ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆಯಲ್ಲಿ ಜಿಂಕೆ, ಸಾರಂಗಗಳ ಕುಣಿದಾಟ!

|
Google Oneindia Kannada News

ಮೈಸೂರು, ಆಗಸ್ಟ್ 10: ಮುಂಗಾರು ಮಳೆಯಲ್ಲಿ ತೊಯ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಮರಗಿಡಗಳ ನಡುವೆ ಬೆಳೆದು ನಿಂತ ಹುಲ್ಲು, ಕುರುಚಲು ಗಿಡಗಳೊಳಗೆ ವನ್ಯಪ್ರಾಣಿಗಳು ಖುಷಿಯಿಂದ ಎಲ್ಲೆಂದರಲ್ಲಿ ಅಡ್ಡಾಡುತ್ತಾ ನಲಿದಾಡುತ್ತಿವೆ.

ಸಾಮಾನ್ಯವಾಗಿ ಜಿಂಕೆಗಳು ಸಾಧು ಪ್ರಾಣಿಗಳಾಗಿದ್ದು, ಹಸಿರು ಹುಲ್ಲು, ಗಿಡಗಳನ್ನು ತಿನ್ನುತ್ತಾ ಸದಾ ಹಿಂಡು ಹಿಂಡಾಗಿ ಓಡಾಡುವ ಇವು ಹುಲಿ, ಚಿರತೆ ಸೇರಿದಂತೆ ಮಾಂಸ ಹಾರಿ ಪ್ರಾಣಿಗಳು ತಮ್ಮ ಮೇಲೆ ದಾಳಿ ಮಾಡಿ ಬಿಡಬಹುದೇನೋ ಎಂಬ ಭಯದಲ್ಲಿಯೇ ಬದುಕುತ್ತಿರುತ್ತವೆ. ಹೀಗಾಗಿಯೇ ಸಾಮಾನ್ಯವಾಗಿ ಜಿಂಕೆಗಳು ಮನುಷ್ಯರು ಓಡಾಡುವ ಸ್ಥಳದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಈಗ ನಾಗರಹೊಳೆ ಹಿಂಡು ಹಿಂಡಾಗಿ ಜಿಂಕೆಗಳು ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಕಾಣುವಾಗ ಅಚ್ಚರಿಯಿಂದ ನೆಗೆದು ಓಡುವ ದೃಶ್ಯಗಳು ಸುಂದರವಾಗಿವೆ.

ನೆಗೆದು ಓಡುವ ಜಿಂಕೆಗಳ ಹಿಂಡು

ನೆಗೆದು ಓಡುವ ಜಿಂಕೆಗಳ ಹಿಂಡು

ಇನ್ನು ಹಸಿರು ತುಂಬಿದ ಗಿಡಗಂಟಿಗಳ ನಡುವೆ ಜಿಂಕೆಗಳು ನೆಗೆಯುತ್ತಾ ಒಂದು ಮತ್ತೊಂದರ ಮೇಲೆ ಸವಾರಿ ಮಾಡಿ ಗುದ್ದಾಡುವ ಅಪರೂಪದ ದೃಶ್ಯಗಳು ಮೈನವಿರೇಳಿಸುತ್ತದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಅಗ್ನಿ ಅನಾಹುತದಿಂದ ಬೋಳಾಗಿದ್ದ ನಾಗರಹೊಳೆ ಹಸಿರಾಗಿದೆ. ಸತ್ತು ಹೋದ ಬಿದಿರುಗಳಿಂದ ಹುಟ್ಟಿ ಬಂದ ಮೊಳಕೆಗಳು ಮೆಳೆಗಳಾಗಿ ಬೆಳೆಯುತ್ತಾ ನಿಧಾನವಾಗಿ ಕಾಡನ್ನು ಆಕ್ರಮಿಸಿಕೊಳ್ಳುತ್ತಿವೆ. ಇದರಿಂದ ಮೈದಾನದಂತಿದ್ದ ಬಹುತೇಕ ಪ್ರದೇಶಗಳು ಹಸಿರಿನಿಂದ ಕಂಗೊಳಿಸಲಾರಂಭಿಸಿವೆ. ಬಿದಿರು ಮೆಳೆಗಳು ಬೆಳೆದಷ್ಟು ಸಸ್ಯಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಪರಿಹಾರವಾಗಿ ಆಹಾರ ಅರಸಿ ವನ್ಯಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು ತಪ್ಪುತ್ತಿದೆ.

ಲಾಕ್‌ಡೌನ್‌ನಿಂದಾಗಿ ಮನುಷ್ಯರ ಪ್ರವೇಶವಿಲ್ಲ

ಲಾಕ್‌ಡೌನ್‌ನಿಂದಾಗಿ ಮನುಷ್ಯರ ಪ್ರವೇಶವಿಲ್ಲ

ಇದೀಗ ನಾಗರಹೊಳೆ ವ್ಯಾಪ್ತಿಯಲ್ಲಿ ಅಡ್ಡಾಡಿದವರಿಗೆ ಹೊಸದೊಂದು ಹಸಿರ ಲೋಕ ತೆರೆದಂತೆ ಗೋಚರವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣ ಮತ್ತು ಲಾಕ್‌ಡೌನ್‌ನಿಂದಾಗಿ ಮನುಷ್ಯರ ಪ್ರವೇಶವಿಲ್ಲದೆ ಕಾಡುಗಳು ಸಮೃದ್ಧಿಯಾಗಿವೆ. ಕಾಡ್ಗಿಚ್ಚು ಕಡಿಮೆಯಾಗಿ ಅರಣ್ಯ ಸುರಕ್ಷಿತವಾಗಿದೆ. ಇದರಿಂದ ಸಣ್ಣಪುಟ್ಟ ಜಂತುಗಳಿಂದ ಆರಂಭವಾಗಿ ದೊಡ್ಡ ಪ್ರಾಣಿಗಳ ತನಕ ಎಲ್ಲವೂ ಅರಣ್ಯಗಳ ನಡುವೆ ಹಾಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ನದಿ- ತೊರೆಗಳಲ್ಲಿ ಜೀವಜಲದ ಉಸಿರಾಟ!

ನದಿ- ತೊರೆಗಳಲ್ಲಿ ಜೀವಜಲದ ಉಸಿರಾಟ!

ಹಾಗೆ ನೋಡಿದರೆ ಬೇಸಿಗೆಯ ಬಿರು ಬಿಸಿಲಿಗೆ ಸಿಲುಕಿ ಒಣಗಿಹೋದ ಗಿಡಮರಗಳಿಗೆ ಮುಂಗಾರು ಮಳೆ ಸುರಿಯಿತೆಂದರೆ ಮರು ಹುಟ್ಟಿನ ಅನುಭವ, ಪ್ರಕೃತಿಯಲ್ಲೊಂದು ಪುಳಕ. ಇಡೀ ಅರಣ್ಯಕ್ಕೆ ಹಸಿರು ಸೀರೆಯುಟ್ಟು ನಲಿದಾಡುವ ಸಂಭ್ರಮ. ಬತ್ತಿ ಹೋದ ನದಿ, ತೊರೆಗಳಲ್ಲಿ ಜೀವಜಲದ ಉಸಿರಾಟವಾದರೆ, ಧುಮ್ಮಿಕ್ಕಿ ಹರಿಯುವ ಜಲಧಾರೆಗಳಲ್ಲಿ ತಕಥೈ ನರ್ತನ. ಇದು ಇಂದು ನಿನ್ನೆಯದಲ್ಲ, ಪ್ರಕೃತಿ ಸೃಷ್ಟಿಯಾದಲ್ಲಿಂದ ನಡೆದು ಬಂದ ಸೋಜಿಗ. ಅದೀಗ ನಾಗರಹೊಳೆ ಉದ್ಯಾನದಲ್ಲೀಗ ಗೋಚರವಾಗುತ್ತಿದೆ.

ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ

ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚೆಲುವು ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ. ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ.

ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸಿದೆ

ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸಿದೆ

ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ. ಈಗಂತು ಹಸಿರ ವನಸಿರಿ ಕಣ್ಮನ ತಣಿಸುತ್ತಿದ್ದರೆ, ಅದರ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ ಕಾದಾಡು ಹುಲಿ, ಆಗೊಮ್ಮೆ ಈಗೊಮ್ಮೆ ಕಾಣುವ ಕರಿಚಿರತೆ ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸುವಂತೆ ಮಾಡಿದೆ.

ಜೀವಕಳೆಯ ಹಸಿರು ನಿಸರ್ಗದ ಸ್ವರ್ಗ

ಜೀವಕಳೆಯ ಹಸಿರು ನಿಸರ್ಗದ ಸ್ವರ್ಗ

ಮೊದಲಿಗೆ ಹೋಲಿಸಿದರೆ ಒಂದೆರಡು ವರ್ಷದ ಬಳಿಕ ನಾಗರಹೊಳೆ ಅರಣ್ಯದಲ್ಲಿ ಒಂದಷ್ಟು ಬದಲಾವಣೆ ಕಾಣಿಸುತ್ತಿದೆ. ಇದಕ್ಕೆ ಮುಂಗಾರು ಉತ್ತಮವಾಗಿರುವುದು, ಲಾಕ್‌ಡೌನ್ ಕಾರಣ ಜನರಿಲ್ಲದೆ ಅರಣ್ಯ ಪ್ರಶಾಂತವಾಗಿರುವುದು, ಕಾಡ್ಗಿಚ್ಚು ಕಡಿಮೆಯಾಗಿರುವುದು, ಬಿದಿರು ಮೆಳೆಗಳು ಬೆಳೆದು ಬೋಳು ಅರಣ್ಯವನ್ನು ಆವರಿಸಿರುವುದು ಹೀಗೆ ಹತ್ತಾರು ಕಾರಣಗಳನ್ನು ಕೊಡಬಹುದಾಗಿದೆ.

ಜೀವಕಳೆಯಿಂದ ತುಂಬಿದ ನಿಸರ್ಗ ಸ್ವರ್ಗ

ಜೀವಕಳೆಯಿಂದ ತುಂಬಿದ ನಿಸರ್ಗ ಸ್ವರ್ಗ

ಇಷ್ಟೇ ಅಲ್ಲದೆ, ಈ ಬಾರಿ ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ- ಕಟ್ಟೆಗಳು ಬತ್ತದೆ ನೀರಾಡುತ್ತಿರುವುದು ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ನಾಗರಹೊಳೆ ಉದ್ಯಾನವೀಗ ಒಂಥರಾ ಖುಷಿಕೊಡುವ ಜೀವಕಳೆಯಿಂದ ತುಂಬಿದ ನಿಸರ್ಗ ಸ್ವರ್ಗವಾಗಿದೆ. ಇದನ್ನು ನೋಡಿಯಷ್ಟೆ ಕಣ್ತುಂಬಿಸಿಕೊಳ್ಳಬೇಕು.

English summary
Nagarahole National Park covers an area of ​​643 sq. Km and is a habitat for wildlife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X