ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಗೆ ಬಂದು; ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಿದ ಡಿಕೆ ಸುರೇಶ್!
ಬೆಂಗಳೂರು, ಮಾ. 02: ಹೈಕಮಾಂಡ್ ಖಡಕ್ ಸೂಚನೆ ಬಳಿಕವೂ ಕರ್ನಾಟಕ ಕಾಂಗ್ರೆಸ್ ಪಕ್ಷ ಅಕ್ಷರಶಃ ಅಗ್ನಿ ಕುಂಡದಂತಾಗಿದೆ. ಮೈಸೂರಿನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಪಕ್ಷದಲ್ಲಿ ಈ ಮಟ್ಟದ ಅಸಮಾಧಾನ ಸೃಷ್ಟಿ ಮಾಡುತ್ತದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಅಂದುಕೊಂಡಿರಲಿಕ್ಕಿಲ್ಲ. ಆ ಮಟ್ಟಿಗಿನ ವಿರೋಧ ಇದೀಗ ವ್ಯಕ್ತವಾಗುತ್ತಿದೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಮೈಸೂರು ಮೇಯರ್ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಕ್ರಮಕ್ಕೆ ಮುಂದಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಧ್ಯದ ಅಸಮಾಧಾನ ಬಹಿರಂಗವಾಗಿ ಸ್ಫೋಟವಾಗಿದೆ. ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ಹೈಕಮಾಂಡ್ ಕೂಡ ಗರಂ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ಪಡೆಯಲು ಹೈಕಮಾಂಡ್ ಪ್ರತಿನಿಧಿಯಾಗಿ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ಅವರು ಬೆಂಗಳೂರಿಗೆ ಬಂದಿದ್ದಾರೆ.
ಇದೇ ಸಂದರ್ಭದಲ್ಲಿ ಇಡೀ ಬೆಳವಣಿಗೆಯಲ್ಲಿ ಮೈಸೂರು ತನ್ವೀರ್ ಸೇಠ್ ಅವರು ಬಲಿಪಶುವಾದರಾ? ಎಂಬ ಚರ್ಚೆ ಕೂಡ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ.

ಜೆಡಿಎಸ್ ಜೊತೆ ಮೈತ್ರಿ; ಡಿಕೆಶಿಗೆ ಹಿನ್ನಡೆ?
ಮೈಸೂರು ಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಗೊಂದಲ, ಅಸಮಾಧಾನ ಸೃಷ್ಟಿಸಿದೆ. ತವರಿನಲ್ಲಿಯೇ ತಮ್ಮನ್ನು ಕಡೆಗಣಿಸಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಮೈಸೂರಿನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಇತರ ಹಿರಿಯ ನಾಯಕರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೇಲೆ ಗರಂ ಆಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ಅವರನ್ನು ತನ್ವೀರ್ ಸೇಠ್ ಅವರು ಬೆಂಗಳೂರಿನ ಕೆಕೆ ಗೆಸ್ಟ್ಹೌಸ್ನಲ್ಲಿ ಭೇಟಿ ಮಾಡಿ ವಿವರಣೆ ಕೊಟ್ಟಿದ್ದಾರೆ. ಮೇಯರ್ ಚುನಾವಣೆ ವಿಚಾರದಲ್ಲಿ ಏನೇನು ಬೆಳವಣಿಗೆಗಳಾದವು ಎಂಬುದನ್ನು ಕೂಡ ತನ್ವೀರ್ ಸೇಠ್ ಅವರು ಹೈಕಮಾಂಡ್ಗೆ ವಿವರಣೆ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಅಧಿಕಾರ ಹಿಡಿಯುತ್ತಿತ್ತು
ಮೈಸೂರಿನಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿದ್ದು ನಿಜ. ನಾವು ಜೆಡಿಎಸ್ ಜೊತೆ ಹೋಗದಿದ್ದರೆ ಬಿಜೆಪಿ ಅಧಿಕಾರ ಹಿಡಿಯುತ್ತಿತ್ತು. ಮುಂದೆ ಪಕ್ಷಕ್ಕೆ ಸಂಕಷ್ಟ ಎದುರಾಗುತ್ತಿತ್ತು. ಅದನ್ನ ತಪ್ಪಿಸಲು ಮೈತ್ರಿ ಮಾಡಿಕೊಂಡ್ಡೇವೆ. ಅದಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅನುಮತಿಯೂ ಇತ್ತು. ಹಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಒಪ್ಪಿಗೆಯೂ ಇತ್ತು. ಅದರಲ್ಲಿ ನನ್ನದೇನು ತಪ್ಪೇನಿಲ್ಲವೆಂದು ತನ್ವೀರ್ ಸೇಠ್ ವಿವರಣೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಧು ಯಕ್ಷಿಗೌಡ ಅವರನ್ನು ಭೇಟಿ ಮಾಡಿದ ಬಳಿಕ ತನ್ವೀರ್ ಸೇಠ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೈಸೂರು ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿದ್ದನ್ನು ಮಧು ಯಕ್ಷಿಗೌಡ ಕೇಳಿದರು ಎಂದಿದ್ದಾರೆ. ಜೊತೆಗೆ ಯಾರ ಸೂಚನೆ ಮೇರೆಗೆ ಮೈತ್ರಿ ನಿರ್ಧಾರ ಮಾಡಿದ್ದೀರಿ? ಯಾರ ಆದೇಶದ ಮೇಲೆ ಮಾಡಿದ್ದೀರಿ ಎಂದೂ ಕೇಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟಿದ್ದರು ಎಂದು ಹೇಳಿದ್ದೇನೆ ಎಂದು ಮಾಧ್ಯಮಗಳಿಗೆ ಕೊಟ್ಟಿರುವ ಹೇಳಿಕೆಯಲ್ಲಿ ಸೇಠ್ ತಿಳಿಸಿದ್ದಾರೆ.

ನೋಟೀಸ್ ಕೊಟ್ಟರೆ ಉತ್ತರಿಸುತ್ತೇನೆ
ಜೊತೆಗೆ ನನಗೆ ಯಾವ ನೋಟಿಸ್ನ್ನು ಕೊಟ್ಟಿಲ್ಲ, ಕೊಟ್ಟಾಗ ಉತ್ತರಿಸುತ್ತೇನೆ. ಉತ್ತರಿಸುವ ಜವಾಬ್ದಾರಿ ನನ್ನದು. ಪಕ್ಷದ ಕೆಲಸದಲ್ಲಿ ಯಾವ ಮುಜುಗರವೂ ಇಲ್ಲ. ಪಕ್ಷ ನನ್ನ ಜೊತೆ ನಿಲ್ಲುವ ಭರವಸೆ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದು ತಪ್ಪು. ಯಾರು ಕೂಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಭಾರ ಹೊರುವ ಶಕ್ತಿ ಇರುವುದರಿಂದ ನನಗೆ ಭಾರ ಹಾಕುತ್ತಿದ್ದಾರೆ. ರಾಯಚೂರಿನ ಪ್ರತಿಭಟನೆಗೆ ಪಕ್ಷ ಕ್ರಮ ಕೈಗೊಳ್ಳಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದಕ್ಕೆ ಸಿಕ್ಕ ಬಹುಮಾನವಿದು ಎಂದು ಷೋಕಾಸ್ ನೋಟಿಸ್ ನೀಡಿದರೆ ಉತ್ತರಿಸುವೆ ಎಂದು ಕುಮಾರಕೃಪಾ ಅತಿಥಿಗೃಹದ ಬಳಿ ಮಾಧ್ಯಮಗಳಿಗೆ ತನ್ವೀರ್ ಸೇಠ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷನ ಜೊತೆಗೆ ಮಾತಾಡ್ತೇನೆ ಹೋಗಪ್ಪ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲು ಸಂಸದ ಡಿಕೆ ಸುರೇಶ್ ಅವರು ತೆರಳಿದ್ದರು. ಆದರೆ ಅದೆಲ್ಲವನ್ನು ಅಧ್ಯಕ್ಷನ ಜೊತೆಗೆ ಮಾತಾಡ್ತೇನೆ ಹೋಗಪ್ಪ ಎಂದು ಸಿದ್ದರಾಮಯ್ಯ ಅವರು ಖಡಾಖಂಡಿತವಾಗಿ ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಿದ್ದರಾಮಯ್ಯ ನಿವಾಸದಿಂದ ಡಿಕೆ ಸುರೇಶ್ ಹಿಂದಿರುಗಿದ್ದಾರೆ. ಒಟ್ಟಾರೆ ಮೈಸೂರು ಮೇಯರ್ ಮೈತ್ರಿ ಕುರಿತು ನಡೆದಿರುವ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಜೊತೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯದ ಶೀತಲ ಸಮರದಲ್ಲಿ ಶಾಸಕ ತನ್ವೀರ್ ಸೇಠ್ ಬಲಿಪಶುವಾದರಾ? ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ. ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಕಾಂಗ್ರೆಸ್ ಪಕ್ಷದಲ್ಲಿನ ಮುಖ್ಯಮಂತ್ರಿ ಹುದ್ದೆ ರೇಸ್ ಎಂಬುದು ಗುಟ್ಟಾಗಿ ಉಳಿದಿಲ್ಲ.