ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಫೈನಲ್‌ ಲೊಕೇಶನ್‌ ಸರ್ವೆಗೆ ಮರು ಟೆಂಡರ್

By Coovercolly Indresh
|
Google Oneindia Kannada News

ಮೈಸೂರು, ಮೇ 24: ಕರ್ನಾಟಕ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ ಪ್ರವಾಸಿ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸಲು ದಶಕಗಳಿಂದಲೇ ಪ್ರಯತ್ನ ನಡೆಯುತ್ತಿದೆ. ಆದರೆ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ಮುಂದಕ್ಕೆ ಹೋಗುತ್ತಲೇ ಇದೆ.

ಮೈಸೂರಿನಿಂದ ಬೆಳಗೊಳದ ಮಾರ್ಗವಾಗಿ ಕುಶಾಲನಗರ ಪಕ್ಕದ ಕೊಪ್ಪದವರೆಗೆ ರೈಲ್ವೇ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಿದ್ದ ರೈಲ್ವೇ ಅಧಿಕಾರಿಗಳು ಈ ಯೋಜನೆ ಆದಾಯದ ದೃಷ್ಟಿಯಿಂದ ಕಾರ್ಯಸಾಧುವಲ್ಲ ಎಂದು ತಳ್ಳಿ ಹಾಕಿದ್ದರು. ಸಾಕಷ್ಟು ಒತ್ತಡ, ಪ್ರಭಾವದ ನಂತರ ಕೇಂದ್ರ ಸರ್ಕಾರವು ಈ ಯೋಜನೆಗೆ 2019ನೇ ಇಸವಿಯಲ್ಲಿ ಒಪ್ಪಿಗೆ ನೀಡಿದೆ.

ಅಂತಿಮ ಹಂತವಾಗಿ ಅಂತಿಮ ಸ್ಥಳ ಸಮೀಕ್ಷೆ

ಅಂತಿಮ ಹಂತವಾಗಿ ಅಂತಿಮ ಸ್ಥಳ ಸಮೀಕ್ಷೆ

ಒಟ್ಟು 1,885 ಕೋಟಿ ರೂಪಾಯಿಗಳ ವೆಚ್ಚದ ಮೈಸೂರಿನಿಂದ ಕುಶಾಲನಗರದವರೆಗಿನ 87 ಕಿಲೋಮೀಟರ್‌ ಉದ್ದದ ಈ ರೈಲು ಮಾರ್ಗಕ್ಕೆ ರೈಲ್ವೇ ಸಚಿವಾಲಯ ಮಂಜೂರಾತಿಯನ್ನೂ ನೀಡಿದೆ. ಈಗಾಗಲೇ ಈ ಯೋಜನೆಯ ಸರ್ವೆ ಕಾರ್ಯವು ಮೂರು ವರ್ಷಗಳ ಹಿಂದೆಯೇ ನಡೆದಿದ್ದು, ಈ ಯೋಜನೆಯ ಅಂತಿಮ ಹಂತವಾಗಿ ಅಂತಿಮ ಸ್ಥಳ ಸಮೀಕ್ಷೆ (ಫೈನಲ್‌ ಲೊಕೇಶನ್ ‌ಸರ್ವೆ) ವರದಿ ಸಿದ್ಧಪಡಿಸಬೇಕಿದೆ. ಈ ಸಮೀಕ್ಷಾ ವರದಿ ಸಿದ್ಧಪಡಿಸಿದ ನಂತರವಷ್ಟೇ ಈ ಯೋಜನೆಗೆ ಆಗುವ ನಿಖರ ವೆಚ್ಚವನ್ನು ತಿಳಿಯಲು ಸಾಧ್ಯವಿದ್ದು, ರೈಲ್ವೇ ಮಾರ್ಗ ನಿರ್ಮಾಣದ ಕಾರ್ಯವನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲೂ ಈ ವರದಿ ಸಿದ್ಧಪಡಿಸಬೇಕಿದೆ.

ಕೋವಿಡ್-19 ಸಾಂಕ್ರಾಮಿಕದಿಂದ ವಿಳಂಬ

ಕೋವಿಡ್-19 ಸಾಂಕ್ರಾಮಿಕದಿಂದ ವಿಳಂಬ

ರೈಲ್ವೇ ಬಜೆಟ್ ಪ್ರಕಾರ ಈ ಸಮೀಕ್ಷೆಯ ಕೆಲಸ ಕಳೆದ ವರ್ಷದ ಜೂನ್‌ನಲ್ಲೇ ಮುಗಿಯಬೇಕಿತ್ತು. ಆದರೆ ರೈಲ್ವೇ ಅಧಿಕಾರಿಗಳು ಸಮೀಕ್ಷೆ ಸಿದ್ಧಪಡಿಸಲು ಖಾಸಗಿ ಕಂಪನಿಗಳಿಗೆ ಟೆಂಡರ್ ನೀಡುವುದು ಮತ್ತು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗಿದ್ದು, ಅಂತಿಮ ಸ್ಥಳ ಸಮೀಕ್ಷಾ ಕಾರ್ಯ ಇನ್ನೂ ಆಮೆ ವೇಗದಲ್ಲಿ ಸಾಗುತ್ತಿದೆ.

6 ತಿಂಗಳ ಹಿಂದೆಯೇ ಸಮೀಕ್ಷೆ ನಡೆಸಲು ಟೆಂಡರ್ ಕರೆದಿದ್ದು, ನಾಲ್ಕು ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ಆದರೆ ಬಿಡ್‌ಗಳ ಪರಿಶೀಲನೆಯಲ್ಲಿ ನಾಲ್ಕು ಕಂಪೆನಿಯೂ ಅರ್ಹತೆ ಗಳಿಸುವಲ್ಲಿ ವಿಫಲವಾದವು. ಇದರಿಂದಾಗಿ ಈಗ ಹೊಸದಾಗಿ ಸಮೀಕ್ಷೆ ವರದಿ ಸಿದ್ಧಪಡಿಸಲು 5 ದಿನಗಳ ಹಿಂದೆಯೇ ಟೆಂಡರ್ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ 8ರಂದೇ ಬಿಡ್ ತೆರೆಯಲಾಗುವುದು

ಜೂನ್‌ 8ರಂದೇ ಬಿಡ್ ತೆರೆಯಲಾಗುವುದು

ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೇ ಡೆಪ್ಯುಟಿ ಚೀಫ್‌ ಇಂಜಿನಿಯರ್ ಮುರಳೀಧರನ್ ಅವರು ಮುಂದಿನ ಜೂನ್‌ 8ರಂದು ಬಿಡ್‌ಗಳನ್ನು ತೆರೆಯಲು ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು ಬಿಡ್ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಲು 21 ದಿನಗಳಿಗೆ ಬಿಡ್ ತೆರೆಯುವ ನೀತಿಯನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ಈ ಹಿಂದೆ ಟೆಂಡರ್ ಪ್ರಕಟಣೆಯ ದಿನಾಂಕದಿಂದ ಬಿಡ್ ಸಲ್ಲಿಕೆಗೆ 30 ದಿನಗಳ ಅವಕಾಶ ನೀಡಲಾಗುತ್ತಿತ್ತು. ಇದೀಗ ಅದನ್ನು 21 ದಿನಗಳಿಗೆ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಜೂನ್‌ 8ರಂದೇ ಬಿಡ್‌ಗಳನ್ನು ತೆರೆದು ಸೂಕ್ತ ಬಿಡ್‌ದಾರರನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು.

ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ

ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ

ಅಂತಿಮ ಸ್ಥಳ ಸಮೀಕ್ಷೆ ವರದಿ ಸಿದ್ಧಪಡಿಸಿದ ನಂತರ, ಅದನ್ನು ರೈಲ್ವೇ ಮಂಡಳಿಯ ಅನುಮೋದನೆಗಾಗಿ ದೆಹಲಿಗೆ ಕಳಿಸಲಾಗುತ್ತದೆ. ಅನುಮೋದನೆಗೊಂಡ ಬಳಿಕ ಮೊದಲ ಹಂತದಲ್ಲಿ ಹಣ ಬಿಡುಗಡೆ ಆಗಲಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಂತರ ರೈಲ್ವೇ ಮಾರ್ಗ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಕರೆದು ಹಂತ ಹಂತವಾಗಿ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರವೂ ಶೇ.50ರಷ್ಟು ವೆಚ್ಚವನ್ನು ಭರಿಸಲಿದೆ. ಆದರೆ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿಯ ಕಾರಣದಿಂದ ಈ ಯೋಜನೆ ಇನ್ನೊಂದು ದಶಕ ಕಾಗದದಲ್ಲೇ ಉಳಿದರೂ ಆಶ್ಚರ್ಯವಿಲ್ಲ.

English summary
The Railway Ministry has sanctioned the 87 km long Mysuru- Kushalanagar railway line at a cost of Rs 1,885 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X