"ಯಾರು ಪೇಮೆಂಟ್ ಕೊಡುತ್ತಾರೋ ಅಲ್ಲಿರುತ್ತಾರೆ ಇವರು"
ಮೈಸೂರು, ನವೆಂಬರ್ 28: ಯಾರು ಪೇಮೆಂಟ್ ಕೊಡುತ್ತಾರೋ ಅಲ್ಲಿ ಇವರು ಇರುತ್ತಾರೆ ಎಂದು ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರಿಗೆ ಶಾಸಕ ಸಾ.ರಾ.ಮಹೇಶ್ ಟಾಂಗ್ ನೀಡಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಸಖನನ್ನು ಹುಡುಕಿಕೊಂಡು ಹೋಗುತ್ತಾರೆಂದು ಜರಿದಿದ್ದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು. ಯಾರು ಹೆಚ್ಚು ಪೇಮೆಂಟ್ ಕೊಡುತ್ತಾರೋ ಅಲ್ಲಿ ವಿಶ್ವನಾಥ್ ಇರುತ್ತಾರೆ, ಆ ಪಕ್ಷಕ್ಕೆ ವಿಶ್ವನಾಥ್ ಹೋಗುತ್ತಾರೆ ಎಂದು ಸಾ.ರಾ.ಮಹೇಶ್ ಅವರದ್ದೇ ಶೈಲಿಯಲ್ಲಿ ಕುಟುಕಿದರು.
"ಸಾ.ರಾ ಮಹೇಶ್ ನನ್ನ ಸಮನಲ್ಲ, ಅವನ ಬಗ್ಗೆ ನಾನು ಮಾತನಾಡೋದಿಲ್ಲ"
'ಕಾಂಗ್ರೆಸ್ ನಲ್ಲಿದ್ದಾಗ ಪಕ್ಷವೇ ನಮ್ಮ ತಂದೆ-ತಾಯಿ ಅಂತಿದ್ದರು ವಿಶ್ವನಾಥ್. ಆಮೇಲೆ 30 ವರ್ಷಕ್ಕೆ ಡೈವೋರ್ಸ್ ಕೊಟ್ಟು ಬಂದರು" ಎಂದು ದೂರಿದರು.
"ಕೆಲವರು ಬೇಡ ಅಂದರೂ ನಾವು ಕರೆದುಕೊಂಡು ಬಂದೆವು. ಬಹಿರಂಗವಾಗಿ ಕೂಡಾವಳಿ ಮಾಡಿಕೊಂಡರೂ ಮತ್ತೆ ಒಂದು ವರ್ಷಕ್ಕೆ ಡೈವೋರ್ಸ್ ಕೊಟ್ಟರು. ಈಗ ಯಾರು ಪೇಮೆಂಟ್ ಕೊಡ್ತಾರೆ ಅಲ್ಲಿ ಇರುತ್ತಾರೆ. ಅಲ್ಲಿಗೆ ಸಖ ಯಾರು ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು" ಎಂದು ಸಾ.ರಾ.ಮಹೇಶ್ ವ್ಯಂಗವಾಡಿದರು.