ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಹಿಣಿ ಸಿಂಧೂರಿ ವಿರುದ್ಧ 6 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದ ಸಾ.ರಾ. ಮಹೇಶ್

|
Google Oneindia Kannada News

ಮೈಸೂರು, ಸೆಪ್ಟೆಂಬರ್ 3: ಮೈಸೂರು ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆಕ್ರೋಶ ಮುಂದುವರೆದಿದ್ದು, 6 ಕೋಟಿ ರೂ. ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಾ.ರಾ. ಮಹೇಶ್, "ಬಟ್ಟೆ, ಬ್ಯಾಗ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ. ಸುಮಾರು 6 ಕೋಟಿ ರೂ. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ," ಎಂದು ಗಂಭೀರವಾಗಿ ಆರೋಪಿಸಿದರು.

"ಇನ್ನು ಈಜುಕೊಳ, ಜಿಮ್, ಕಟ್ಟಡ ನವೀಕರಣದ ಹಣವನ್ನು ಅವರಿಂದಲೇ ವಸೂಲಿ ಮಾಡಿ. ಸರ್ಕಾರದ ತನಿಖಾ ವರದಿಗಳ ಮೂಲಕ ಅವರ ತಪ್ಪು ಸಾಬೀತಾಗಿದೆ. ರೋಹಿಣಿ ಸಿಂಧೂರಿಯವರ 12 ವರ್ಷದ ಅವಧಿಯನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಅದಕ್ಕೆ ರೋಹಿಣಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಾಗ ವಿರೋಧಿಸಿದ್ದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

Sa Ra Mahesh Made Rs 6 Cr Corruption Allegations Against Rohini Sindhuri

ಸಿಂಧೂರಿ ವಿರುದ್ಧ 8 ಆರೋಪಗಳನ್ನು ಹೊರಿಸಿದ ಸಾ.ರಾ
"ನನ್ನ 8 ಆರೋಪಗಳ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಾನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಿಎಸ್ ಪಿ. ರವಿಕುಮಾರ್‌ರನ್ನು ಭೇಟಿ ಮಾಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮುಂದೆ ದಕ್ಷತೆ ಇಲ್ಲದ ಅಪ್ರಾಮಾಣಿಕ ಅಧಿಕಾರಿ ನೇಮಕ ಮಾಡದಂತೆ ಮನವಿ ಮಾಡಿಕೊಂಡಿದ್ದೇನೆ. ಕಟ್ಟಡ ಕಾಮಗಾರಿಯಲ್ಲಿ ಸರ್ಕಾರಿ ಹಣ ದುರುಪಯೋಗ ಮಾಡಿಕೊಂಡಿರುವುದು. ಪಾರಂಪರಿಕ ಕಟ್ಟಡದ ಆದೇಶವನ್ನು ಗಾಳಿಗೆ ತೂರಿರುವುದು. ಈ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ," ಎಂದು ತಿಳಿಸಿದರು.

"ಇದು ಅಲ್ಲದೇ ಇನ್ನೂ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಮಯದಲ್ಲಿ ಎಷ್ಟು ಅಕ್ರಮ ಆಗಿರಬಹುದು. ರೋಹಿಣಿ ಸಿಂಧೂರಿ ತಮ್ಮ ಶಿಷ್ಯೆ ಎಂದು ಮನೀಷ್ ಹೇಳಿದ್ದರು. ಶಿಷ್ಯೆಗೆ ಇದೇ ಏನು ನೀವು ಹೇಳಿ ಕೊಟ್ಟಿರುವುದು?," ಎಂದು ಮನೀಷ್ ಮುದ್ಗಲ್ ವಿರುದ್ಧವೂ ವಾಗ್ದಾಳಿ ಮಾಡಿದರು.

"ಮುಖ್ಯ ಕಾರ್ಯದರ್ಶಿಗಳೇ ಏಕೆ ಸುಮ್ಮನಿದ್ದೀರಾ? ಎಲ್ಲಾ ದಾಖಲೆಗಳನ್ನು ನೀಡಿದರೂ ಸುಮ್ಮನೆ ಏಕೆ ಇದ್ದೀರಾ? ಕರ್ನಾಟಕ ರಾಜ್ಯದ ಜನರ ತೆರಿಗೆ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗುತ್ತಿದೆ. ಇದಕ್ಕೆ ಸಿಎಂ ಮನೆಗೆ ಹೋಗಿದ್ದಿರಾ? ಈ ಕುರಿತು ಮುಖ್ಯ ಕಾರ್ಯದರ್ಶಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು," ಎಂದು ಸಾ.ರಾ. ಮಹೇಶ್ ಆಗ್ರಹಿಸಿದರು.

"ಈ ಬಗ್ಗೆ ಸಿಎಂ, ಸಿಎಸ್ ಭೇಟಿ ಮಾಡುತ್ತೇನೆ. ಅಮಾನತು ಮಾಡಿ ತನಿಖೆ ನಡೆಸಬೇಕು. ಇಲ್ಲ ಮುಖ್ಯ ಕಾರ್ಯದರ್ಶಿಗಳ ಕಚೇರಿ ಮುಂದೆ ಧರಣಿ ಮಾಡುತ್ತೇನೆ," ಎಂದು ಎಚ್ಚರಿಕೆ ನೀಡಿದರು.

"ಕೋವಿಡ್ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ತಾಯಿ ಹೃದಯ ಇರಬೇಕಿತ್ತು. ಐಷಾರಾಮಿ ಜೀವನ ಮಾಡುವುದಕ್ಕೆ ಸಾರ್ವಜನಿಕರ ಹಣ ಬಳಕೆ ಮಾಡಲಾಗಿದೆ. ಇದನ್ನು ಕೇಳಿದರೆ ನನ್ನ ಮೇಲೆ ಆರೋಪ ಮಾಡುತ್ತಾರೆ. ಗುತ್ತಿಗೆದಾರ ಕೊಡುವುದೆಲ್ಲಾ ಅವರಿಗೆ ಕೊಟ್ಟಿದ್ದೇನೆ. ನಮಗೆ ಬಿಲ್ ಮಾಡಿಸಿ ಎಂದು ಗುತ್ತಿಗೆದಾರ ಕೇಳುತ್ತಿದ್ದಾರೆ. ಮೊದಲು ತನಿಖೆ ಆಗಬೇಕು. ಕ್ರಿಮಿನಲ್ ಕೇಸ್ ಬುಕ್ ಮಾಡಿ, ಕೆಲಸದಿಂದ ಅಮಾನತು ಮಾಡಿ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರನ್ನು ಅಮಾನತು ಮಾಡಿ, ಇಲ್ಲ ನಿಮ್ಮ ಕಚೇರಿ ಮುಂದೆ ಅಮರಾಣಾಂತ ಉಪವಾಸ ಮಾಡುತ್ತೇವೆ. ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿಯುತ್ತೇವೆ. ಈ ರೀತಿಯ ಭ್ರಷ್ಟಾಚಾರ ಮಾಡುವ ಅಧಿಕಾರಿಗೆ ತಕ್ಕ ಶಿಕ್ಷೆಯಾಗಬೇಕು. ಬೇರೆ ಶಾಸಕರು ತಿರುಪತಿ ದೇವರಂತೆ ನಮಗೇಕೆ ಎಂದು ಸುಮ್ಮನಿದ್ದಾರೆ. ನಾನು ಶ್ರವಣಬೆಳಗೊಳದ ಗೊಮ್ಮಟೇಶ್ವರ ಇದ್ದಂತೆ," ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.

English summary
JDS MLA Sa Ra Mahesh made Rs 6 cr Corruption allegations against IAS Officer Rohini Sindhuri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X