ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾತು ತಪ್ಪಿದ ನಗರಪಾಲಿಕೆ: ತಾವೇ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾದ ಮೈಸೂರಿನ ಪುಸ್ತಕ ಪ್ರೇಮಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 4: ಕೊಟ್ಟ ಮಾತು ತಪ್ಪಿದ ಮೈಸೂರು ಮಹಾನಗರ ಪಾಲಿಕೆ ನಡೆಯಿಂದ ಬೇಸರಗೊಂಡ ಮೈಸೂರಿನ ಪುಸ್ತಕ ಪ್ರೇಮಿ ಸೈಯದ್ ಇಸಾಕ್, ದಾನಿಗಳು ನೀಡಿದ ಹಣದಿಂದ ತಾವೇ ಗ್ರಂಥಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದ್ದ ಸೈಯದ್ ಇಸಾಕ್ ನೆರವಿಗೆ ಕರ್ನಾಟಕ ಸೇರಿದಂತೆ ನಾನಾ ಮೂಲೆಗಳಿಂದ ಪುಸ್ತಕ ಪ್ರೇಮಿಗಳು ಮನ ಮಿಡಿದಿದ್ದರು. ಯಾರೋ ಕಿಡಿಗೇಡಿಗಳು ಮೈಸೂರಿನ ರಾಜೀವ್ ನಗರದಲ್ಲಿ ಸೈಯದ್ ನಿರ್ಮಿಸಿಕೊಂಡಿದ್ದ ಪುಟ್ಟ ಗುಡಿಸಿಲಿನಂತಹ ಗ್ರಂಥಾಲಯವನ್ನು ಬೆಂಕಿ ಹಚ್ಚಿ ಭಸ್ಮ‌ ಮಾಡಿದ್ದರು.‌

 ಪ್ರತಿದಿನ 200 ಮಂದಿ ಗ್ರಂಥಾಲಯಕ್ಕೆ ಬರುತ್ತಿದ್ದರು

ಪ್ರತಿದಿನ 200 ಮಂದಿ ಗ್ರಂಥಾಲಯಕ್ಕೆ ಬರುತ್ತಿದ್ದರು

ತಮ್ಮ ಕೂಲಿ ಹಣದಲ್ಲಿಯೇ ಪ್ರತಿನಿತ್ಯ ದಿನಪತ್ರಿಕೆ, ಸಂಚಿಕೆ, ನಿಯತಕಾಲಿಕೆ ತರುತ್ತಿದ್ದರು. ಪ್ರತಿದಿನ 200 ಮಂದಿ ಗ್ರಂಥಾಲಯಕ್ಕೆ ಬರುತ್ತಿದ್ದರು. ತಾನು ಅನಕ್ಷರಸ್ಥನಾಗಿದ್ದರೂ ಬೇರೆಯವರು ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಉಚಿತವಾಗಿ ಪತ್ರಿಕೆ, ಪುಸ್ತಕ ಓದಲು ನೀಡುತ್ತಿದ್ದರು.

ಆದರೆ ನೂರಾರು ಪುಸ್ತಕ, ಪತ್ರಿಕೆಗಳು ಬೆಂಕಿಗೆ ಆಹುತಿಯಾಗಿದ್ದವು. ಸುಟ್ಟ ಜಾಗದಲ್ಲೇ ಸೈಯದ್ ಪುಸ್ತಕಗಳನ್ನು ನೆನೆದು ಕಣ್ಣೀರು ಸುರಿಸಿದ್ದರು. ಇದರಿಂದ ಇಡೀ ರಾಜ್ಯವೇ ಸೈಯದ್ ಇಸಾಕ್‌ರಿಗೆ ಬೆಂಬಲ ವ್ಯಕ್ತಪಡಿಸಿ ಸುಟ್ಟ ಜಾಗದಲ್ಲೇ ಗ್ರಂಥಾಲಯ ತಲೆ ಎತ್ತಬೇಕೆಂದು ಒತ್ತಾಯಿಸಿದ್ದರು.

 ಅಧಿಕಾರಿಗಳ ನಿರ್ಲಕ್ಷ್ಯ

ಅಧಿಕಾರಿಗಳ ನಿರ್ಲಕ್ಷ್ಯ

ಕಳೆದ ಎಂಟು ತಿಂಗಳಿನಿಂದ ಮೈಸೂರು ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸೈಯದ್‌ರಿಗೆ ಗ್ರಂಥಾಲಯ ಕಟ್ಟಿಕೊಡುವ ಭರವಸೆ ನೀಡಿತ್ತು. ಸಂಸದ ಪ್ರತಾಪ್ ಸಿಂಹ, ಅಂದಿನ‌ ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ‌ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ನಾನಾ ಅಧಿಕಾರಿಗಳು ಸೈಯದ್ ಅವರಿಗೆ ನೆರವು ನೀಡುವ ಭರವಸೆ ನೀಡಿದ್ದರು. ರಾಜ್ಯದಾದ್ಯಂತ ಹಣದ ಸಹಾಯ ಅಭಿಯಾನ ನಡೆದಿತ್ತು.‌ ವಿವಿಧ ಭಾಗಗಳಿಂದ ಸಾವಿರಾರು ಪುಸ್ತಕ ಸೈಯದ್ ಕೈ ಸೇರಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೈಯದ್ ಕನಸಿನ ಗ್ರಂಥಾಲಯ ತಲೆ ಎತ್ತಲೇ ಇಲ್ಲ.

 ತಾವೇ ಕಟ್ಟಡ ಕಟ್ಟಲು ಮುಂದಾದರು

ತಾವೇ ಕಟ್ಟಡ ಕಟ್ಟಲು ಮುಂದಾದರು

ವಿವಿಧ ಮೂಲಗಳಿಂದ ಬಂದ ಹಣದಲ್ಲಿ ಒಂದು ರೂಪಾಯಿಯನ್ನೂ ಇಸಾಕ್ ತಮ್ಮ ಸ್ವಂತಕ್ಕೆ ಬಳಸಿಲ್ಲ. ಶಾಸಕ ಜಮೀರ್ ಅಹ್ಮದ್ ನೀಡಿದ 2 ಲಕ್ಷ ರೂ., ಸಂಸದ ಪ್ರತಾಪ್ ಸಿಂಹ ನೀಡಿದ 50 ಸಾವಿರ ರೂ., ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ನೀಡಿದ 25 ಸಾವಿರ ರೂ. ಸೇರಿ 2.80 ಲಕ್ಷ ರೂ.ಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಹಣ ಇಲ್ಲದೆ ಮಗಳ ಮದುವೆ ಮಾಡಲಾಗುತ್ತಿಲ್ಲ. ಈ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲು ದಾನಿಗಳೇ ಸಲಹೆ ನೀಡಿದರೂ ಮುಟ್ಟಲಿಲ್ಲ. ಇದೀಗ ಎರಡು ಲಕ್ಷ ರೂ.ಗಳನ್ನು ಬಳಸಿ ಗ್ರಂಥಾಲಯ ಕಟ್ಟುತ್ತಿದ್ದಾರೆ.

"ಕಳೆದ ಎಂಟು ತಿಂಗಳಿನಿಂದ ಅಧಿಕಾರಿಗಳು ಗ್ರಂಥಾಲಯ ನಿರ್ಮಾಣ ಮಾಡಲಿಲ್ಲ. ‌ಇಂದಿಗೂ ಬಯಲು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳೂ ಬಂದು ಓದುತ್ತಾರೆ. ಪುಸ್ತಕ ಹಾಳಾಗುವುದನ್ನು ನೋಡಲಾಗದೆ ನನಗೆ ದೊರೆತ ಹಣದಲ್ಲಿಯೇ ಗ್ರಂಥಾಲಯ ನಿರ್ಮಿಸುತ್ತಿದ್ದೇನೆ,'' ಎಂದು ಅಕ್ಷರ ಸಂತ ಸೈಯದ್ ಇಸಾಕ್ ನೋವಿನಿಂದ ತಿಳಿಸಿದ್ದಾರೆ.

 ಬಡತನದಲ್ಲೇ ಇಸಾಕ್ ಜೀವನ

ಬಡತನದಲ್ಲೇ ಇಸಾಕ್ ಜೀವನ

ಹಾಗೇ ನೋಡಿದರೆ ಸಯ್ಯದ್ ಇಸಾಕ್ ಜೀವನವೇನೂ ಭಿನ್ನವಾಗಿಲ್ಲ. ಬಡತನದ ನಡುವೆಯೂ ಇಂದಿಗೂ ಚರಂಡಿ, ಟ್ಯಾಂಕ್ ಸ್ವಚ್ಛಗೊಳಿಸಿ ಅದರಲ್ಲಿ ಬರುವ ಹಣದಲ್ಲಿಯೇ ಬಯಲಲ್ಲಿ ಗ್ರಂಥಾಲಯ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುತ್ತಾರೆ.‌ ಆದರೆ, ಅಧಿಕಾರಿಗಳು ಭರವಸೆ ನೀಡುತ್ತಾ ಬಂದರೆ ಹೊರತು, ಇಸಾಕ್ ಕನಸಿನ ಗ್ರಂಥಾಲಯ ನಿರ್ಮಾಣ ಮಾಡಲೇ ಇಲ್ಲ. ಗ್ರಂಥಾಲಯ ಸುಟ್ಟರೂ ಮೊದಲು ಗ್ರಂಥಾಲಯವಿದ್ದ ಜಾಗದಲ್ಲೇ ಕಲ್ಲುಗಳನ್ನು ಹಾಕಿ ಬಯಲು ಗ್ರಂಥಾಲಯ ಮಾಡಿದರು. ನಿತ್ಯ ತಲೆ ಮೇಲೆ ಹೊತ್ತು ಹಾಗೂ ತಳ್ಳುಗಾಡಿಯಲ್ಲಿ ಹಾಕಿಕೊಂಡು ಮನೆಯಿಂದ ಬಯಲು ಗ್ರಂಥಾಲಯಕ್ಕೆ ಹಾಗೂ ಅಲ್ಲಿಂದ ಮನೆಗೆ ಪುಸ್ತಕಗಳನ್ನು ಸಾಗಿಸಿದ್ದರು. ಈ ಬಾರಿಯ ಮಳೆಗಾಲದಲ್ಲೂ ಜನರಿಗೆ ಓದುವ ಸೌಲಭ್ಯವನ್ನು ತಪ್ಪಿಸಿರಲಿಲ್ಲ.

English summary
Daily wage labourer Syed Isak to build Kannada Public Library on his own expenditure in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X