ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರದ ವಿವೇಕಾನಂದನಗರದಲ್ಲಿ ರಸ್ತೆಯೇ ಮಾಯ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 20: ತಿ.ನರಸೀಪುರದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿವೇಕಾನಂದನಗರದಲ್ಲಿ ಬಡಾವಣೆ ನಿರ್ಮಿಸಲಾಗಿದ್ದರೂ ಕೆಲವರು ಸಾರ್ವಜನಿಕ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ. ಆ ಕಾರಣಕ್ಕೆ ಇದೀಗ ರಸ್ತೆಯಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.

ವಿವೇಕಾನಂದನಗರ ಬಡಾವಣೆ ತಿ.ನರಸೀಪುರ ಪುರಸಭೆ ವ್ಯಾಪ್ತಿಯಲ್ಲಿದ್ದು, ಈ ಬಡಾವಣೆಯತ್ತ ಹೆಚ್ಚಿನ ಗಮನಹರಿಸದ ಕಾರಣದಿಂದಾಗಿ ಕೆಲವರು ಸಾರ್ವಜನಿಕ ರಸ್ತೆಯನ್ನೇ ನುಂಗಿ ಹಾಕಿದ್ದಾರೆ. ಇದರಿಂದಾಗಿ ಬಡಾವಣೆಯಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿ ದೊಡ್ಡ ವಾಹನಗಳು ಬರಲು ಸ್ಥಳವೇ ಇಲ್ಲದಂತಾಗಿದೆ.

Road goes missing in Vivekanandanagar T Narasipura Mysuru district

ಇದರಿಂದ ಬಡಾವಣೆಯಲ್ಲಿನ ಜನರು ಏನಾದರೂ ವಸ್ತುಗಳನ್ನು ತರಬೇಕಾದರೆ, ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಕರೆದೊಯ್ಯಲು ಪರದಾಡುವಂತಾಗಿದೆ. ಒಂದಷ್ಟು ದೂರ ಹೊತ್ತುಕೊಂಡೇ ಹೋಗಬೇಕಾಗಿದೆ. ಇನ್ನು ಹೊಸದಾಗಿ ಮನೆ ಕಟ್ಟುವವರು ಸರಕು- ಸಾಮಗ್ರಿ ತರಲು ಪರದಾಡಬೇಕಾಗಿದೆ. ಲಾರಿಗಳು ಬಡಾವಣೆಯ ರಸ್ತೆಗೆ ಬರಲು ಸಾಧ್ಯವಿಲ್ಲದಂತಾಗಿದೆ.

ಇಷ್ಟೆಲ್ಲ ಆದರೂ ಬಡಾವಣೆಯಲ್ಲಿ ಹೊಸ ಮನೆಗಳು ನಿರ್ಮಾಣವಾಗುತ್ತಲೇ ಇವೆ. ಇಲ್ಲಿ ಖಾಸಗಿ ವ್ಯಕ್ತಿಗಳು ಜಮೀನನ್ನು ಖಾಲಿ ನಿವೇಶನಗಳನ್ನಾಗಿ ಮಾಡಿ, ಮಾರಾಟ ಮಾಡಿದ್ದಾರೆ. ಇವರು ನಕ್ಷೆಯಲ್ಲಿ ತೋರಿಸಿರುವ ರಸ್ತೆಯ ಅಗಲ 24 ಅಡಿ ಇದ್ದರೂ ಅಕ್ಕ ಪಕ್ಕದ ನಿವಾಸಿಗಳು ಮನೆ ಕಟ್ಟುವಾಗ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಈಗ 10 ರಿಂದ 12 ಅಡಿಯಷ್ಟು ಮಾತ್ರ ಉಳಿದಿದೆ.

Road goes missing in Vivekanandanagar T Narasipura Mysuru district

ಇದರಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ, ಯುಜಿಡಿ, ಕುಡಿಯುವ ನೀರಿನ ಸರಬರಾಜು ಪೈಪ್ ಗಳ ಕಾಮಗಾರಿಗಳನ್ನು ಮಾಡಿದ ಮೇಲೆ ಉಳಿಯುವುದು 4 ರಿಂದ 6 ಅಡಿ ಮಾತ್ರ. ಈ ಪರಿಸ್ಥಿತಿಯಲ್ಲಿ ಸುಗಮ ಸಂಚಾರ ಎಲ್ಲಿಂದ ಸಾಧ್ಯವಾಗುತ್ತದೆ ಎಂಬುದು ಸ್ಥಳೀಯ ನಿವಾಸಿಗಳ ಪ್ರಶ್ನೆಯಾಗಿದೆ.

ಮನೆ ನಿರ್ಮಿಸಲು ಪರವಾನಗಿ ನೀಡುವ ಅಧಿಕಾರಿಗಳು ಸ್ಥಳದ ನಕಾಶೆ ಹಾಗೂ ಮೂಲ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲನೆ ಮಾಡದಿರುವುದು ಮತ್ತು ಪರವಾನಗಿ ಕೊಟ್ಟ ಮೇಲೆ ನಿಯಮಾನುಸಾರ ಕಟ್ಟಡ ನಿರ್ಮಾಣವಾಗುತ್ತಿದೆಯೇ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದಿರುವುದು ರಸ್ತೆ ಒತ್ತುವರಿಯಾಗಲು ಕಾರಣವಾಗಿದೆ.

Road goes missing in Vivekanandanagar T Narasipura Mysuru district

ಈಗಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಬಡಾವಣೆಯಲ್ಲಿ ಗೊಂದಲ, ಸಮಸ್ಯೆಗಳು ಉದ್ಭವಿಸುವುದರಲ್ಲಿ ಎರಡು ಮಾತಿಲ್ಲ. ಬಡಾವಣೆಯ ಸಮಸ್ಯೆ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬಡಾವಣೆಯ ನಿವಾಸಿಗಳು ದೂರಿದ್ದಾರೆ.

English summary
Road goes missing in Vivekanandanagar, T Narasipura, Mysuru district. Local people alleges, this situation because of government officials negligence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X