ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಏಕೈಕ ಸಂಸ್ಕೃತ ಸುಧರ್ಮಾ ಪತ್ರಿಕೆ ಸಂಪಾದಕ ಸಂಪತ್ ಕುಮಾರ್ ವಿಧಿವಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 30: ವಿಶ್ವದ ಏಕೈಕ ಸಂಸ್ಕೃತ ದೈನಿಕ ಎಂಬ ಹೆಗ್ಗಳಿಕೆ ಪಡೆದಿರುವ ಸುಧರ್ಮಾ ಪತ್ರಿಕೆ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ವಿಧಿವಶರಾಗಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಪತ್ರಿಕೆ ಮುನ್ನಡೆಸಿದ್ದ ಸಂಪತ್ ಕುಮಾರ್, 2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದರು. ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದ ಇವರ ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು. ಬುಧವಾರ ಮಧ್ಯಾಹ್ನ ಸಂಸ್ಕೃತ ಪತ್ರಿಕೆಯ ಕೆಲಸದಲ್ಲಿರುವಾಗಲೇ ತೀವ್ರ ಹೃದಯಾಘಾತದಿಂದ ಸಂಪತ್ ಕುಮಾರ್ ಸಾವನ್ನಪ್ಪಿದರು.

ಸಿಎಂ ಯಡಿಯೂರಪ್ಪ ಸಂತಾಪ
ಸುಧರ್ಮಾ ಪತ್ರಿಕೆ ಸಂಪಾದಕ, ಪದ್ಮಶ್ರೀ ಕೆ.ವಿ. ಸಂಪತ್ ಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

"ವಿಶ್ವದ ಏಕೈಕ ಸಂಸ್ಕೃತ ದೈನಿಕ ಸುಧರ್ಮಾ ಪತ್ರಿಕೆ ಮೂಲಕ ಸಂಸ್ಕೃತ ಭಾಷೆಯ ಉಳಿವಿಗೆ ಶ್ರಮಿಸಿದ್ದ ಸಂಪತ್ ಕುಮಾರ್ ನಿಧನದಿಂದ ಪತ್ರಿಕೋದ್ಯಮ ವಿಶಿಷ್ಟ ಸಾಧಕರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಮತ್ತು ಸಂಸ್ಕೃತ ಭಾಷಾಸಕ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ," ಎಂದು ಸಿಎಂ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂಪತ್ ಕುಮಾರ್ ನಿಧನಕ್ಕೆ ಮೈಜಿಪಸಂ ಸಂತಾಪ
ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕರಾದ ಕೆ.ವಿ. ಸಂಪತ್ ಕುಮಾರ್ (64) ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Mysuru: Sudharma Sanskrit Magazine Editor Sampath Kumar Passed Away

"ಕಡಿಮೆ ಓದುಗರ ಬಳಗ, ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ, ಯಾವುದನ್ನು ಲೆಕ್ಕಿಸದೆ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತವನ್ನು ಸುಧರ್ಮ ಪತ್ರಿಕೆಯ ಮೂಲಕ ಜನರಿಗೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದ ಸಂಪತ್ ಕುಮಾರ್ ಸೇವೆ ಅನನ್ಯ,'' ಎಂದು ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಹೇಳಿದ್ದಾರೆ.

ಸುಧರ್ಮ ಬಗ್ಗೆ ಒಂದಷ್ಟು ಮಾಹಿತಿ
ಮೈಸೂರಿನ ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿದ್ದ ಇವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುತ್ತಿದ್ದರು. 1963 ರಲ್ಲಿ ಅವರು ಮೈಸೂರು ನಗರದಲ್ಲಿ ಬಾಲಕಿಯರ ಶಾಲೆ ಪ್ರಾರಂಭಿಸಿ ಅಲ್ಲಿ ಸಂಸ್ಕೃತ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದರು.

1970ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಮತ್ತು ಅದನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸುಧರ್ಮ ಪತ್ರಿಕೆ ಪ್ರಾರಂಭಿಸಿದರು. ವರದರಾಜ ಅಯ್ಯಂಗಾರ್ ನಿಧನದ ನಂತರ ಸಂಪಾದಕ ಹುದ್ದೆ ವಹಿಸಿಕೊಂಡ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮೀ ಅವರು ಪತ್ರಿಕೆಯನ್ನು ಈವರೆಗೆ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು.

ಇಂದಿನ ಆಧುನಿಕತೆಯನ್ನು ಬಳಸಿಕೊಂಡು ಪತ್ರಿಕೆಯ ಆನ್ ಲೈನ್ ಆವೃತ್ತಿಯನ್ನು ಸಹ ತಂದಿದ್ದಾರೆ. ಸಂಪತ್ ಕುಮಾರ್ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಭಾಷೆಯನ್ನು ಪಸರಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದ್ದರು.

ಇವರು ಸಂಸ್ಕೃತದ ಹಲವು ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿ ತರುವ ಜೊತೆಗೆ ಸುಧರ್ಮ ಎ3 ಗಾತ್ರದ ಎರಡು ಪುಟ, ಐದು ಕಾಲಂ ಪತ್ರಿಕೆಯಾಗಿಸಿದ್ದರು. 2009 ರಲ್ಲಿ ಸುಧರ್ಮ ಇ-ಪೇಪರ್ ಆವೃತ್ತಿ ಪ್ರಾರಂಭಿಸಿ ಜಗತ್ತಿನಾದ್ಯಂತ ಹಲವಾರು ಜನರು ಸಂಸ್ಕೃತ ಪತ್ರಿಕೆಯನ್ನು ಓದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

"ನಾವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು ಅಂಚೆ ಮೂಲಕ ಪತ್ರಿಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ,'' ಎಂದು ಸಂಪತ್ ಕುಮಾರ್ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಪದ್ಮಶ್ರೀ ಪ್ರಶಸ್ತಿ ಗೌರವ
ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ 'ಸುಧರ್ಮ' ದಿನಪತ್ರಿಕೆಯ ಸೇವೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿದೆ. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾದದ್ದು ಬೇಸರದ ವಿಷಯ.

English summary
The world's only Sanskrit daily paper Sudharma Editor Sampath Kumar Iyengar (64) has passed away on June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X