ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಷ್ಪರಾಣಿಯರ ಕಣ್ತುಂಬಿಕೊಳ್ಳಲು ಮೈಸೂರು ಅರಮನೆಗೆ ಪ್ರವಾಸಿಗರ ಲಗ್ಗೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 26; ಕ್ರಿಸ್‌ಮಸ್ ರಜೆಯ ಮಜಾ ಅನುಭವಿಸುವ ಸಲುವಾಗಿ ಪ್ರವಾಸಿಗರು ಅರಮನೆ ನಗರಿಗೆ ಲಗ್ಗೆಯಿಡುತ್ತಿದ್ದು, ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ಮುಂದಿನ ವಾರ ಹೊಸ ವರ್ಷವನ್ನು ಹೊರ ಊರುಗಳಿಗೆ ಹೋಗಿ ಆಚರಿಸಬೇಕೆಂದು ಹಲವರು ತೀರ್ಮಾನ ಮಾಡಿದ್ದದ್ದರು. ಆದರೆ ಹೊಸ ವರ್ಷಾಚರಣೆಗೆ ಕೊರೊನಾ ರೂಪಾಂತರಿ ಓಮಿಕ್ರಾನ್ ಹಿನ್ನಲೆಯಲ್ಲಿ ಸರ್ಕಾರ ನಿರ್ಬಂಧ ಹೇರಿರುವುದರಿಂದ ಬಹಳಷ್ಟು ಪ್ರವಾಸಿಗರು ವಾರದ ಮೊದಲೇ ತಮ್ಮ ನೆಚ್ಚಿನ ತಾಣಗಳಿಗೆ ತೆರಳಿ ಒಂದಷ್ಟು ಮಜಾ ಮಾಡುತ್ತಿದ್ದಾರೆ.

ಕಳೆದೆರಡು ವರ್ಷಗಳಿಂದ ಕೊರೊನಾ ಭಯದಲ್ಲಿ ಮನೆಯಿಂದ ಹೊರಗೆ ಹೋಗದೆ ಗೋಡೆಗಳ ನಡುವೆ ಬಂಧಿಯಾಗಿದ್ದವರು ಈಗ ರೆಕ್ಕೆ ಬಿಚ್ಚಿ ಹಾರುವ ಸಲುವಾಗಿ ಮೈಸೂರಿನತ್ತ ಮುಖ ಮಾಡಿದ್ದು, ಸಂಜೆಯಾಗುತ್ತಿದ್ದಂತೆಯೇ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಸುತ್ತಾಡುತ್ತಾ ತಮಗೆ ಬೇಕಾದನ್ನು ಕೊಂಡು, ಸವಿದು ಆಟಗಳನ್ನು ಆಡಿ ಹಿಂತಿರುಗುತ್ತಿದ್ದಾರೆ.

ಮತ್ತೊಂದೆಡೆ ಪ್ರವಾಸಿಗರನ್ನು ಅರಮನೆ ಮತ್ತು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಕೈಬೀಸಿ ಕರೆಯುತ್ತಿದೆ. ಕ್ರಿಸ್‌ಮಸ್ ದಿನವೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಜನ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು. ವಾರಾಂತ್ಯದ ರಜೆಯ ಮೂಡ್ ನಲ್ಲಿದ್ದವರು ಶನಿವಾರದ ಸಂಜೆಯೇ ಭೇಟಿ ನೀಡಿ ಮನತಣಿಸಿಕೊಂಡರು.

ಫಲಪುಷ್ಪ ಪ್ರದರ್ಶನದ ಎರಡೂ ಗೇಟ್ ಬಳಿ ಫಲಕವೊಂದರಲ್ಲಿ ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತ ಪಡಿಸಲು ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಲಾಗಿದ್ದು, ಅದಕ್ಕೆ ಮಿಸ್ಡ್ ಕಾಲ್ ನೀಡಿದರೆ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಪ್ರದರ್ಶನವಾಗಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಸೆಲ್ಪಿ ಪಾಯಿಂಟ್ ಇದ್ದು, ಅಂತರ ಕಾಪಾಡಿಕೊಂಡು ಕೋವಿಡ್ ನಿಯಮ ಪಾಲಿಸುವ ಮೂಲಕ ಪ್ರದರ್ಶನಕ್ಕೆ ತೆರಳಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ.

ಅರಮನೆ ಆವರಣದಲ್ಲಿ ಉತ್ಸವ

ಅರಮನೆ ಆವರಣದಲ್ಲಿ ಉತ್ಸವ

ವೀಕೆಂಡ್ ಹಿನ್ನಲೆಯಲ್ಲಿ ದೂರದ ಊರುಗಳಿಂದ ಬಂದು ನಗರದಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರು ಕೆಆರ್ ಎಸ್ ಬೃಂದಾವನ, ಚಾಮುಂಡಿಬೆಟ್ಟ, ಬಂಡೀಪುರ, ಕೊಡಗಿನತ್ತ ತೆರಳುತ್ತಿದ್ದಾರೆ. ಇತ್ತ ಅರಮನೆಯತ್ತವೂ ಪ್ರವಾಸಿಗರ ದಂಡು ಜಮಾಯಿಸುತ್ತಿದ್ದು, ಫಲಪುಷ್ಪ ಪ್ರದರ್ಶನದಲ್ಲಿ ಜನವೋ ಜನ ಕಂಡು ಬರುತ್ತಿದ್ದಾರೆ. ಪ್ರತಿವರ್ಷವೂ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಮಾಡಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ವರ್ಷ ನಡೆದಿರಲಿಲ್ಲ. ಈ ಬಾರಿ ಮಾಗಿ ಉತ್ಸವದ ಬದಲಿಗೆ ಬರೀ ಫಲಪುಷ್ಪ ಪ್ರದರ್ಶನವನ್ನು ಮಾತ್ರ ಏರ್ಪಡಿಸಲಾಗಿದೆ.

ಕಣ್ಮನ ತಣಿಸುವ ಪುಷ್ಪರಾಣಿಯರು

ಕಣ್ಮನ ತಣಿಸುವ ಪುಷ್ಪರಾಣಿಯರು

ಇದೀಗ ಫಲಪುಷ್ಪ ಪ್ರದರ್ಶನದಿಂದಾಗಿ ವಿಶ್ವವಿಖ್ಯಾತ ಅರಮನೆಗೆ ಹೊಸಕಳೆ ಬಂದಿದೆ. ಅರಮನೆ ಆವರಣಕ್ಕೆ ಭೇಟಿ ನೀಡಿದವರಿಗೆ ಎರಡು ಕಡೆಯಲ್ಲೂ ಗದೆಯ ಮಾದರಿಯ ಚಿತ್ತಾರಗಳ ದ್ವಾರ ಪುಷ್ಪ ಪ್ರೇಮಿಗಳನ್ನು ಫಲಪುಷ್ಪ ಪ್ರದರ್ಶನಕ್ಕೆ ಸ್ವಾಗತಿಸುತ್ತದೆ. ಸ್ವಾಗತ ದ್ವಾರದ ಮೂಲಕ ಹೆಜ್ಜೆ ಹಾಕುತ್ತಾ ಹೋದಂತೆ ಫಲಪುಷ್ಪ ಪ್ರದರ್ಶನದ ವಿಶೇಷತೆ ಮತ್ತು ಚೆಲುವು ಒಂದೊಂದಾಗಿ ತೆರೆದುಕೊಳ್ಳುತ್ತಾ ಕಣ್ಣಿಗೆ ರಸದೂಟವನ್ನು ನೀಡುತ್ತಾ ಹೋಗುತ್ತದೆ.

10 ಲಕ್ಷಕ್ಕೂ ಅಧಿಕ ಗುಲಾಬಿ

10 ಲಕ್ಷಕ್ಕೂ ಅಧಿಕ ಗುಲಾಬಿ

ಎಲ್ಲೆಂದರಲ್ಲಿ ಶೋಭಿಸುವ ಪುಷ್ಪರಾಣಿಯರನ್ನು ನೋಡುವುದೇ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ. ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳಂತಹ ಸುಮಾರು ಹದಿನೈದು 15 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ವಿಭಿನ್ನ ರೀತಿಯಲ್ಲಿ ಜೋಡಿಸಲಾಗಿದ್ದು, 32 ಜಾತಿಯ ಹೂವಿನ ಗಿಡಗಳನ್ನಿಡಲಾಗಿದೆ. ವಿವಿಧ ಬಣ್ಣಗಳಿಂದ ಕೂಡಿದ 10 ಲಕ್ಷಕ್ಕೂ ಹೆಚ್ಚು ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್‌ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋ ರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್‌ ಬಳಸಿ ಆನೆಗಳು, ಹೆಲಿಕಾಪ್ಟರ್ ಸೇರಿದಂತೆ ಹಲವು ರೀತಿಯ ಕಲಾಕೃತಿಗಳನ್ನು ರಚಿಸಲಾಗಿದೆ. ಇವುಗಳೆಲ್ಲವೂ ಕಣ್ಮನಸೆಳೆಯುತ್ತದೆ.

ಅರಮನೆ ಆವರಣದಲ್ಲಿ ಎದ್ದು ನಿಂತ ರಾಮಮಂದಿರ

ಅರಮನೆ ಆವರಣದಲ್ಲಿ ಎದ್ದು ನಿಂತ ರಾಮಮಂದಿರ

ಇನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಕೃತಿ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ. ಸುಮಾರು 70x32x13 ಅಡಿ ಅಳತೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರನ್ನು ಕೆಂಪು, ಹಳದಿ, ಬಿಳಿ ಪುಷ್ಪಗಳು ಸೇರಿದಂತೆ ಸುಮಾರು 4 ಲಕ್ಷ ಗುಲಾಬಿ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ. ರಾಮ, ಲಕ್ಷ್ಮಣ, ಸೀತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಷ್ಟೇ ಅಲ್ಲದೆ ಫಲಪುಷ್ಪ ಪ್ರದರ್ಶನ ಸ್ಥಳಗಳಲ್ಲಿ ಅಡ್ಡಾಡಿದರೆ ಚಾಮುಂಡೇಶ್ವರಿ, ನಂದಿ ಮತ್ತು ಮಹಿಷಾಸುರ, ಶ್ರೀ ಜಯಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿಯನ್ನು ಹೊತ್ತ ಇಬ್ಬರು ಸೇವಕರೊಂದಿಗೆ ಮಹಾರಾಣಿ, ಖೆಡ್ಡಾ ಆಪರೇಷನ್‌ನಲ್ಲಿ ಮೂರು ಆನೆ ಮತ್ತು ಒಬ್ಬ ಮಾವುತ ಹೀಗೆ ಹತ್ತಾರು ಸುಂದರ ಕಲಾಕೃತಿಗಳನ್ನು ನೋಡುಗರನ್ನು ಆಕರ್ಷಿಸುತ್ತದೆ.

ಕೋವಿಡ್ ಬಗ್ಗೆ ಹೂಗಳ ಮೂಲಕ ಜಾಗೃತಿ

ಕೋವಿಡ್ ಬಗ್ಗೆ ಹೂಗಳ ಮೂಲಕ ಜಾಗೃತಿ

ರೈತನ ನೆನಪಿಗಾಗಿ ನೇಗಿಲು ಹೊತ್ತ ರೈತ, ಚಿತ್ರದುರ್ಗದ ಕಲ್ಲಿನ ಕೋಟೆಯ ಒನಕೆ ಓಬವ್ವ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರು ಅಂದು ನಡೆಸಿದ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಚಿತ್ರ, ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆಕೃತಿ, ಭಾರತೀಯ ಸೇನಾ ವಾಯುಪಡೆಯ ಯುದ್ಧವಿಮಾನ ಹಾಗೂ ಪರಮ ವೀರ ಚಕ್ರ ಪ್ರಶಸ್ತಿಯ ಅಭಿನಂದನ್, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ನಿಯಂತ್ರಣ ಕ್ರಮಗಳ ಮಾದರಿ ಚಿತ್ರ, ಮಕ್ಕಳ ಆಕರ್ಷಣೆಗಾಗಿ ಕ್ರೀಡೆಗಳ ಮಾದರಿಯಲ್ಲಿ ಕಾರ್ಟೂನ್ ಚಿತ್ರಗಳಾದ ಹಾಕಿ, ಫುಟ್‌ಬಾಲ್, ಹಾಗೂ ಇತರೆ ಚಿತ್ರಗಳನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಮೈಸೂರು ಮಹಾರಾಜರ ಇತಿಹಾಸ ಪರಿಚಯಿಸುವ ಫೋಟೋ ಗ್ಯಾಲರಿಯೂ ಗಮನ ಸೆಳೆಯುತ್ತದೆ.

ಡಿ.27ರ ತನಕ ಸಾಂಸ್ಕೃತಿಕ ರಂಗು

ಡಿ.27ರ ತನಕ ಸಾಂಸ್ಕೃತಿಕ ರಂಗು

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ವತಿಯಿಂದ ಗಿಡಮೂಲಿಕೆಗಳ ಪ್ರದರ್ಶನ, ಪೌಷ್ಟಿಕಾಂಶಗಳ ಮಾಪಿಸುವುದು, ನಾಡಿ ಪರೀಕ್ಷೆ ಮಾಡುವುದು, ಆಯುರ್ವೇದದಲ್ಲಿ ಆರೋಗ್ಯಯುತ ಜೀವನ ಹಾಗೂ ಆಯುರ್ವೇದದ ಇತರೆ ಮಾಹಿತಿ ನೀಡಲಾಗುತ್ತದೆ. ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ಸಮಯದಲ್ಲಿ ಶ್ರೀ ಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳನ್ನು ಕೇಳುವ ಅವಕಾಶವೂ ಇಲ್ಲಿ ಸಿಗಲಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಡಿಸೆಂಬರ್ 27ರವರೆಗೆ ಅರಮನೆಯ ವಿದ್ಯುತ್ ದೀಪಾಲಂಕಾರ ಸಂಜೆ 7ರಿಂದ 8.30ರವರೆಗೆ ಇರಲಿದೆ ಜತೆಗೆ ಫಲಪುಷ್ಪ ಪ್ರದರ್ಶನ ನೋಡುತ್ತಾ ಮನರಂಜನೆ ಪಡೆಯಲು ಸಂಜೆ 7 ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದನ್ನೆಲ್ಲ ನೋಡಬೇಕೆಂದು ಬಯಸುವವರಿಗೆ ಸೂಚನೆ ಏನೆಂದರೆ ಪ್ರವೇಶ ಉಚಿತವಾಗಿದ್ದರೂ, ಎರಡು ಡೋಸ್ ಲಸಿಕೆ ಪಡೆದಿರುವುದು ಅಗತ್ಯವಾಗಿದ್ದು ಪ್ರಮಾಣ ಪತ್ರ ಪ್ರದರ್ಶಿಸಿ ಅರಮನೆಗೆ ಕೋಟೆ ಆಂಜನೇಸ್ವಾಮಿ ದೇವಾಲಯದ(ಉತ್ತರ) ದ್ವಾರ ಹಾಗೂ ವರಹಾ ದ್ವಾರದಿಂದ ತೆರಳಬಹುದಾಗಿದೆ.

Recommended Video

ಆಂಡ್ರಾಯ್ಡ್ ಬಳಕೆದಾರರು ಈ ವರ್ಷ ಅತಿಹೆಚ್ಚು ಡೌನ್ಲೋಡ್ ಮಾಡಿದ ಆಪ್ಸ್ | Oneindia Kannada

English summary
Thousands of tourists witnessing for three-day flower show at Mysuru palace. Flower show will be come to end on December 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X