• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಕೊಡವಿ ಎದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆಗೆ ಮುಂದಾಗಿದ್ದೇಕೆ?

|

ಮೈಸೂರು, ಆಗಸ್ಟ್ 26: ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಜೆಡಿಎಸ್ ಜತೆಗೆ ಕಾಂಗ್ರೆಸ್ ಮಾಡಿಕೊಂಡಿದ್ದ ಮೈತ್ರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಳ್ಳುನೀರು ಬಿಟ್ಟಿದ್ದಾರೆ.

ಮೈತ್ರಿ ಸರ್ಕಾರ ಮುರಿದು ಬಿದ್ದ ನಂತರ ಒಂದಷ್ಟು ಸಮಯ ಎರಡು ಪಕ್ಷಗಳ ನಾಯಕರು ಒಟ್ಟಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಾರೆ ಎಂದು ಜನ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ, ಮೈತ್ರಿ ಸರ್ಕಾರವನ್ನು ಕೆಡವಿದ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತು ಮುಂದಿನ ಚುನಾವಣೆ ವೇಳೆಗೆ ಬಿಜೆಪಿಗೆ ನೀರು ಕುಡಿಸುತ್ತಾರೆ ಎಂದೇ ನಂಬಿದ್ದರು. ಆದರೆ ಆಗಿದ್ದೇ ಬೇರೆ.

 ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ

ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ

ಸುಮಾರು 14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ ಎಂಬುದು ಗುಟ್ಟಾಗಿ ಉಳಿದಿರಲಿಲ್ಲ. ಜತೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಒಂದೆರಡು ನಾಯಕರಿಗೆ ಮಾತ್ರ ಮೈತ್ರಿ ಸರ್ಕಾರದ ಅಗತ್ಯವಿತ್ತು. ಉಳಿದಂತೆ ಹೆಚ್ಚಿನವರು ಸರ್ಕಾರ ಉರುಳಿ ಬಿದ್ದರೆ ಮತ್ತೆ ನಾವು ಸ್ವತಂತ್ರವಾಗಿ ಪಕ್ಷ ಕಟ್ಟಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದರು.

ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ ಒಂದಷ್ಟು ಅತೃಪ್ತ ಶಾಸಕರು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಹೊರಬಂದಿದ್ದು ಒಳ್ಳೆಯದೇ ಆಗಿತ್ತು. ಸರ್ಕಾರವನ್ನು ಕೆಡವಿದ ಕಳಂಕವನ್ನು ಬಿಜೆಪಿ ಮೇಲೆ ಹಾಕಿ ತಾವು ಸೇಫ್ ಆಗುವುದರೊಂದಿಗೆ ಜನರಲ್ಲಿಯೂ ಬಿಜೆಪಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ಆಲೋಚನೆಗಳಿದ್ದವು.

ಹಾಲು ಕುಡಿದವರೇ ಬದುಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ: ಸಿದ್ದರಾಮಯ್ಯ

 ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯ

ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯ

ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ‌ನಿಂದ ಒಂದಷ್ಟು ಶಾಸಕರನ್ನು ಬಿಜೆಪಿಯತ್ತ ಸೆಳೆದು ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿದರೂ ಅದು ಹೆಚ್ಚು ದಿನ ಬಾಳುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು.

ಅಷ್ಟೇ ಅಲ್ಲದೆ ಜೆಡಿಎಸ್ ‌ನ ಸಖ್ಯದಲ್ಲಿದ್ದರೆ ಕಾಂಗ್ರೆಸ್ ಪಕ್ಷ ಇನ್ನಷ್ಟು ಹೀನಾಯ ಸ್ಥಿತಿಗೆ ತಲುಪುವ ಭಯವೂ ಸಿದ್ದರಾಮಯ್ಯನವರಲ್ಲಿತ್ತು. ಆದರೆ ಹೈಕಮಾಂಡ್ ಆದೇಶವನ್ನು ಪಾಲಿಸಲೇಬೇಕಾಗಿದ್ದರಿಂದ ಮೈತ್ರಿ ಕಡಿದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಛಾತಕ ಪಕ್ಷಿಯಂತೆ ಕಾಯುತ್ತಲೇ ಬಂದಿದ್ದ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಉರುಳಿ ಬೀಳುವ ಕೊನೆ ಗಳಿಗೆಯಲ್ಲೂ ಹೈಕಮಾಂಡ್ ಆದೇಶವನ್ನು ಪಾಲಿಸಿಕೊಂಡು ಬಂದಿದ್ದರಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತು ಬಿಜೆಪಿ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದರು.

ಅದೆಲ್ಲವನ್ನು ನೋಡಿದಾಗ ಮುಂದೆಯೂ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಂದಾಗಿಯೇ ಮುನ್ನಡೆಯುತ್ತಾರೆ ಎಂಬ ವಾತಾವರಣ ಕಂಡು ಬಂದಿತ್ತು. ಆದರೆ ಸರ್ಕಾರ ಪತನವಾಗಿ ಕೆಲವೇ ದಿನಗಳಲ್ಲಿ ಎರಡು ಪಕ್ಷಗಳ ನಾಯಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು.

 ಮುರಿದುಬಿತ್ತು ಮೈತ್ರಿ ಬಂಧ

ಮುರಿದುಬಿತ್ತು ಮೈತ್ರಿ ಬಂಧ

ಮೈತ್ರಿ ಸರ್ಕಾರವಿದ್ದ ಸಮಯದಲ್ಲಿ ಅಷ್ಟೇ ಅಲ್ಲ, ಸರ್ಕಾರ ಪತನವಾಗುವ ಕೊನೆ ಗಳಿಗೆವರೆಗೆ ಯಡಿಯೂರಪ್ಪರವರೇ ಸರ್ಕಾರವನ್ನು ಬೀಳಿಸಿದ್ದು ಎನ್ನುತ್ತಿದ್ದ ಎರಡು ಪಕ್ಷದ ನಾಯಕರು ಸರ್ಕಾರ ಪತನವಾದ ಮಾರನೆಯ ದಿನದಿಂದಲೇ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯತೊಡಗಿದ್ದರು.

ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರವರೇ ಕಾರಣ ಎಂಬ ಮಾತುಗಳು ಜೆಡಿಎಸ್ ವರಿಷ್ಠ ದೇವೇಗೌಡರ ಕಡೆಯಿಂದ ತೇಲಿ ಬಂದಿತ್ತು. ಅಲ್ಲಿ ತನಕ ಸಹಿಸಿಕೊಂಡಿದ್ದ ಸಿದ್ದರಾಮಯ್ಯ ಕೂಡ ಇದ್ದಕ್ಕಿದ್ದಂತೆ ಉಗ್ರ ಸ್ವರೂಪ ತಾಳಿಬಿಟ್ಟರು. ಅವರ ತಾಳ್ಮೆಯ ಕಟ್ಟೆ ಒಡೆದಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ಮಾಧ್ಯಮದವರ ಮುಂದೆ ಎರ್ರಾಬಿರ್ರಿ ಮಾತನಾಡಿಬಿಟ್ಟರು. ಅಲ್ಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಬಂಧ ಕರ್ನಾಟಕದ ಮಟ್ಟಿಗೆ ಮುರಿದು ಬಿದ್ದಿತು.

'ಬಂಡಾಯ ಶಾಸಕರನ್ನಿಟ್ಟುಕೊಂಡು ಸರ್ಕಾರ ನಡೆಸೋಕೆ ಆಗುತ್ತಾ?': ಬಿಜೆಪಿಗೆ ಸಿದ್ದರಾಮಯ್ಯ ಗುದ್ದು

 ಮೌನಕ್ಕೆ ಶರಣಾದ ಘಟಾನುಘಟಿ ನಾಯಕರು

ಮೌನಕ್ಕೆ ಶರಣಾದ ಘಟಾನುಘಟಿ ನಾಯಕರು

ಯಾವಾಗ ಸಿದ್ದರಾಮಯ್ಯ ಅವರು ದೇವೇಗೌಡರ ಕುಟುಂಬದ ಬಗ್ಗೆ ವಾಗ್ದಾಳಿ ನಡೆಸಿದರೋ ಕಾಂಗ್ರೆಸ್‌ನ ಒಂದಷ್ಟು ಮುಖಂಡರ ಪರಿಸ್ಥಿತಿ ಅಡಕೆ ಕತ್ತರಿಯಲ್ಲಿ ಸಿಕ್ಕಂತಾಗಿದೆ. ಸದ್ಯಕ್ಕೆ ಕೆಲವೇ ಕೆಲವು ನಾಯಕರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆಯಾದರೂ ಉಳಿದಂತೆ ಘಟಾನುಘಟಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ರಾಜಕೀಯ ಗುರು ದೇವೇಗೌಡರು ಮತ್ತು ಶಿಷ್ಯ ಸಿದ್ದರಾಮಯ್ಯ ಅವರ ನಡುವೆ ಜಿದ್ದಾ ಜಿದ್ದಿ ಆರಂಭವಾದಂತಿದೆ. ದೇವೇಗೌಡರು ಇದೀಗ ಕೈ ಹೈಕಮಾಂಡ್ ಮೂಲಕ ಸಿದ್ದರಾಮಯ್ಯ ಅವರನ್ನು ಹೆಡೆಮುರಿಗೆ ಕಟ್ಟುವ ನಿರ್ಧಾರ ಕೈಗೊಂಡಂತಿದೆ. ಕಾಂಗ್ರೆಸ್‌ನ ಹೈಕಮಾಂಡ್ ರಾಜ್ಯಕ್ಕೆ ಗುಲಾಂನಬಿ ಅಜಾದ್ ಅವರನ್ನು ಕಳುಹಿಸಿಕೊಟ್ಟು ಅವರ ಮೂಲಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಸದ್ಯಕ್ಕೆ ಅದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ಕ್ಷೇತ್ರ ಬಾದಾಮಿಯತ್ತ ಹೊರಟು ಹೋಗಿದ್ದಾರೆ.

 ಮಧ್ಯಂತರ ಚುನಾವಣೆಗೆ ಸಿದ್ಧತೆ

ಮಧ್ಯಂತರ ಚುನಾವಣೆಗೆ ಸಿದ್ಧತೆ

ಹಾಗೆ ನೋಡಿದರೆ ಕೆಲವು ದಿನಗಳಿಂದ ಸಿದ್ದರಾಮಯ್ಯ ಅಕ್ಟೀವ್ ಆಗಿದ್ದಾರೆ. ಅವರು ಪಕ್ಷದ ಸಂಘಟನೆಯತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಕಣ್ಣಿನ ಚಿಕಿತ್ಸೆ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಷ್ಟೇ ಅಲ್ಲ ಯಡಿಯೂರಪ್ಪ ನೇತೃತ್ವದ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಮಧ್ಯಂತರ ಚುನಾವಣೆ ನಡೆಯುವುದು ಖಚಿತವಾಗಿರುವುದರಿಂದ ಎಲ್ಲರೂ ತಯಾರಾಗಿರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ತಮ್ಮ ನಿವಾಸದಲ್ಲಿ ಪುತ್ರ ಯತೀಂದ್ರ ಪ್ರತಿನಿಧಿಸುವ ವರುಣಾ ಮತ್ತು ತಾನು ಸ್ಪರ್ಧಿಸಿ ಸೋಲು ಕಂಡ ಚಾಮುಂಡೇಶ್ವರಿ ಕ್ಷೇತ್ರದ ಬೆಂಬಲಿಗರನ್ನು ಕರೆಯಿಸಿ ಸಭೆ ನಡೆಸಿದ್ದಾರೆ. ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಗಮನ ನೀಡಿ ಎಂದು ಮುಖಂಡರಿಗೆ ಸಲಹೆ ನೀಡಿದ್ದಾರೆ. ಇಂದಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು ಹೀಗಾಗಿ ಎಲ್ಲರೂ ತಯಾರಾಗಿರಿ ಎಂದಿದ್ದಾರೆ.

ಡಿಕೆಶಿಗೆ ಹೆಚ್ಚಿನ ಶಕ್ತಿ, ಸಿದ್ದರಾಮಯ್ಯ ಯುಗಾಂತ್ಯ? ಹೈಕಮಾಂಡ್ ಪ್ಲಾನ್ ಏನು?

 ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಕರೆ

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಕರೆ

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಪ್ರತಿ ಗ್ರಾಮದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗುವಂತೆ ಕರೆನೀಡಿದ್ದಾರೆ. ಈಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿದ್ದು, ಹೆಚ್ಚು ದಿನ ಉಳಿಯಲ್ಲ ಎಂಬುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ನಡೆಯನ್ನು ಗಮನಿಸಿದರೆ ಅವರು ಮಧ್ಯಂತರ ಚುನಾವಣೆಗೆ ಸಜ್ಜಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎದ್ದಿರುವ ಅಸಮಾಧಾನವನ್ನು ನೋಡಿದರೆ ಜನ ಮತ್ತೆ ರೊಚ್ಚಿಗೆದ್ದು ಸಿದ್ದರಾಮಯ್ಯ ಅವರತ್ತ ಒಲವು ತೋರಿದರೆ ಅಚ್ಚರಿ ಪಡಬೇಕಾಗಿಲ್ಲ. ಬಹುಶಃ ಇದೇ ನಂಬಿಕೆಯಲ್ಲಿಯೇ ಸಿದ್ದರಾಮಯ್ಯ ಪಕ್ಷ ಸಂಘಟನೆಗೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡತೊಡಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the collapse of the coalition government, people thought that the leaders of the two parties will defend BS Yeddyurappa led government. But Siddaramaiah now woken up to organize congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more