ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ವಡಿ ಕೃಷ್ಣರಾಜ ಒಡೆಯರ್ 137ನೇ ಜಯಂತ್ಯೋತ್ಸವ; ಗಣ್ಯರಿಂದ ಸ್ಮರಣೆ

|
Google Oneindia Kannada News

ಮೈಸೂರು, ಜೂನ್ 4: ಆಧುನಿಕ ಮೈಸೂರು ನಿರ್ಮಾತೃ ಎಂದು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದು ಅವರ 137ನೇ ಜಯಂತೋತ್ಸವ ಹಿನ್ನೆಲೆಯಲ್ಲಿ ಹಲವು ರಾಜಕೀಯ ನಾಯಕರು ಅವರ ಸಾಧನೆಗಳು ಮತ್ತು ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ.

ಸಚಿವ ಮುರುಗೇಶ್ ನಿರಾಣಿ, ""ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ವರ್ಧಂತೋತ್ಸವದ ಶುಭಾಶಯಗಳು. ಮೈಸೂರು ಸಂಸ್ಥಾನದ ಅಂದಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂದೇ ಸ್ವಾತಂತ್ರ ಬಂದ ಮೇಲೆ ಪ್ರಜಾಪ್ರಭುತ್ವ ಹೇಗಿರಬೇಕು ಎಂಬುದನ್ನು ದೇಶಕ್ಕೆ ತಿಳಿಸಿಕೊಟ್ಟವರು.''

ಇಂದ್ರಲೋಕವೆಂದು ಹೊಗಳಿಸಿಕೊಂಡ ಮೈಸೂರು ಸಂಸ್ಥಾನ

ಇಂದ್ರಲೋಕವೆಂದು ಹೊಗಳಿಸಿಕೊಂಡ ಮೈಸೂರು ಸಂಸ್ಥಾನ

ಮಹಾತ್ಮ ಗಾಂಧೀಜಿ ಅವರ ಬಾಯಲ್ಲಿ ರಾಜ ಋಷಿ, ರಾಮರಾಜ್ಯ, ಇಂದ್ರಲೋಕವೆಂದು ಹೊಗಳಿಸಿಕೊಂಡ ಮೈಸೂರು ಸಂಸ್ಥಾನದ ರಾಜರ ಬಗ್ಗೆ ಮೈಸೂರು ಸಂಸ್ಥಾನದ ಜನಗಳಿಗೆ ಹೆಮ್ಮೆ ಇದೆ, ಅಂದೇ ಮೈಸೂರು ಸಂಸ್ಥಾನವನ್ನು ಪ್ರಪಂಚದಲ್ಲೆ ಮೇಲೇರಿಸಿದ ಭೂಪ.

ದೇಶದಲ್ಲಿ ಕೆಲವೇ ಜನಗಳ ಹಿಡಿತದಲ್ಲಿ ಇದ್ದ ವಿದ್ಯಾಭ್ಯಾಸವನ್ನು ಎಲ್ಲಾ ಜನಾಂಗಗಳ, ಅದರಲ್ಲೂ ಹಳ್ಳಿಗಾಡಿನ ಜನಗಳ ಮತ್ತು ಹೆಣ್ಣು ಮಕ್ಕಳಿಗೂ ವಿಸ್ತರಿಸಿದ ದೊರೆಯಾಗಿದ್ದರು ಎಂದು ಸಚಿವ ಮುರುಗೇಶ್ ನಿರಾಣಿ ಕೊಂಡಾಡಿದ್ದಾರೆ.

ಮೈಸೂರು ಜನಕ್ಕೆ ಮನೆಬಾಗಿಲಿಗೆ ನೀರು ಹರಿಸಿದರು

ಮೈಸೂರು ಜನಕ್ಕೆ ಮನೆಬಾಗಿಲಿಗೆ ನೀರು ಹರಿಸಿದರು

ಮೈಸೂರು ಸಂಸ್ಥಾನದಲ್ಲಿ ಅಂದೇ ಆಸ್ಪತ್ರೆಗಳನ್ನು ಕೆಲವು ಮೊಹಲ್ಲಾಗಳಲ್ಲಿ ಬಡವರಿಗೆ ಸರಕಾರಿ ಆಸ್ಪತ್ರೆಗಳನ್ನು ಕೊಟ್ಟ ಧೀಮಂತ ನಾಯಕ, ಮದರಾಸಿನ ಹಿಡಿತದಲ್ಲಿ ಇದ್ದ ಮೈಸೂರು ಸಂಸ್ಥಾನಕ್ಕೆ ಕಾವೇರಿ ನದಿಗೆ ಕನ್ನಂಬಾಡಿ ಕಟ್ಟೆ ಕಟ್ಟಿಸಿ ಮಂಡ್ಯದ ರೈತರಿಗೆ ಮೈಸೂರು ಜನಕ್ಕೆ ಮನೆಬಾಗಿಲಿಗೆ ನೀರನ್ನು ಹರಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಮೈಸೂರು ಲ್ಯಾಂಪ್, ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ, ಮೈಸೂರು ಸಿಲ್ಕ್, ಮೈಸೂರು ಬನಿಯನ್, ಮಂಡ್ಯ ಸಕ್ಕರೆ ಕಾರ್ಖಾನೆ ಇತ್ಯಾದಿಗಳನ್ನು ಬೆಳೆಸಿ ಮೈಸೂರು ಸಂಸ್ಥಾನಕ್ಕೆ ಹೆಸರುಳಿಸಿದ ಯೋಧ. ರಾಜನಾಗಲಿ ರಾಜಕಾರಣಿಯಾಗಲಿ ದೇಶದಲ್ಲಿ ವಾಸಿಸುವ ಎಲ್ಲಾ ಜನಾಂಗಗಳ ಸುಖ-ಸಂತೋಷಗಳನ್ನು ಗೌರವಿಸಬೇಕು. ಈ ವಿಚಾರದಲ್ಲಿ ಮೈಸೂರು ಸಂಸ್ಥಾನಕ್ಕೆ ನೆಮ್ಮದಿಯನ್ನು ಕೊಡುವ ವಿಚಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ ದೊಡ್ಡದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸಚಿವ ಎಸ್.ಟಿ ಸೋಮಶೇಖರ್ ಸ್ಮರಣೆ

ಸಚಿವ ಎಸ್.ಟಿ ಸೋಮಶೇಖರ್ ಸ್ಮರಣೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137ನೇ ಜನ್ಮ ದಿನಾಚರಣೆ ಅಂಗವಾಗಿ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನಾಲ್ವಡಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಂದೇಶ ನೀಡಿದ್ದಾರೆ.

ಮೈಸೂರು ಸಂಸ್ಥಾನದ ಮೇರು ರಾಜರಲ್ಲೊಬ್ಬರಾದ, ರಾಜ್ಯದ ಪ್ರಗತಿಯಲ್ಲಿ ಪ್ರಮುಖ ಕಾರಣೀಭೂತರಾಗಿರುವ ಮಹಾರಾಜರೆಂದರೆ ಅದಕ್ಕೆ "ನಾಲ್ವಡಿ ಕೃಷ್ಣರಾಜ ಒಡೆಯರ್" ಅವರ ಹೆಸರು ಮುಂಚೂಣಿಯಲ್ಲಿರಲಿದೆ. ಇಂದು ಅವರ ಜಯಂತ್ಯೋತ್ಸವ ಇದ್ದು, ಅವರ ನೆನಪು ಅವಿಸ್ಮರಣೀಯ.

ಮೈಸೂರು ಮಹಾಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು ಇವರಾಗಿದ್ದು, ಆಗಿನ ಮೈಸೂರು ರಾಜ್ಯವನ್ನು ದೇಶದಲ್ಲಿಯೇ ಮಾದರಿಯಾಗಿ, ಸರ್ವತೋಮುಖವಾಗಿ ಅಭಿವೃದ್ಧಿ ಹೊಂದುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಸಾರ್ವಜನಿಕರಿಗೆ ಅಧಿಕಾರ ಕೊಡುವ, ಅಧಿಕಾರ ವಿಕೇಂದ್ರೀಕರಣದ ಕನಸನ್ನು ಆಗಲೇ ಅವರು ಹೊಂದಿದ್ದರು. ರಾಜಪ್ರಭುತ್ವವಿದ್ದರೂ ಸಹ ಜನರಿಗೂ ಆಡಳಿತದ ಹಕ್ಕು ಸಿಗಬೇಕೆಂಬ ಅವರ ಆಲೋಚನೆ ಇಂದಿನ ಪ್ರಜಾಪ್ರಭುತ್ವ ಪರಿಕಲ್ಪನೆಗೆ ಮೆಟ್ಟಿಲಾಯಿತು ಎಂದರೆ ಅತಿಶಯೋಕ್ತಿ ಆಗಲಾರದು.

ಆಧುನಿಕ ಮೈಸೂರು ನಿರ್ಮಾಪಕ

ಆಧುನಿಕ ಮೈಸೂರು ನಿರ್ಮಾಪಕ

ಆಗಿನ ಮೈಸೂರು ರಾಜ್ಯದಲ್ಲಿ ಇದ್ದೂ ಇಲ್ಲವಾಗಿದ್ದ 'ಪ್ರಜಾ ಪ್ರತಿನಿಧಿ ಸಭೆ'ಗೆ ಬಲತುಂಬುವ ನಿಟ್ಟಿನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದರು. ಇದರ ಪರಿಣಾಮ ಜನಪ್ರತಿನಿಧಿ ಸಭೆಯು ಸಮರ್ಪಕವಾಗಿ ಅನುಷ್ಠಾನವಾಯಿತು. ಜೊತೆಗೆ 'ನ್ಯಾಯ ವಿಧಾಯಕ' ಸಭೆಯನ್ನೂ ಇವರ ಕಾಲದಲ್ಲಿಯೇ ಸ್ಥಾಪಿಸಲಾಯಿತು. ಸಣ್ಣ ಪಟ್ಟಣಗಳಲ್ಲಿಯೂ ಮುನಿಸಿಪಾಲಿಟಿಗಳನ್ನು ರಚಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿಯೂ ಜನರಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬ ಕಲ್ಪನೆಯನ್ನು ಆಗಲೇ ಅವರು ಹೊಂದಿದ್ದರಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಉಚಿತ ಹಾಗೂ ಕಡ್ಡಾಯವಾಗಿ ಆರಂಭಿಸಿದ್ದರು. ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಉತ್ತಮ ವಿಶ್ವವಿದ್ಯಾಲಯವನ್ನು ಕಟ್ಟಿದ ಕೀರ್ತಿ ಅವರದ್ದಾಗಿದೆ.

ಮೈಸೂರಿನ ಕ್ಷಯರೋಗ ಆಸ್ಪತ್ರೆಗೆ ಉತ್ತಮ ರೂಪ

ಮೈಸೂರಿನ ಕ್ಷಯರೋಗ ಆಸ್ಪತ್ರೆಗೆ ಉತ್ತಮ ರೂಪ

ಇವರ ಕಾಲದಲ್ಲಿ ಹೊಸ ರೈಲು ಮಾರ್ಗಗಳನ್ನು ಮಾಡಲಾಯಿತು. ಪರಿಣಾಮ ಸಂಪರ್ಕಗಳು ಹೆಚ್ಚಾಗಿ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾದವು. ಪ್ರವಾಸೋದ್ಯಮಗಳು ಬೆಳೆದವು. ಗ್ರಾಮ ನೈರ್ಮಲ್ಯೀಕರಣ, ವೈದ್ಯಕೀಯ ಸಹಾಯ, ಶಿಕ್ಷಣ ಪ್ರಚಾರ, ನೀರು, ಸಾರಿಗೆ ಸೌಲಭ್ಯ ಸೇರುದಂತೆ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಕೀರ್ತಿಯು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ.

ಸಹಕಾರ ಸಂಘಗಳ ಪರಿಕಲ್ಪನೆಯಲ್ಲಿ 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಇನ್ನು ಖಾಸಗಿ ಸಹಭಾಗಿತ್ವದಲ್ಲಿ ಮೈಸೂರು ಬ್ಯಾಂಕ್ ಸ್ಥಾಪಿಸಿದರು. ರೈತರಿಗೆ ಕೃಷಿಗೆ ಅನುಕೂಲವಾಗುವಂತೆ ಜಮೀನು ಅಡಮಾನ ಬ್ಯಾಂಕುಗಳನ್ನು ಪ್ರಾರಂಭಿಸಲಾಯಿತು. ರಾಜ್ಯದ ಹಲವು ಭಾಗಗಳಲ್ಲಿ ಉಚಿತ ಆಸ್ಪತ್ರೆಗಳನ್ನು ತೆರೆಯಲಾಯಿತು. ಮೈಸೂರಿನ ಕ್ಷಯರೋಗ ಆಸ್ಪತ್ರೆಗೆ ಉತ್ತಮ ರೂಪವನ್ನು ಕೊಡಲಾಯಿತು. ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ಅದೆಷ್ಟೋ ಜನರಿಗೆ ಉಪಕಾರವಾಯಿತು.

1911ರಲ್ಲಿ ಕೃಷ್ಣರಾಜ ಸಾಗರವನ್ನು ಕಟ್ಟಲಾಯಿತು

1911ರಲ್ಲಿ ಕೃಷ್ಣರಾಜ ಸಾಗರವನ್ನು ಕಟ್ಟಲಾಯಿತು

ಭಾರತದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಎಂದೇ ಕರೆಯಲ್ಪಡುವ ಶಿವನ ಸಮುದ್ರದ ಬಳಿ 1900 ರಲ್ಲಿಯೇ ಆರಂಭಿಸಲಾದ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರವನ್ನು ಇವರೇ ಸ್ಥಾಪಿಸಿದ್ದಾರೆ. 1907 ರಲ್ಲಿ 'ವಾಣಿವಿಲಾಸ ಸಾಗರ' (ಮಾರಿ ಕಣಿವೆ), 1911ರಲ್ಲಿ ಬೃಹತ್ ಜಲಾಶಯವಾದ 'ಕೃಷ್ಣರಾಜ ಸಾಗರ' ವನ್ನು ಕಟ್ಟಲಾಯಿತು. ಇದು ಇಂದಿಗೂ ಲಕ್ಷಾಂತರ ಮಂದಿಗೆ ಕೃಷಿ ಹಾಗೂ ಕುಡಿಯುವ ನೀರಿನ ಬಳಕೆಗೆ ಅನುಕೂಲವಾಗುತ್ತಿದೆ.

ಮೈಸೂರು, ಬೆಂಗಳೂರು ಅಭಿವೃದ್ಧಿ ಕಂಡಿದ್ದೂ ಇವರ ಕಾಲದಲ್ಲಿಯೇ ಆಗಿದೆ. ಇಲ್ಲೆಲ್ಲ ನಿರ್ಮಾಣವಾದ ರಸ್ತೆಗಳು, ಅನಾಥಾಶ್ರಮಗಳು, ಛತ್ರಗಳು, ಉಚಿತ ಆಸ್ಪತ್ರೆಗಳು, ಉದ್ಯಾನವನಗಳು, ಜಲ ಕಾರಂಜಿಗಳು, ಶ್ರೇಷ್ಠ ಕಟ್ಟಡಗಳು, ವಿದ್ಯುತ್ ದೀಪಗಳು, ವಿಹಾರಿ ಧಾಮಗಳು, ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರ ಜೊತೆಗೆ ಸಾಹಿತ್ಯ, ಕಲೆ, ಸಂಗೀತ ಹಾಗೂ ಸಂಸ್ಕೃತಿಗೆ ಸಹ ಇವರ ಕೊಡುಗೆ ಅವಿಸ್ಮರಣೀಯ. ಸರ್.ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತಹ ಮಹನೀಯರಿಗೆ ಪ್ರೋತ್ಸಾಹ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೂರದೃಷ್ಟಿಯ ಅನೇಕ ಯೋಜನೆಗಳು ಜಾರಿಗೆ ಬರಲು ಕಾರಣವಾಯಿತು.

ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ

ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ

ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ ರದ್ದತಿ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆಯ ಜಾರಿ, ಗೆಜ್ಜೆಪೂಜೆ ನಿರ್ಮೂಲನೆ, ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ ಸೇರಿದಂತೆ ಹಲವು ಕಾನೂನುಗಳನ್ನು ಜಾರಿಗೆ ತಂದರು. ರೈತರಿಗೆ ಸುಲಭವಾಗಿ ಸಾಲ ದೊರೆಯಲು ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅನೇಕ ಮೊದಲುಗಳಿಗೆ ನಾಂದಿ ಹಾಡಿದರು.

ಇಂತಹ ಮಹನೀಯರನ್ನು ನಮ್ಮ ನಾಡಿನಲ್ಲಿ ಹೊಂದಿರುವುದು ನಮ್ಮ ಪುಣ್ಯ. ಇವರ ದೂರದೃಷ್ಟಿಯ ಕೆಲಸಗಳು ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು. ಯುವ ಜನತೆಗೆ ಇವರ ಆದರ್ಶ ನಡೆ ಮಾದರಿಯಾಗಬೇಕು.

ನಾಲ್ವಡಿ ಹೆಸರಿನಲ್ಲಿ 12 ಗಣ್ಯರಿಗೆ ಪುರಸ್ಕಾರ

ನಾಲ್ವಡಿ ಹೆಸರಿನಲ್ಲಿ 12 ಗಣ್ಯರಿಗೆ ಪುರಸ್ಕಾರ

ನಾಲ್ವಡಿ ಅವರ ಜಯಂತಿ ಅಂಗವಾಗಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಲೆಂದು ಕಳೆದ ವರ್ಷ ಅಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ‌.ಶಂಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಲಾಕ್‌ಡೌನ್ ಕ್ರಮದಿಂದಾಗಿ ಸನ್ಮಾನಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಆಯ್ಕೆಯಾಗಿರುವ 12 ಗಣ್ಯರಿಗೆ ಸನ್ಮಾನ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಎಸ್.ಎ ರಾಮದಾಸ್, ತನ್ವೀರ್ ಸೇಠ್, ಬಿ.ಹರ್ಷವರ್ಧನ, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಮುಡಾ ಅಧ್ಯಕ್ಷರಾದ ಎಚ್‌.ವಿ‌ ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ ಯೋಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

English summary
Many political leaders have recalled his achievements and contributions in the wake of Nalwadi Krishnaraja Wadiyar 137th birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X