ಮೈಸೂರಿನಲ್ಲಿ ಸಾವಿರದ ಗಡಿ ದಾಟಿದ ಸಕ್ರಿಯ ಸೋಂಕಿನ ಪ್ರಕರಣ
ಮೈಸೂರು, ಜುಲೈ 21: ಮೈಸೂರು ಜಿಲ್ಲೆಯಲ್ಲಿ ನಿನ್ನೆ 149 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸಕ್ರಿಯ ಸೋಂಕಿನ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಜಿಲ್ಲೆಯಲ್ಲಿ ನಿನ್ನೆ ಐವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇದರೊಂದಿಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 1,773. ಸೋಮವಾರ 27 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಐಸಿಯುನಲ್ಲಿದ್ದಾರೆ. 399 ಮಂದಿ ಮನೆಯಲ್ಲೇ ಐಸೊಲೇಶನ್ ನಲ್ಲಿದ್ದಾರೆ. ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ 241, ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 90, ಕೋವಿಡ್ ಕೇರ್ ಕೇಂದ್ರದಲ್ಲಿ 194, ಖಾಸಗಿ ಆಸ್ಪತ್ರೆಯಲ್ಲಿ 149 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ 50 ಮಂದಿ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 11ಮಂದಿ, ಇತರ ರಾಜ್ಯ-ಜಿಲ್ಲೆಗಳಿಂದ ಬಂದ 16 ಮಂದಿ ಹಾಗೂ ಪ್ರಾಥಮಿಕ ಸಂಪರ್ಕಿತ 67 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಐದು ಮಂದಿಯಲ್ಲಿ ಯಾವುದೇ ರೋಗ ಲಕ್ಷಣಗಳಿರಲಿಲ್ಲ.
ಮೈಸೂರು: ಮತ್ತೆ ಶತಕ ದಾಟಿದ ಕೊರೊನಾ ವೈರಸ್ ಪ್ರಕರಣಗಳು
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 32,205 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 2,055 ಮಂದಿಯನ್ನು 14 ದಿನಗಳ ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ 1073 ಸಕ್ರಿಯ ಪ್ರಕರಣಗಳಿವೆ.