ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಆರೋಪಕ್ಕೆ ಗದ್ಗದಿತರಾಗಿ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 5: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವಿನ ಪ್ರಕರಣಕ್ಕೆ ಮೈಸೂರು ಜಿಲ್ಲಾಧಿಕಾರಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದರು.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ತಿರುಗೇಟು ನೀಡಿ ಮೈಸೂರು ಜಿಲ್ಲಾಧಿಕಾರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಪತ್ರಿಕಾ ಹೇಳಿಕೆ ಬಿಡುಗಡೆಗೊಂಡಿದ್ದು, ಆಕ್ಸಿಜನ್ ಸಪ್ಲೈ ವಿಚಾರದಲ್ಲಿ ಚಾಮರಾಜನಗರ ಡಿಸಿ ಎಂ.ಆರ್ ರವಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಕ್ಸಿಜನ್ ಸರಬರಾಜು ತಡೆದಿಲ್ಲ

ಆಕ್ಸಿಜನ್ ಸರಬರಾಜು ತಡೆದಿಲ್ಲ

ಆಕ್ಸಿಜನ್ ದುರಂತ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆರೋಪ ಮಾಡಿದ್ದಾರೆ. ಮೈಸೂರು ಡಿಸಿಯಾಗಿರುವ ನಾನು ಚಾಮರಾಜನಗರಕ್ಕಾಗಲಿ ಅಥವಾ ಇನ್ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ತಡೆದಿಲ್ಲ. ಯಾವುದೇ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಮಾಡಲು ಅಲ್ಲಿನ ಸರಬರಾಜುದಾರರು ಹಾಗೂ ಜಿಲ್ಲಾಡಳಿತದ ನಡುವೆ ಸಂವಹನ ಇರುತ್ತದೆ.

ಈಗ ಮೈಸೂರಿಗೆ ಬಳ್ಳಾರಿಯಿಂದ ಕಡಿಮೆ ಆಕ್ಸಿಜನ್ ಸಪ್ಲೈ ಆದರೆ ನಾನು ಬಳ್ಳಾರಿ ಜಿಲ್ಲಾಧಿಕಾರಿಯನ್ನು ದೂಷಿಸಲು ಸಾಧ್ಯವಿಲ್ಲ. ತಮ್ಮ ಜಿಲ್ಲೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ಅವರದ್ದೇ ಜವಾಬ್ದಾರಿಯಾಗಿರುತ್ತದೆ. ಅದು ಆಗದಿದ್ದರೆ ಮೇಲಧಿಕಾರಿಗಳಿಗೆ ಹೇಳಬೇಕು ಎಂದಿದ್ದಾರೆ.

ಆಕ್ಸಿಜನ್ ದಾಖಲೆ ಸಹ ಬಹಿರಂಗ

ಆಕ್ಸಿಜನ್ ದಾಖಲೆ ಸಹ ಬಹಿರಂಗ

ಅದರಲ್ಲಿ ವಿಫಲವಾಗಿರುವ ಚಾಮರಾಜನಗರದವರು ಈಗ ಮೈಸೂರಿನ ಮೇಲೆ ದೂಷಿಸುತ್ತಿದ್ದಾರೆ. ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರಣೆಯಲ್ಲಿ ಇದೆಲ್ಲವೂ ಸಾಬೀತಾಗಲಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

4 ಅಂಶಗಳನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಜೊತೆಗೆ ಮೇ 2 ಮತ್ತು 3 ರಂದು ಚಾಮರಾಜನಗರಕ್ಕೆ ಕಳುಹಿಸಿದ ಆಕ್ಸಿಜನ್ ದಾಖಲೆಯನ್ನು ಸಹ ಬಹಿರಂಗಗೊಳಿಸಿದ್ದಾರೆ. ಸಮಯ ಹಾಗೂ ಬಿಲ್ ಸಂಖ್ಯೆಯ ಜೊತೆಗೆ ಮಾಹಿತಿ ಬಹಿರಂಗ ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಗದ್ಗದಿತರಾದ ರೋಹಿಣಿ ಸಿಂಧೂರಿ

ಗದ್ಗದಿತರಾದ ರೋಹಿಣಿ ಸಿಂಧೂರಿ

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಗದ್ಗದಿತರಾಗಿ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, ಎಲ್ಲಿಯೇ ಸಾವಾದರೂ ಅದು ಸಾವೇ. ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದು ನೋವುಂಟು ಮಾಡಿದೆ. ಆದರೆ ಅಲ್ಲಿನ ಜಿಲ್ಲಾಧಿಕಾರಿ ಮಾಡಿರುವ ಆರೋಪಗಳು ಸತ್ಯವಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಆಮ್ಲಜನಕ ಉತ್ಪಾದನೆ ಆಗಲ್ಲ, ನಾವೂ ಬಳ್ಳಾರಿಯಿಂದ ತರಿಸಿಕೊಳ್ಳುತ್ತಿದ್ದೇವೆ. ಆಕ್ಸಿಜನ್ ಏಜೆನ್ಸಿಗಳು ಮತ್ತು ಚಾಮರಾಜನಗರ ಜಿಲ್ಲೆ ನಡುವೆ ಒಪ್ಪಂದ ಆಗಿದೆ. ಅದರಂತೆ ಏಜೆನ್ಸಿಗಳು ಆಮ್ಲಜನಕ ಪೂರೈಕೆ ಮಾಡುತ್ತವೆ ಎಂದು ತಿಳಿಸಿದರು.

ನನ್ನ 10 ವರ್ಷದ ಸರ್ವೀಸ್‌ನಲ್ಲಿ ಅಂತಹ ಕೆಲಸ ಮಾಡಿಲ್ಲ

ನನ್ನ 10 ವರ್ಷದ ಸರ್ವೀಸ್‌ನಲ್ಲಿ ಅಂತಹ ಕೆಲಸ ಮಾಡಿಲ್ಲ

ಆಕ್ಸಿಜನ್ ಖಾಲಿ ಆಗುತ್ತಿದೆ ಅನ್ನುವಾಗ ಅಲರ್ಟ್ ಆಗಿ ತರಿಸಿಕೊಳ್ಳಬೇಕಿತ್ತು, ಅದು ಒಬ್ಬ ಜಿಲ್ಲಾಧಿಕಾರಿಯ ಜವಾಬ್ದಾರಿಯೂ ಆಗಿರುತ್ತದೆ. ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಕೊನೆ ಕ್ಷಣದಲ್ಲಿ 40 ಸಿಲಿಂಡರ್ ಕಳುಹಿಸಿಕೊಟ್ಟಿದ್ದೇವೆ. ಇನ್ನೂ ಹೇಗೆ ಸ್ಪಂದಿಸಬೇಕಿತ್ತು? ಎಂದು ಇದೇ ವೇಳೆ ಪ್ರಶ್ನಿಸಿದರು.

ಚಾಮರಾಜನಗರದಲ್ಲಿ ಕೋವಿಡ್ ಸೋಂಕಿತರ ಸರಣಿ ಸಾವು ವಿಚಾರವಾಗಿ ಮಾತನಾಡುವ ವೇಳೆ ಗದ್ಗದಿತರಾದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನನ್ನ 10 ವರ್ಷದ ಸರ್ವೀಸ್‌ನಲ್ಲಿ ಅಂತಹ ಕೆಲಸ ಮಾಡಿಲ್ಲ. ಚಾಮರಾಜನಗರ ದುರಂತ ಆಗಿರುವುದಕ್ಕೆ ನೋವಿದೆ. ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದರಿಂದ ನನಗೆ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೇ ಎಂದರು.

ಅಸತ್ಯವಾದ ವಿಚಾರಕ್ಕೆ ಸ್ಪಷ್ಟೀಕರಣ

ಅಸತ್ಯವಾದ ವಿಚಾರಕ್ಕೆ ಸ್ಪಷ್ಟೀಕರಣ

ಸತ್ತವರ ಮನೆಯಲ್ಲಿ ನೋವಿರುತ್ತದೆ. ಆದರೆ, ಈ ರೀತಿ ಆರೋಪ ಮಾಡಬಾರದು. ಆಗ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತದೆ. ಅವರು ಮಾಧ್ಯಮದಲ್ಲಿ ಹೇಳಿಕೆ ನೀಡದಿದ್ದರೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ರೋಹಿಣಿ ಸಿಂಧೂರಿ ಹೇಳಿದರು.

ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದ್ದು, ಚಾಮರಾಜನಗರಕ್ಕೆ ಸ್ಪಂದಿಸಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರ ಕಷ್ಟ ಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಕ್ಸಿಜನ್ ಕಳುಹಿಸಿದ್ದೇವೆ. ಅದು ನಾವು ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್ ಕಳುಹಿಸಿದ್ದೇವೆ. ಎಲ್ಲೂ ಸಹ ಆಸ್ಪತ್ರೆಯಿಂದ ಕಳುಹಿಸಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಇದು ಮಾನವೀಯತೆ ಅಲ್ಪಾ? ಎಂದು ಇದೇ ವೇಳೆ ಮಾಹಿತಿ ನೀಡಿದರು.

ಮೊದಲೇ ಆಕ್ಸಿಜನ್ ಕೇಳಿದ್ದರೆ ಕಳುಹಿಸುತ್ತಿದ್ದೆವು

ಮೊದಲೇ ಆಕ್ಸಿಜನ್ ಕೇಳಿದ್ದರೆ ಕಳುಹಿಸುತ್ತಿದ್ದೆವು

ಚಾಮರಾಜನಗರ ಡಿಸಿ ಎಂ.ಆರ್ ರವಿ ಅವರು ಮೊದಲೇ ಆಕ್ಸಿಜನ್ ಕೇಳಿದ್ದರೆ ಕಳುಹಿಸುತ್ತಿದ್ದೆವು ಎಂದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅವರು ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು. ಆದರೆ, ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ಈ ರೀತಿ ಹೇಳಿದರೆ ನಮಗೂ ನೋವಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಪ್ರತಿಕ್ರಿಯಿಸುವಾಗ ಡಿಸಿ ರೋಹಿಣಿ ಸಿಂಧೂರಿ ಭಾವುಕರಾದರು.

English summary
Chamarajanagar Oxygen Tragedy: Mysuru DC Rohini Sindhuri has Press statement releases on Chamarajanagar DC Allegations. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X