ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಜೆಎಸ್ಎಸ್ ರೇಡಿಯೋ 91.2" ಸಮುದಾಯ ರೇಡಿಯೋ ಕೇಂದ್ರಕ್ಕೆ ಚಾಲನೆ

|
Google Oneindia Kannada News

ಮೈಸೂರು, ಆಗಸ್ಟ್ 29: ಸಮುದಾಯ ರೇಡಿಯೋ ಕೇಂದ್ರಗಳು ಬಡವರು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳ ನಡುವೆ "ಸಂಪರ್ಕ ಸೇತುವೆ" ಯಾಗಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಹೇಳಿದ್ದಾರೆ.

ಅವರು ಮೈಸೂರಿನಲ್ಲಿಂದು ಸುತ್ತೂರು ಮಠದ "ಜೆಎಸ್ಎಸ್ ರೇಡಿಯೋ 91.2" ಸಮುದಾಯ ರೇಡಿಯೋ ಕೇಂದ್ರ ಹಾಗೂ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 106ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಆರಂಭಿಸಿದಾಗ, ಸಮುದಾಯ ರೇಡಿಯೋ ಕೇಂದ್ರಗಳು ಬಡ ಜನರಿಗೆ ಇಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸಿದವು. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನ ಸಾರಥಿ ಝಲಕ್, ಅಸ್ಸಾಂನ ಬ್ರಹ್ಮಪುತ್ರ ರೇಡಿಯೋ ಕೇಂದ್ರಗಳು ಕೋವಿಡ್ -19 ಶಿಷ್ಟಾಚಾರದ ಬಗ್ಗೆ ಜಾಗೃತಿ, ಮನೆಯ ಪ್ರತ್ಯೇಕ ವಾಸದ ಸಮಯದಲ್ಲಿ ಒತ್ತಡ ನಿರ್ವಹಣೆ ಮತ್ತು ತಮ್ಮ ಕುಟುಂಬಗಳಿಂದ ದೂರವಿರುವ ವಲಸೆ ಕಾರ್ಮಿಕರಿಗೆ ಸಮಾಲೋಚನೆ ಕಾರ್ಯಕ್ರಮದ ಕುರಿತು ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು ಎಂದು ಸಚಿವರು ಹೇಳಿದರು.

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ

ಎರಡು ದಿನಗಳ ಹಿಂದಷ್ಟೇ, ಭಾರತವು ಒಂದೇ ದಿನದಲ್ಲಿ ಒಂದು ಕೋಟಿ ಜನರಿಗೆ ಲಸಿಕೆ ಹಾಕಿದೆ. ಪ್ರಪಂಚದಾದ್ಯಂತ, ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಮುದಾಯ ರೇಡಿಯೋ ಕೇಂದ್ರಗಳು ಈ ಬಗ್ಗೆ ಬಡ ಜನರಲ್ಲಿ ಜಾಗೃತಿ ಮೂಡಿಸಿವೆ, ಅವರಲ್ಲಿ ಲಸಿಕೆಯನ್ನು ಪಡೆಯುವ ಬಗ್ಗೆ ಆತ್ಮವಿಶ್ವಾಸವನ್ನು ತುಂಬಿವೆ ಎಂದು ಹೇಳಿದರು.

ದೇಶಾದ್ಯಂತ ಸುಮಾರು 329 ಸಮುದಾಯ ರೇಡಿಯೋ ಕೇಂದ್ರಗಳು ಪ್ರಸಾರವಾಗುತ್ತಿದ್ದು, ಅವುಗಳಲ್ಲಿ ಕರ್ನಾಟಕದಲ್ಲಿಯೇ 22 ಕೇಂದ್ರಗಳಿವೆ. "ಜೆಎಸ್ಎಸ್ ರೇಡಿಯೋ" ಮೈಸೂರಿನಿಂದ ಪ್ರಸಾರವಾಗುತ್ತಿರುವ ಮೂರನೇ ಸಮುದಾಯ ರೇಡಿಯೋ ಕೇಂದ್ರವಾಗಿದೆ ಎಂದು ಸಚಿವರು ತಿಳಿಸಿದರು.

"ಜನರಿಂದ, ಜನರಿಗಾಗಿ, ಜನರಿಗೋಸ್ಕರ"

ಸಮುದಾಯ ರೇಡಿಯೋ ಕೇಂದ್ರಗಳು "ಜನರಿಂದ, ಜನರಿಗಾಗಿ, ಜನರಿಗೋಸ್ಕರ" ಎಂಬ ತತ್ವಕ್ಕೆ ಸಂಪೂರ್ಣವಾಗಿ ಬದ್ಧವಾಗಿವೆ. ಜನರ ಮನಸ್ಸು ಮತ್ತು ಹೃದಯದೊಂದಿಗೆ ಬಲವಾದ ಬೆಸುಗೆಯು ಸಮುದಾಯ ರೇಡಿಯೋ ಕೇಂದ್ರದ ಪ್ರಮುಖ ಶಕ್ತಿಯಾಗಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ನೀರು ಮತ್ತು ನೈರ್ಮಲ್ಯ ಮತ್ತು ವಿಪತ್ತು-ಸಂಬಂಧಿತ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ಸಮುದಾಯ ರೇಡಿಯೋ ನೆರವಾಗುತ್ತದೆ ಎಂದು ಅವರು ಹೇಳಿದರು.

ಬಾನುಲಿ ತರಂಗಗಳು ಸಾರ್ವಜನಿಕ ಆಸ್ತಿ

ಬಾನುಲಿ ತರಂಗಗಳು ಸಾರ್ವಜನಿಕ ಆಸ್ತಿ

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಎಂಟು ವರ್ಷಗಳ ನಂತರ, "ಬಾನುಲಿ ತರಂಗಗಳನ್ನು ಸಾರ್ವಜನಿಕ ಆಸ್ತಿ ಎಂದು ಘೋಷಿಸಲಾಗಿದೆ" ಎಂದು ಸಚಿವರು ಹೇಳಿದರು. 2003 ರಲ್ಲಿ, ಅಂದಿನ ಎನ್ ಡಿ ಎ ಸರ್ಕಾರವು ಸಮುದಾಯ ರೇಡಿಯೋ ಮಾರ್ಗಸೂಚಿಗಳನ್ನು ಪ್ರಕಟಿಸಿತು. ಅಂದಿನಿಂದ ಸಮುದಾಯ ರೇಡಿಯೋ ಕೇಂದ್ರಗಳು ಸ್ಥಳೀಯ ಸಮಸ್ಯೆಗಳನ್ನು ಬಿಂಬಿಸಲು ತಮ್ಮ ಸಾಮರ್ಥ್ಯವನ್ನು ವ್ಯಾಪಕವಾಗಿ ಬಳಸುತ್ತಿವೆ. ಈ ರೇಡಿಯೋ ಕೇಂದ್ರಗಳು ಸ್ಥಳೀಯ ಜನರಿಂದಲೇ ನಡೆಯುವುದರಿಂದ, ಇವು ಸಮಾಜದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಗೆ ಉತ್ತಮ ವೇದಿಕೆಯಾಗಿವೆ ಎಂದು ಸಚಿವರು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸಮುದಾಯ ರೇಡಿಯೋ ಕೇಂದ್ರಗಳನ್ನು ಆರಂಭಿಸಲು ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಬದ್ಧವಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ BECIL ತನ್ನ ಸಲಹಾ ಪರಿಣತಿಯ ಮೂಲಕ ಸಮುದಾಯ ರೇಡಿಯೋ ಕೇಂದ್ರವನ್ನು ಸ್ಥಾಪಿಸಲು ಸಂಪೂರ್ಣವಾಗಿ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

ರೇಡಿಯೋಕ್ಕೆ 70 ಲಕ್ಷ ರೂಪಾಯಿಗಳನ್ನು ಖರ್ಚು

ರೇಡಿಯೋಕ್ಕೆ 70 ಲಕ್ಷ ರೂಪಾಯಿಗಳನ್ನು ಖರ್ಚು

ಜೆಎಸ್‌ಎಸ್ ಮಹಾವಿದ್ಯಾಪೀಠದ ಪರಂಪರೆ ಮತ್ತು ಉದ್ದೇಶಗಳಿಗೆ ಅನುಗುಣವಾಗಿ, ಮಹಾವಿದ್ಯಾಪೀಠವು ತಳಮಟ್ಟದ ಜನರನ್ನು ತಲುಪುವ ಹಾಗೂ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವ ಏಕೈಕ ಕಾಳಜಿಯೊಂದಿಗೆ "ಜೆಎಸ್‌ಎಸ್ ರೇಡಿಯೋ" ಸ್ಥಾಪನೆಗೆ ಸುಮಾರು 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ತಿಳಿದು ತುಂಬಾ ಸಂತೋಷವಾಗಿದೆ. ಈ ಸಮುದಾಯ ರೇಡಿಯೋ ಕೇಂದ್ರದೊಂದಿಗೆ, ಜೆಎಸ್‌ಎಸ್ ಮಹಾವಿದ್ಯಾಪೀಠವು ತನ್ನ ಸಮಾಜ ಸೇವೆಯನ್ನು ಮುಂದುವರಿಸಲಿ ಮತ್ತು ಸ್ಥಳೀಯ ಜನರ ಅಗತ್ಯಗಳನ್ನು ಈಡೇರಿಸಲಿ ಎಂದು ಆಶಿಸುವುದಾಗಿ ಸಚಿವರು ಹೇಳಿದರು.

ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಆಧ್ಯಾತ್ಮ ಮತ್ತು ಪ್ರಗತಿಪರ ಚಿಂತನೆಯ ಸಮ್ಮಿಲನವಾಗಿದ್ದವರು. ಭಾರತ ಮತ್ತು ವಿದೇಶಗಳಲ್ಲಿ ಸಮಾಜ ಮತ್ತು ಚಿಂತನೆಯ ನಾಯಕತ್ವದ ಮೇಲೆ ಅಸಾಧಾರಣ ಪ್ರಭಾವ ಬೀರಿದವರು ಎಂದು ಅವರು ಹೇಳಿದರು.

ಅತ್ಯುತ್ತಮ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ

ಅತ್ಯುತ್ತಮ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ

ಶ್ರೀ ಸುತ್ತೂರು ಮಠವು ದಕ್ಷಿಣ ಭಾರತದ ಅತ್ಯುತ್ತಮ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಒಂದು ಸಾವಿರ ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಶ್ರೀ ಸುತ್ತೂರು ಮಠವು ದೇಶ-ವಿದೇಶಗಳ ಲಕ್ಷಾಂತರ ಜನರಿಗೆ ಸಾಮಾಜಿಕ-ಆಧ್ಯಾತ್ಮಿಕ-ಆರೋಗ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಜೆಎಸ್ಎಸ್ ಮಹಾವಿದ್ಯಾಪೀಠದ ಸಾಧನೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ. ಈ ಬೃಹತ್ ಸಾಧನೆಗಳ ಹಿಂದೆ, ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ದಣಿವರಿಯದ ಶ್ರಮವನ್ನು ನಾವು ನೋಡುತ್ತೇವೆ, ಅಂತಹ ಮಹಾನ್ ದೈವಾಂಶ ಸಂಭೂತರಿಂದ ಮಾತ್ರ ಇಂತಹ ಕೆಲಸಗಳು ಸಾಧ್ಯ ಎಂದು ಸಚಿವರು ಹೇಳಿದರು.

 1954 ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ

1954 ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ

ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ, 1954 ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ಇವುಗಳಿಗೆ ಚಾಲನೆ ನೀಡಿದರು. ಇಂದು ಸಂಸ್ಥೆಯು ಶಾಲಾ ಪೂರ್ವದಿಂದ ವಿಶ್ವವಿದ್ಯಾಲಯದವರೆಗೆ ಎಲ್ಲ ಕ್ಷೇತ್ರಗಳ 337 ಕ್ಕೂ ಹೆಚ್ಚು ಸಂಸ್ಥೆಗಳಿಗೆ ವಿಸ್ತರಿತವಾಗಿದೆ. ಮಹಾವಿದ್ಯಾಪೀಠದ ಅಡಿಯಲ್ಲಿ ಈಗ 1.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾವಿರಾರು ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ವಿದ್ವಾಂಸರು ಹಾಗೂ ಅವರ ಪೋಷಕರು ಮತ್ತು ಕುಟುಂಬಗಳು ಆಶ್ರಯ ಪಡೆದಿವೆ. ಸುತ್ತೂರಿನಲ್ಲಿಯೇ, ರಾಜ್ಯ ಮತ್ತು ದೇಶದ ಸುಮಾರು 4,000 ವಿಶೇಷ ಚೇತನ ಮಕ್ಕಳು ಉಚಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪಡೆಯುತ್ತಿರುವುದು ಅದರ ಸೇವಾ ಕೈಂಕರ್ಯಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಆಗಸ್ಟ್ 29 ರಂದು ಮಹಾಸ್ವಾಮೀಜಿಯವರ ಜಯಂತಿ

ಆಗಸ್ಟ್ 29 ರಂದು ಮಹಾಸ್ವಾಮೀಜಿಯವರ ಜಯಂತಿ

ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುವ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ಜಯಂತಿಯಂದು ಮಹಾವಿದ್ಯಾಪೀಠವು ಹಮ್ಮಿಕೊಳ್ಳುವ ವೈವಿಧ್ಯಮಯ ಕಾರ್ಯಕ್ರಮಗಳು ಸ್ವಾಮೀಜಿಯವರಿಗೆ ಆರೋಗ್ಯ, ಶಿಕ್ಷಣ, ಕೃಷಿ, ಕಲೆ, ಸಂಗೀತ ಅಥವಾ ಸಾಹಿತ್ಯದಂತಹ ಕ್ಷೇತ್ರಗಳಲ್ಲಿ ಇದ್ದ ಆಸಕ್ತಿಗಳನ್ನು ಸಂಕೇತಿಸುತ್ತವೆ. ಈ ವರ್ಷ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಂಜೂರು ಮಾಡಿರುವ "ಜೆಎಸ್‌ಎಸ್ ರೇಡಿಯೋ"- ಸಮುದಾಯ ರೇಡಿಯೋ ಕೇಂದ್ರವನ್ನು ಆರಂಭಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಎಸ್ ಎ ರಾಮದಾಸ್, ನಾಗೇಂದ್ರ, ಮೇಯರ್ ಶ್ರೀಮತಿ ಸುನಂದಾ ಫಾಲನೇತ್ರ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಡಾ. ಹೇಮಂತಕುಮಾರ್ ಮತ್ತಿತರರು ಪಾಲ್ಗೊಂಡರು.

English summary
Union Minister of State for Information and Broadcasting Dr. L Murugan inaugurated JSS Institute Community Radio 91.2 in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X