ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರೆಯ ಸಂಭ್ರಮ ಕಳೆಗಟ್ಟುತ್ತಿದೆ. ಅರಮನೆ ನಗರಿಯಲ್ಲಿ ಈಗಾಗಲೇ ನಾಡಹಬ್ಬದ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸೋಮವಾರ ಫಿರಂಗಿ ಗಾಡಿಗಳಿಗೆ ಪೂಜೆ ಜೊತೆಗೆ ಗಜಪಡೆಗೆ ಮರಳಿನ ಮೂಟೆ ತಾಲೀಮು ನೀಡಲಾಯಿತು.

ಅರಮನೆಯ ಆನೆ ಬಾಗಿಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಬೂಸವಾರಿ ಆನೆಗಳಿಗೆ ಮತ್ತು ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಪೂಜೆ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ಯಾವುದೇ ವಿಘ್ನಗಳು ಎದುರಾಗದೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ದಸರೆಯ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ದಿನದಂದು ಮೆರವಣಿಗೆ ಆರಂಭಕ್ಕೆ ಮುನ್ನ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಮೈಸೂರಿನ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಇದನ್ನು ನೆರವೇರಿಸಲಿದ್ದಾರೆ.

 ಗಜಪಡೆ ಹಾಗೂ ಅಶ್ವರೋಹಿ ಪಡೆಗಳಿಗೆ ಕುಶಾಲತೋಪು ತಾಲೀಮು

ಗಜಪಡೆ ಹಾಗೂ ಅಶ್ವರೋಹಿ ಪಡೆಗಳಿಗೆ ಕುಶಾಲತೋಪು ತಾಲೀಮು

ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಭಾರೀ ಪ್ರಮಾಣದ ಸದ್ದು ಹೊರಬರಲಿದ್ದು, ಈ ವೇಳೆ ದಸರಾ ಆನೆಗಳು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವ ಅಶ್ವರೋಹಿ ಪಡೆಯ ಕುದುರೆಗಳು ಗಾಬರಿಗೊಳ್ಳುತ್ತವೆ. ಹೀಗಾಗಿ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಯಾವುದೇ ಅಡೆತಡೆಯಾಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ದಸರೆ ಆರಂಭಕ್ಕೂ ಮುನ್ನವೇ ಗಜಪಡೆ ಹಾಗೂ ಅಶ್ವರೋಹಿ ಪಡೆಗಳಿಗೆ ಕುಶಾಲತೋಪು ಸಿಡಿಸಿ ತಾಲೀಮು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮೈಸೂರು‌ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಅರಣ್ಯಾಧಿಕಾರಿ‌ ಕರಿಕಾಳನ್ ಸೇರಿದಂತೆ ಇತರ ಅಧಿಕಾರಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.

 ಭಾರ ಹೊರುವ ತಾಲೀಮು

ಭಾರ ಹೊರುವ ತಾಲೀಮು

ದಸರೆ ಹಿನ್ನೆಲೆಯಲ್ಲಿ ಈಗಾಗಲೇ ನಗರಕ್ಕಾಗಮಿಸಿ ತಾಲೀಮು ಆರಂಭಿಸಿರುವ ಗಜಪಡೆ ಸಾರಥಿ ಅಭಿಮನ್ಯುಗೆ ಇಂದಿನಿಂದ ಭಾರ ಹೊರಿಸಿ ತಾಲೀಮು ನೀಡಲಾಯಿತು. ತಾಲೀಮು ಆರಂಭಕ್ಕೆ ಮುನ್ನ ಅರಮನೆಯಲ್ಲಿ ಆನೆಗಳ ಸಾಂಪ್ರದಾಯಿಕ ಪೂಜಾ ಸಲ್ಲಿಸಿದ ಬಳಿಕ 275 ಕೆ.ಜಿ ತೂಕದ ಮರಳಿನ ಮೂಟೆ ಹೊರಿಸಿ ತಾಲೀಮು ನೀಡಲಾಯಿತು.

 ಜಂಬೂಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತ

ಜಂಬೂಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತ

ಈ ವೇಳೆ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಆನೆಗಳು ತಾಲೀಮಿನಲ್ಲಿ ಹೆಜ್ಜೆ ಹಾಕಿದವು. ಅಭಿಮನ್ಯು ನಂತರದಲ್ಲಿ ಧನಂಜಯ, ಗೋಪಾಲಸ್ವಾಮಿ ಆನೆಗಳಿಗೂ ಸಹ ಮರಳಿನ ಮೂಟೆ ಹೊರಿಸಿ ತಾಲೀಮು ನೀಡಲಾಗುತ್ತದೆ. ಪ್ರತಿವರ್ಷವೂ ಅರಮನೆ ಆವರಣದಿಂದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನೀಡಲಾಗುತ್ತಿತ್ತು. ಆದರೆ ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುವ ಕಾರಣ, ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್, ಈ ಬಾರಿ ಮೂರು ಆನೆಗಳಿಗೆ ಭಾರ ಹೊರಿಸುವ ಕೆಲಸ ನಡೆಯಲಿದೆ. ಪ್ರತಿನಿತ್ಯ ಒಂದೊಂದು ಆನೆಗಳಿಗೆ ಭಾರ ಹೊರಿಸಲಾಗುತ್ತಿದ್ದು, ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ ಆನೆಗಳಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಸಲಾಗುವುದು. ಪ್ರತಿನಿತ್ಯ ೧.೫ ಕಿ.ಮೀ ದೂರದವರೆಗೆ ತಾಲೀಮು ನೀಡಲಾಗುವುದು ಎಂದು ಮಾಹಿತಿ ನೀಡಿದರು. ಗಜಪಡೆಗೆ ಮರಳಿನ ಮೂಟೆ ಹೊರಿಸಿ ತಾಲೀಮು ನೀಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
 ಅರಮನೆಯಲ್ಲಿ ಆನೆಯ ರಂಪಾಟ

ಅರಮನೆಯಲ್ಲಿ ಆನೆಯ ರಂಪಾಟ

ಮೈಸೂರು ಅರಮನೆ ಆವರಣದಲ್ಲಿ ಹೆಣ್ಣಾನೆಯೊಂದು ರಂಪಾಟ ನಡೆಸಿದ ಘಟನೆ ಸೋಮವಾರ ನಡೆದಿದೆ. ಅರಮನೆಗೆ ಸೇರಿದ ಜಮಿನಿ ಎಂಬ ಹೆಣ್ಣಾನೆಯೊಂದು ತನಗೆ ಹಾಕಿದ್ದ ಸರಪಳಿ ಕಳಚಿಕೊಂಡು ಅರಮನೆ ಆವರಣದಲ್ಲಿ ಅಡ್ಡಾಡಿತು. ಈ ವೇಳೆ ಜಮಿನಿ ಆನೆಯನ್ನು ನಿಯಂತ್ರಿಸಲು ಮಾವುತರು, ಕಾವಾಡಿಗರ ಹರಸಾಹಸಪಟ್ಟರು. ಇದರಿಂದಾಗಿ ಅರಮನೆ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ದಸರಾ ಗಜಪಡೆ ಸಾರಥಿ ಅಭಿಮನ್ಯು ಹಾಗೂ ಧನಂಜಯ ಆನೆಗಳ ನೆರವಿನೊಂದಿಗೆ ಜಮಿನಿ ಆನೆಯನ್ನು ನಿಯಂತ್ರಿಸುವಲ್ಲಿ ಮಾವುತರು ಯಶಸ್ವಿಯಾದರು.

English summary
Jamboo Savari Elephants was traditionally worshiped at the elephant door of the Mysuru Palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X