೆ. ಕಾರಣ ರೈಲ್ವೆ ಕಂಬಿ ಗೇಟ್ ಮತ್ತು ಕಂದಕ, ಆನೆ ತಡೆಗೋಡೆ ಮೊದಲಾದವುಗಳ ಕಾಮಗಾರಿಯನ್ನು ಮಾಡಲು ಹೆಚ್ಚಿನ ಹಣ ಬೇಕಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಕಷ್ಟವಾಗುತ್ತಿದೆ.

ಫಸಲು ನಾಶವಾದರೆ ದೂರು ನೀಡುವುದು ಯಾರಿಗೆ?

ಇನ್ನು ಜಮೀನಿನಲ್ಲಿ ಕಾಡಾನೆಗಳು ದಾಳಿ ಮಾಡಿ ಫಸಲು ನಷ್ಟವಾದರೆ ರೈತರು ಯಾರಿಗೆ ದೂರು ಕೊಡಬೇಕೆಂಬ ಗೊಂದಲವೂ ಎದುರಾಗಿದೆ. ಒಬ್ಬರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ವನ್ಯಜೀವಿ ವಿಭಾಗಕ್ಕೆ ಸೇರಿದ್ದು ಎಂದೆ ಮತ್ತೊಬ್ಬರು ಅರಣ್ಯ ಇಲಾಖೆಗೆ ಸೇರಿದ್ದು ಎನ್ನುತ್ತಾರೆ.

ಅರಣ್ಯಾಧಿಕಾರಿಗಳು ಹೇಳುವಂತೆ ಅಳಲೂರು ಸುತ್ತಮುತ್ತಲ ಗ್ರಾಮಗಳಲ್ಲಿ ರೈತರ ಹೊಲದಲ್ಲಿನ ಬೆಳೆ ನಷ್ಟವಾದರೆ ಸ್ಥಳ ಪರಿಶೀಲಿಸಿ ವರದಿ ನೀಡುವುದು ಅರಣ್ಯ ಇಲಾಖೆಯದ್ದಾದರೆ, ಸೂಕ್ತ ಪರಿಹಾರದ ಹಣ ನೀಡುವ ಜವಾಬ್ದಾರಿ ವನ್ಯಜೀವಿ ಅರಣ್ಯ ವಿಭಾಗಕ್ಕೆ ಸೇರಿದ್ದಾಗಿದೆಯಂತೆ.

ಇನ್ನಾದರೂ ಶಾಶ್ವತ ಕ್ರಮ ಕೈಗೊಳ್ಳಿ!

ಅದು ಏನೇ ಇರಲಿ ಅರಣ್ಯದಿಂದ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ ಬಳಿಕ ಪರಿಹಾರ ನೀಡುವ ಬದಲು ಅರಣ್ಯದಿಂದ ವನ್ಯ ಪ್ರಾಣಿಗಳು ನಾಡಿಗೆ ಬಾರದಂತೆ ಅಗತ್ಯ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ. ಅದನ್ನು ನಮ್ಮ ಜನಪ್ರತಿನಿಧಿಗಳು ಮಾಡಬೇಕಾಗಿದೆ.

English summary
Villagers near Nagarahole forest are struggling to save crops from rampaging elephants. Even Karnataka forest department is not helping the farmers who are fighting for themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X