ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಪ್ರವಾಹದ ಬಗ್ಗೆ ಪತ್ರಕರ್ತ ರವಿ ಪಾಂಡವಪುರ ಪುಸ್ತಕ ಬಿಡುಗಡೆ

|
Google Oneindia Kannada News

ಮೈಸೂರು, ಡಿಸೆಂಬರ್ 13 : ಪತ್ರಕರ್ತರೆಂದರೆ ಸಾಕು, ಅವರು ಕೇವಲ ಸುದ್ದಿ ಮಾಡಿ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಪದೇ ಪದೇ ಅದನ್ನೇ ಬಿತ್ತರಿಸುತ್ತಾರೆ ಎಂಬ ಮಾತಿದೆ. ಆದರೆ ಪತ್ರಕರ್ತ ರವಿ ಪಾಂಡವಪುರ ಇದಕ್ಕಿಂತ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಾವು ಕಂಡ ಕೊಡಗಿನ ಜಲಪ್ರಳಯವನ್ನು ಅಕ್ಷರಶಃ ಕಣ್ಣೆದುರು ಕಟ್ಟುವಂತೆ ಹಾಗೂ ಕಣ್ಣಂಚು ಒದ್ದೆಯಾಗುವಂತೆ ಅಕ್ಷರ ರೂಪದಲ್ಲಿ ಇಳಿಸುವ ಪ್ರಯತ್ನ ಮಾಡಿದ್ದಾರೆ.

ಹೌದು, ಕೊಡಗಿನ ಜಲಪ್ರಳಯದ ವರದಿಗಾಗಿ ಅಲ್ಲಿ ತೆರಳಿದಾಗ ತಮಗೆ ಕಂಡ ಚಿತ್ರಣವನ್ನು ಬರೆದು ಪುಸ್ತಕ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. ಡಿಸೆಂಬರ್ 14ರ ನಾಳೆ ಮೈಸೂರಿನ ಅಭಿರುಚಿ ಪ್ರಕಾಶನ ವತಿಯಿಂದ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಪತ್ರಕರ್ತ ರವಿ ಪಾಂಡವಪುರ ಬರೆದಿರುವ 'ಕಥೆ ಹೇಳುವೆ ನನ್ನ' ಕೊಡಗಿನ ನೊಂದ ಹೃದಯಗಳು.. ಮಿಡಿದ ಮನಗಳು ಪುಸ್ತಕ ಬಿಡುಗಡೆಗೊಳ್ಳಲಿದೆ.

ಕೊಡಗು: ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, 9.85 ಲಕ್ಷಕ್ಕೆ ಮನೆ ಕೊಡಗು: ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, 9.85 ಲಕ್ಷಕ್ಕೆ ಮನೆ

ಪ್ರವಾಹದಲ್ಲಿ ಮೃತರಾದ ಮಂಜುಳಾ ತಂದೆ ಸೋಮಯ್ಯ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಭಾರಿ ಜಲಪ್ರಳಯದಿಂದ ಕೊಡಗಿನಲ್ಲಿ ಉಂಟಾದ ನೈಜ ಪ್ರಕರಣಗಳೇ ಕಥೆಗಳಾಗಿ ಹೊಮ್ಮಿದ್ದು, 125 ಪುಟಗಳಲ್ಲಿ 29 ಕಥೆಗಳಿವೆ. ತಂದೆ ತಾಯಿಯನ್ನು ಕಳೆದಕೊಂಡವರು, ಮಕ್ಕಳನ್ನು ಕಳೆದುಕೊಂಡವರು, ಜೀವನವನ್ನೇ ಕಳೆದುಕೊಂಡ ಸಂತ್ರಸ್ತರು, ಊರುಗೋಲಾಗಿದ್ದ ಬದುಕನ್ನೇ ಕಳೆದುಕೊಂಡವರ ಬವಣೆಗಳನ್ನು ಈ ಕಥೆಗಳ ವಸ್ತು ವಿಷಯವಾಗಿದೆ, ಪ್ರತಿಯೊಂದು ಕಥೆಯು ಮನಕಲಕುವುದು.

Ravi Pandavapura book about Kodagu flood releasing on Friday in Mysuru

ಪುಸ್ತಕವು 105 ರುಪಾಯಿ ಮುಖಬೆಲೆ ಹೊಂದಿದ್ದು, ಶುಕ್ರವಾರದಂದು ಪುಸ್ತಕ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಕೊಡಗಿನ ನೆರೆ ಸಂತ್ರಸ್ತರ ನಿಧಿಗೆ ನೀಡಲಾಗುವುದು ಎಂದು ಲೇಖಕ ರವಿ ಪಾಂಡವಪುರ ತಿಳಿಸಿದ್ದಾರೆ.

ಇನ್ನು ಪುಸ್ತಕದ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿದ ರವಿ, ಇದು ನನ್ನ ಎರಡನೇ ಪುಸ್ತಕ. ನಾನು ವರದಿಗಾಗಿ ತೆರಳಿದ್ದಾಗ ಇದುವರೆಗೂ ಹೆಚ್ಚು ಕಾಡಿದ್ದು ಕೊಡಗಿನ ಪ್ರವಾಹ. ಕೊಡಗಿನ ಜಲಪ್ರಳಯದಿಂದ ಸಂಭವಿಸಿದ ಅವಘಡಗಳನ್ನು, ಮಿಡಿದ ಮನಗಳ ವ್ಯಥೆಗಳನ್ನು, ಮಾನವೀಯತೆ ನೆಲೆಗಟ್ಟಿನಲ್ಲಿ ಮೂಡಿದ ಸಾರ್ವಜನಿಕ, ಮಾಧ್ಯಮಗಳ, ಸೈನ್ಯದ ಸಹಕಾರಗಳನ್ನು ಎಳೆಎಳೆಯಾಗಿ ಹೇಳುವ ಪ್ರಯತ್ನವನ್ನು ಪುಸ್ತಕದಲ್ಲಿ ಮಾಡಲಾಗಿದೆ.

ಕರ್ನಾಟಕದಲ್ಲಿ ಪ್ರವಾಹದಿಂದ ನಷ್ಟ : 546 ಕೋಟಿ ಕೊಟ್ಟ ಕೇಂದ್ರ ಕರ್ನಾಟಕದಲ್ಲಿ ಪ್ರವಾಹದಿಂದ ನಷ್ಟ : 546 ಕೋಟಿ ಕೊಟ್ಟ ಕೇಂದ್ರ

ಒಂದೊಂದು ಕಥೆಯು ವಿಭಿನ್ನವಾದ ನೋವನ್ನು ಸಂಕಷ್ಟವನ್ನು ಬಿಡಿಸುತ್ತದೆ ಎಂದರು.

==

ಇನ್ನು ಪುಸ್ತಕ ಬಿಡುಗಡೆಗೂ ಮುಂಚೆ ಆ ಪುಸ್ತಕದ ಬಗ್ಗೆ ವಿಮರ್ಶಕ ಗೊವಿಂದರಾಜು ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇಲ್ಲಿದೆ ಅದರ ಸಾರ.

Ravi Pandavapura book about Kodagu flood releasing on Friday in Mysuru

ಅತ್ತ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಆದರೆ ಪ್ರಕೃತಿಯ ಬಗಲಲ್ಲಿ ಬೇರೇನೋ ಇತ್ತು. ದೇಶಕ್ಕೆ ಸೈನಿಕರನ್ನು ಕೊಡುಗೆ ನೀಡುವ ವೀರ ಯೋಧರ ನೆಲ, ದಕ್ಷಿಣದ ಕಾಶ್ಮೀರ ಎಂದೇ ಪ್ರಸಿದ್ಧವಾದ ಕೊಡಗು ಮತ್ತು ಪ್ರಕೃತಿಯ ರಮಣೀಯತೆಯಿಂದಲೇ ವಿಸ್ಮಯ ಹುಟ್ಟಿಸುವ ದೇವರ ನಾಡು ಕೇರಳದ ಮೇಲೆ ಮಳೆರಾಯ ಮುನಿಸಿಕೊಂಡಿದ್ದ.

ಪರಿಣಾಮ, ಎಡೆಬಿಡದೆ ಸುರಿದ ಮಳೆಯಿಂದಾಗಿ ಸಾವಿರಾರು ಜನರ ಬದುಕು ನೆಲೆ ಕಳೆದುಕೊಂಡಿತ್ತು. ಇದನ್ನು ಕಂಡು ದೇಶದ ಜನ ಮಮ್ಮಲ ಮರುಗಿದರು. ಕಣ್ಣೀರು ಸುರಿಸಿದರು. ಸಹಾಯ ಹಸ್ತ ಚಾಚಿದರು. ಜತೆಗೆ ಪ್ರಕೃತಿಯ ಮೇಲೆ ಮಾನವನ ಆಕ್ರಮಣ ವಿಪರೀತವಾಗಿ ವಿಕೋಪ ಉಂಟಾಗಿ ಸಹ ಜೀವಿಗಳು ಬದುಕು ಅಲ್ಲೋಲ ಕಲ್ಲೋಲವಾಗಲಿದೆ ಎಂಬುದನ್ನು ಅಕ್ಷರಶಃ ಕಣ್ಣಾರೆ ಕಂಡರು.

ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ

ನಿರ್ದೇಶಕ ಪುಟ್ಟಣ್ಣ ಕಣಗಾಲರ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದ ಅಲಮೇಲು ಪಾತ್ರಧಾರಿ ತನ್ನ ಬದುಕಿನ ಬವಣೆ, ಕಷ್ಟ-ಸಂಕಷ್ಟ, ತಾನು ವಾಸಿಸುತ್ತಿರುವ ನರಕ ಸದೃಶದ ಜೀವನ ಎಲ್ಲವನ್ನೂ ಬಿಚ್ಚಿಡುವ ಗೀತೆಯ ಮೊದಲ ಸಾಲನ್ನು ತಮ್ಮ ಪುಸ್ತಕದ ಹೆಸರಾಗಿಸಿರುವ ರವಿ, ಅದರಂತೆಯೇ ದುರಂತದ ಚಿತ್ರಣಗಳನ್ನು ಸೇರಿಸಿದ್ದಾರೆ.

Ravi Pandavapura book about Kodagu flood releasing on Friday in Mysuru

ಆಗಸ್ಟ್ 15ರಿಂದ 25ರವರೆಗೆ ಅತಿವೃಷ್ಟಿಯಿಂದ ಉಂಟಾದ ಕೊಡಗು ಮತ್ತು ಕೇರಳದಲ್ಲಿ ಜರುಗಿದ ದುರಂತ ಘಟನಾವಳಿಗಳ ಕರುಣಾಜನಕ ಕಥೆಗಳನ್ನು, ನರಳಿ ನಲುಗಿದ ನೋವಿನ ಬದುಕಿನ ವ್ಯಥೆಯನ್ನು ನಿರೂಪಿಸಿದ್ದಾರೆ.

ರೆಸಾರ್ಟ್, ಹೋಮ್ ಸ್ಟೇ, ರಸ್ತೆ ನಿರ್ಮಾಣ, ಬೋರ್‌ವೆಲ್ ಕೊರೆಸುವುದು, ಮರ ಕಡಿಯುವುದು, ಸ್ವಾಭಾವಿಕವಾಗಿ ಚಿಗುರಿ ಬೆಳೆದ ಮರಗಳನ್ನು ಕಡಿದು ಸಿಲ್ವರ್ ಮರಗಳನ್ನು ನೆಟ್ಟ ಪರಿಣಾಮವಾಗಿ ಆಗಿರಬಹುದಾದ ಪ್ರಾಕೃತಿಕ ದುರಂತವನ್ನು 'ಕಾವೇರಿ' ತನ್ನ ಸ್ವಗತದ ಮೂಲಕ ಹೊರ ಹಾಕುತ್ತಾಳೆ. ಕೊಡಗಿನ ಕಾವೇರಿಯನ್ನು ಪಾತ್ರವಾಗಿಸಿ ತಾನೇ ತನ್ನ ಕಥೆಯನ್ನು ಹೇಳಿಕೊಳ್ಳುವ ಮೂಲಕ ಇಡೀ ಪುಸ್ತಕ ತೆರೆದುಕೊಳ್ಳುತ್ತದೆ.

ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು

ಹೀಗೆ ತೆರೆದುಕೊಳ್ಳುವ ಕಥೆಗಳು, ಹಲವು ಮುಖಗಳನ್ನು ಅನಾವರಣಗೊಳಿಸುತ್ತವೆ. ಮಾನವೀಯತೆಗೆ ಧರ್ಮದ ಅಡ್ಡಿಯಿಲ್ಲ. ಶಾಂತಿ, ಸಹಬಾಳ್ವೆ, ನೆಮ್ಮದಿಯ ಬದುಕನ್ನು ಉಸಿರಾಡುತ್ತಿದ್ದ ಕೊಡಗು ಈಗೀಗ ಧರ್ಮದ ಹೆಸರಿನಲ್ಲಿ ಅರಾಜಕತೆಯ ನೆಲವಾಗುತ್ತಿದೆ. ಇದು ಆತಂಕದ ವಿಷಯ. ಆದರೆ ಅತಿವೃಷ್ಠಿ ಸೃಷ್ಟಿಸಿದ ಅವಾಂತರ ಇಲ್ಲಿನ ಜನರನ್ನು ಧರ್ಮ ಭೇದವನ್ನು ಮರೆಸಿ ಮಾನವೀಯತೆಯನ್ನು ಮೆರೆಸಿತು.

ರಾಮನ ಸೇವಕ, ಅಲ್ಲಾಹ್ ನ ಆರಾಧಕ ಮತ್ತು ಯೇಸುವಿನ ಪ್ರತಿಪಾದಕ ಎಂದು ಬೀಗುತ್ತಿದ್ದವರು ನೋವಿಗೆ ಬಾಗಿದರು. ಮಾನವೀಯತೆಗೆ ತಲೆದೂಗಿದರು. ಇದಕ್ಕೆ ಹಲವಾರು ನಿದರ್ಶನಗಳು ಇಲ್ಲಿವೆ. ಸುಂಟಿಕೊಪ್ಪದ ರಾಮನ ಭಕ್ತವೊಬ್ಬ ಹೆಂಡತಿ ಸುನೀತಾ ಮತ್ತು ಮಕ್ಕಳನ್ನು ಬಿಟ್ಟು ಕೆಲಸಕ್ಕಾಗಿ ಮೈಸೂರಿಗೆ ಬಂದ. ಆದರೆ ಮಹಾಮಳೆಗೆ ಹೆದರಿ ಮನೆ ಬಾಗಿಲು ಹಾಕಿ ಅವಿತಿದ್ದ ಆತನ ಕುಟುಂಬವನ್ನು ರಕ್ಷಿಸಿದ್ದು 12 ಜನ ಮುಸ್ಲಿಂ ಯುವಕರ ತಂಡ.

ಮುಕ್ಕೋಡ್ಲುವಿನ ಮುಸ್ಲಿಂ ಕುಟುಂಬದ ಯಜಮಾನನಿಗೆ ದುಬೈನಲ್ಲಿ ನೌಕರಿ. ಗುಡ್ಡದ ಮೇಲಿನ ಮನೆಯಲ್ಲಿ ಉಳಿದವರು; ವಯಸ್ಸಾದ ಅಜ್ಜಿ, ಅನಾರೋಗ್ಯ ಪೀಡಿತ ಹೆಂಗಸು ಮತ್ತು ಅಂಗವಿಕಲ ಬಾಲೆ. ಸಾವನ್ನು ಸಂಧಿಸಲಿದ್ದ ಅವರನ್ನು ಬದುಕಿಸಿದ ಹಿಂದೂ ಯುವಕರು ರಾಮಮಂದಿರದಲ್ಲಿ ಇರಿಸಿ ಕಾಪಾಡಿದರು.

ಮಕ್ಕಂದೂರು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮುಸ್ಲಿಂ ಹೆಣ್ಣುಮಗಳನ್ನು ಎಳೆದು ತಂದ ಅಜಯ್. ಮುಕ್ಕೋಡ್ಲು ಬಳಿ ಸಾವಿನ ಸುಳಿಗೆ ಸಿಲುಕಿದ್ದ ಮಗುವನ್ನು ಎದೆಗವಚಿ ಕಾಪಾಡಿದ ವಿನ್ಸೆಂಟ್. ಹಟ್ಟಿಹೊಳೆ ಬಂಡೆಗಲ್ಲುಗಳ ನಡುವೆ ನರಳುತ್ತಿದ್ದ ರಾಮನನ್ನು ರಕ್ಷಿಸಿದ ಸಮೀರ್ ಧರ್ಮದ ಹಂಗು ತೊರೆದು ಮಾನವೀಯತೆಯ ಮರ್ಮಕ್ಕೆ ದನಿಯಾದರು.

ಸಂರಕ್ಷಿಸಲ್ಪಟ್ಟ ಎಲ್ಲರಿಗೂ ತಾತ್ಕಾಲಿಕ ವಾಸ ತಾಣವಾದ ಖತೀಜಾ ಉಮ್ಮ ಮದರಸ, ಸಂತ ಅಂಥೋಣಿ ಚರ್ಚ್ ಮತ್ತು ರಾಮಮಂದಿರಗಳು ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಪಾಠವನ್ನು ಮನವರಿಕೆ ಮಾಡಿಕೊಡುತ್ತವೆ.

ಅಷ್ಟೂ ದಿನ ನಡೆದ ಪ್ರಾಕೃತಿಕ ದುರಂತ ಪೂರ್ತಿ ಕಣ್ಣೀರ ಕಥೆಯೇ. ಅದನ್ನು ತುಸು ಹೆಚ್ಚು ಭಾವುಕವಾಗಿಯೇ ವ್ಯಕ್ತಪಡಿಸಿರುವ ಲೇಖಕರು ಓದುಗರ ಕಣ್ಣಲ್ಲಿ ಕಣ್ಣೀರ ಹನಿ ಜಿನುಗುವಂತೆ ಮಾಡುತ್ತಾರೆ. "ಕಂದನ ಬಾಯಿ ಮೊಲೆ ಕಚ್ಚದೆ, ನೆಲ ಕಚ್ಚಿದ ಆ ಎರಡು ತೊಟ್ಟು ಮೊಲೆ ಹಾಲು ನನಗೆ ಭಾರ ಎನಿಸಿತು" ಎನ್ನುವ ಕಂದನ ಕಳೆದುಕೊಂಡ ತಾಯಿಯ ಹೃದಯಸ್ಪರ್ಶಿ ಮಾತುಗಳು ಎಂತಹವರನ್ನೂ ಮರುಗಿಸುತ್ತವೆ.

ತಮಿಳುನಾಡಿನ ಕರೂರು ಜಿಲ್ಲೆಯ 12 ವರ್ಷದ ಅಕ್ಷತಾ ಹೃದಯದಲ್ಲಿನ ರಂದ್ರ ಶಸ್ತ್ರಚಿಕಿತ್ಸೆಗೆ ಜನರಿಂದ ಸಂಗ್ರಹಿಸಿದ 2.5 ಲಕ್ಷವನ್ನು ನೀಡಿದ್ದು. ವಿಜಯಪುರ ಜಿಲ್ಲೆಯ ರದಾಮಟ್ಟಿಯ 4ನೇ ತರಗತಿ ಓದುತ್ತಿರುವ ಸುಸ್ಮಿತಾ ಜಿಲ್ಲಾಡಳಿತವೇ ಪರಿಹಾರ ನಿಧಿ ಸಂಗ್ರಹ ಮಾಡಲು ಕಾರಣವಾದದ್ದು ವಿಸ್ಮಯವಾದರೂ ಸತ್ಯ.

ಹಬ್ಬಕ್ಕೆ ಹೊಸಬಟ್ಟೆ ಖರೀದಿಸಲು ಇರಿಸಿದ್ದ 1 ಸಾವಿರವನ್ನು ನೀಡಿದ ಚಿಕ್ಕಮಗಳೂರಿನ ಮೂಡಿಗೆರೆಯ ಬಾಪೂ ನಗರದ ನದೀಮ್ ಪುತ್ರ ಜೀಯಾನ್ ಅಹ್ಮದ್ನ ಔದಾರ್ಯ ದೊಡ್ಡವರಿಗೆ ನೀತಿ ಮತ್ತು ಮೌಲ್ಯದ ಪಾಠವನ್ನು ಬಿತ್ತರಿಸುತ್ತವೆ.

ಅಷ್ಟೇ ಅಲ್ಲ, ತಮಗಾದ ನೋವನ್ನು ಲೆಕ್ಕಿಸದೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಪತ್ರಕರ್ತರು, ದೇಶದ ರಕ್ಷಣಾ ಕಾರ್ಯದ ತಂಡಗಳು, ಸ್ಥಳೀಯ ಯೋಧರ ಪರಿಶ್ರಮ ಹಾಗೂ ಅಧಿಕಾರಿಗಳ ಸಕಾಲಿಕ ಸಹಾಯವನ್ನು ಸ್ಮರಿಸಿರುವುದು ಔಚಿತ್ಯಪೂರ್ಣ.

ನೋವಿನ ಕಥೆಗಳನ್ನು ನೋವಿನಲ್ಲಿ ಅದ್ದಿದಂತೆಯೇ ಹೇಳಿ ಬಿಡಬೇಕು ಎಂಬ ಧಾವಂತದಲ್ಲಿ ಒಂದೇ ಗುಕ್ಕಿನಲ್ಲಿ ತಮಗೆ ದಕ್ಕಿದ ಅಷ್ಟೂ ಕಥೆಗಳನ್ನು ಬರೆದು ಮುಗಿಸಿರುವ ಅವರು, ಕಥೆಗಳಲ್ಲಿ ಬರುವ ಹಲವು ನಗಣ್ಯ ವ್ಯಕ್ತಿಗಳ ಪಾತ್ರಗಳೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಾರೆ. ಆದರೆ ಅವರ ಕಥೆಯನ್ನೂ ಅಲ್ಲಿಗೇ ನಿಲ್ಲಿಸಿ ಮುಂದೇನಾಯಿತು ಎಂಬ ಬಗ್ಗೆ ಕುತೂಹಲ ಹುಟ್ಟಿಸಿ ಮುಂದೆ ಸಾಗಿಬಿಡುತ್ತಾರೆ.

ಕರುಣೆಯ ಕಡಲನ್ನೇ ಉಕ್ಕಿಸುವ ಕಥೆಗಳು ಓದುಗರನ್ನು ಇನ್ನಿಲದಂತೆ ಕಾಡಿಸುತ್ತವೆ. ನೋವಿನ ಕಥೆಗಳನ್ನು ಹೇಳುವುದಕ್ಕೆ ಅತಿ ಗ್ರಾಂಥಿಕ ಭಾಷೆ ಅಡ್ಡಿ ಎಂಬುದನ್ನು ಮನಗಂಡಂತೆ ತೋರುವ ರವಿ ಅವರ ಬರೆಹ ಆಡು ಮಾತಿನಲ್ಲಿ ಇರುವುದರಿಂದ ಕಥೆಯ ಓಘಕ್ಕೆ ಒಗ್ಗಿಕೊಂಡಂತಿದೆ. ಹಾಗಾಗಿ ಅವರು ಹೇಳುತ್ತಾ ಸಾಗುವ ಕಥೆಗಳು ಮನಸಿಗೆ ಸೀದಾ ಹತ್ತಿರವಾಗುತ್ತವೆ.

ವರದಿಯಾಗಿಯೋ ಅಥವಾ ಮಾನವೀಯ ವರದಿಯಾಗಿಯೋ ಮುಗಿದು ಹೋಗಲಿದ್ದ ಈ ಘಟನೆಗಳಿಗೆ ಒಂದಷ್ಟು ಮಾಹಿತಿ ಜತೆಗೆ ಭಾವುಕತೆ ಮತ್ತು ತಮ್ಮ ಅಭಿಪ್ರಾಯಗಳನ್ನು ಸೇರಿಸುವ ಮೂಲಕ ದಾಖಲೆಯಾಗಿ ಉಳಿಸುವ ಲೇಖಕರ ಶ್ರಮ ಬರೆವಣಿಗೆಯಲ್ಲಿ ಎದ್ದು ಕಾಣುತ್ತದೆ.

English summary
Journalist Ravi Pandavapura write about Kodagu floods book will be released on Friday in Mysuru. Here is the complete details about book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X