• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಕುಸ್ತಿಯಿಲ್ಲದ ಮೈಸೂರು ದಸರಾ

|

ಮೈಸೂರು, ಅಕ್ಟೋಬರ್ 23: ಮೈಸೂರು ಮಹಾರಾಜರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಾತ್ರವಲ್ಲದೆ ಕ್ರೀಡೆಗೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ಅವರ ಕಾಲದಲ್ಲಿ ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು ಎಂಬುದಕ್ಕೆ ಮೈಸೂರು ನಗರದಲ್ಲಿ ಕಂಡುಬರುವ ಗರಡಿ ಮನೆಗಳು ಸಾಕ್ಷಿಯಾಗಿವೆ.

ವರ್ಷದ ಇತರೆ ದಿನಗಳಲ್ಲೂ ಗರಡಿ ಮನೆಗಳು ಚಟುವಟಿಕೆಯಲ್ಲಿರುತ್ತಿದ್ದವಾದರೂ ದಸರಾ ವೇಳೆಯಲ್ಲಿ ಎಲ್ಲ ಗರಡಿ ಮನೆಗಳಲ್ಲಿ ಸಂಚಲನ ಸೃಷ್ಠಿಯಾಗಿ ಬಿಡುತ್ತಿತ್ತು. ಕಾರಣ ದಸರಾದಲ್ಲಿ ಕುಸ್ತಿಯಾಡಿ ಗೆದ್ದು ರಾಜರಿಂದ ಪ್ರಶಂಸೆ ಪಡೆಯುವುದು ಪ್ರತಿಯೊಬ್ಬ ಕುಸ್ತಿಪಟುವಿನ ಅಭಿಲಾಷೆಯಾಗಿರುತ್ತಿತ್ತು. ಹೀಗಾಗಿ ಬಿಡುವಿಲ್ಲದ ಅಭ್ಯಾಸವನ್ನು ಕುಸ್ತಿಪಟುಗಳು ಅರ್ಥಾತ್ ಪೈಲ್ವಾನರು ಮಾಡುತ್ತಿದ್ದರು.

ರಾಜರ ಆಡಳಿತದಲ್ಲಿ ಕುಸ್ತಿಗೆ ಮಹತ್ವದ ಸ್ಥಾನ

ರಾಜರ ಆಡಳಿತದಲ್ಲಿ ಕುಸ್ತಿಗೆ ಮಹತ್ವದ ಸ್ಥಾನ

ದಸರಾ ಸಂದರ್ಭದಲ್ಲಿ ಮಹಾರಾಜರು ಇತರೆ ಕಾರ್ಯಕ್ರಮಗಳ ನಡುವೆ ಕುಸ್ತಿಗೂ ಮಹತ್ವದ ಸ್ಥಾನ ನೀಡುತ್ತಿದ್ದರು. ಗೆದ್ದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಎಂಬ ಬಿರುದುಗಳನ್ನು ನೀಡಿ ಅಭಿನಂದಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಕುಸ್ತಿ ಪ್ರಿಯರಾಗಿದ್ದ ಮಹಾರಾಜರು ಪೈಲ್ವಾನ್ ರನ್ನು ಕರೆಸಿ ಪ್ರತಿ ವಾರವೂ ಕುಸ್ತಿಯನ್ನು ನಡೆಸಿ, ತಾವೇ ಆಶ್ರಯ ನೀಡಿ ಸಲಹುತ್ತಿದ್ದರು. ಅಂದಿನ ಕಾಲದಲ್ಲಿ ರಾಜರ ಪ್ರೋತ್ಸಾಹದಿಂದಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ವ್ಯಾಯಾಮ, ಕಸರತ್ತಿನ ಮೂಲಕ ದೇಹವನ್ನು ದಂಡಿಸುತ್ತಿದ್ದರಲ್ಲದೆ, ಪರಿಕರಗಳಾದ ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ, ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನು ನಡೆಸುತ್ತಿದ್ದರು.

ಮೈಸೂರು ರಾಜವಂಶದ 550 ವರ್ಷಗಳ ರೋಚಕ ಇತಿಹಾಸ

ಕುಸ್ತಿ ಹೆಮ್ಮೆ ತರುವ ವಿಷಯ

ಕುಸ್ತಿ ಹೆಮ್ಮೆ ತರುವ ವಿಷಯ

ಗರಡಿಮನೆಯಿಂದ ತಾಲೀಮು ನಡೆಸಿ ಬರುವ ಪೈಲ್ವಾನರು ಮನೆಗೆ ಬರುತ್ತಿದ್ದಂತೆಯೇ ಲೀಟರ್‌ಗಟ್ಟಲೆ ಬಾದಾಮಿ ಬೀಜಗಳ ಮಿಶ್ರಣ ಮಾಡಿದ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇವಿಸಿ, ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣು ಮೊದಲಾದವುಗಳನ್ನು ಸೇವಿಸುತ್ತಿದ್ದರು. ರಾಜರ ಕಾಲದ ನಂತರದ ದಿನಗಳಲ್ಲಿ ಗರಡಿಮನೆಗಳ ಸಂಖ್ಯೆ ಕಡಿಮೆಯಾದರೂ ಇರುವ ಗರಡಿ ಮನೆಗಳು ತಮ್ಮದೇ ಆದ ಘನತೆಯನ್ನು ಹೊಂದಿ ಮೈಸೂರಿನ ಖ್ಯಾತಿಯನ್ನು ಎಲ್ಲೆಡೆ ಪಸರಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇತ್ತೀಚೆಗಿನ ವೈಜ್ಞಾನಿಕ ಜಿಮ್‌ಗಳು ನಡುವೆಯೂ ಗರಡಿಮನೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡು ಮುನ್ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆ ತರುವ ವಿಷಯವಾಗಿದೆ.

ಮೈಸೂರಿನಲ್ಲಿ ಹತ್ತಾರು ಗರಡಿಮನೆಗಳು

ಮೈಸೂರಿನಲ್ಲಿ ಹತ್ತಾರು ಗರಡಿಮನೆಗಳು

ಈಗಲೂ ನಗರದಲ್ಲಿ ಸುತ್ತು ಹೊಡೆದರೆ ಸುಮಾರು ನೂರಕ್ಕೂ ಹೆಚ್ಚು ಗರಡಿ ಮನೆಗಳು ಕಾಣಸಿಗುತ್ತವೆ. ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಹತ್ತು ಹಲವು ಗರಡಿಮನೆಗಳು ನೋಡಲು ಸಿಗುತ್ತವೆ.

ಸಂಜೆ 6ರ ನಂತರ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್

ಪೈಲ್ವಾನರಿಗೆ ಅವರದ್ದೇ ಆದ ಗೌರವವಿದೆ

ಪೈಲ್ವಾನರಿಗೆ ಅವರದ್ದೇ ಆದ ಗೌರವವಿದೆ

ವರ್ಷಪೂರ್ತಿ ಇಲ್ಲಿ ಒಂದಲ್ಲ ಒಂದು ಕಡೆ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಲೇ ಇರುತ್ತದೆ. ಇವತ್ತಿಗೂ ಪೈಲ್ವಾನರಿಗೆ ಅವರದ್ದೇ ಆದ ಗೌರವವಿದೆ. ಪ್ರತಿ ವರ್ಷವೂ ದಸರಾದಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲಾಗುತ್ತಿತ್ತಾದರೂ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ನಡೆಯುತ್ತಿಲ್ಲ. ಇದು ಕುಸ್ತಿಯನ್ನು ಇಷ್ಟಪಡುವ ಎಲ್ಲರಿಗೂ ನಿರಾಸೆ ತಂದಿದ್ದರೂ, ಮುಂದಿನ ವರ್ಷಕ್ಕಾಗಿ ಕಾಯುತ್ತಿದ್ದಾರೆ. ಏನೇ ಆದರೂ ಕುಸ್ತಿಯಿಲ್ಲದ ಮೈಸೂರು ದಸರಾವನ್ನು ನೆನಪಿಸಿಕೊಳ್ಳುವುದೇ ಕಷ್ಟವಾಗುತ್ತಿದೆ.

English summary
The Maharaja's of Mysuru contributed not only to art, literature, culture but also to sports. Wrestling was highly encouraged during the Maharaja's time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X